ಕೋವಿಡ್ ಕಾಲದಲ್ಲಿ ಅತೀ ಕಠಿಣವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಭಾರತವು, ಕೋವಿಡ್ ಸಂಕಷ್ಟವನ್ನು ಎದುರಿಸಲು ಹೆಣಗಾಡಿತ್ತು. ಈ ಸಂದರ್ಭದಲ್ಲಿ ಯಾವುದೇ ಪಾರದರ್ಶಕತೆ ಇಲ್ಲದ PM-CARES ಎಂಬ ನಿಧಿಯನ್ನು ಕೂಡಾ ಪ್ರಧಾನಿಯವರು ಸ್ಥಾಪನೆ ಮಾಡಿದ್ದರು. ಕೋಟಿ ಕೋಟಿ ದುಡ್ಡು ಹರಿದು ಬಂದಿದ್ದರೂ, ಇದರ ಲೆಕ್ಕವನ್ನು ಮಾತ್ರ ಯಾರಿಗೂ ನೀಡಲಿಲ್ಲ. RTI ಮೂಲಕ ಕೇಳಿದರೆ, ಇದು ʼಸರ್ಕಾರೇತರʼ ಟ್ರಸ್ಟ್ ಎಂಬ ಉತ್ತರವನ್ನು ಪ್ರಧಾನ ಮಂತ್ರಿ ಕಾರ್ಯಾಲಯ ನೀಡಿತ್ತು.
ಪಿಎಂ ಕೇರ್ಸ್ ಕುರಿತಾಗಿ ಸಾಮಾಜಿಕ ಹೋರಾಟಗಾರ ಹಾಗೂ ಆರ್ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಅವರು ಮಾಹಿತಿಯನ್ನು ಪಡೆಯಲು ಸಲ್ಲಿಸಿದ ಎಲ್ಲಾ ಆರ್ಟಿಐ ಅರ್ಜಿಗಳನ್ನು ಅಮಾನ್ಯಗೊಳಿಸಲಾಗಿದೆ. ಯಾವುದೇ ಸ್ಪಷ್ಟ ಮಾಹಿತಿಯನ್ನು ನೀಡದೇ, ಪಿಎಂ ಕೇರ್ಸ್ ನಿಧಿಯು ಆರ್ಟಿಐ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ಸಿದ್ದ ಉತ್ತರ ದೊರಕಿದೆ.
ಆದರೆ, ಈಗ ತಾವು ತೋಡಿರುವ ಗುಂಡಿಯಲ್ಲಿ ತಾವೇ ಸಿಲುಕಿರುವ ಪ್ರಧಾನಿ ಕಾರ್ಯಾಲಯವು, ಪಿಎಂ ಕೇರ್ಸ್ ಲೋಗೋದಲ್ಲಿ ಭಾರತ ಸರ್ಕಾರದ ಲಾಂಛನವನ್ನು ಬಳಕೆ ಮಾಡಿರುವುದಕ್ಕೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈಗ ಮತ್ತೆ ಪ್ರಧಾನಿ ಕಾರ್ಯಾಲಯದ ವಿರುದ್ದ ಸೆಣಸಲು ಹೊರಟಿರುವ ಸಾಕೇತ್ ಗೋಖಲೆ ಅವರು, ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸಲು ಅನುಮತಿಯನ್ನು ಕೋರಿ ಗೃಹ ಸಚಿವಾಲಯಕ್ಕೆ ಪತ್ರವನ್ನು ಬರೆದಿದ್ದಾರೆ.
“ಪಿಎಂ ಕೇರ್ಸ್ ಎನ್ನುವುದು ಸರ್ಕಾರೇತರ ಟ್ರಸ್ಟ್. ಇದರಲ್ಲಿ ಭಾರತದ ಸರ್ಕಾರದ ಅಧಿಕೃತ ಲಾಂಛನವನ್ನು ಬಳಸುವುದು ಭಾರತದ ಲಾಂಛನ (ತಪ್ಪಾದ ಬಳಕೆಯ ತಡೆ) ಕಾಯ್ದೆ, 2005ರ ಸೆಕ್ಷನ್ 3ರ ಪ್ರಕಾರ ಅಪರಾಧ. ಹೀಗಾಗಿ, ಪ್ರಧಾನಿ ಕಾರ್ಯಾಲಯದ ವಿರುದ್ದ ಮೊಕದ್ದಮೆಯನ್ನು ನಡೆಸಲು ಅನುಮತಿ ಕೋರಿ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದೇನೆ,” ಎಂದು ಸಾಕೇತ್ ಗೋಖಲೆ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಪಿಎಂ ಕೇರ್ಸ್ ಟ್ರಸ್ಟ್ನ ನೋಂದಾವಣಿಯ ದಾಖಲೆಗಳಲ್ಲಿ ಪ್ಯಾರಾ 5.3 ಏನು ಹೇಳುತ್ತದೆಂದರೆ, “ಈ ಟ್ರಸ್ಟ್ ಭಾರತದ ಸಂವಿಧಾನ, ಪಾರ್ಲಿಮೆಂಟ್ ಅಥವಾ ಯಾವುದೇ ರಾಜ್ಯ ಸರ್ಕಾರಗಳ ಅಡಿಯಲ್ಲಿ ನಿರ್ಮಾಣವಾಗಿಲ್ಲ. ಯಾವುದೇ ಸರ್ಕಾರಗಳಿಂದ ಇದು ಹಣವನ್ನು ಪಡೆಯುವುದಿಲ್ಲ. ಈ ಟ್ರಸ್ಟ್ನ ನಡೆಸುವಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಗೆ ಯಾವುದೇ ಅಧಿಕಾರವಿರುದಿಲ್ಲ.”
ಈ ವಾಕ್ಯವನ್ನು ತಮ್ಮ ಪತ್ರದ ಒಕ್ಕಣೆಯಲ್ಲಿ ಬರೆದಿರುವ ಸಾಕೇತ್ ಅವರು, ಪಿಎಂ ಕೇರ್ಸ್ ಒಂದು ಸರ್ಕಾರೇತರ ಟ್ರಸ್ಟ್ ಎಂದು ಸ್ಪಷ್ಟವಾಗಿ ಅವರೇ ಹೇಳಿಕೊಂಡಿದ್ದರೂ, ಅದರಲ್ಲಿ ಭಾರತ ಸರ್ಕಾರದ ಅಧಿಕೃತ ಲಾಂಛನವನ್ನು ಬಳಸಲಾಗಿದೆ. ಪಿಎಂ ಕೇರ್ಸ್ ವೆಬ್ಸೈಟ್ ಮತ್ತು ಇತರ ಎಲ್ಲಾ ಕಡೆಗಳಲ್ಲಿ ಈ ಲಾಂಛನದ ಬಳಕೆಯಾಗಿದೆ. ಭಾರತದ ಲಾಂಛನ (ತಪ್ಪಾದ ಬಳಕೆಯ ತಡೆ) ಕಾಯ್ದೆ, 2005ರ ಪ್ರಕಾರ ಇದು ಅಪರಾಧ. ಹೀಗಾಗಿ ಪ್ರಧಾನಿ ಕಾರ್ಯಾಲಯದ ವಿರುದ್ದ ಮೊಕದ್ದಮೆ ದಾಖಲಿಸಲು ಅನುಮತಿ ನೀಡಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ.
ಒಟ್ಟಿನಲ್ಲಿ, ಪಿಎಂ ಕೇರ್ಸ್ನ ಪಾರದರ್ಶಕತೆಯ ಕುರಿತು ಇದ್ದಂತಹ ಅನುಮಾನಗಳು ಇನ್ನೂ ಸ್ಪಷ್ಟಗೊಂಡಿಲ್ಲ. ಇದರ ನಡುವೆ, ಸರ್ಕಾರೇತರ ಸಂಸ್ಥೆಯೊಂದು ಭಾರತದ ಅಧಿಕೃತ ಲಾಂಛನವನ್ನು ಬಳಸಿಕೊಂಡು ದೇಣಿಗೆ ಸಂಗ್ರಹಿಸುವುದು ತಪ್ಪು ಎನ್ನುವುದು ಸಾಕೇತ್ ಅವರ ವಾದ.