ರಾಜ್ಯದಲ್ಲಿ ಈಗಾಗಲೇ ಗಣನೀಯ ಪ್ರಮಾಣದಲ್ಲಿ ಸೋಂಕು ಹೆಚ್ಚಳವಾಗುತ್ತಿದೆ. ಕಳೆದೊಂದು ವಾರದಲ್ಲಿ ಏರಿಕೆಯಾಗಿರುವ ಸೋಂಕಿತರ ಸಂಖ್ಯೆ ಕಳೆದ ಮೂರು ತಿಂಗಳಿಂದ ಏರಿಕೆಯಾಗಿದ್ದ ಸೋಂಕಿತರ ಸಂಖ್ಯೆಗೆ ಸಮವಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ನಗರಗಳಿಗೆ ವಾಪಸ್ ಆಗಿದ್ದ ಜನರು ಮರಳಿ ತಮ್ಮ ತಮ್ಮ ಊರುಗಳಿಗೆ ಹೊರಟು ಹೋಗುತ್ತಿದ್ದಾರೆ. ಡಿಸಿಎಂ ಗೋವಿಂದ ಕಾರಜೋಳಾ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಸಾಕಷ್ಟು ಮಂತ್ರಿ ಮಹೋದಯರು ʻಜನರೇ ನಗರ ಬಿಟ್ಟು ಹಳ್ಳಿ ಕಡೆ ಹೋಗಬೇಡಿʼ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಮನವಿಯ ಸಾಲಿಗೆ ಡಿಸಿಎಂ ಅಶ್ವತ್ಥ ನಾರಾಯಣ ಕೂಡ ಸೇರಿದ್ದಾರೆ. ಆದರೆ ಉಪಮುಖ್ಯಮಂತ್ರಿ ಹೇಳಿರುವ ಮಾಹಿತಿ ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತಿದೆ.
ಬೆಂಗಳೂರಿನ ರೇಸ್‌ಕೋರ್ಸ್ ನಿವಾಸದಲ್ಲಿ ಮಾತನಾಡಿದ ಡಿಸಿಎಂ ಅಶ್ವತ್ಥ ನಾರಾಯಣ, ರಾಜ್ಯದಲ್ಲಿ ಕರೋನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ನಿಮ್ಮ ರಕ್ಷಣೆಗೆ ಸರ್ಕಾರ ಸರ್ವ ರೀತಿಯಲ್ಲೂ ಕೆಲಸ ಮಾಡ್ತಿದೆ. ಬೆಂಗಳೂರಿನಲ್ಲಿಯೇ ಇದ್ದರೆ ಉತ್ತಮ, ಊರಿಗೆ ಹೋದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತೆ. ಎಲ್ಲಿರುತ್ತೀರೋ ಅಲ್ಲೇ ಇದ್ದರೆ ಕರೋನಾ ಹತೋಟಿಗೆ ಬರುತ್ತೆ. ಸರ್ಕಾರದ ಜೊತೆಗೆ ಜನರು ಸಹಕಾರ ಮಾಡಿದರೆ ಕರೋನಾ ಸೋಂಕಿನ ವಿರುದ್ಧ ಗೆಲ್ಲುವುದು ಸುಲಭ ಎಂದು ಬೆಂಗಳೂರು ಬಿಡುತ್ತಿರುವ ಜನರಿಗೆ ಡಿಸಿಎಂ ಅಶ್ವತ್ಥ ನಾರಾಯಣ ಮನವಿ ಮಾಡಿದ್ದಾರೆ. ಪ್ರತಿದಿನ ಹದಿನೈದು ಸಾವಿರ ಟೆಸ್ಟ್ ಮಾಡಲಾಗ್ತಿದೆ. ಹೀಗಾಗಿ ರಿಪೋರ್ಟ್ ಬರುವುದು ತಡವಾಗ್ತಿದೆ ಅಷ್ಟೆ. ಬೆಂಗಳೂರಲ್ಲಿ ಮೂರನೇ ಹಂತಕ್ಕೆ ಇನ್ನೂ ಕರೋನಾ ಹೋಗಿಲ್ಲ. ದೇಶದ ಬೇರೆ ನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ಉತ್ತಮ ಸ್ಥಿತಿಯಲ್ಲಿದೆ ಎಂದಿದ್ದಾರೆ.
ಬೆಂಗಳೂರನ್ನು ಬಿಡುವ ಜನರನ್ನು ತಡೆಯಲು ಸಾಧ್ಯವಿಲ್ಲ. ಅದು ಅವರ ವೈಯಕ್ತಿಕ ಹಕ್ಕು. ಆದರೆ ಬೆಂಗಳೂರಿನಲ್ಲಿ ಇದ್ದರೆ ಅವರಿಗೆ ತೊಂದರೆ ಆಗದ ರೀತಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಸರ್ಕಾರ ಎಲ್ಲಿಯೂ ಎಡವಿಲ್ಲ, ಯಾವುದೇ ತಪ್ಪು ಮಾಡಿಲ್ಲ. ರಾಜ್ಯ ಅಂದ್ರೆ ಬರೀ ಸರ್ಕಾರ ಅಲ್ಲ. ಜನರಿಂದ ಸರ್ಕಾರ. ಹೀಗಾಗಿ ಸರ್ಕಾರದ ಜೊತೆಗೆ ಜನರು ಕೆಲಸ ಮಾಡಬೇಕು. ಕಳೆದ ಎರಡು ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕರೋನಾ ಸೋಂಕು ಹೆಚ್ಚಾಗಿದೆ. ಹೀಗಾಗಿ ಸಹಜವಾಗಿ ಇದಕ್ಕೆ ತಕ್ಕಂತೆ ತಯಾರಿ ನಡೆಸಿದ್ದೇವೆ. ಪ್ರತಿದಿನ ಇಪ್ಪತ್ತು ಸಾವಿರ ಟೆಸ್ಟ್ ಮಾಡಿಸಿದ್ದೇವೆ. ನಗರದ ಜನಸಂಖ್ಯೆ ಜಾಸ್ತಿ ಆಯ್ತು ಅಂತ ಆತಂಕ ಪಡುವ ಅಗತ್ಯ ಇಲ್ಲ. ಸರ್ಕಾರಕ್ಕೆ ಯಾವುದೇ ರೀತಿಯ ಆತಂಕ ಇಲ್ಲ ಕರೋನಾ ಎದುರಿಸಲು ಸಿದ್ಧವಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಡಿಸಿಎಂ ಅಶ್ವತ್ಥ ನಾರಾಯಣ.

ವರ್ಷಾಂತ್ಯ ಅಂದರೆ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ವೇಳೆಗೆ ರಾಜ್ಯದಲ್ಲಿ ಕರೋನಾ ಸೋಂಕು ಉತ್ತುಂಗದಲ್ಲಿ ಇರಲಿದೆ ಎಂದಿದ್ದಾರೆ ಡಾ ಅಶ್ವತ್ಥ ನಾರಾಯಣ. ಬೆಂಗಳೂರು ಒಂದರಲ್ಲೇ 1 ಲಕ್ಷದ 20 ಸಾವಿರ ಜನರಿಗೆ ಸೋಂಕು ಬರಲಿದೆ ಎನ್ನುವ ಅಂದಾಜು ಮಾಡಲಾಗಿದೆ. ಆದರೆ ಅದಕ್ಕೆ ಭಯಪಡುವ ಅಗತ್ಯವಿಲ್ಲ. ಕಾರಣವೇನೆಂದರೆ ಇಷ್ಟು ಪ್ರಕರಣಗಳಲ್ಲಿ ಶೇಕಡ 80 ರಷ್ಟು ಜನರಲ್ಲಿ ಸೋಂಕಿನ ಗುಣಲಕ್ಷಣವಿರುವುದಿಲ್ಲ. ಹಾಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಅಗತ್ಯವೂ ಇರಲ್ಲ. ಉಳಿದವರಿಗೆ ಸರ್ಕಾರ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡುತ್ತದೆ ಎಂದಿದ್ದಾರೆ. ಆದರೆ ಡಾ ಸುಧಾಕರ್ ಹೇಳಿರುವ ಮಾಹಿತಿ ಡಿಸಿಎಂ ಅಶ್ವತ್ಥ ನಾರಾಯಣ ಮಾತಿಗೆ ತದ್ವಿರುದ್ಧವಾಗಿದೆ.
ನಾವು ಎಡವಿದ್ದೇವೆ, ಅಧಿಕಾರಿಗಳ ಲೆಕ್ಕಾಚಾರ ತಪ್ಪಾಗಿದೆ..!
ಬೆಂಗಳೂರಿನಲ್ಲಿ ಸೋಂಕು ಹೆಚ್ಚಾಗುತ್ತದೆ ಎಂದು ಸರ್ಕಾರಕ್ಕೂ ಗೊತ್ತಿತ್ತು. ಆದರೆ ಈ ಪ್ರಮಾಣದಲ್ಲಿ ಏರುತ್ತದೆ ಎಂದು ನಮಗೆ ಮಾಹಿತಿಯನ್ನು ಅಧಿಕಾರಿಗಳಿಂದ ನಮಗೆ ಬಂದಿರಲಿಲ್ಲ. ಜುಲೈ ಅಂತ್ಯಕ್ಕೆ ಏರಿಕೆಯಾಗಬೇಕಿದ್ದ ಸೋಂಕಿನ ಪ್ರಮಾಣ ಈಗಲೇ ಬಂದಿದೆ. ರಾಜ್ಯ ಸರ್ಕಾರ ಎಲ್ಲ ವ್ಯವಸ್ಥೆ ಮಾಡುತ್ತಿದೆ. ನವೆಂಬರ್ ವೇಳೆಗೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷ ದಾಟುವ ಮಾಹಿತಿ ಇದೆ. ಪರಿಣಿತರು ಸೋಂಕು ಹೆಚ್ಚಾಗುವ ಬಗ್ಗೆ ಕಾಲಕಾಲಕ್ಕೆ ಸಲಹೆ ಕೊಡ್ತಾರೆ. ಸರ್ಕಾರ ಪರಿಣಿತರ ಜೊತೆ ನಿರಂತರ ಸಮಾಲೋಚನೆ ನಡೆಸುತ್ತಿದೆ. ಪರಿಣಿತರ ಲೆಕ್ಕಾಚಾರದ ಆಧಾರದಲ್ಲಿ ಸರ್ಕಾರ ಹಂತಹಂತವಾಗಿ ಕ್ರಮ ತೆಗೆದುಕೊಳ್ಳುತ್ತದೆ. ಅಧಿಕಾರಿಗಳ ಮಟ್ಟದಲ್ಲಿ ಸೋಂಕು ಹೆಚ್ಚಳ ಆಗೋದು ಗೊತ್ತಾಗಲ್ಲ ಎನ್ನುವ ಮೂಲಕ ಸರ್ಕಾರ ಎಡವಿದೆ ಎನ್ನುವುದನ್ನು ಸುತ್ತಿಬಳಸಿ ಒಪ್ಪಿಕೊಂಡಿದ್ದಾರೆ.
ಬೆಂಗಳೂರಿನ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 50 ಸಾವಿರ ರೋಗಿಗಳಿಗೆ ಚಿಕಿತ್ಸೆ ಕೊಡಲು ಸಿದ್ಧತೆ ನಡಿಯುತ್ತಿದೆ ಎಂದಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್, ರಾತ್ರೋ ರಾತ್ರಿ ಯಾವುದೂ ಆಗಲ್ಲ. ಎಲ್ಲವೂ ಸಮಯ ತೆಗೆದುಕೊಳ್ಳುತ್ತದೆ. ವ್ಯವಸ್ಥೆ ಕಲ್ಪಿಸುವುವ ಅಧಿಕಾರಿಗಳಿಂದಾಗಿ ಹಿನ್ನಡೆ ಆಗಿದೆ ಅಂತ ನಾನು ಹೇಳಲ್ಲ. ಆದರೆ ಎಲ್ಲವನ್ನೂ ಹಂತಹಂತವಾಗಿ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ ಎಂದಿದ್ದಾರೆ.
ಮುಂದಿನ ಶನಿವಾರವೂ ಲಾಕ್‌ಡೌನ್ ಆಗುತ್ತಾ..?
ಕರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಮಾಡಬೇಕು ಎಂದು ತಜ್ಞರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆದರೂ ಸರ್ಕಾರ ಲಾಕ್‌ಡೌನ್ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ ಎನ್ನಲಾಗಿದೆ. ಅದೇ ಕಾರಣದಿಂದ ಭಾನುವಾರ ಲಾಕ್‌ಡೌನ್ ಮಾಡಲಾಗುತ್ತಾ ಇದೆ. ಇದೀಗ ಮತ್ತೆ ಲಾಕ್‌ಡೌನ್ ಮಾಡುವ ಇಂಗಿತವನ್ನು ಸಿಎಂ ಯಡಿಯೂರಪ್ಪ ಹೊಂದಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ವೈದ್ಯರಾಗಿರುವ ಡಾ. ಅಶ್ವತ್ಥ ನಾರಾಯಣ ಹಾಗೂ ಡಾ. ಸುಧಾಕರ್ ಅವರನ್ನು ಕರೆಸಿಕೊಂಡು ಬುಧವಾರ ಮಾತನಾಡಿರುವ ಬಿ ಎಸ್ ಯಡಿಯೂರಪ್ಪ, ಲಾಕ್‌ಡೌನ್ ಮಾಡಬೇಕಾ ಅಥವಾ ಶನಿವಾರ ಲಾಕ್‌ಡೌನ್ ಮಾಡಬೇಕಾ ಎನ್ನುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಗುರುವಾರ ಈ ಬಗ್ಗೆ ಸಿಎಂ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಸರ್ಕಾರದಲ್ಲಿ ಸಚಿವರ ಕಿತ್ತಾಟ… ಬಗೆಹರಿಯುವುದು ಯಾವಾಗ?
ರಾಜ್ಯ ಸರ್ಕಾರದಲ್ಲಿ ಕರೋನಾ ಉಸ್ತುವಾರಿ ಮಾಡುತ್ತಿರುವ ಸಚಿವ ಯಾರು ಎನ್ನುವುದೇ ಗೊತ್ತಾಗುತ್ತಿಲ್ಲ. ಆರೋಗ್ಯ ಸಚಿವ ಶ್ರೀರಾಮುಲು ಒಂದು ಕಡೆ, ಇನ್ನೊಂದು ಕಡೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್. ಮತ್ತೊಂದು ಕಡೆ ಕಂದಾಯ ಸಚಿವ ಆರ್. ಅಶೋಕ್, ಶಿಕ್ಷಣ ಸಚಿವ ಸುರೇಶ್ ಕುಮಾರ್, ಮಗದೊಂದು ಕಡೆ ಡಿಸಿಎಂ ಅಶ್ವತ್ಥ ನಾರಾಯಣ ಸೇರಿದಂತೆ ಎಲ್ಲರೂ ಪೈಪೋಟಿ ನಡೆಸುತ್ತಲೇ ಇದ್ದಾರೆ.
ಸರ್ಕಾರ ಎಡವಿದೆ, ಕೆಲವೊಂದು ತಪ್ಪುಗಳಾಗಿವೆ ಎಂದು ಸಚಿವ ಡಾ ಸುಧಾಕರ್ ಹೇಳಿದ್ದರು. ಅದಕ್ಕೆ ಕೌಂಟರ್ ರೀತಿಯಲ್ಲಿ ಡಿಸಿಎಂ ಅಶ್ವತ್ಥ ನಾರಾಯಾಣ ಯಾವುದೇ ತಪ್ಪುಗಳಾಗಿಲ್ಲ ಎನ್ನುತ್ತಾರೆ. ಅಶೋಕ್‌ಗೆ ಸುಧಾಕರ್ ಟಾಂಗ್ ಕೊಡ್ತಾರೆ. ಸುಧಾಕರ್ ಕೂಡ ಅಶೋಕ್‌ಗೆ ಕೌಂಟರೆ ಕೊಡ್ತಾರೆ. ಶ್ರೀರಾಮುಲು ಹಾಗೂ ಸುಧಾಕರ್ ಕೂಡ ಕಿತ್ತಾಡುತ್ತಾರೆ. ಒಟ್ಟಾರೆ ಸರ್ಕಾರದ ಮಟ್ಟದಲ್ಲಿ ಕರೋನಾ ಉಸ್ತುವಾರಿಗಾಗಿ ಕಿತ್ತಾಟ ನಡೀತಲೇ ಇದೆ. ಆದರೆ ನಿಯಂತ್ರಣ ಮಾಡುವ ಹೊಣೆ ಹೊತ್ತಿರುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಮಾತ್ರ ದೊರಕುತ್ತಿಲ್ಲ.