ಕೋವಿಡ್-19 ಸಂಕಷ್ಟದಿಂದಾಗಿ ಮಾರ್ಚ್ ತಿಂಗಳಾರ್ಧದಲ್ಲೇ ಶಾಲಾ/ಕಾಲೇಜುಗಳು ಮುಚ್ಚಿದ್ದವು. ಅಲ್ಲದೇ ದ್ವಿತೀಯ ಪಿಯುಸಿ ಯ ಏಕಮಾತ್ರ ಪರೀಕ್ಷೆ ಹಾಗೂ ಎಸ್ಎಸ್ಎಲ್ಸಿ ಯ ಎಲ್ಲಾ ಪರೀಕ್ಷೆಗಳು ಇನ್ನಷ್ಟೇ ನಡೆಯಬೇಕಿದೆ. ಈ ನಡುವೆ ಮೇ 15 ದಾಟಿದ್ದು, ಯಾವಾಗ ಶಾಲೆ ಆರಂಭವಾಗುತ್ತೆ ಅನ್ನೋದಾಗಿ ಪೋಷಕರು ಗೊಂದಲಕ್ಕೊಳಗಾಗಿದ್ದಾರೆ. ಯಾಕೆಂದರೆ ಸಾಂಕ್ರಾಮಿಕ ರೋಗ ಸಮಯದಲ್ಲಿ ಶಾಲಾ ತರಗತಿ ಆರಂಭಿಸಿದ್ದಲ್ಲಿ, ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರು ಭಯಗೊಂಡಿದ್ದಾರೆ. ಈಗಾಗಲೇ 1 ರಿಂದ 9 ನೇ ತರಗತಿವರೆಗಿನ ಮಕ್ಕಳೆಲ್ಲರನ್ನೂ ಉತ್ತೀರ್ಣರೆಂದು ಸಾರಲಾಗಿದೆ. ಆದರೆ ಮುಂದೆ ಮತ್ತೆ ಶಾಲೆ ಆರಂಭಿಸುವ ಸವಾಲನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹೊಂದಿದೆ. ಇದರಿಂದಾಗಿ ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ ಶಾಲೆ ಆರಂಭಿಸುವ ಸೂಚನೆಯನ್ನ ಪ್ರೌಢ ಶಿಕ್ಷಣ ಇಲಾಖೆ ನೀಡಿದೆ. ಇದರಿಂದಾಗಿ ಜೂನ್ ತಿಂಗಳಲ್ಲೇ ಶಾಲೆಗಳು ಆರಂಭವಾಗುವ ಸಾಧ್ಯತೆಗಳು ಬಹುತೇಕ ಖಚಿತವಾಗಿದ್ದು, ಜೊತೆಗೆ ಶಿಕ್ಷಣ ಇಲಾಖೆ ಮಕ್ಕಳ ಸುರಕ್ಷತೆಗೆ ಪೂರಕವಾಗಿ ಹಲವು ಕ್ರಮಗಳನ್ನ ಕೈಗೊಳ್ಳುವಂತೆ ಸೂಚನೆಯನ್ನ ನೀಡಿದೆ.
ಸುರಕ್ಷತೆ ದೃಷ್ಟಿಯಿಂದ ವಿದ್ಯಾರ್ಥಿಗಳಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುವಂತೆ ಶಿಕ್ಷಣ ಇಲಾಖೆ ಸೂಚಿಸಿದ್ದು, ಅದರಂತೆ ಒಂದು ಬೆಂಚ್ ನಲ್ಲಿ 3 ವಿದ್ಯಾರ್ಥಿಗಳಷ್ಟೆ ಕೂರಲು ಅಸನ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿದೆ. ಅಲ್ಲದೇ ಎರಡು ಪಾಳಿಯಲ್ಲಿ ತರಗತಿ ನಡೆಸಲು ನಿರ್ದೇಶಿಸಿದ್ದು, ಅದರಂತೆ ಮೊದಲ ಪಾಳಿಯ ತರಗತಿಗಳು ಬೆಳಿಗ್ಗೆ 7.50 ರಿಂದ ಆರಂಭವಾಗಿ ಮಧ್ಯಾಹ್ನ 12.20 ರವರೆಗೆ ಇರಲಿದ್ದು, ಆನಂತರ ಎರಡನೇ ಪಾಳಿಯು 12.10 ರಿಂದ ಸಂಜೆ 5 ಗಂಟೆವರೆಗೂ ತರಗತಿ ನಡೆಸಲು ಅವಕಾಶ ಕಲ್ಪಿಸಿದೆ. ಈ ಮೂಲಕ ವಿದ್ಯಾರ್ಥಿಗಳ ನಡುವಿನ ದೈಹಿಕ ಅಂತರ ತಪ್ಪಿಸುವ ಉದ್ದೇಶವನ್ನ ಶಿಕ್ಷಣ ಇಲಾಖೆ ಹೊಂದಿದೆ.
ಅಲ್ಲದೇ ಪಿಯುಸಿ ಜೊತೆಗಿರುವ ಪ್ರೌಢ ಶಾಲೆಗಳಲ್ಲಿ ಪ್ರಸ್ತುತವಿರುವ ಪಿಯುಸಿ ಸಮಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3.30 ಇದನ್ನ ಮಾರ್ಪಾಡುಗೊಳಿಸಿ ಬೆಳಿಗ್ಗೆ 8.30 ರಿಂದ 12.30 ರವರೆಗೆ ನಡೆಸುವಂತೆಯೂ ಹಾಗೂ ಆ ನಂತರ ಆ ತರಗತಿಗಳನ್ನ ಪ್ರೌಢ ಶಾಲೆಗೆ ಉಪಯೋಗಿಸಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಇನ್ನು ಮುಚ್ಚಿದ ಶಾಲಾ ತರಗತಿ ಹಾಗೂ ಮಧ್ಯಾಹ್ನ ನಂತರ ಮುಚ್ಚುವ ಅಂಗನವಾಡಿಗಳನ್ನೂ ತರಗತಿಗೆ ಉಪಯೋಗಿಸಿಕೊಳ್ಳಬಹುದಾಗಿದೆ. ಜೊತೆಗೆ ಪ್ರಾರ್ಥನೆ ಸಮಯದಲ್ಲಿ ಮಾಸ್ಕ್ ಹಾಕುವಿಕೆ ಖಡ್ಡಾಯವಿರುವಂತೆ ಸೂಚಿಸಿದ್ದು, ಸ್ವಚ್ಛತೆ ಹಾಗೂ ಅನ್ನ ದಾಸೋಹ, ಕ್ಷೀರ ಭಾಗ್ಯಗಳು ಇರುವಂತೆಯೂ ನೋಡಿಕೊಳ್ಳುವಂತೆ ಶಿಕ್ಷಣಾಧಿಕಾರಿಗಳ ಸೂಚನೆ ನೀಡಲಾಗಿದೆ.
ಇನ್ನು ಹೆಚ್ಚಿನ ಬದಲಾವಣೆ ಅಥವಾ ಈ ಯೋಜನೆ ಬಗ್ಗೆ ಜಾರಿಗೊಳಿಸಲು ಆಯಾಯ ತಾಲೂಕು ಶಿಕ್ಷಣಾಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಅವಕಾಶ ನೀಡುವುದಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಆದರೆ ಪಠ್ಯಗಳನ್ನ ಕಡಿತಮಾಡುವ ವಿಚಾರವನ್ನ ಶಿಕ್ಷಣ ಇಲಾಖೆ ಸದ್ಯ ಬಿಡುಗಡೆಗೊಳಿಸಿರುವ ಅಧಿಸೂಚನೆಯಲ್ಲಿ ತಿಳಿಸಿಲ್ಲ.