ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಧೀಶರು ಬುಧವಾರ ತೀರ್ಪು ಬರೆಯಲು ಪ್ರಾರಂಭಿಸಲಿದ್ದು, ಈ ತಿಂಗಳ ಅಂತ್ಯದ ವೇಳೆಗೆ ತೀರ್ಪು ಪ್ರಕಟಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.
ದಶಕಗಳ ಇತಿಹಾಸವಿರುವ ಬಾಬ್ರಿ ಧ್ವಂಸ ಪ್ರಕರಣದಲ್ಲಿ ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಮತ್ತು ಬಿಜೆಪಿ ನಾಯಕರಾದ ಮುರಳಿ ಮನೋಹರ್ ಜೋಶಿ, ಉಮಾ ಭಾರತಿ, ವಿನಯ್ ಕಟಿಯಾರ್ ಮತ್ತು ಸಾಕ್ಷಿ ಮಹಾರಾಜ್ ಸೇರಿದಂತೆ ಹಲವು ಸಂಘಪರಿವಾರದ ನಾಯಕರು ಮುಖ್ಯ ಆರೋಪಿಗಳಾಗಿದ್ದಾರೆ.
ತನಿಖಾ ಸಂಸ್ಥೆ ಸಿಬಿಐ ಆರೋಪಿಗಳ ವಿರುದ್ಧ ಸುಮಾರು 350 ಸಾಕ್ಷಿಗಳು ಹಾಗೂ 600 ರಷ್ಟು ದಾಖಲೆಗಳನ್ನು ತಯಾರಿಸಿದೆ. ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಗಡುವನ್ನು ಗಮನದಲ್ಲಿಟ್ಟುಕೊಂಡು ಸಿಬಿಐ ನ್ಯಾಯಾಧೀಶರು ಈ ತಿಂಗಳ ಅಂತ್ಯದ ವೇಳೆಗೆ ತೀರ್ಪು ನೀಡುವ ಸಾಧ್ಯತೆ ಇದೆ.
ಅಯೋಧ್ಯೆಯಲ್ಲಿನ ಬಾಬರಿ ಮಸೀದಿಯನ್ನು ಪುರಾತನ ರಾಮ್ ದೇವಾಲಯದ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿಕೊಂಡು ಬಾಬರಿ ಮಸೀದಿಯನ್ನು 1992 ರ ಡಿಸೆಂಬರ್ನಲ್ಲಿ “ಕರ ಸೇವಕರು” ನೆಲಸಮ ಮಾಡಿದ್ದರು. ಈ ಸ್ಥಳದ ಕುರಿತಾದ ಭೂ ವಿವಾದವನ್ನು ಕಳೆದ ವರ್ಷ ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ನೀಡಿತ್ತು. ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಪರ್ಯಾಯ ಸ್ಥಳವನ್ನು ಮಂಜೂರು ಮಾಡಬೇಕೆಂದು ನ್ಯಾಯಾಲಯ ನಿರ್ದೇಶಿಸಿತ್ತು.