ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ನಿಗದಿಯಾಗಿದ್ದು, ಬಿಜೆಪಿ ಇಂದು ಅಧಿಕೃತವಾಗಿ ಇಬ್ಬರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರವಾಗಿದ್ದ ಮೂವರು ಹೆಸರುಗಳನ್ನು ಸಾರಾಸಗಟಾಗಿ ತಿರಸ್ಕಾರ ಮಾಡಿರುವ ಕೇಂದ್ರ ಬಿಜೆಪಿ ನಾಯಕರು ಹೊಸದಾಗಿ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುವ ಮೂಲಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನಿರ್ಧಾರಕ್ಕೆ ನಿರಂತರವಾಗಿ ಪೆಟ್ಟು ಕೊಡುತ್ತಲೇ ಬಂದಿದ್ದಾರೆ. ಈಗ ರಾಜ್ಯ ಅಭ್ಯರ್ಥಿಗಳ ಆಯ್ಕೆಯಲ್ಲೂ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ರಾಜ್ಯಸಭೆ ಟಿಕೆಟ್ ಆಕಾಂಕ್ಷಿಗಳಿಗೂ ಬಿಜೆಪಿ ಹೈಕಮಾಂಡ್ ಖಡಕ್ ಸಂದೇಶ ಕೊಟ್ಟಿದೆ.
ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡುವಂತೆ ಸಾಕಷ್ಟು ಮಂದಿ ಲಾಬಿ ಮಾಡಿದ್ದರು. ಶಾಸಕ ಉಮೇಶ್ ಕತ್ತಿ ಬಂಡಾಯದ ಸಭೆಯನ್ನೇ ಮಾಡಿ ರಾಜ್ಯಸಭೆಗೆ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ಕೊಡಬೇಕು ಎಂದು ಒತ್ತಡ ಹಾಕಿದ್ದರು. ಪ್ರಭಾಕರ್ ಕೋರೆ ಕೂಡ ರಾಜ್ಯಸಭೆಗೆ ಮರು ಆಯ್ಕೆ ಬಯಸಿದ್ದರು. ಇನ್ನೂ ಸಾಕಷ್ಟು ನಾಯಕರು ತೆರೆಮರೆಯಲ್ಲಿ ಭಾರೀ ಕಸರತ್ತು ನಡೆಸಿದ್ದರು. ಆದರೆ ಅಂತಿಮವಾಗಿ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಎಂಬುವರನ್ನು ಬಿಜೆಪಿ ಅಭ್ಯರ್ಥಿಗಳಾಗಿ ಆಯ್ಕೆ ಮಾಡಿ ಹೈಕಮಾಂಡ್ ಸೂಚಿಸಿದೆ. ವಿಶೇಷ ಎಂದರೆ ಈ ಇಬ್ಬರು ನಾಯಕರು ರಾಜ್ಯಸಭೆ ಟಿಕೆಟ್ ಆಕಾಂಕ್ಷಿಗಳೇ ಆಗಿರಲಿಲ್ಲ. ಆದರೂ ಬಂಡಾಯ ಮಾಡುವ ನಾಯಕರಿಗೆ ಬಿಸಿ ಮುಟ್ಟಿಸುವ ಸಲುವಾಗಿ ಕೇಂದ್ರ ಬಿಜೆಪಿ ನಾಯಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಾ ಇದೆ. ಬಿಜೆಪಿಯಲ್ಲಿ ಬಂಡಾಯ ಮಾಡಿ, ಲಾಬಿ ಮಾಡಿ ಯಾವುದೇ ಸ್ಥಾನಮಾನ ಪಡೆಯುವ ಆಸಕ್ತಿ ಬೇಡ. ಹೈಕಮಾಂಡ್ ನಿಮ್ಮ ಕೆಲಸವನ್ನು ಗುರುತಿಸಿ ಜವಾಬ್ದಾರಿ ನೀಡಲಿದೆ ಎನ್ನುವ ಸಂದೇಶ ರವಾನೆ ಮಾಡುವ ಅವಶ್ಯಕತೆ ಇತ್ತು ಎನ್ನುತ್ತಾರೆ ಬಿಜೆಪಿ ನಾಯಕರು.
Also Read: ಬಿಜೆಪಿಯಿಂದ ರಾಜ್ಯಸಭೆಗೆ ಅಚ್ಚರಿಯ ಟಿಕೆಟ್; ಶಾಸಕ ಉಮೇಶ್ ಕತ್ತಿ ತಂಡಕ್ಕೆ ಹಿನ್ನಡೆ
ರಾಯಚೂರು ಮೂಲದ ಅಶೋಕ್ ಗಸ್ತಿ, ಸವಿತಾ ಸಮಾಜದ ಮುಖಂಡರಾಗಿದ್ದು, ರಾಯಚೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮೂಲಕ ರಾಜಕೀಯ ಪ್ರವೇಶ ಪಡೆದ ಅಶೋಕ್ ಗಸ್ತಿ, ಸಂಘಪರಿವಾರದ ಕಟ್ಟಾಳು ಆಗಿದ್ದಾರೆ. ಪಕ್ಷ ಹೇಳುವ ಕೆಲಸವನ್ನು ನಿಷ್ಠೆಯಿಂದ ಮಾಡುವುದು ಅಷ್ಟೇ ನನ್ನ ಕೆಲಸ ಎಂದಿದ್ದಾರೆ ಅಶೋಕ್ ಗಸ್ತಿ. ಇನ್ನೂ ಈರಣ್ಣ ಕಡಾಡಿ, 1989 ರಿಂದಲೂ ಬಿಜೆಪಿಯ ಸಕ್ರೀಯ ಕಾರ್ಯಕರ್ತನಾಗಿದ್ದು, ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕು ಬಿಜೆಪಿ ಅಧ್ಯಕ್ಷರಾಗಿ ಸೇವೆ ಕೆಲಸ ಮಾಡಿದ್ದಾರೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿಯೂ ಪಕ್ಷಕ್ಕಾಗಿ ದುಡಿದಿದ್ದಾರೆ.
ಹಿಂದೆ ಅರಭಾವಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿದ್ದ ಈರಣ್ಣ ಕಡಾಡಿ, 1994ರಲ್ಲಿ ಅರಭಾವಿ ಬಿಜೆಪಿ ಅಭ್ಯರ್ಥಿಯಾಗಿ ಸೋಲುಂಡಿದ್ದರು. 2004ರಲ್ಲಿ ಬೆಳಗಾವಿ ಗ್ರಾಮೀಣ ಘಟಕದ ಅಧ್ಯಕ್ಷ ಸ್ಥಾನ, 2010ರಲ್ಲಿ ಬೆಳಗಾವಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದರು. ಇದೀಗ ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಕೆ ಮಾಡುತ್ತಿದ್ದಾರೆ. ರಾಜ್ಯ ಮಟ್ಟದಲ್ಲಿ ಹೇಳಿಕೊಳ್ಳುವಂತಹ ಹೆಸರು ಇಲ್ಲದಿದ್ದರೂ ಪಕ್ಷದಲ್ಲಿ ಗುರುತಿಸುವಂತೆ ಕೆಲಸ ಮಾಡುತ್ತಿದ್ದರು, ಅದೇ ಕಾರಣಕ್ಕೆ ಟಿಕೆಟ್ ಸಿಕ್ಕಿದೆ ಎನ್ನಲಾಗ್ತಿದೆ.
ʻಸಂತೋಷʼದ ಆಟ, ಬಿಎಸ್ ಯಡಿಯೂರಪ್ಪಗೆ ಮುಜುಗರ..!
ಆರ್‌ಎಸ್‌ಎಸ್‌ನ ಬಿ ಎಲ್ ಸಂತೋಷ್, ಸಂಘಟನೆಯಲ್ಲಿದ್ದಾಗ ಪಕ್ಷ ಸಂಘಟನೆಗೆ ಸಲಹೆ ಸೂಚನೆ ಮಾತ್ರ ಕೊಡುತ್ತಿದ್ದರು. ಇದೀಗ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್, ನೇರವಾಗಿ ಪಕ್ಷದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಮುಂದೆ ರಾಜ್ಯ ರಾಜಕಾರಣಕ್ಕೆ ಬಿ ಎಲ್ ಸಂತೋಷ್ ಅವರೇ ನಾಯಕ ಎನ್ನಲಾಗ್ತಿದ್ದು, ರಾಜ್ಯದಲ್ಲಿ ಪಕ್ಷವನ್ನು ಸಂಘಟನೆ ಮೂಲಕವೇ ಬಲಪಡಿಸುವ ಯೋಜನೆ ಹಾಕಿಕೊಂಡಿದ್ದಾರೆ. ಅದೇ ಕಾರಣಕ್ಕೆ ಬಿ ಎಸ್ ಯಡಿಯೂರಪ್ಪ ತೆಗೆದುಕೊಳ್ಳುವ ಬಹುತೇಕ ಎಲ್ಲಾ ನಿರ್ಧಾರಗಳನ್ನು ಸಂಘಪರಿವಾರದ ನಾಯಕರಿಗೆ ಕೊಡುವ ಮೂಲಕ ಪಕ್ಷದ ಮೇಲೆ ತನ್ನದೇ ಆದ ಹಿಡಿತ ಸಾಧಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿ ಎಸ್ ಯಡಿಯೂರಪ್ಪ ಅವರು ಪಕ್ಷದ ನಾಯಕತ್ವದಿಂದ ನಿವೃತ್ತಿ ಪಡೆಯಬೇಕಿದೆ. 75 ವರ್ಷ ಮೇಲ್ಪಟ್ಟವರು ಪಕ್ಷದ ಅಧಿಕಾರದಲ್ಲಿ ಇರುವಂತಿಲ್ಲ ಎಂಬ ನಿಯಮವನ್ನು ಪಾಲಿಸಬೇಕಿದೆ. ಅದೇ ಕಾರಣಕ್ಕಾಗಿ ಬಿ ಎಲ್ ಸಂತೋಷ್ ಪಕ್ಷದ ಮೇಲೆ ಬಿಗಿ ಹಿಡಿತ ಸಾಧಿಸುತ್ತಿದ್ದಾರೆ ಎನ್ನುವ ಮಾತುಗಳಿವೆ.
Also Read: ಖರ್ಗೆ ಆಯ್ಕೆಯ ಹಿಂದೆ ಇದೆ ಕಾಂಗ್ರೆಸ್‌ನ ಹಲವು ಲೆಕ್ಕಾಚಾರ..!
ಒಂದೇ ಕಲ್ಲಿನಲ್ಲಿ ಹಲವು ಹಕ್ಕಿ ಹೊಡೆದ ಹೈಕಮಾಂಡ್..!
ರಾಜ್ಯಸಭಾ ಟಿಕೆಟ್ ಹಂಚಿಕೆಯಲ್ಲಿ ಬಿ ಎಲ್ ಸಂತೋಷ್ ಮೇಲುಗೈ ಸಾಧಿಸಿದ್ದಾರೆ ಎನ್ನುವುದು ಮೇಲ್ನೋಟಕ್ಕೇ ಗೊತ್ತಾಗುವ ವಿಚಾರ. ಆದರೆ ಬಿಜೆಪಿ ಹೈಕಮಾಂಡ್ ಒಂದೇ ಏಟಿನಲ್ಲಿ ಸಾಕಷ್ಟು ನಾಯಕರಿಗೆ ಮುಟ್ಟಿನೋಡಿಕೊಳ್ಳುವಂತೆ ಮಾಡಿದ್ದಾರೆ. ಎರಡೂ ರಾಜ್ಯಸಭಾ ಟಿಕೆಟ್ ಸಂತೋಷ್ ಬೆಂಬಲಿಗರಿಗೆ ನೀಡುವ ಮೂಲಕ ರಮೇಶ್ ಕತ್ತಿಗೆ ಟಿಕೆಟ್ ನೀಡಿ ಬಂಡಾಯ ಶಮನಕ್ಕೆ ಯತ್ನಿಸಿದ್ದ ಸಿಎಂ ಯಡಿಯೂರಪ್ಪಗೆ ಬಂಡಾಯಕ್ಕೆ ಬೆಲೆ ಬೇಡ ಎನ್ನುವ ಸಂದೇಶ ರವಾನಿಸಿದ್ದಾರೆ.
ಇನ್ನು ಉದ್ಯಮಿ ಪ್ರಕಾಶ್ ಶೆಟ್ಟಿ, ಬಿ ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಮೂಲಕ ಟಿಕೆಟ್‌ಗಾಗಿ ತೀವ್ರ ಪ್ರಯತ್ನ ಮಾಡಿದ್ದು, ಅಲ್ಲೂ ಸಿಎಂ ಪುತ್ರನಿಗೆ ಹಿನ್ನಡೆಯಾಗುವಂತೆ ಮಾಡಿದೆ. ಇನ್ನೂ ಬೆಳಗಾವಿಯಲ್ಲಿ ಉಮೇಶ್ ಕತ್ತಿ ಅಥವಾ ಪ್ರಭಾಕರ ಕೋರೆ ಅವರಿಗೆ ಟಿಕೆಟ್ ನೀಡಿದರೆ ಈಗಾಗಲೇ ಚಾಲ್ತಿಯಲ್ಲಿರುವ ಎರಡು ಬಣಗಳ ಮಧ್ಯೆ ನಾನು ತಾನು ಎನ್ನುವ ಅಹಂ ಬರುವ ಸಾಧ್ಯತೆ ಇದೆ. ಇಬ್ಬರಿಗೂ ಕೊಡದೆ ಮೂರನೇ ವ್ಯಕ್ತಿಯನ್ನು ಬೆಳಗಾವಿಯಿಂದಲೇ ಆಯ್ಕೆ ಮಾಡಿದರೆ ಉತ್ತಮ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಜೊತೆಗೆ ಬೆಳಗಾವಿಯ ಅರಭಾವಿಯಲ್ಲಿ ಕ್ಷೇತ್ರದಲ್ಲಿ ಜಾರಕಿಹೊಳಿ ಬ್ರದರ್ಸ್ ಯಾವುದೇ ಪಕ್ಷದಲ್ಲಿದ್ದರೂ ತಾವೇ ಗೆಲ್ಲುತ್ತಾ ಬೇರೆ ಯಾವುದೇ ನಾಯಕರು ಗೆಲ್ಲುವುದಕ್ಕೆ ಅಸಾಧ್ಯವೆನ್ನುವಂತೆ ಮಾಡಿದ್ದರು. ಇದೀಗ ರಾಜ್ಯಸಭಾ ಸ್ಥಾನವನ್ನು ಕೊಡುವ ಮೂಲಕ ಉಮೇಶ್ ಕತ್ತಿ ಹಾಗೂ ರಮೇಶ್ ಜಾರಕಿಹೊಳಿ ಬಣಕ್ಕೆ ಬಿಸಿ ಬಾಳೆ ಹಣ್ಣು ತಿನ್ನಿಸಿದ್ದಾರೆ ಎನ್ನಲಾಗ್ತಿದೆ.
Also Read: ರಾಜ್ಯಸಭೆ ಚುನಾವಣೆ: ಕರ್ನಾಟಕದಿಂದ ಅವಿರೋಧ ಆಯ್ಕೆ?
ಬಿ ಎಸ್ ಯಡಿಯೂರಪ್ಪ ಅವರಿಗೆ 6ನೇ ಮುಖಭಂಗ..!
ಬಿ ಎಸ್ ಯಡಿಯೂರಪ್ಪ ಮೊದಲ ಬಾರಿ ಸಿಎಂ ಆದ ಬಳಿಕ ಬಿಜೆಪಿಯಲ್ಲಿ ಮುಜುಗರಕ್ಕೆ ಒಳಗಾಗಿ ಪಕ್ಷ ಬಿಟ್ಟು ಹೋಗಿದ್ದರು. ಕೆಜೆಪಿ ಕಟ್ಟಿದ್ದರಿಂದ ಬಿಜೆಪಿಗೆ ಬರಬೇಕಿದ್ದ ಮತಗಳು ಕೈತಪ್ಪಿದ ಒಂದೇ ಒಂದು ಕಾರಣದಿಂದ ಬಿ ಎಸ್ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳಲಾಗಿತ್ತು. ಅಂದಿನಿಂದ ಯಡಿಯೂರಪ್ಪ ಮೇಲೆ ಪಕ್ಷದ ಹೈಕಮಾಂಡ್‌ಗೆ ನಂಬಿಕೆ ಬಂದಿಲ್ಲ ಎನಿಸುವಂತೆಯೇ ವರ್ತನೆಗಳಿವೆ. ಇದೀಗ ರಾಜ್ಯಸಭೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಆಗಿರುವ ಮುಜುಗರ ಸೇರಿದಂತೆ ಬಿ ಎಸ್ ಯಡಿಯೂರಪ್ಪ ಅವರಿಗೆ ಆರನೇ ಬಾರಿ ಹೈಕಮಾಂಡ್ ಕೌಂಟರ್ ಕೊಟ್ಟಿದೆ.
ಕಳೆದ ಲೋಕಸಭಾ ಚುನಾವಣೆ ವೇಳೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಆಯ್ಕೆ ವೇಳೆ ದಿವಂಗತ ಬಿಜೆಪಿ ನಾಯಕ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್‌ಗೆ ಟಿಕೆಟ್ ಕೊಡುವುದಾಗಿ ಭರವಸೆ ನೀಡಿ ಬಂದಿದ್ದರು. ಕೆಲವೇ ದಿನಗಳಲ್ಲಿ ಬಿಜೆಪಿ ಹೈಕಮಾಂಡ್ ಯುವಕ ತೇಜಸ್ವಿ ಸೂರ್ಯನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿತ್ತು.
ಇನ್ನು ಮುಖ್ಯಮಂತ್ರಿ ಆದ ವೇಳೆ ಡಿಸಿಎಂ ಸ್ಥಾನ ಬೇಡ ಎಂದು ಬಿ ಎಸ್ ಯಡಿಯೂರಪ್ಪ ಭಾರೀ ಸರ್ಕಸ್ ಮಾಡಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಬಿ ಎಸ್ ಯಡಿಯೂರಪ್ಪ ಅವರನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವ ಉದ್ದೇಶದಿಂದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಅಶ್ವತ್ಥ ನಾರಾಯಣ ಅವರನ್ನು ಡಿಸಿಎಂ ಮಾಡಿತು. ಇನ್ನೂ ಪಕ್ಷದ ಅಧ್ಯಕ್ಷರ ಆಯ್ಕೆ ವೇಳೆ ಅರವಿಂದ ಲಿಂಬಾವಳಿ ಅವರ ಬಗ್ಗೆ ಯಡಿಯೂರಪ್ಪ ಒಲವು ತೋರಿಸಿದ್ದರು. ಆದರೆ ದಕ್ಷಿಣ ಕನ್ನಡ ಸಂಸದ ಸಂಘ ಪರಿವಾರದ ನಾಯಕ ನಳೀನ್ ಕುಮಾರ್ ಕಟೀಲ್ ಅವರನ್ನು ಆಯ್ಕೆ ಮಾಡಿತ್ತು.
ವಿಧಾನಸಭಾ ಸ್ಪೀಕರ್ ಆಯ್ಕೆ ವೇಳೆ ಕೆ ಜಿ ಬೋಪಯ್ಯ ಅಥವಾ ಸುರೇಶ್ ಕುಮಾರ್ ಅವರು ಸೂಕ್ತ ಎಂದು ಆಯ್ಕೆ ಮಾಡುವ ವೇಳೆಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕರೆತಂದು ಆ ಸ್ಥಾನಕ್ಕೆ ಕೂರಿಸಲಾಯ್ತು. ಇನ್ನೂ ಬಿಬಿಎಂಪಿ ಮೇಯರ್ ಆಯ್ಕೆಯಲ್ಲೂ ಬಿಎಸ್ ಯಡಿಯೂರಪ್ಪಗೆ ಮುಜುಗರ ಉಂಟು ಮಾಡಿದ ಹೈಕಮಾಂಡ್, ಆರ್ ಅಶೋಕ್ ಆಪ್ತ ಪದ್ಮನಾಭ ರೆಡ್ಡಿ ಅವರನ್ನು ಮೇಯರ್ ಮಾಡಲು ಮುಂದಾಗಿದ್ದರು. ಆದರೆ ಗೌತಮ್ ಕುಮಾರ್ ಜೈನ್ ಅವರನ್ನು ಆಯ್ಕೆ ಮಾಡಲು ಹೈಕಮಾಂಡ್ ಸೂಚನೆ ಕೊಟ್ಟಿತ್ತು. ಇದೀಗ ರಾಜ್ಯಸಭೆ ವಿಚಾರದಲ್ಲೂ ಆಟ ಹುಡುಗಾಟ ಮುಂದುವರಿಸಿದ್ದಾರೆ.
ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷ ಯಡಿಯೂರಪ್ಪ ಅವರ ಹಿಡಿತವನ್ನು ಹೇಗೆ ತಪ್ಪಿಸುತ್ತದೆ..? ಇದೇ ರೀತಿ ಮುಜುಗರ ಅನುಭವಿಸುತ್ತಾ ಸಾಗಿದರೆ ಜನನಾಯಕ ಯಡಿಯೂರಪ್ಪ ಬೇರೊಂದು ತಂತ್ರಗಾರಿಕೆ ಮಾಡಲಿದ್ದಾರೆಯೇ..? ಎನ್ನುವ ಅನುಮಾನ ಜನಮಾನಸದಲ್ಲಿ ಮೂಡುತ್ತಿದೆ.