ರಾಜಸ್ಥಾನದಲ್ಲಿ ರಾಜಕೀಯ ಬೆಳವಣಿಗೆಗಳು ಕ್ಷಿಪ್ರ ಗತಿಯಲ್ಲಿ ನಡೆಯುತ್ತಿವೆ. ರಾಜ್ಯದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ತನ್ನ ಆಪ್ತ ಶಾಸಕರೊಡನೆ ದೆಹಲಿ ಪ್ರಯಾಣ ಬೆಳೆಸಿದ್ದು ಸಾಕಷ್ಟು ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ.
ಮಾಧ್ಯಮಗಳ ವರದಿಯ ಪ್ರಕಾರ ಸುಮಾರು 12 ಶಾಸಕರು ಸಚಿನ್ ಪೈಲಟ್ ಜೊತೆಗಿದ್ದು, ರಾಜಸ್ಥಾನದಲ್ಲಿ ಮಧ್ಯಪ್ರದೇಶ ಮಾದರಿಯ ಆಪರೇಷನ್ ಕಮಲ ನಡೆಯುವ ಸೂಚನೆಯೇ ಎಂಬ ಸಂದೇಹ ಈಗ ಮೂಡಿ ಬಂದಿದೆ.
ಶನಿವಾರವಷ್ಟೇ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ಬಿಜೆಪಿಯ ಮೇಲೆ ವಾಗ್ದಾಳಿ ನಡೆಸಿದ್ದು, ಸುಮಾರು 15 ಕೋಟಿ ರೂ.ಗಳ ಆಮೀಷವೊಡ್ಡಿ ಕಾಂಗ್ರೆಸ್ನ ಶಾಸಕರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಈ ಕುರಿತಾಗಿ ರಾಜಸ್ಥಾನ ಪೊಲೀಸ್ನ ವಿಶೇಷ ತಂಡವು ಇಬ್ಬರನ್ನು ಬಂಧಿಸಿದ್ದು ಭೃಷ್ಟಾಚಾರ ನಿಗ್ರಹ ದಳವು ಪ್ರಾಥಮಿಕ ತನಿಖೆಯನ್ನು ಕೈಗೆತ್ತಿಕೊಂಡಿದೆ. ಇತ್ತೀಚಿಗೆ ನಡೆದ ರಾಜ್ಯಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಶಾಸಕರಿಗೆ ಲಂಚದ ಆಮೀಷವೊಡ್ಡಿದ್ದ ಕಾರಣಕ್ಕೆ ಮೂವರು ಪಕ್ಷೇತರ ಶಾಸಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ವಿಶೇಷ ತಂಡವು ಸಿಎಂ ಗೆಹ್ಲೋಟ್ ಹಾಗೂ ಡಿಸಿಎಂ ಸಚಿನ್ ಅವರ ಹೇಳಿಕೆಗಳನ್ನು ಕೂಡಾ ದಾಖಲಿಸಲು ಇಚ್ಚಿಸಿದ್ದು, ಅವರ ಹೇಳಿಕೆಗಳನ್ನು ಪಡೆಯಲು ನೋಟಿಸ್ ಕಳುಹಿಸಿದೆ.
ಇನ್ನು ಸಚಿನ್ ಪೈಲಟ್ ಅವರ ದೆಹಲಿ ಭೇಟಿಯ ಕುರಿತಾಗಿ ಮಾತನಾಡಿರುವ ರಾಜಸ್ಥಾನದ ಕಾಂಗ್ರೆಸ್ ಮುಖಂಡರೊಬ್ಬರು, ಸೋನಿಯಾ ಹಾಗೂ ರಾಹುಲ್ ಗಾಂಧಿಯವರಿಗೆ ಪ್ರಸ್ತುತ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಲಾಗಿದೆ. ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
“ಮಧ್ಯಪ್ರದೇಶದ ರೀತಿ ಇಲ್ಲಿ ಯಾವುದೇ ಘಟನೆಗಳನ್ನು ನಡೆಯಲು ನಾವು ಬಿಡುವುದಿಲ್ಲ. ನಮ್ಮ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವ ಬಿಜೆಪಿಯ ಯೋಜನೆ ಸಫಲವಾಗುವುದಿಲ್ಲ. ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಕೋಟಿಗಟ್ಟಲೆ ಹಣವನ್ನು ನೀಡಲಾಗಿದೆ ಹಾಗೂ ಇನ್ನೂ ನೀಡುವುದಾಗಿ ಭರವಸೆಯನ್ನೂ ನೀಡಿದ್ದಾರೆ,” ಎಂದು ಅವರು ಹೇಳಿದ್ದಾರೆ.