ಕರೋನಾ ವೈರಸ್ ತಡೆಗೆ ಸಾಮಾಜಿಕ ಅಂತರ ಮಾತ್ರ ಮದ್ದು ಎಂದು ಜಪಿಸಿದ್ದ ಪ್ರಧಾನಿ ನರೇಂದ್ರ ಇಂದು ಮಹತ್ವದ ಸಭೆ ನಡೆಸಿದ್ರು. 2ನೇ ಬಾರಿ ಘೋಷಣೆಯಾಗಿರುವ ಲಾಕ್ಡೌನ್ ಮೇ 3ರಂದು ಅಂತ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಕರೋನಾ ವೈರಸ್ ತಡೆಗೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎನ್ನುವ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ರು. ಬಹುತೇಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಒಮ್ಮತ ಪ್ರದರ್ಶನ ಮಾಡಿದ್ದು ಕರೋನಾ ವೈರಸ್ ತಡೆಗೆ ಲಾಕ್ಡೌನ್ ವಿಸ್ತರಣೆ ಮಾಡುವುದೇ ಸೂಕ್ತ ಎಂಬ ನಿಲುವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಭೆ ಬಳಿಕ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ದೇಶದಲ್ಲಿ ಕರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೆಮ್ಮಾರಿ ಕರೋನಾ ಹರಡದಂತೆ ತಡೆಯಲು ಭಾರತ ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆ. ಲಾಕ್ಡೌನ್ ವಿಸ್ತರಣೆ ಬಗ್ಗೆ ಎಲ್ಲಾ ರಾಜ್ಯಗಳಿಂದ ಮಾಹಿತಿ ಪಡೆದಿದ್ದಾರೆ ಎಂದಿದ್ದಾರೆ.
ಲಾಕ್ಡೌನ್ನಿಂದಾಗಿ ಸಮಸ್ಯೆಗಳು ಹೆಚ್ಚಾಗುತ್ತಲೇ ಇದೆ. ಕರೋನಾ ನಿಯಂತ್ರಣಕ್ಕೆ ಮೇ 3 ರ ಬಳಿಕವೂ ಲಾಕ್ಡೌನ್ ವಿಸ್ತರಿಸಿದರೆ ಒಳ್ಳೆಯದು. ಆದರೆ ಈಗಾಗಲೇ ರಾಜ್ಯಗಳಲ್ಲಿ ಆರ್ಥಿಕ ಕ್ರೂಢೀಕರಣ ಸಾಧ್ಯವಾಗುತ್ತಿಲ್ಲ. ಕೋವಿಡ್ – 19 ರಿಲೀಫ್ ಫಂಡ್ ಜೊತೆ ಕೇಂದ್ರದಿಂದ ರಾಜ್ಯಗಳಿಗೆ ಬರಬೇಕಾದ ಅನುದಾನವನ್ನೂ ಶೀಘ್ರವೇ ಬಿಡುಗಡೆ ಮಾಡಿ ಎಂದು ಒತ್ತಾಯಿಸಿವೆ. ಜೊತೆಗೆ ಕರೋನಾ ವೈರಸ್ ದಾಳಿಗೆ ಸಿಲುಕಿ ಕೈಗಾರಿಕೋದ್ಯಮ ತತ್ತರಿಸಿವೆ. ಸಣ್ಣ ಮತ್ತು ಅತಿಸಣ್ಣ ಉದ್ಯಮಗಳನ್ನ ಶುರು ಮಾಡಲು ಕೇಂದ್ರದಿಂದ ಉತ್ತೇಜನಕ್ಕೆ ವಿಶೇಷ ಪ್ಯಾಕೇಜ್ ನೀಡಿ ಎಂದು ಮನವಿ ಮಾಡಿದ್ದಾರೆ. ದೇಶದ ನಾನಾ ಕಡೆ ಸಿಲುಕಿರುವ ವಲಸೆ ಕಾರ್ಮಿಕರನ್ನ ವಾಪಸ್ ಕರೆಸಿಕೊಳ್ಳಲು ವಿಶೇಷ ರೈಲು ವ್ಯವಸ್ಥೆ ಮಾಡಿ ಎಂದು ಆಗ್ರಹ ಮಾಡಿದ್ದಾರೆ. ಒಂದು ವೇಳೆ ಲಾಕ್ಡೌನ್ ಮಾಡಲು ಸಾಧ್ಯವಿಲ್ಲ ಎನ್ನುವುದಾದರೆ ಕೆಂಪು ಹಾಗೂ ಹಳದಿ ವಲಯದಲ್ಲಿರುವ ಪ್ರದೇಶವನ್ನು ಲಾಕ್ಡೌನ್ ಮಾಡಿ ಎಂದು ಮನವಿ ಜೊತೆಗೆ PPE ಕಿಟ್, ಲ್ಯಾಬ್, ಆಸ್ಪತ್ರೆಗಳ ಸಂಖ್ಯೆ ಇನ್ನಷ್ಟು ಹೆಚ್ಚಳಕ್ಕೆ ಮನವಿ ಮಾಡಿದ್ದಾರೆ.
ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಮಹತ್ವದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಕೆಲವೊಂದು ಸಲಹೆಗಳನ್ನು ಕೊಟ್ಟಿದ್ದಾರೆ ಎನ್ನಲಾಗಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಈ ಸಮಯದಲ್ಲಿ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ ಕೂಡ ಮಹತ್ವ ಎಂದು ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ. ಇದೇ ವೇಳೆ ಮೇ 3 ರಿಂದ 2 ವಾರಗಳ ಕಾಲ ಲಾಕ್ಡೌನ್ ವಿಸ್ತರಣೆ ಮಾಡುವ ಮುನ್ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಪ್ರಧಾನಿ ಜೊತೆಗಿನ ಸಭೆ ಬಳಿಕ ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಛತ್ತೀಸ್ಗಢ ಆರೋಗ್ಯ ಸಚಿವ ಟಿ.ಎಸ್ ಸಿಂಗ್ ಡಿಯೊ, ಜೂನ್ ಹಾಗೂ ಜುಲೈ ತಿಂಗಳಲ್ಲಿ ಕರೋನಾ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ. ಹೆಚ್ಚಾಗುವ ಸಾಧ್ಯತೆಯ ಲೆಕ್ಕಾಚಾರದ ಮೇಲೆ ನಾವು ಎಲ್ಲಾ ಚಟುವಟಿಕೆ ನಡೆಸಬೇಕಿದೆ ಎಂದು ತಿಳಿಸಿದ್ದಾರೆ ಎಂದಿದ್ದಾರೆ.

ಜನವರಿ ಅಂತ್ಯದಲ್ಲಿ ಭಾರತಕ್ಕೆ ಕಾಲಿಟ್ಟ ಮಹಾಮಾರಿ ಕರೋನಾ ವೈರಸ್, ಜನವರಿ ತಿಂಗಳಲ್ಲಿ ಒಂದೇ ಒಂದು ಪ್ರಕರಣವಿತ್ತು, ಆ ಬಳಿಕ ಫೆಬ್ರವರಿ ತಿಂಗಳಲ್ಲಿ ಅದರ ಸಂಖ್ಯೆ 3 ಕ್ಕೆ ಏರಿಕೆಯಾಗಿತ್ತು. ನಂತರ ಮಾರ್ಚ್ ತಿಂಗಳಲ್ಲಿ ಕರೋನಾ ಸೋಂಕು ಪೀಡಿತರ ಸಂಖ್ಯೆ 1397ಕ್ಕೆ ಏರಿಕೆಯಾಗಿತ್ತು. ಅಂತಿಮವಾಗಿ ಏಪ್ರಿಲ್ 27ರ ಈ ವೇಳೆಗೆ ಸೋಂಕಿತರ ಸಂಖ್ಯೆ 28,500ಕ್ಕೆ ಏರಿಕೆಯಾಗಿದೆ. ಇನ್ನೂ ಪ್ರತಿದಿನ ಸರಾಸರಿ 900 ರಿಂದ 1800 ಮಂದಿಗೆ ಸೋಂಕು ಹರಡುತ್ತಿದೆ. ಲಾಕ್ಡೌನ್ನಿಂದ ಸೋಂಕು ನಿಯಂತ್ರಣವಾಗಿಯೇ ಹೊರತು ಕಡಿಮೆ ಆಗಿಲ್ಲ. ಸೋಂಕಿತರ ಪ್ರಮಾಣ ಏರಿಕೆಯಾಗುತ್ತಲೇ ಇದೆ. ʼರೆಡ್ ಝೋನ್ʼಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕೂಡ ಕರೆಕೊಟ್ಟಿದ್ದು, ಎಲ್ಲಾ ಸಿಎಂಗಳು ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ಸಭೆ ಬಳಿಕ ಪ್ರಧಾನಿ ಮೋದಿಯವರಿಗೆ ವರದಿ ಕಳುಹಿಸಲಿದ್ದು, ಆ ನಂತರ ಮೋದಿ ನಿರ್ಧಾರ ಪ್ರಕಟಣೆ ಮಾಡಲಿದ್ದಾರೆ ಎನ್ನಲಾಗಿದೆ. ಛತ್ತೀಸ್ಗಡ ಆರೋಗ್ಯ ಸಚಿವರು ಹೇಳಿರುವಂತೆ ಜೂನ್ ಹಾಗೂ ಜುಲೈ ಬಗ್ಗೆ ಪ್ರಧಾನಿ ಮೋದಿ ಅನುಮಾನ ವ್ಯಕ್ತಪಡಿಸಿದ್ದರೆ, ದೇಶ ಅಧೋಗತಿಗೆ ಹೋಗುವುದರಲ್ಲಿ ಅನುಮಾನವಿಲ್ಲ.