ಪೊಲೀಸ್ ಪಡೆಗಳಲ್ಲಿ ಅದರಲ್ಲೂ ದೇಶದ ಅತ್ಯುನ್ನತ ತನಿಖಾ ಸಂಸ್ಥೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ತೀರಾ ಕಡಿಮೆ ಎನ್ನುವ ಮಾಹಿತಿಯನ್ನು ಇಲಾಖೆ ಹೊರಗೆಡವಿದೆ.
ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರ ಸಂಖ್ಯೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ16.5% ರಷ್ಟು ಹೆಚ್ಚಾಗಿದ್ದರೂ ಒಟ್ಟು ಪ್ರಮಾಣ 10.3 ಶೇಕಡಾದಷ್ಟು ಮಾತ್ರ ಇದೆ. ಪೊಲೀಸ್ ಪಡೆಯಲ್ಲಿ ಶೇಕಡಾ 33ರಷ್ಟು ಮಹಿಳೆಯರಿರಬೇಕು ಎನ್ನುವ ಸರ್ಕಾರದ ಗುರಿಗಿಂತ ತುಂಬಾ ಕೆಳಸ್ತರದಲ್ಲಿದೆ.
ಡಿಸೆಂಬರ್ 30ರಂದು ಬ್ಯುರೊ ಆಫ್ ಪೊಲೀಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ (BPRD) ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಎಲ್ಲಾ ಅಂಕಿ ಅಂಶಗಳಿವೆ. 2020ರ ಜನವರಿ ಒಂದವರೆಗಿನ ದತ್ತಾಂಶಗಳನ್ನು ಸಂಗ್ರಹಿಸಿ ಮಾಹಿತಿ ಬಿಡುಗಡೆ ಮಾಡಲಾಗಿದೆ. ಒಟ್ಟು 20,91,488 ಸಿಬ್ಬಂದಿಗಳಿರುವ ಪೊಲೀಸ್ ಇಲಾಖೆಯಲ್ಲಿ ಕೇವಲ 2,15,504 ಮಹಿಳೆಯರಿದ್ದಾರೆ.
ಪ್ಯಾರಮಿಲಿಟರಿ ಫೋರ್ಸ್ ಎಂದೇ ಕರೆಯಲ್ಪಡುವ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಒಟ್ಟು 9,82,391 ಸಿಬ್ಬಂದಿಗಳಿದ್ದು ಶೇಕಡಾ 2.98 ಅಂದರೆ 29249ನಷ್ಟು ಮಾತ್ರ ಮಹಿಳೆಯರಿದ್ದಾರೆ.
ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿ.ಬಿ.ಐ ಮತ್ತು ಎನ್.ಐ.ಎಯಲ್ಲಿ ಬೆರಳೆಣಿಕೆಯ ಮಹಿಳಾ ಸಿಬ್ಬಂದಿಗಳು ಮಾತ್ರ ಇದ್ದಾರೆ. ಸಿ.ಬಿಐನಲ್ಲಿ ಒಟ್ಟು 5964 ಸಿಬ್ಬಂದಿಗಳಿದ್ದು ಅವರಲ್ಲಿ ಮಹಿಳೆಯರ ಸಂಖ್ಯೆ ಕೇವಲ 475. ಇದು ಒಟ್ಟು ಸಿಬ್ಬಂದಿಗಳ ಶೇಕಡಾ 7.96 ರಷ್ಟು ಮಾತ್ರ ಆಗುತ್ತದೆ. ಎನ್.ಐ.ಎ ಅಲ್ಲಿ ಪರಿಸ್ಥಿತಿ ಮತ್ತಷ್ಟು ನಿರಾಶಾದಾಯಕವಾಗಿದ್ದು ಒಟ್ಟು 796 ಸಿಬ್ಬಂದಿಗಳಲ್ಲಿ ಕೇವಲ 37 ಮಹಿಳೆಯರಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇಲಾಖೆಯ ಹಿಂದಿನ ವರದಿಗಳನ್ನು ಉಲ್ಲೇಖಿಸಿ ಮಹಿಳಾ ಸಿಬ್ಬಂದಿಗಳನ್ನು ಭದ್ರತಾ ಪರಿಶೀಲನೆಗಳಂತಹ ವಿಶೇಷ ಕರ್ತವ್ಯಗಳಲ್ಲಿ ಮಾತ್ರ ನಿಯೋಜಿಸಲಾಗುತ್ತದೆ ಎಂದು ವರದಿ ಮಾಡಿದೆ. ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರನ್ನು ನೇಮಿಸದೇ ಇದ್ದರೆ ಮಹಿಳಾ ಪ್ರಾತಿನಿಧ್ಯಕ್ಕೆ ಅರ್ಥವೇ ಇರುವುದಿಲ್ಲ ಎಂದೂ ಅದು ಪ್ರತಿಪಾದಿಸಿದೆ.
ಹಿರಿಯ ಮಹಿಳಾ ಪೊಲೀಸರು 2014ರ ಸಮೀಕ್ಷೆಯೊಂದರಲ್ಲಿ ‘ತಾವು ಮಹಿಳೆಯರು ಎನ್ನುವ ಕಾರಣಕ್ಕೆ ತಮಗೆ ಕಡಿಮೆ ಪ್ರಾಶಸ್ತ್ಯ ಇರುವ ಹುದ್ದೆಗಳನ್ನು ನೀಡಲಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು ಎಂದೂ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಸಮಯ, ಶ್ರಮ ಮತ್ತು ತಾಳ್ಮೆ ಬೇಡುವ ಪೊಲೀಸ್ ಕೆಲಸಕ್ಕೆ ಅರ್ಜಿ ಸಲ್ಲಿಸುವ ಮಹಿಳೆಯ ಸಂಖ್ಯೆಯೇ ಕಡಿಮೆ ಇದ್ದು ಇರುವ ಸಿಬ್ಬಂದಿಗಳನ್ನೂ ಇಲಾಖೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿಲ್ಲ. ಇಲಾಖೆಯು ಮಹಿಳಾ ಪೊಲೀಸರಿಗೆ ಕನಿಷ್ಠ ಸೌಕರ್ಯವನ್ನು ಒದಗಿಸುವಲ್ಲೂ ವಿಫಲವಾಗಿರುವುದು ಸಮೀಕ್ಷೆಗಳಲ್ಲಿ ಸಾಬೀತಾಗಿದೆ.
ಹಲವು ಪೊಲೀಸ್ ಸ್ಟೇಷನ್ಗಳಲ್ಲಿ ಮಹಿಳಾ ಸಿಬ್ಬಂದಿಗಳಿಗೆ ಪ್ರತ್ಯೇಕ ಟಾಯ್ಲೆಟ್ ವ್ಯವಸ್ಥೆಯೂ ಇರುವುದಿಲ್ಲ. ಮಹಿಳಾ ಪೊಲೀಸರೇ ಸಮೀಕ್ಷೆಯೊಂದರಲ್ಲಿ”ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆ 2013′ ಪ್ರತಿ ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ವಿರೋಧಿ ಕಮಿಟಿ ಮಾಡಲೇಬೇಕೆಂದು ಕಡ್ಡಾಯ ಮಾಡಿದ್ದರೂ ಪೊಲೀಸ್ ಇಲಾಖೆಯೇ ಈ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ” ಎಂದಿದ್ದಾರೆ.
ವಿಶ್ವ ಸಂಸ್ಥೆಯು 2011-12 ರಲ್ಲಿ ಬಿಡುಗಡೆ ಮಾಡಿದ ‘ನ್ಯಾಯದ ಅನ್ವೇಷಣೆಯಲ್ಲಿ ಜಗತ್ತಿನ ಮಹಿಳೆಯರ ಪ್ರಗತಿ’ ಎನ್ನುವ ವರದಿಯಲ್ಲಿ “39 ದೇಶಗಳಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಲೈಂಗಿಕ ದಾಳಿಯ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಠಾಣೆಯಲ್ಲಿ ಮಹಿಳಾ ಪೊಲೀಸರ ಹಾಜರಿ ಇದ್ದಾಗ. ಹಾಗಾಗಿ ಲಿಂಗ ಸಮಾನತೆಯ ನ್ಯಾಯ ವ್ಯವಸ್ಥೆಯ ಸೃಷ್ಟಿಗೆ ಮಹಿಳಾ ಪೊಲೀಸರು ಅನಿವಾರ್ಯ” ಎಂದು ಹೇಳಿದೆ. ಲೈಂಗಿಕ ದೌರ್ಜನ್ಯ ನಡೆದಾಗ ಪುರುಷ ಪೊಲೀಸರನ್ನು ಸಂಪರ್ಕಿಸಲು ಮುಜುಗರ ಪಟ್ಟುಕೊಳ್ಳಬಹುದು. ಮಹಿಳೆಯರಷ್ಟೇ ಅಲ್ಲ ಲೈಂಗಿಕ ದೌರ್ಜನ್ಯದ ಪುರುಷ ಬಲಿಪಶುಗಳೂ ದೂರು ನೀಡಲು ಹೆಚ್ಚಾಗಿ ಮಹಿಳಾ ಪೊಲೀಸರಿಗೇ ಆದ್ಯತೆ ನೀಡುತ್ತಾರೆ ಎಂದೂ ಅದು ವಿವರಿಸುತ್ತದೆ.
ರಾಷ್ಟ್ರೀಯ ಆರೋಗ್ಯ ಸಮೀಕ್ಷೆ 2015-16ರ ಪ್ರಕಾರ ಭಾರತದಲ್ಲಿ 99% ದಷ್ಟು ಲೈಂಗಿಕ ದೌರ್ಜನ್ಯದ ಪ್ರಕರಣಗಳು ವರದಿಯಾಗುವುದೇ ಇಲ್ಲ. ವರದಿಯಾಗುವ ಪ್ರಕರಣಗಳಲ್ಲಾದರೂ ನ್ಯಾಯ ದೊರಕಬೇಕು ಅಂದರೆ, ಶೋಷಿತರು ಪೊಲೀಸರ ಬಳಿ ಮುಕ್ತವಾಗಿ ಸಂವಹನ ನಡೆಸುವಂತಹ ಪರಿಸ್ಥಿತಿ ಸೃಷ್ಟಿಯಾಗಬೇಕು. ಹಾಗಾಗಬೇಕು ಅಂದರೆ ಪ್ರತಿ ಠಾಣೆಯಲ್ಲೂ ಕನಿಷ್ಠ ಮೂರನೇ ಒಂದರಷ್ಟು ಮಹಿಳಾ ಸಿಬ್ಬಂದಿಗಳು ಇರಲೇಬೇಕು.