ಭಾರತ ದೇಶದಲ್ಲಿ ಕರೋನ ಕರಾಳ ಬದುಕು ರೋಚಕ ಘಟ್ಟದತ್ತ ಹೊರಟಿದೆ. ಶುಕ್ರವಾರ ಒಂದೇ ದಿನ ದೇಶದಲ್ಲಿ 48,916 ಹೊಸ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 13 ಲಕ್ಷ ಗಡಿ ದಾಟಿ ಮುಂದೆ ಹೋಗಿದ್ದು, 13,36,861 ಆಗಿದೆ. ನಿನ್ನೆ ಒಂದು ದಿನದ ಅಂಕಿ ಅಂಶದ ಪ್ರಕಾರ ನಿನ್ನೆ 757 ಜನರು ಬಲಿಯಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಕರೋನಾ ಸೋಂಕಿನಿಂದ ಸತ್ತವರ ಸಂಖ್ಯೆ 31,358 ಆಗಿದೆ. 8,49,431 ಜನ ಕರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನೂ ಕೂಡ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 4,56,071 ಆಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ.
ಯುವಕರೇ ಹೆಚ್ಚಾಗಿ ಸೋಂಕಿನಿಂದ ಬಳಲುತ್ತಿದ್ದಾರೆ. ಹಿರಿಯರು ಸಾವಿನ ಮನೆ ಸೇರುತ್ತಿದ್ದಾರೆ ಎನ್ನುವುದು ಗೊತ್ತಾಗಿದೆ. ಬಿಬಿಎಂಪಿ ವಾರ್ ರೂಮ್ ಬಿಡುಗಡೆ ಮಾಡಿರುವ ಅಂಕಿ ಅಂಶದ ಪ್ರಕಾರ ಜುಲೈ ತಿಂಗಳಿನಲ್ಲಿ 30 ರಿಂದ 39 ವರ್ಷ ವಯಸ್ಸಿನವರಲ್ಲಿ 8,262 ಸೋಂಕು ಪತ್ತೆಯಾಗಿದೆ. 20 ರಿಂದ 29 ವಯಸ್ಸಿನ 7,217 ಜನರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಇನ್ನೂ 40 ರಿಂದ 49 ವರ್ಷ ವಯಸ್ಸಿನ 7,120 ಜನರಲ್ಲಿ ಸೋಂಕು ಪತ್ತೆಯಾಗಿದ್ದರೆ, 60 ರಿಂದ 69 ವರ್ಷದೊಳಗಿನ 3,618 ಹಿರಿಯರಿಗೆ ಕರೋನಾ ಹರಡಿದೆ. ಇನ್ನೂ 70 ವರ್ಷ ವಯಸ್ಸು ಮೇಲ್ಪಟ್ಟ 1,974 ಜನರೂ ಕೂಡ ಕರೋನಾ ಸೋಂಕಿಗೆ ಒಳಗಾಗಿದ್ದಾರೆ.
ಅದೇ ಜೂನ್ ತಿಂಗಳಿನಲ್ಲಿ 20 ರಿಂದ 29 ವರ್ಷ ವಯಸ್ಸಿನ 376 ಜನ, 30 ರಿಂದ 39 ವರ್ಷ ವಯಸ್ಸಿನ 324 ಜನ, 40 ರಿಂದ 49 ವಯಸ್ಸಿನ 228 ಮಂದಿ ಹಾಗೂ 50 ರಿಂದ 59 ವರ್ಷ ವಯಸ್ಸಿನ 208 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು ಎಂದು ಬಿಬಿಎಂಪಿ ಅಂಕಿ ಸಂಖ್ಯೆಯಲ್ಲಿ ತೋರಿಸಿದೆ. ಆದರೆ, ಸೋಂಕು ಹರಡುತ್ತಿರುವ ವೇಗದಂತೆ ಸಾವಿನ ಪ್ರಮಾಣವೂ ಏರಿಕೆಯಾಗಿದೆ. ಅದರಲ್ಲಿ ಹಿರಿಯರು ಸಾವಿನಲ್ಲಿ ಮುಂದಿದ್ದರೆ, ಯುವಕ ಹಾಗೂ ಮಧ್ಯ ವಯಸ್ಸಿನ ಜನರು ಸೋಂಕಿನಲ್ಲಿ ಮುಂದಿದ್ದಾರೆ ಎನ್ನುವುದು ಆತಂಕಕ್ಕೆ ಕಾರಣವಾಗಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನಲ್ಲಿ ಹಿರಿಯರಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗಿದ್ದು, 50 ವರ್ಷ ಮೇಲ್ಪಟ್ಟವರಿಗೆ ಸಾವಿನ ಸಮಸ್ಯೆ ಅಧಿಕವಾಗಿದೆ. 70 ವಯಸ್ಸಿನ ಮೇಲ್ಪಟ್ಟ 129 ಮಂದಿ ಸಾವನ್ನಪ್ಪಿದ್ದಾರೆ. 60 ರಿಂದ 69 ವಯಸ್ಸಿನವರು 174 ಮಂದಿ ಸಾವನ್ನಪ್ಪಿದ್ದಾರೆ. 50 ರಿಂದ 59 ವಯಸ್ಸಿನ 165 ಜನ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 40 ರಿಂದ49 ವಯಸ್ಸಿನ 89 ಜನ ಸಾವನ್ನಪ್ಪಿದ್ರೆ, 30 ರಿಂದ 39 ವಯಸ್ಸಿನ 42 ಜನರು ಅಸುನೀಗಿದ್ದಾರೆ. ಇನ್ನೂ 20 ರಿಂದ 29 ವಯಸ್ಸಿನ 14 ಮಂದಿ ಕೊನೆಯುಸಿರೆಳೆದಿದ್ದಾರೆ ಎನ್ನುವ ಮಾಹಿತಿ ಕೊಡಲಾಗಿದೆ.
ಯುವಕರ ಸೋಂಕು, ವಯಸ್ಸಾದವರಿಗೆ ತೊಂದರೆ
ಜೀವ ಜೀವನ ಎರಡರಲ್ಲಿ ಜೀವ ನಮ್ಮ ಆಯ್ಕೆಯಾಗಿರಲಿ ಎಂದು 60 ದಿನಗಳ ಕಾಲ ಲಾಕ್ಡೌನ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಆ ಬಳಿಕ ಜೀವನವನ್ನು ಉಳಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಲಾಕ್ಡೌನ್ನಲ್ಲಿ ವಿನಾಯ್ತಿ ಕೊಡುವ ಮೂಲಕ ಎಲ್ಲಾ ವ್ಯವಹಾರ ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆ ಬಳಿಕ ಅನಿವಾರ್ಯವಾಗಿ ಯುವಕರು ಮನೆಯಿಂದ ಹೊರ ಬರಲೇಬೇಕಾದ ಪರಿಸ್ಥಿತಿ ನಿರ್ಮಾಣವಾಯ್ತು. ಹೊರಕ್ಕೆ ಬಂದ ಮೇಲೆ ಕರೋನಾ ಸೋಂಕು ಖಚಿತ ಎನ್ನುವಂತೆ ಯುವಕರಲ್ಲಿ ಸೋಂಕು ವ್ಯಾಪಿಸುತ್ತಾ ಸಾಗಿತು. ಯುವಕರಿಗೆ ಬಂದ ಬಳಿಕ ಮನೆಯಲ್ಲಿರುವ ವೃದ್ಧರನ್ನು ಸೋಂಕು ಕಾಡಲು ಶುರುವಾಯ್ತು. ಯುವಕರು ಹೆಚ್ಚು ಕಡಿಮೆ ಹೋರಾಟ ನಡೆಸಿ ಜೀವ ಉಳಿಸಿಕೊಳ್ಳುತ್ತಿದ್ದಾರೆ ಆದರೆ ವಯಸ್ಸಾದವರು ಸೋಂಕಿನ ಜೊತೆ ಹೋರಾಡಿ ಬದುಕಲು ಸಾಧ್ಯವಾಗ್ತಿಲ್ಲ ಎನ್ನುತ್ತಿದೆ ರಿಪೋರ್ಟ್.
ಜೀವ ಉಳಿಸಬೇಕಿದ್ದ ಸರ್ಕಾರ ಸ್ಮಶಾನ ಹುಡುಕುತ್ತಿದೆ..!
ಯಾವುದೇ ಒಂದು ರಾಜ್ಯದಲ್ಲಿ ಯಾವುದೇ ಸಮಸ್ಯೆ ಎದುರಾದಾಗ ಅಲ್ಲಿನ ರಾಜ ಅಂದರೆ ಅಲ್ಲಿನ ಆಡಳಿತದಲ್ಲಿರುವ ಸರ್ಕಾರ, ಜನರ ರಕ್ಷಣೆಗೆ ಮುಂದಾಗಬೇಕು. ಜನಶಕ್ತಿ ಇದ್ದಾಗ ಏನನ್ನಾದರೂ ಸಂಪಾದನೆ ಮಾಡಬಹುದು. ಆದರೆ, ನಮ್ಮ ರಾಜ್ಯ ಸರ್ಕಾರ ಹಣ ಮಾಡುವುದರಲ್ಲಿ ನಿರತವಾಗಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ನಾವು ತಪ್ಪನ್ನೇ ಮಾಡಿಲ್ಲ ಎಂದು ಮೊಂಡು ವಾದ ಮಾಡುತ್ತಾ ಆರೋಪ ಮಾಡುತ್ತಿರುವವರನ್ನೇ ಕಟುವಾಗಿ ಟೀಕಿಸುತ್ತಾ ಸುಳ್ಳನ್ನೇ ಸತ್ಯ ಮಾಡುವ ಕೆಲಸ ಮಾಡುತ್ತಿದೆ.
ಇನ್ನೂ ಕರೋನಾದಿಂದ ಜನರನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ ಎನ್ನುವ ನಿರ್ಣಯಕ್ಕೆ ಬಂದಿರುವ ರಾಜ್ಯ ಸರ್ಕಾರ, ಸತ್ತವರನ್ನು ಸ್ವರ್ಗಕ್ಕೆ ಕಳುಹಿಸುವ ನಿರ್ಧಾರಕ್ಕೆ ಬಂದಿದೆ. ಅದೇ ಕಾರಣಕ್ಕಾಗಿ ಸ್ಮಶಾನಗಳನ್ನು ಮಾಡಲು ಜಾಗ ಗುರುತಿಸುವ ಕೆಲಸಕ್ಕೆ ಮುಂದಾಗಿದೆ. ಬೆಂಗಳೂರು ತುಮಕೂರು ರಸ್ತೆಯ ದಾಸನಪುರದಲ್ಲಿ ೭ ಎಕರೆ, ಉತ್ತರಹಳ್ಳಿಯಲ್ಲಿ ೪ ಎಕರೆ, ಜಿಗಣಿಯಲ್ಲಿ ೩ ಎಕರೆ, ಸರ್ಜಾಪುರ ಬಳಿ ೪ ಎಕರೆ, ದೊಡ್ಡಜಾಲದಲ್ಲಿ ೧.೨೦, ಮಾರೇನಹಳ್ಳಿ, ಹುಣಸೂರುಗಳಲ್ಲಿ ತಲಾ ೧ ಎಕರೆ ಜಾಗವನ್ನು ಸ್ಮಶಾನಕ್ಕಾಗಿ ಗುರ್ತಿಸಿದ್ದೇವೆ. ಸರ್ವ ಧರ್ಮಕ್ಕೂ ಒಂದೇ ಕಡೆ ಶವಸಂಸ್ಕಾರ ಎಂದು ಕಂದಾಯ ಸಚಿವರು ತಿಳಿಸಿದ್ದಾರೆ. ಒಟ್ಟಾರೆ ಅನಿವಾರ್ಯ ಕಾರಣಕ್ಕೆ ಹೊರಕ್ಕೆ ಬರುವ ಯುವ ಜನಾಂಗ ಸೋಂಕಿಗೆ ತುತ್ತಾಗಿ, ಮನೆಯಲ್ಲಿರುವ ವಯೋವೃದ್ಧರ ಪ್ರಾಣಕ್ಕೆ ಕುತ್ತಾಗುತ್ತಿರುವುದು ವಿಪರ್ಯಾಸ.







