ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬಡ್ಡಿ ದರವನ್ನು ತಗ್ಗಿಸುವ ನಿರ್ಧಾರ ಪ್ರಕಟಿಸಿದ ನಂತರ ಬಹುತೇಕ ಬ್ಯಾಂಕುಗಳು ತಾವೂ ಬಡ್ಡಿ ದರ ಕಡಿತ ಮಾಡಲು ಮುಂದಾಗಿವೆ. ಹಂತ ಹಂತವಾಗಿ ಬಡ್ಡಿ ದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಹಿಸುವುದಾಗಿ ತಿಳಿಸಿವೆ.
ಮಾರ್ಚ್ 27ರಂದು ಆರ್ಬಿಐ ರೆಪೊದರವನ್ನು 75 ಅಂಶಗಳಷ್ಟು ಅಂದರೆ ಶೇ. 0.75ರಷ್ಟು ಕಡಿತಮಾಡಿದೆ. ಇದರೊಂದಿಗೆ ರೆಪೊದರವು ಐತಿಹಾಸಿಕ ಕನಿಷ್ಟ ಮಟ್ಟ ಶೇ.4.40ಕ್ಕೆ ಇಳಿದಿದೆ. ಇದೇ ವೇಳೆ ಆರ್ಬಿಐ ರಿವರ್ಸ್ ರೆಪೊದರವನ್ನು 90 ಅಂಶಗಳಷ್ಟು ಅಂದರೆ ಶೇ.0.90ರಷ್ಟು ತಗ್ಗಿಸಿದ್ದು ಶೇ.4ಕ್ಕೆ ಇಳಿದಿದೆ. ನಗದು ಮೀಸಲು ಪ್ರಮಾಣವನ್ನು(ಸಿಆರ್ಆರ್) ಶೇ.1ರಷ್ಟು ತಗ್ಗಿಸಿದ್ದು ಶೇ.3ಕ್ಕೆ ಇಳಿದಿದೆ.
ರೆಪೊದರ ಸರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಗ್ಗಿರುವುದರಿಂದ ಬ್ಯಾಂಕುಗಳಿಗೆ ಅತಿ ಕಡಮೆ ಬಡ್ಡಿದರದಲ್ಲಿ ಸಾಲ ಲಭ್ಯವಾಗಲಿದ್ದು, ಗ್ರಾಹಕರಿಗೆ ಅದರಿಂದ ಹೆಚ್ಚಿನ ಲಾಭವಾಗಲಿದೆ. ಆರ್ಥಿಕ ಸಂಕಷ್ಟದಲ್ಲಿರುವ ಈ ಹೊತ್ತಿನಲ್ಲಿ ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಗ್ರಾಹಕರಿಗೆ ಕಡಮೆ ಬಡ್ಡಿದರದಲ್ಲಿ ಸಾಲ ದೊರೆಯಲಿದೆ. ಈಗಾಗಲೇ ಸಾಲ ಮಾಡಿರುವ ಗ್ರಾಹಕರ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಸೇರಿದಂತೆ ವಿವಿಧ ರೀತಿಯ ಸಾಲಗಳ ಮೇಲಿನ ಇಎಂಇ (ಮಾಸಿಕ ಸಮಾನ ಕಂತು) ಗಣನೀಯ ಪ್ರಮಾಣದಲ್ಲಿ ತಗ್ಗಲಿದೆ.
ಇದು ಆರ್ಬಿಐ ಬಡ್ಡಿ ದರ ಕಡಿತ ಮಾಡಿದ್ದರಿಂದ ಆಗುತ್ತಿರುವ ಅನುಕೂಲದ ಒಂದು ಮುಖ. ಬಡ್ಡಿ ದರ ಕಡಿತದ ಮತ್ತೊಂದು ಮುಖ ಬೇರೆಯೇ ಇದೆ. ಇದು ಸಂಕಷ್ಟ ಕಾಲದಲ್ಲಿ ಕರಾಳ ಮುಖ ಎಂದೂ ಹೇಳಬಹುದು. ರೆಪೊ ದರ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಇಳಿದಿದ್ದರಿಂದ ಗ್ರಾಹಕರಿಗೆ ಎಷ್ಟು ಅನುಕೂಲ ಆಗಿದೆಯೋ ಅಷ್ಟೇ ಅನನುಕೂಲ ಠೇವಣಿದಾರರಿಗೆ ಆಗಲಿದೆ.
ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಆರ್ಬಿಐ ಬಡ್ಡಿ ದರವನ್ನು ಕಡಿತ ಮಾಡಿದಾಗ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ತಕ್ಷಣವೇ ಘೋಷಿಸಿತು. ಅದಾದ ನಂತರ ಇತರ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಖಾಸಗಿ ವಲಯದ ಬ್ಯಾಂಕುಗಳು ಸಹ ಬಡ್ಡಿ ದರ ಕಡಿತ ಮಾಡುವ ನಿರ್ಧಾರ ಪ್ರಕಟಿಸಿದವು.
ಈಗ ಎಸ್ಬಿಐ ಗ್ರಾಹಕರ ಠೇವಣಿಗಳ ಮೇಲಿನ ಬಡ್ಡಿ ದರ ಕಡಿತ ಮಾಡುವುದಾಗಿ ಘೋಷಿಸಿದೆ. ಉಳಿತಾಯ ಖಾತೆಯಲ್ಲಿರುವ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ.2.27ಕ್ಕೆ ತಗ್ಗಿಸಿದೆ. ಇದು ಸರ್ವಕಾಲಿಕ ಕನಿಷ್ಠ ಮಟ್ಟದ ಬಡ್ಡಿದರವಾಗಿದೆ. ಶೇ.4ರಷ್ಟಿದ್ದ ಉಳಿತಾಯ ಖಾತೆ ಮೇಲಿನ ಬಡ್ಡಿದರವನ್ನು ಹಂತಹಂತವಾಗಿ ಕಡಿತ ಮಾಡಿ ಶೇ.2.75ಕ್ಕೆ ಕುಗ್ಗಿಸಿದೆ. ಪರಿಷ್ಕೃತ ಬಡ್ಡಿ ದರವನ್ನು ಏಪ್ರಿಲ್ 15 ರಿಂದ ಜಾರಿಗೆ ತರಲಿದೆ.
ನಿಜವಾದ ಸಮಸ್ಯೆ ಏನೆಂದರೆ ಎಸ್ಬಿಐ ಕೇವಲ ಉಳಿತಾಯ ಖಾತೆ ಮೇಲಿನ ಬಡ್ಡಿ ದರವನ್ನಷ್ಟೇ ತಗ್ಗಿಸುತ್ತಿಲ್ಲ. ಗ್ರಾಹಕರು ಇಟ್ಟಿರುವ ವಿವಿಧ ಠೇವಣಿಗಳ ಮೇಲಿನ ಬಡ್ಡಿದರವನ್ನು ತಗ್ಗಿಸಲಿದೆ. ದೇಶದ ಕೋಟ್ಯಂತರ ಹಿರಿಯ ನಾಗರಿಕರು ತಮ್ಮ ಜೀವನೋಪಾಯಕ್ಕಾಗಿ ಬ್ಯಾಂಕುಗಲ್ಲಿ ಇಟ್ಟಿರುವ ಠೇವಣಿಗಳ ಮೇಲಿನ ಬಡ್ಡಿಯನ್ನು ಅವಲಂಬಿಸಿದ್ದಾರೆ. ಶೇ.8.5- 8.75ರ ಆಜುಬಾಜಿನಲ್ಲಿದ್ದ ಬಡ್ಡಿ ದರ ಹಂತವಾಗಿ ಇಳಿದು ಈಗ ಶೇ.5.5ಕ್ಕೆ ತಗ್ಗಿದೆ ಹಿರಿಯ ನಾಗರಿಕರಿಗೆ ಶೇ.0.25ರಷ್ಟು ಹೆಚ್ಚು ಬಡ್ಡಿ ನೀಡುವುದರಿಂದ ಹಿರಿಯ ನಾಗರಿಕರಿಗೆ ಶೇ.5.75- 6ರಷ್ಟು ಬಡ್ಡಿ ಬರುತ್ತಿದೆ. ಈಗ ಈ ಬಡ್ಡಿ ದರವೂ ಇಳಿಯಲಿದೆ.
ಬ್ಯಾಂಕುಗಳು ತುಂಬಾ ಜಾಣತನದಿಂದ ವ್ಯವಹಾರ ಮಾಡುತ್ತವೆ. ಸಾಲಗಳ ಮೇಲಿನ ಬಡ್ಡಿದರ ತಗ್ಗಿಸಿದಾಗ ಭಾರಿ ಪ್ರಚಾರ ನೀಡಿ, ಠೇವಣಿಗಳ ಮೇಲಿನ ಬಡ್ಡಿ ದರ ಕಡಿತ ಮಾಡಿದಾಗ ಅದಕ್ಕೆ ಪ್ರಚಾರ ನೀಡುವುದಿಲ್ಲ.
ಬಡ್ಡಿದರ ಶೇ.8.75ರಷ್ಟಿದ್ದಾಗ ಹಿರಿಯ ನಾಗರಿಕರು ಬ್ಯಾಂಕಿನಲ್ಲಿ ಇಟ್ಟ 10 ಲಕ್ಷ ರೂಪಾಯಿ ಠೇವಣಿಗೆ ಮಾಸಿಕ 7290 ರುಪಾಯಿ ಬಡ್ಡಿ ಬರುತ್ತಿತ್ತು. ಬಡ್ಡಿ ಈಗ ಶೇ.5.75ಕ್ಕೆ ತಗ್ಗಿದೆ. ಈಗ ಹಿರಿಯ ನಾಗರಿಕರಿಗೆ ಸಿಗುವ ಮಾಸಿಕ ಬಡ್ಡಿ ಮೊತ್ 4792 ರುಪಾಯಿ ಮಾತ್ರ. ಅಂದರೆ ಮಾಸಿಕ 2498 ಮತ್ತು ವಾರ್ಷಿಕ 29976 ರುಪಾಯಿ ಕಡಿಮೆ ಅಗುತ್ತಿದೆ.
ಉಳಿತಾಯ ಖಾತೆ ಠೇವಣಿಗಳ ಮೇಲಿನ ಬಡ್ಡಿದರವನ್ನು ಕಡಿತ ಮಾಡಿದಂತೆ ಅವಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಎಸ್ಬಿಐ ಕಡಿತ ಮಾಡಲಿದೆ. ಇತರ ಬ್ಯಾಂಕುಗಳು ಅದನ್ನು ಅನುಸರಿಸಲಿವೆ.ಆಗ ಹಿರಿಯ ನಾಗರಿಕರಿಗೆ ದೊರೆಯುವ ಮಾಸಿಕ ಬಡ್ಡಿ ಮೊತ್ತ ಮತ್ತಷ್ಟು ಕುಗ್ಗಲಿದೆ. ಆದರೆ ಬಡ್ಡಿ ದರಗಳು ಕುಸಿದಂತೆ ದೈನಂದಿನ ಜೀವನಾವಶ್ಯಕ ವಸ್ತುಗಳ ದರ ಮಾತ್ರ ಇಳಿಯುವುದಿಲ್ಲ.
ಖಾಸಗಿ ವಲಯದ ಬ್ಯಾಂಕುಗಳು ಉಳಿತಾಯ ಖಾತೆಗಳ ಮೇಲೆ ಹೆಚ್ಚಿನ ಬಡ್ಡಿ ನೀಡುತ್ತವೆ. ಹಾಗೆಯೇ ವಿವಿಧ ಶುಲ್ಕಗಳ ರೂಪದಲ್ಲಿ ಅದನ್ನು ವಾಪಸ್ ಪಡೆಯುತ್ತವೆ. ಅಲ್ಲದೇ ಉಳಿತಾಯ ಖಾತೆಯಲ್ಲಿ ಒಂದು ಲಕ್ಷ ಮೀರಿದ ಠೇವಣಿ ಇದ್ದರೆ ಹೆಚ್ಚಿನ ಬಡ್ಡಿ ನೀಡುತ್ತವೆ.
ಗ್ರಾಹಕರು ಏನು ಮಾಡಬೇಕು?
ಗ್ರಾಹಕರು ಉಳಿತಾಯ ಖಾತೆಯಲ್ಲಿ ಹೆಚ್ಚಿನ ಹಣ ಇಡಬಾರದು. ಮಾಸಿಕ ವೆಚ್ಚ ಮತ್ತು ತುರ್ತು ವೆಚ್ಚಕ್ಕೆ ಬೇಕಾಗುವಷ್ಟು ಮೊತ್ತವನ್ನು ಮಾತ್ರ ಉಳಿತಾಯ ಖಾತೆಯಲ್ಲಿ ಇಡಬೇಕು. ಉಳಿದ ಮೊತ್ತವನ್ನು ಬ್ಯಾಂಕಿನಿಂದ ಪಡೆದಿರುವ ಸಾಲದ ಖಾತೆಗೆ ವರ್ಗಾಯಿಸಿಕೊಳ್ಳ ಬೇಕು. ಸಾಲ ಇಲ್ಲದವರು ಅವಧಿ ಠೇವಣಿಯಾಗಿ ಪರಿವರ್ತಿಸಲು ಸಂಬಂಧಿಸಿದ ಬ್ಯಾಂಕ್ ಶಾಖೆಗೆ ಸೂಚಿಸಬೇಕು.
ನೀವು ಬ್ಯಾಂಕಿನಿಂದ ಪಡೆದ ಸಾಲಕ್ಕೆ ಕನಿಷ್ಟ ಶೇ. 8- 10 ರಷ್ಟು ಬಡ್ಡಿ ಪಾವತಿಸುತ್ತಿರಿ ಆದರೆ ನಿಮ್ಮ ಉಳಿತಾಯ ಖಾತೆಯಲ್ಲಿನ ಠೇವಣಿಗೆ ಬ್ಯಾಂಕು ಕೇವಲ ಶೇ.3ರಷ್ಟು ಬಡ್ಡಿ ನೀಡುತ್ತದೆ. ಅಂದರೆ ಅಗತ್ಯ ಮೀರಿದ ಮೊತ್ತವನ್ನು ಉಳಿತಾಯ ಖಾತೆಯಲ್ಲಿ ಇಡುವುದು ವ್ಯರ್ಥ ಅಷ್ಟೇ ಅಲ್ಲ ನಷ್ಟದ ಬಾಬತ್ತೂ ಹೌದು.