ಇಷ್ಟು ದಿನ ಕಾಣದ ಕರೊನಾವನ್ನು ಕೊನೆಗಾಣಿಸಲು ಹೆಣಗಾಡಿದ್ದಾಯಿತು. ಮುಂದೆಯೂ ನಿಷ್ಕರುಣಿ ಕರೋನಾದ ಎಡೆಮುರಿ ಕಟ್ಟಲು ಎಚ್ಚರಿಕೆಯ ಹೆಜ್ಜೆಯನ್ನೇ ಇಡಬೇಕು. ಆದರೆ ಅದಕ್ಕಿಂತಲೂ ದೊಡ್ಡ ಸವಾಲು ಆರ್ಥಿಕತೆಯನ್ನು ಸರಿದಾರಿಗೆ ತರುವುದು. ಕರೋನಾಗೂ ಮುನ್ನವೇ ದೇಶದ ಆರ್ಥಿಕತೆ ಶಿಥಿಲಾವಸ್ಥೆಯಲ್ಲಿತ್ತು. ಕರೋನೋತ್ತರದಲ್ಲಿ ಅದು ಅಪಾಯದ ಎಲ್ಲಾ ಎಲ್ಲೆಗಳನ್ನೂ ಮೀರುವ ಸಾಧ್ಯತೆಗಳು ದಟ್ಟವಾಗಿವೆ. ಈ ಹಿನ್ನೆಲೆಯಲ್ಲಿ ‘ದೇಶದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಖರ್ಚನ್ನು ಹೆಚ್ಚಿಸಬೇಕು. ಇದು ಅತ್ಯುತ್ತಮ ಮಾರ್ಗ’ ಎಂದು ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತಜ್ಞ ಅಭಿಜಿತ್ ಬ್ಯಾನರ್ಜಿ ಸಲಹೆ ನೀಡಿದ್ದಾರೆ.
ಜನ್ಮ ತಳೆದ ಚೀನಾದಲ್ಲೇ ಕರೋನಾ ನಿಯಂತ್ರಣಕ್ಕೆ ಬಂದಿದೆ. ದೇಶಕ್ಕೆ ದೇಶವನ್ನೇ ತಲ್ಲಣಗೊಳಿಸಿದ್ದ ಇಟಲಿಯಲ್ಲೂ ಅದರ ಹಾವಳಿ ಇಳಿಮುಖವಾಗಿದೆ. ಹಾಗೆ ಭಾರತದಲ್ಲೂ ತಹಬದಿಗೆ ಬರಲಿದೆ. ಆದರೆ ಆನಂತರ ಹುಟ್ಟಿಕೊಳ್ಳುವ ಆರ್ಥಿಕ ಬಿಕ್ಕಟ್ಟುಗಳು ಭಯಂಕರ. ಇದೇ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರತ್ಯೇಕವಾಗಿ, ಪರೋಕ್ಷವಾಗಿ ಹಲವರು ಹಲವು ರೀತಿಯ ಸಲಹೆಗಳನ್ನು ನೀಡುತ್ತಿದ್ದಾರೆ. ಈ ಪೈಕಿ ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಡಾ. ರಘುರಾಮ್ ರಾಜನ್, ಆರ್ಥಿಕ ಸಲಹೆಗಾರರಾದ ಸುರ್ಜಿತ್ ಬಳ್ಳಾ, ಅರವಿಂದ ಸುಬ್ರಹ್ಮಣ್ಯಸ್ವಾಮಿ ಪ್ರಮುಖರು. ಈಗ ಅಭಿಜಿತ್ ಬ್ಯಾನರ್ಜಿ ಅವರ ಸರದಿ.

ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ನಡೆಸುವ ವಿಡಿಯೋ ಸರಣಿಯಲ್ಲಿ ಅಭಿಜಿತ್ ಬ್ಯಾನರ್ಜಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಆರ್ಥಿಕತೆಯ ಪುನಶ್ಚೇತನಕ್ಕೆ ಖರ್ಚು ಹೆಚ್ಚಿಸಬೇಕೆಂಬ ಮಾರ್ಗೋಪಾಯ ನೀಡಿರುವ ಬ್ಯಾನರ್ಜಿ, ‘ಹೇಗೆ?’, ‘ಏಕೆ’? ಎಂಬುದನ್ನು ವಿವರಿಸಿ ಹೇಳಿದ್ದಾರೆ. ಕರೋನಾ ಸೃಷ್ಟಿಸಿರುವ ಬಿಕ್ಕಟ್ಟನ್ನು ಭರಿಸಲಾರದೆ ಪರಿತಪಿಸುತ್ತಿರುವ ಬಡವರಿಗಾಗಿ ಕೇಂದ್ರ ಸರ್ಕಾರ ದೊಡ್ಡ ಪ್ಯಾಕೇಜ್ ಘೋಷಿಸಬೇಕು. ಪ್ಯಾಕೇಜ್ ಮೂಲಕ ಕೊಡುವ ಹಣವನ್ನು ನೇರವಾಗಿ ಅಗತ್ಯವಿರುವವರ ಖಾತೆಗಳಿಗೇ ವರ್ಗಾವಣೆ ಮಾಡಬೇಕು ಎಂದಿದ್ದಾರೆ.
ಹಿಂದಿನ ಯುಪಿಎ ಆಡಳಿತದ ಅವಧಿಯಲ್ಲೂ ಭಾರತ ಬಿಕ್ಕಟ್ಟನ್ನು ಎದುರಿಸಿತ್ತು. ಆದರೆ ಸರ್ಕಾರದ ನೀತಿಗಳು ಆರ್ಥಿಕತೆಯನ್ನು ಸರಿದಾರಿಗೆ ತರುವುದಕ್ಕೆ ಪೂರಕವಾಗಿದ್ದವು. ನರೇಗಾ, ಆಹಾರದ ಖಾತರಿ ಹಕ್ಕು ಯೋಜನೆ ಮತ್ತಿತರ ಕಾರ್ಯಕ್ರಮಗಳು ಬಡ ಜನರಿಗೆ ವರವಾದವು. ಈಗ ವ್ಯತಿರಿಕ್ತ ವಾಸ್ತವ ಗೋಚರಿಸುತ್ತಿದೆ. ಸರ್ಕಾರದ ಆರ್ಥಿಕ ನೀತಿಗಳು ಮತ್ತು ಕರೋನಾ ತಂದೊಡ್ಡಿರುವ ಸಮಸ್ಯೆಗಳು ಎರಡೂ ಕೂಡಿಕೊಂಡು ಬಡತನ ಬೃಹದಾಗಿ ಬೆಳೆಯತೊಡಗಿದೆ. ಈ ಸಮಸ್ಯೆಯನ್ನು ದೊಡ್ಡ ಆರ್ಥಿಕ ಪ್ಯಾಕೇಜ್ ಮೂಲಕ ಮಾತ್ರ ಬಗೆಹರಿಸಲು ಸಾಧ್ಯವೆಂದಿದ್ದಾರೆ.
ಆರ್ಥಿಕ ಪುನಶ್ಚೇತನಕ್ಕೆ ಖರ್ಚು ಹೆಚ್ಚಿಸುವುದು ಎಂದರೆ ಪ್ರತಿಯೊಬ್ಬರ ಬಳಿಯೂ ಹಣ ಇರುವಂತೆ ನೋಡಿಕೊಳ್ಳುವುದು. ಪ್ರತಿಯೊಬ್ಬರ ಬಳಿಯೂ ಹಣ ಇದ್ದರೆ ವ್ಯಕ್ತಿ ‘ಗ್ರಾಹಕನಾಗಿ’ ಬದಲಾಗುತ್ತಾನೆ. ಆತನ ಕೊಳ್ಳುವ ಶಕ್ತಿ ವೃದ್ಧಿಸುತ್ತದೆ. ವಸ್ತುಗಳ ಖರೀದಿ ಹೆಚ್ಚಾದಂತೆ ಉತ್ಪಾದನಾ ಮತ್ತು ಮಾರುಕಟ್ಟೆ ವಲಯಗಳೆರಡು ಚೇತರಿಸಿಕೊಳ್ಳುತ್ತವೆ. ಆಗ ಇನ್ನೊಂದಿಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತವೆ. ಕಡೆ ಪಕ್ಷ ಇರುವ ಉದ್ಯೋಗಗಳ ಕಡಿತದ ಪ್ರಮಾಣ ಕಡಿಮೆ ಆಗುತ್ತದೆ. ಉದ್ಯೋಗ ಇದ್ದರೆ ಆ ಜನ ಕೂಡ ಖರೀದಿಸುತ್ತಾರೆ. ಮತ್ತೆ ಮಾರಾಟ, ಮತ್ತೆ ಉತ್ಪಾದನೆ… ಈ ರೀತಿ ಉತ್ಪಾದಕ ಮತ್ತು ಅನುಭೋಗಿ ನಡುವಿನ ಸರಪಳಿ ಸುಗಮವಾಗಿ ಸಾಗುತ್ತದೆ.
ಇದೇ ಹಿನ್ನೆಲೆಯಲ್ಲಿ ಅಭಿಜಿತ್ ಬ್ಯಾನರ್ಜಿ ಖರ್ಚು ಹೆಚ್ಚಿಸುವ ಸಲಹೆ ನೀಡಿದ್ದಾರೆ. ಹಿಂದಿನ ಯುಪಿಎ ಸರ್ಕಾರದ ನರೇಗಾದಂತೆ ಈಗ NYAY ಯೋಜನೆ ಮೂಲಕ ಜನರಿಗೆ ನೇರ ನಗದು ವರ್ಗಾವಣೆ ಮಾಡುವುದೊಳಿತಲ್ಲವಾ? ಎಂಬ ರಾಹುಲ್ ಗಾಂಧಿ ಅವರ ಪ್ರಶ್ನೆಗೆ, ಯಾರಿಗೆ ಹಣದ ಅಗತ್ಯ ಇದೆ ಎಂಬುದನ್ನು ಖಾತರಿ ಮಾಡಿಕೊಂಡು ನೀಡಬೇಕು. ಕೆಲವರಿಗೆ ಹಣದ ಅಗತ್ಯ ಇರುವುದಿಲ್ಲ. ಅವರನ್ನು ಬಿಟ್ಟು ಉಳಿದಂತೆ ಶೇಕಡ 60 ರಷ್ಟು ಜನರಿಗೆ ಮಾತ್ರ ಹಣ ನೀಡಿದರೆ ಸಾಕಾಗುತ್ತದೆ. ಸರ್ಕಾರದಿಂದ ಹೋದ ಹಣವನ್ನು ಅವರು ಖರ್ಚು ಮಾಡಬೇಕು. ಆಗ ಮಾತ್ರ ಅದು ಉತ್ತಮ ಫಲಿತಾಂಶ ನೀಡಲಿದೆ ಎಂದು ಉತ್ತರಿಸಿದ್ದಾರೆ.
ಬೇರೆ ದೇಶಗಳ ಉದಾಹರಣೆ ನೀಡಿದ ಅಭಿಜಿತ್ ಬ್ಯಾನರ್ಜಿ, ಅಮೇರಿಕಾ, ಜಪಾನ್, ಯುರೋಪ್ ಮತ್ತಿತರ ದೇಶಗಳು ಸಂಭವನೀಯ ಸಮಸ್ಯೆಗೆ ಹೇಗೆ ಅಣಿಯಾಗಿವೆ ಎಂಬುದನ್ನು ಗಮನಿಸಬೇಕು. ಅಮೇರಿಕಾ ತನ್ನ ಜಿಡಿಪಿಯ ಶೇಕಡಾ 10 ರಷ್ಟು ಹಣವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ಮೀಸಲಿಟ್ಟಿದ್ದರೆ ನಾವು ಜಿಡಿಪಿಯ ಶೇಕಡಾ 1ರಷ್ಟನ್ನು ಮಾತ್ರ ತೆಗೆದಿಟ್ಟಿದ್ದೇವೆ. ಇದು ಸಾಲದು. ಸತತ ಲಾಕ್ಡೌನ್ನಿಂದ ತೀವ್ರವಾಗಿ ಘಾಸಿಗೊಂಡಿರುವ ಆರ್ಥಿಕತೆಗೆ ಪ್ಯಾಕೇಜ್ ಎಂಬ ಮುಲಾಮು ಹಚ್ಚಲೇಬೇಕು. ಮುಂಬರುವ ಆರ್ಥಿಕ ಸಂದಿಗ್ಧತೆಗಳನ್ನು ಸರಿಯಾಗಿ ಸಂಬಾಳಿಸದಿದ್ದರೆ ದೇಶವೇ ದಿವಾಳಿತನದೆಡೆ ಸಾಗಲಿದೆ ಎಂದು ಎಚ್ಚರಿಸಿದ್ದಾರೆ.
ಸದ್ಯ ಬಡವರಿಗೆ ಹಣ ನೀಡಿ ಪೊರೆಯುವುದು ಅತ್ಯಗತ್ಯ. ಅವರ ಜೀವನಾವಶ್ಯಕ ವಸ್ತುಗಳ ಖರೀದಿಗೆ ಹಣದ ಅಗತ್ಯತೆ ಇದೆ. ಬಡವರಿಗೆ ಮೂರರಿಂದ ಆರು ತಿಂಗಳು ಹಣ ಮತ್ತು ಪಡಿತರ ಪದಾರ್ಥಗಳೆರಡನ್ನೂ ನೀಡಬೇಕು. ಈ ಮೂಲಕ ಅವರಲ್ಲಿ ಧೈರ್ಯ ತುಂಬಬೇಕು. ಅಪಾಯದ ವಿರದ್ಧ ಈಜಲು ಅಣಿಗೊಳಿಸಬೇಕು. ಸಂಕಷ್ಟದಲ್ಲಿರುವಾಗ ಧೈರ್ಯಶಾಲಿಗಳನ್ನಾಗಿ ಮಾಡುವುದು ಕೂಡ ಒಂದೇ ಆಯ್ಕೆಯೇ ಆಗಲಿದೆ ಎಂದು ಹೇಳಿದ್ದಾರೆ. ಬಡವರಿಗೆ ನೀಡುವ ಹಣ ದೀರ್ಘಾವಧಿಯಲ್ಲಿ ಲಾಕ್ಡೌನ್ ದುಷ್ಪರಿಣಾಮಕ್ಕೆ ಒಳಗಾಗುವ ಇತರರಿಗೂ ಪ್ರಯೋಜನ ಆಗಲಿದೆ. ಇದು ಒಂದು ರೀತಿಯ ‘ಲಾಕ್ಡೌನ್ನ ದೀರ್ಘಾವಧಿಯ ಕಾಗುಣಿತ’ ಎಂದಿದ್ದಾರೆ.

ಸಣ್ಣ, ಅತಿ ಸಣ್ಣ ವ್ಯಾಪರ ವಹಿವಾಟುಗಳು ತೀವ್ರ ಸಂಕಷ್ಟಕ್ಕೆ ಸಿಲುಕುವ ಬಗ್ಗೆ ರಾಹುಲ್ ಗಾಂಧಿ ಅವರು ಗಮನ ಸೆಳೆದಾಗ ಇದೇ ಕಾರಣಕ್ಕೆ ತಾವು ಖರ್ಚು ಹೆಚ್ಚು ಮಾಡುವುದು ಸುಲಭದ ಮಾರ್ಗ ಎಂದು ಹೇಳಿದ್ದಾಗಿ ತಿಳಿಸಿದ ಬ್ಯಾನರ್ಜಿ ವಲಸೆ ಕಾರ್ಮಿಕರ ಬಿಕ್ಕಟ್ಟಿನ ಬಗ್ಗೆ ಬೆಳಕು ಚೆಲ್ಲಿ ‘ವಲಸೆ ಸಮಸ್ಯೆಯನ್ನು ರಾಜ್ಯ ಸರ್ಕಾರಗಳಿಂದ ಮಾತ್ರವೇ ನಿಭಾಯಿಸಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿ ಅರಿಯಬೇಕೆಂದರು.
ಅಭಿಜಿತ್ ಬ್ಯಾನರ್ಜಿ, ಭಾರತೀಯ-ಅಮೇರಿಕನ್ ಅರ್ಥಶಾಸ್ತ್ರಜ್ಞ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಸ್ತರ್ ಡುಫ್ಲೋ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಮೈಕೆಲ್ ಕ್ರೆಮರ್ ಅವರ ಜೊತೆ ಸೇರಿ ನಡೆಸಿದ ‘ಜಾಗತಿಕ ಬಡತನ ಹೋಗಲಾಡಿಸುವ ಪ್ರಾಯೋಗಿಕ ವಿಧಾನ’ ಎಂಬ ಅಧ್ಯಯನಕ್ಕಾಗಿ 2019ರಲ್ಲಿ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದರು. ಇಂಥ ಸಂಕಷ್ಟದ ಸಂದರ್ಭದಲ್ಲಿ ಸಲಹೆ ನೀಡಲು ಸೂಕ್ತ ವ್ಯಕ್ತಿಯಾದ ಅಭಿಜಿತ್ ಬ್ಯಾನರ್ಜಿ ಅವರ ಜೊತೆ ರಾಹುಲ್ ಗಾಂಧಿ ತಮ್ಮ ವಿಡಿಯೋ ಸರಣಿಯಲ್ಲಿ ಸಂವಾದ ನಡೆಸಿದ್ದಾರೆ. ಇದು ರಾಹುಲ್ ಗಾಂಧಿ ಅವರ ತಜ್ಞರ ನಡುವಿನ ಎರಡನೇ ಸಂವಾದ. ಕಳೆದ ವಾರ ಖ್ಯಾತ ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ ಅವರ ಜೊತೆ ಸಂವಾದ ನಡೆಸಿದ್ದರು.












