ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್. ಎಸ್ ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಸುಳ್ಳು ಸುದ್ದಿಗಳು ಕೇಳಿ ಗೊಂದಲಕ್ಕೀಡಾಗಬೇಡಿ, ಅಧಿಕೃತವಾಗಿ ಶಿಕ್ಷಣ ಇಲಾಖೆ ಹೊರಡಿಸುವ ವೇಳಾಪಟ್ಟಿಗಳನ್ನು ಮಾತ್ರ ಗಮನಿಸಿ, ಇಲಾಖೆ ಇದುವರೆಗೂ ಪರೀಕ್ಷೆಗಳ ದಿನಾಂಕವನ್ನು ನಿಗದಿಪಡಿಸಿಲ್ಲ, ನಿಗದಿಪಡಿಸಿದರೆ ವೇಳಾಪಟ್ಟಿಗಿಂತ 15-20 ದಿನಗಳ ಮುಂಚಿತವಾಗಿ ನಿಮಗೆ ಮಾಹಿತಿ ನೀಡಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಮಾರ್ಚ್ 22 ರಂದು ಲಾಕ್ಡೌನ್ ಘೋಷಿಸಿದ್ದರಿಂದ ಈಗಾಗಲೇ ನಿರ್ಧರಿಸಿದ್ದ SSLC ಪರೀಕ್ಷೆಗಳು ರದ್ದುಗೊಂಡಿತ್ತು. ಹೀಗಾಗಿ SSLC ಪರೀಕ್ಷೆಗಳ ಕುರಿತು ಬಹಳಷ್ಟು ಗೊಂದಲಗಳು ಮೂಡಿದ್ದವು. ಎಲ್ಲಾ ಗೊಂದಲಗಳನ್ನು ಪರಿಹರಿಸುವ ಸಲುವಾಗಿ ಫೇಸ್ಬುಕ್ ಲೈವ್ನಲ್ಲಿ ಮಾಹಿತಿ ನೀಡಿದ ಸಚಿವ ಸುರೇಶ್ ಕುಮಾರ್, ವಿದ್ಯಾರ್ಥಿಗಳು ಪರೀಕ್ಷೆ ಮಾಡಬೇಕೆಂದು ನನ್ನನ್ನು ಒತ್ತಾಯಿಸುತ್ತಿದ್ದಾರೆ. ಮಕ್ಕಳ ಭವಿಷ್ಯ ಗಮನದಲ್ಲಿಟ್ಟುಕೊಂಡು ಯಾವುದೇ ತೊಂದರೆಯಾಗದಂತೆ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿ ಶಿಕ್ಷಣ ಇಲಾಖೆಯ ಮೇಲಿದೆ. ಇಲಾಖೆ ಈ ಕುರಿತು ಚಿಂತನೆಗಳು ನಡೆಸುತ್ತಿದೆ” ಎಂದು ತಿಳಿಸಿದ್ದಾರೆ.
ದೂರದರ್ಶನದಲ್ಲಿ ಈಗಾಗಲೇ ಪುನರ್ಮನನ ತರಗತಿಗಳು ಆರಂಭಗೊಂಡಿದ್ದು ಗಣಿತ ಮತ್ತು ವಿಜ್ಞಾನ ವಿಷಯಗಳ ಬಗ್ಗೆ 45 ನಿಮಿಷಗಳ ಕಾಲ ಪಾಠ ನಡೆಸಲಾಗುತ್ತಿದೆ. ಈ ವಾರದ ಕೊನೆಯಲ್ಲಿ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೂ ತರಗತಿ ಆರಂಭಿಸಲಾಗುವುದು. 16 ದಿನಗಳ ಕಾಲ ತರಗತಿ ನಡೆಯಲಿದ್ದು 17 ನೇ ದಿನ ಮಾದರಿ ಪ್ರಶ್ನೆ ಪತ್ರಿಕೆ ನೀಡಿ ಯಾವ ರೀತಿ ಪ್ರಶ್ನೆಗಳಿಗೆ ಉತ್ತರಿಸಬೇಕೆನ್ನುವುದನ್ನು ಕಲಿಸಲಾಗುವುದು ಎಂದಿದ್ದಾರೆ.
ಕನ್ನಡ ಮಾಧ್ಯಮದ ತರಗತಿಗಳು ಮೇ 29 ರವರೆಗೂ ನಡೆಯಲಿದ್ದು, ಆಂಗ್ಲ ಮಾಧ್ಯಮದ ತರಗತಿಗಳು ಜೂನ್ ಮೊದಲ ವಾರದಲ್ಲಿ ಮುಕ್ತಾಯಗೊಳ್ಳಬಹುದು. ಲಾಕ್ಡೌನ್ ವಾತಾವರಣವು ತಿಳಿಯಾದ ಮೇಲೆ ಪರೀಕ್ಷೆಗಳನ್ನು ನಡೆಸಲಾಗುವುದು.
ಸಾಮಾನ್ಯವಾಗಿ ಒಂದು ಪರೀಕ್ಷಾ ಕೊಠಡಿಯಲ್ಲಿ 24 ವಿದ್ಯಾರ್ಥಿಗಳನ್ನು ಕೂರಿಸಲಾಗುತ್ತಿತ್ತು. ವಿದ್ಯಾರ್ಥಿಗಳ ನಡುವಿನ ಅಂತರ ಅಧಿಕಗೊಳಿಸುವ ಸಲುವಾಗಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಕುರಿತು ಶಿಕ್ಷಣ ಇಲಾಖೆ ಚಿಂತಿಸುತ್ತಿದೆ. ಮಕ್ಕಳ ಆರೋಗ್ಯವನ್ನು ಕಾಳಜಿಯಲ್ಲಿಟ್ಟುಕೊಂಡು ಪ್ರತೀ ಪರೀಕ್ಷಾ ಕೇಂದ್ರದಲ್ಲಿ ಸ್ಯಾನಿಟೈಸರ್, ಟೆಂಪರೇಚರ್ ನೋಡುವ ಸಾಧನಗಳ ವ್ಯವಸ್ಥೆ ಮಾಡಲಾಗುವುದು. ಪ್ರತೀ ವಿದ್ಯಾರ್ಥಿಗಳೂ ಮಾಸ್ಕ್ ಧರಿಸಿ ಪರೀಕ್ಷೆ ಬರೆಯಬೇಕು. ಹಾಸ್ಟೆಲ್ಗಳಲ್ಲಿದ್ದು ಕಲಿಯುತ್ತಿರುವ ಸದ್ಯ ಲಾಕ್ಡೌನ್ ಹಿನ್ನಲೆಯಲ್ಲಿ ಮನೆಗೆ ಬಂದಿರುವ ವಿದ್ಯಾರ್ಥಿಗಳಿಗೆ ತಮ್ಮ ಹತ್ತಿರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗುವಂತೆ ಕ್ರಮ ಕೈಗೊಳ್ಳಲು ಸಾಧ್ಯವೇ ಎಂಬುದನ್ನು ಶಿಕ್ಷಣ ಇಲಾಖೆ ಪರಿಶೀಲಿಸುತ್ತಿದೆ.