ರಾಜ್ಯಾದ್ಯಂತ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿರುವ ಕರೋನಾ ಪರಪ್ಪನ ಅಗ್ರಹಾರಕ್ಕೆ ಕಾಲಿಟ್ಟಿದೆ. ಪರಪ್ಪನ ಅಗ್ರಹಾರದಲ್ಲಿರುವ ವಿಚಾರಣಾಧೀನ ಖೈದಿಗಳಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಎಡೆಮಾಡಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ 20 ಮಂದಿ ವಿಚಾರಣಾಧೀನ ಖೈದಿಗಳಲ್ಲಿ ಸೋಂಕು ಕಂಡುಬಂದಿದ್ದು, 6 ಸಿಬ್ಬಂದಿಗಳಲ್ಲೂ ಕರೋನಾ ಪಾಸಿಟಿವ್ ಪತ್ತೆಯಾಗಿದೆ. ಸೋಂಕಿತರು ಇತ್ತೀಚೆಗೆ ವಿವಿಧ ಪ್ರಕರಣಗಳಲ್ಲಿ ಜೈಲು ಸೇರಿದ ಆರೋಪಿಗಳಾಗಿದ್ದು, ಆರೋಪಿಗಳನ್ನ ಪ್ರತ್ಯೇಕ ಸೆಲ್ ನಲ್ಲಿ ಕ್ವಾರಂಟೈನ್ ಒಳಪಡಿಸಲಾಗಿತ್ತು. ಕ್ವಾರಂಟೈನ್ ಇರಿಸಿದ್ದ ಆರೋಪಿಗಳಲ್ಲಿ ಸೋಂಕು ದೃಡಪಟ್ಟಿದೆ.

ಸದ್ಯ ಸೋಂಕು ಪತ್ತೆಯಾದ ಆರೋಪಿಗಳೊಡನೆ ಮತ್ತು ಸಿಬ್ಬಂದಿ ಜೊತೆ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಜೈಲಿನಲ್ಲಿ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಜೈಲಿನ ಇತರೆಡೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿ, ಮತ್ತಷ್ಟು ಬಿಗಿಗೊಳಿಸಿ ಕ್ರಮಗಳನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.
ಮೈಸೂರು ಪೋಲಿಸರಲ್ಲೂ ಕರೋನಾ ಸೋಂಕು ಕಂಡು ಬಂದಿದ್ದು ಕರೋನಾ ವಾರಿಯರ್ಸ್‌ನ್ನು ಆತಂಕಕ್ಕೆ ದೂಡಿದೆ. ಮೈಸೂರಿನ ಹೆಚ್.ಡಿ ಕೋಟೆ ಪೊಲೀಸ್ ಠಾಣೆಯ 59 ವರ್ಷದ ಇನ್ಸಪೆಕ್ಟರ್‌ಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.






