ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಾಲಯದ ನಿಂದನೆ ಪ್ರಕರಣದ ವಿಚಾರಣೆ ಮುಕ್ತಾಯಗೊಂಡಿದ್ದು ಪ್ರಕರಣದ ತೀರ್ಪನ್ನು ಮುಂದೂಡಲಾಗಿದೆ. ಸೆಪ್ಟೆಂಬರ್ 2 ರಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನಿವೃತ್ತಿಯಾಗುವ ಮುನ್ನ ಪ್ರಕರಣದ ತೀರ್ಪು ಪ್ರಕಟಿಸಲಾಗುವುದು ಎಂದು ವರದಿಯಾಗಿದೆ.
ವಿಚಾರಣೆಯ ವೇಳೆ ಪ್ರಶಾಂತ್ ಭೂಷಣ್ ಅವರಿಗೆ ಕ್ಷಮೆಯಾಚಿಸುವಂತೆ ಕೇಳಿದ ನ್ಯಾಯಮೂರ್ತಿ ಅರುಣ್ ಮಿಶ್ರಾ, ಕ್ಷಮೆಯಾಚಿಸುವುದರ ಬಗ್ಗೆ ಯೋಚಿಸಲು ಅರ್ಧ ಘಂಟೆಯ ಸಮಯ ನೀಡಿದ್ದರು. ಮಧ್ಯಾಹ್ನ ಪ್ರಶಾಂತ್ ಭೂಷಣ್ ಪರ ಹಾಜರಾದ ವಕೀಲರು, ಪ್ರಶಾಂತ್ ಭೂಷಣ್ ಕ್ಷಮೆಯಾಚಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅವರು ಧೃಡ ನಂಬಿಕೆಯಿಂದ ಆರೋಪಗಳನ್ನು ಮಾಡಿದ್ದರು, ಹಾಗಾಗಿ ವಿಷಯಕ್ಕಾಗಿ ಕ್ಷಮೆಯಾಚಿಸಲು ಬಯಸುವುದಿಲ್ಲ. ಕ್ಷಮೆಯಾಚಿಸಲು ನ್ಯಾಯಾಲಯ ಒತ್ತಾಯಿಸುವುದು ಅಸಂವಿಧಾನಿಕ ಎಂದು ಭೂಷಣ್ ಪರ ವಕೀಲರು ನ್ಯಾಯಾಲಯದಲ್ಲಿ ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಹಿಂದೆ ಈ ಪ್ರಕರಣದಲ್ಲಿ ಕ್ಷಮೆಯಾಚಿಸಲು ನ್ಯಾಯಾಲಯವು ಪ್ರಶಾಂತ್ ಭೂಷಣ್ ಅವರಿಗೆ ಸೋಮವಾರ ತನಕ ಕಾಲಾವಕಾಶ ನೀಡಿತ್ತು. ತಾನು ಕ್ಷಮೆಯಾಚಿಸಲು ಸಿದ್ಧವಿಲ್ಲ ಎಂದು ಪ್ರಶಾಂತ್ ಭೂಷಣ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ತೀರ್ಪನ್ನು ಮಂಗಳವಾರಕ್ಕೆ ಮುಂದೂಡಲಾಗಿತ್ತು.
ಪ್ರಾಮಾಣಿಕತೆ ಇಲ್ಲದೆ ಕ್ಷಮೆಯಾಚಿಸುವುದು ಕಪಟ ಮತ್ತು ಆತ್ಮ ವಂಚನೆ ಎಂದು ನ್ಯಾಯಾಲಯಕ್ಕೆ ಪ್ರಶಾಂತ್ ಭೂಷಣ್ ಹೇಳಿದ್ದರು. ಸೋಮವಾರ ಸಲ್ಲಿಸಿದ ಎರಡು ಪುಟಗಳ ಹೇಳಿಕೆಯಲ್ಲಿ, ಭೂಷಣ್, ಈ ತಿಂಗಳ 20 ರಂದು ಸುಪ್ರೀಂ ಕೋರ್ಟ್‌ಗೆ ನೀಡಿದ ಹೇಳಿಕೆಯಲ್ಲಿ ತಮ್ಮ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟಿನಲ್ಲಿ ಭೂಷಣ್ ಪರ ವಾದಿಸಲು ಹಾಜರಾದ ಹಿರಿಯ ವಕೀಲ ರಾಜೀವ್ ಧವನ್ ಪ್ರಶಾಂತ್ ಭೂಷಣ್ ಅವರನ್ನು ನ್ಯಾಯಾಲಯ ಶಿಕ್ಷಿಸಬಾರದು ಎಂದು ವಾದ ಮಾಡಿದ್ದರು. ಭೂಷಣ್ ಅವರ ಹೇಳಿಕೆಯನ್ನು ಒಟ್ಟಾರೆಯಾಗಿ ಓದಿದರೆ, ಅವರಿಗೆ ನ್ಯಾಯಾಂಗದ ಬಗ್ಗೆ ಹೆಚ್ಚಿನ ಗೌರವವಿದೆ ಎಂದು ತಿಳಿದು ಬರುತ್ತದೆ. ಆದರೆ ಅದು ನಾಲ್ಕು ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ವಿಮರ್ಶಾತ್ಮಕ ಅಭಿಪ್ರಾಯವನ್ನು ಹೊಂದಿದೆ. ಕಳೆದ 6 ವರ್ಷಗಳಲ್ಲಿ ಈ ನ್ಯಾಯಾಲಯದಲ್ಲಿ ಏನೇನಾಗಿದೆ ಎಂದು ನಾವೆಲ್ಲರೂ ಚಿಂತೆಗೀಡಾಗಿದ್ದೇವೆ. ನ್ಯಾಯಾಲಯದ ಅನೇಕ ತೀರ್ಪುಗಳ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ, ಅದೇ ವೇಳೆ ಇನ್ನೂ ಅನೇಕ ತೀರ್ಪುಗಳ ಬಗ್ಗೆ ಹೆಮ್ಮೆಪಡುತ್ತಿಲ್ಲ,” ಎಂದು ಧವನ್ ಹೇಳಿದ್ದಾರೆ.
Also Read: ನ್ಯಾಯಾಂಗ ನಿಂದನೆ ಪ್ರಕರಣ: ಕ್ಷಮೆ ಯಾಚಿಸಲು ಒಪ್ಪದ ವಕೀಲ ಪ್ರಶಾಂತ್ ಭೂಷಣ್
ನ್ಯಾಯಾಲಯವು ಟೀಕೆಗಳಿಂದ ಮುಕ್ತವಾಗಿಲ್ಲ ಮತ್ತು ಜವಾಬ್ದಾರಿಯುತ ಟೀಕೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದಿರುವ ಧವನ್, ಸ್ಪೈಕ್ಯಾಚರ್ ಪ್ರಕರಣದಲ್ಲಿ ಇಂಗ್ಲೆಂಡಿನ ನ್ಯಾಯಾಧೀಶರುಗಳನ್ನು “ಯೂ ಫೂಲ್ಸ್” ಎಂದು ಕರೆದಿದ್ದ ‘ಡೈಲಿ ಮಿರರ್’ ಪತ್ರಿಕೆಯ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಪ್ರಶಾಂತ್ ಭೂಷಣ್ ಹೇಳಿಕೆಗಳು ನ್ಯಾಯಾಲಯದ ಸುಧಾರಣೆಯ ದೃಷ್ಟಿಯಿಂದ ಹೇಳಿರುವಂತಹುದು. ಆದ ಕಾರಣ ನ್ಯಾಯಾಲಯ ಕ್ಷಮೆ ನೀಡಬೇಕು ಎಂದು ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಹೇಳಿದ್ದಾರೆ.
ಜೂನ್ 27 ಮತ್ತು 29 ರಂದು ಸುಪ್ರೀಂ ಕೋರ್ಟ್ ಮತ್ತು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರನ್ನು ಟೀಕಿಸುವ ಎರಡು ಟ್ವೀಟ್‌ಗಳು ಭೂಷಣ್ ವಿರುದ್ಧ ಸ್ವಯಂಪ್ರೇರಿತ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್‌ಗೆ ಪ್ರೇರೇಪಿಸಿತ್ತು. ತೀರ್ಪಿನ ವಿರುದ್ಧ ಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಅದು ತೀರ್ಮಾನವಾಗುವವರೆಗೂ ಶಿಕ್ಷೆ ವಿಧಿಸಬಾರದು ಎಂಬ ಭೂಷಣ್ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.
Also Read: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಹೊಸ ಆಯಾಮ ನೀಡಿದ ಗಾಂಧಿ ಹೇಳಿಕೆ!
ಟ್ವೀಟ್ ಪ್ರಕರಣ ಮಾತ್ರವಲ್ಲದೆ ಭೂಷಣ್ ಮತ್ತೊಂದು ಪ್ರಕರಣವನ್ನು ನ್ಯಾಯಾಲಯದಲ್ಲಿ ಎದುರಿಸುತ್ತಿದ್ದಾರೆ. 2009 ರಲ್ಲಿ ತೆಹಲ್ಕಾ ನಿಯತಕಾಲಿಕೆಗೆ ನೀಡಿದ ಸಂದರ್ಶನವನ್ನು ಆಧರಿಸಿದ ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಕೊನೆಯ 16 ಮುಖ್ಯ ನ್ಯಾಯಮೂರ್ತಿಗಳಲ್ಲಿ ಅರ್ಧದಷ್ಟು ಜನರು ಭ್ರಷ್ಟರಾಗಿದ್ದಾರೆಂದು ಭೂಷಣ್ ಹೇಳಿದ್ದರು. ಈ ಕುರಿತಾಗಿ ಇಂದು ವಾದ ಮಂಡಿಸಿದ ಪ್ರಶಾಂತ್ ಭೂಷಣ್ ಪರ ವಕೀಲರು, ವಾಕ್ ಸ್ವಾತಂತ್ರ್ಯ ಮತ್ತು ನ್ಯಾಯಾಂಗ ನಿಂದನೆಯ ವಿಚಾರದಲ್ಲಿ ಆಳವಾದ ಚರ್ಚೆ ನಡೆಯುವ ಅಗತ್ಯವಿದೆ. ಹಾಗಾಗಿ ಈ ಪ್ರಕರಣವನ್ನು ಸೂಕ್ತ ಪೀಠಕ್ಕೆ ವರ್ಗಾಯಿಸಬೇಕೆಂದು ಕೇಳಿಕೊಂಡರು.
ಈ ವಾದವನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳು, ಈ ಪ್ರಕರಣದ ವಿಚಾರಣೆಯನ್ನು ವರ್ಗಾಯಿಸಲು ಒಪ್ಪಿಕೊಂಡರು.
Also Read: ಆರೋಪ ಪ್ರತ್ಯಾರೋಪಕ್ಕೆ ಕಾರಣವಾಯಿತು ಸಿಜೆಐ ಬೈಕ್ ಏರಿದ್ದು