ಕರ್ನಾಟಕದಲ್ಲಿ ಪಠ್ಯಪುಸ್ತಕಗಳಲ್ಲಿ ಮಾಡಿರುವ ತಿದ್ದುಪಡಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿರುವಾಗಲೇ, ಕೇಂದ್ರ ಸಚಿವ ಸಂಪುಟ ದೇಶದಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಅಸ್ತು ಎಂದಿದೆ. ದೇಶದಲ್ಲಿ ಡಿಜಿಟಲ್ ಶಿಕ್ಷಣವನ್ನು ಪ್ರಚುರ ಪಡಿಸುವ ಸಲುವಾಗಿ ಇ-ಕೋರ್ಸ್ಗಳನ್ನು ಕೂಡಾ ಜಾರಿಗೆ ತರುವಂತಹ ಯೋಜನೆಗಳನ್ನು ಇದರಲ್ಲಿ ಹಮ್ಮಿಕೊಳ್ಳಲಾಗಿದೆ.
34 ವರ್ಷದ ಬಳಿಕ ಶಿಕ್ಷಣ ನೀತಿಗೆ ತಿದ್ದುಪಡಿ..!
1986ರಲ್ಲಿ ರಾಜೀವ್ ಗಾಂಧಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಶಿಕ್ಷಣ ನೀತಿ ರೂಪಿಸಲಾಗಿತ್ತು. ಆ ಬಳಿಕ 1992ರಲ್ಲಿ ಕೆಲವೊಂದು ಸಣ್ಣಪುಟ್ಟ ಬದಲಾವಣೆ ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಅದೇ ಶಿಕ್ಷಣ ನೀತಿ ಪಾಲನೆಯಾಗುತ್ತಾ ಸಾಗಿತ್ತು. 2014ರಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಶಿಕ್ಷಣ ನೀತಿಯಲ್ಲಿ ಬದಲಾವಣೆ ತರುವ ಕೆಲಸಕ್ಕೆ ಮುಂದಾಗಿತ್ತು. ಏಕಶಿಕ್ಷಣ ವ್ಯವಸ್ಥೆಯ ಬಗ್ಗೆಯೂ ಚರ್ಚೆ ನಡೆದಿತ್ತು. ಆ ಬಳಿಕ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಂದ್ರ ಸರ್ಕಾರದ ವಿರುದ್ಧ ಕೇಳಿಬಂದಿದ್ದವು.
21ನೇ ಶತಮಾನಕ್ಕೆ ತಕ್ಕಂತೆ ಶಿಕ್ಷಣ ಬದಲಾವಣೆ..!
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಾಕಷ್ಟು ಕಾನೂನುಗಳಿಗೆ ತಿದ್ದುಪಡಿ ಆಗುತ್ತಲೇ ಬಂದಿದೆ. 1986ರಲ್ಲಿ ರೂಪಿಸಿದ್ದ ಶಿಕ್ಷಣ ನೀತಿಯನ್ನು 34 ವರ್ಷಗಳ ಬಳಿಕ ತಿದ್ದುಪಡಿ ಮಾಡಲಾಗ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು 21ನೇ ಶತಮಾನಕ್ಕೆ ಬೇಕಾದಂತೆ ಹೊಸ ಶಿಕ್ಷಣ ನೀತಿ ರೂಪಿಸಲಾಗುತ್ತಿದೆ. ಇದಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ ಎಂದಿದ್ದಾರೆ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವಡೇಕರ್.
ಹೆಚ್ಆರ್ಡಿ ಸಚಿವಾಲಯದ ಹೆಸರು ಬದಲಾವಣೆ..!
ಏಕರೂಪದ ಶಿಕ್ಷಣ ಹಾಗೂ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುವುದು ನಮ್ಮ ಆದ್ಯತೆ. ಪ್ರಾಥಮಿಕ ಶಿಕ್ಷಣ ಗುಣಮಟ್ಟ ಸುಧಾರಿಸಲು ಸಾಕಷ್ಟು ಗಮನಹರಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದ ಬಳಿಕ ಸುಮಾರು 3 ದಶಕಗಳಾಗಿದ್ದು, ಇದೀಗ ನೂತನ ಶಿಕ್ಷಣ ನೀತಿಗೆ ಅನುಮೋದನೆ ನೀಡಲಾಗಿದೆ ಎಂದಿದ್ದಾರೆ. ಇನ್ಮುಂದೆ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಇಲಾಖೆಯ ಹೆಸರು ಕೂಡ ಬದಲಾಗಲಿದ್ದು, ಶಿಕ್ಷಣ ಮಂತ್ರಾಲಯ ಎಂದು ಹೊಸದಾಗಿ ನಾಮಕರಣ ಮಾಡಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಏನೇನಿದೆ..?
ಮಕ್ಕಳಿಗೆ 5ನೇ ತರಗತಿಯ ತನಕ ಮಾತೃ ಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದು ಹೇಳಲಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಬೇಕು. ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಒಂದೇ ರೀತಿಯ ನಿಯಮಗಳು ಅನ್ವಯ ಆಗಲಿವೆ. ಇನ್ಮುಂದೆ ಎಂಫಿಲ್ ಕೋರ್ಸ್ ಇರುವುದಿಲ್ಲ. ಸ್ಥಳೀಯ ಭಾಷೆಗಳಲ್ಲಿ ಕೋರ್ಸ್ಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ಆನ್ಲೈನ್ ತರಗತಿಗಾಗಿ ಲ್ಯಾಬ್ಗಳು, ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆ ರೂಪಿಸುತ್ತೇವೆ ಎಂದಿದ್ದಾರೆ. ಇನ್ನೂ 2035ರ ವೇಳೆಗೆ ಶೇಕಡ 50ರಷ್ಟು ಪ್ರೌಢಶಿಕ್ಷಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗುವಂತೆ ಮಾಡುವ ಗುರಿ ಹೊಂದಲಾಗಿದೆ. ಎಲ್ಲಾ ಉನ್ನತ ಶಿಕ್ಷಣಗಳಿಗೆ ಒಂದೇ ನಿಯಂತ್ರಣ ಸಂಸ್ಥೆ ಇರಲಿದೆ. ಶೈಕ್ಷಣಿಕ, ಆಡಳಿತ ಹಾಗೂ ಹಣಕಾಸು ಸ್ವಾಯತ್ತತೆಯನ್ನು ಈ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುತ್ತದೆ. ದೇಶದಲ್ಲಿ ಸುಮಾರು 45 ಸಾವಿರ ಕಾಲೇಜುಗಳಿಗೆ ಅನ್ವಯ ಆಗಲಿದೆ ಎಂದಿದ್ದಾರೆ.
ಹಾಲಿ ಇರುವ ಸ್ವಾಯತ್ತ ವಿಶ್ವವಿದ್ಯಾಲಯಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು ಸೇರಿದಂತೆ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಿಗೆ ಪ್ರತ್ಯೇಕ ನಿಯಮಗಳಿವೆ. ಇದೀಗ ಹೊಸ ಶಿಕ್ಷಣ ನೀತಿಯ ಪ್ರಕಾರ ಗುಣಮಟ್ಟದ ಕಾರಣಕ್ಕಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ ಒಂದೇ ರೀತಿಯ ನಿಯಮಗಳು ಅನ್ವಯ ಆಗಲಿದೆ ಎಂದಿದ್ದಾರೆ. ವಿದ್ಯಾರ್ಥಿಗಳ ಪ್ರಗತಿ ಪತ್ರಗಳಲ್ಲಿ ಕೇವಲ ಅಂಕಗಳು ಹಾಗೂ ಟಿಪ್ಪಣಿಗಳ ಬದಲು ಕೌಶಲ ಹಾಗೂ ಅರ್ಹತೆಗಳ ಸಮಗ್ರ ವರದಿಯನ್ನೂ ನೀಡಲು ಶಿಕ್ಷಣ ನೀತಿಯಲ್ಲಿ ಸೇರಿಸಲಾಗಿದೆ. ವೃತ್ತಿ ಆಧಾರಿತ ವಿಷಯಗಳನ್ನು 6ನೇ ತರಗತಿಯ ಪಠ್ಯದೊಂದಿಗೆ ಸೇರಿಸಲಾಗುತ್ತದೆ. ಕಲೆ ಮತ್ತು ವಿಜ್ಞಾನದ ರೀತಿ ಶಿಕ್ಷಣ ವ್ಯವಸ್ಥೆ ಪ್ರತ್ಯೇಕ ಇರುವುದಿಲ್ಲ ಎನ್ನುವ ಮಾಹಿತಿ ಹೊರಬಿದ್ದಿದೆ.
ವಿದೇಶಿ ಶಿಕ್ಷಣ ಸಂಸ್ಥೆಗಳಿಗೆ ಅವಕಾಶ:
ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ನೂರು ವಿದೇಶಿ ಶಿಕ್ಷಣ ಸಂಸ್ಥೆಗಳಿಗೆ ಭಾರತದಲ್ಲಿ ಕ್ಯಾಂಪಸ್ ನಿರ್ಮಿಸಲು ಅವಕಾಶ ನೀಡುವ ಯೋಜನೆಯೂ ನೂತನ ಶಿಕ್ಷಣ ನೀತಿಯಲ್ಲಿ ಸೇರಿಸಲಾಗಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಶಿಕ್ಷಣ ನೀತಿ ಜಾರಿಯಾಗುತ್ತಿದ್ದಂತೆ ಇದರಿಂದ ಆಗುವ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. 5ನೇ ತರಗತಿ ತನಕ ಮಾತೃಭಾಷಾ ಶಿಕ್ಷಣ ಎಂದು ಹೇಳಲಾಗಿದೆ. ಆದರೆ ನಾನು ಮಾರವಾಡಿ ಜನಾಂಗದವರು, ವಾಸ ಮಾಡ್ತಿರೋದು ಕೊಲ್ಕತ್ತಾದಲ್ಲಿ, ಮಕ್ಕಳು ಹಿಂದಿ ಹಾಗೂ ಇಂಗ್ಲೀಷ್ ಬಲ್ಲವರಾಗಿದ್ದಾರೆ. ಆದರೆ ಮಾತೃ ಭಾಷೆ ಶಿಕ್ಷಣ ಎಲ್ಲಿ ಸಿಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಮಾತೃಭಾಷೆಯೇ ಪ್ರಥಮ ಭಾಷೆ ಆಗಿರಬೇಕು. ಇಲ್ಲದಿದ್ದರೆ ಭಾಷೆಗಳ ಮೇಲೆ ಪರಿಣಾಮ ಬೀರಲಿದೆ ಎನ್ನುವ ಮಾತುಗಳೂ ಕೇಳಿಬಂದಿದೆ. ಇದೀಗ ಹೊಸದಾಗಿ ಜಾರಿಯಾಗುತ್ತಿರುವ ಶಿಕ್ಷಣ ನೀತಿ ಬಗ್ಗೆ ಗುಣಮಟ್ಟದ ಚರ್ಚೆಗಳು ನಡೆಯಬೇಕಿದೆ.