ದೇಶಾದ್ಯಂತ ಕರೋನಾ ವಿರುದ್ಧ ಸಾಮಾಜಿಕ ಸಂಸ್ಥೆಗಳು, ಕಲಾವಿದರು, ಪೊಲೀಸರು ನಡೆಸುತ್ತಿರುವ ಜಾಗೃತಿ ನಿಜಕ್ಕೂ ಗಮನಸೆಳೆಯುತ್ತಿದೆ. ಹಾಗಂತ ಸರಕಾರವೇ ಜಾಗೃತಿ ಮೂಡಿಸಬೇಕು ಅನ್ನೋದಲ್ಲ. ಏಕೆಂದರೆ ಕೇಂದ್ರ ಹಾಗೂ ಆಯಾಯ ರಾಜ್ಯ ಸರಕಾರಗಳು ತಮ್ಮ ಪ್ರಯತ್ನ ಮೀರಿ ರೋಗ ನಿಯಂತ್ರಣಕ್ಕೆ ಪ್ರಯತ್ನಪಡುತ್ತಿದೆ. ಅಗತ್ಯ ಮೂಲಸೌಕರ್ಯ ಒದಗಿಸಲು ಶ್ರಮಿಸುತ್ತಿದೆ. ಹಾಗಾಗಿ ಸಮಾಜದಲ್ಲಿರುವ ಜನತೆಗೆ ವಿಶೇಷವಾಗಿ ಕರೋನಾ ಸೋಂಕಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ವಿದ್ಯಾವಂತ ಹಾಗೂ ಅವಿದ್ಯಾವಂತ ಎರಡೂ ವರ್ಗಗಳಿಗೂ ತಕ್ಷಣಕ್ಕೆ ಜಾಗೃತಿ ಹಾಗೂ ಮಾಹಿತಿ ಅಗತ್ಯವೂ ಇದೆ.
ಸಾಮಾಜಿಕ ಜಾಲತಾಣ, ತಂತ್ರಜ್ಞಾನ ಮುಂದುವರೆದಿರುವ ಈ ಕಾಲಘಟ್ಟದಲ್ಲಿ ಅದೇ ವೇದಿಕೆಯನ್ನೇ ಬಳಸಿಕೊಂಡು ಜನಜಾಗೃತಿ ಮೂಡಿಸಬೇಕಾದ ಅನಿವಾರ್ಯತೆಯನ್ನು ಎಲ್ಲರೂ ಕಂಡುಕೊಂಡಿದ್ದಾರೆ. ಯಾಕೆಂದರೆ ಇಂದಿನ ಬಹುತೇಕ ಯುವಜನರು ಹಾಗೂ ಮಧ್ಯವಯಸ್ಕರು ಜಾಲತಾಣದ ಬಳಕೆಯ ಬಗ್ಗೆ ತಿಳಿದವರಾಗಿದ್ದಾರೆ. ಆದ್ದರಿಂದ ಜಾಲತಾಣದ ಬಳಕೆಯ ಮೂಲಕ ದೇಶಾದ್ಯಂತ ಆಯಾ ರಾಜ್ಯದ ಪೊಲೀಸ್ ಇಲಾಖೆ ನಡೆಸಿದ ಜಾಗೃತಿಯು ಸದ್ಯ ಟ್ವಿಟ್ಟರ್ ಹಾಗೂ ಫೇಸ್ಬುಕ್ ಗಳಲ್ಲಿ ಗಮನಸೆಳೆಯುತ್ತಿದೆ. ಅದರಲ್ಲೂ ಪೊಲೀಸ್ ಇಲಾಖೆ ಮಾಡುತ್ತಿರುವ ಮೀಮ್ಸ್, ಪೋಸ್ಟರ್, ಅದಕ್ಕೆ ತಕ್ಕುದಾದ ಟೈಟಲ್ ಇದೆಲ್ಲವೂ ವಿಭಿನ್ನವಾಗಿ ಸಮಾಜವನ್ನ ಕರೋನಾ ವಿರುದ್ಧದ ಜಾಗೃತಿಗೆ ಬಳಸಿಕೊಂಡಿದೆ ಪೊಲೀಸ್ ಇಲಾಖೆ.
ಈ ವಿಚಾರದಲ್ಲಿ ಬೆಂಗಳೂರು ಪೊಲೀಸರು ನೀಡಿರುವ ಟೈಟಲ್ ಸಾಕಷ್ಟು ಗಮನಾರ್ಹವಾದದು. ʼARREST CORONA’ ಅನ್ನೋ ವಿಶಿಷ್ಟ ಅಭಿಯಾನವನ್ನೇ ಆಯೋಜಿಸಿದೆ. ಕೇವಲ ಟ್ವಿಟ್ಟರ್ ಗೆ ಸೀಮಿತವಾಗದ ಈ ಅಭಿಯಾನ ರಸ್ತೆಗಳಲ್ಲಿಯೂ ಪ್ರದರ್ಶನಗೊಂಡು ಜಾಗೃತಿ ಮೂಡಿಸುವ ಕೆಲಸ ಮಾಡಿದೆ. ಸ್ವತಃ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕೂಡಾ ಈ ನಿಟ್ಟಿನಲ್ಲಿ ಹೆಚ್ಚು ಉತ್ಸುಕರಾಗಿದ್ದು, ಪೊಲೀಸ್ ಇಲಾಖೆಯ ಜಾಗೃತಿ ಅಭಿಯಾನಕ್ಕೆ ಬೆನ್ನು ತಟ್ಟುತ್ತಿದ್ದಾರೆ. ಈಗಾಗಲೇ ಜಾಲತಾಣದಲ್ಲಿ ಹರಿದಾಡಿದ ರಾಜರಾಜೇಶ್ವರಿ ನಗರ ಠಾಣೆಯ ಮುಂಭಾಗ ಅಲ್ಲಿನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ನಡೆಸಿದ ಕರೋನಾ ವಿರುದ್ಧದ ಜಾಗೃತಿ ಡ್ಯಾನ್ಸ್ ಸಾಕಷ್ಟು ಗಮನಸೆಳೆದಿತ್ತು.
ಇನ್ನು ಬೆಂಗಳೂರಿನ ಪ್ರಮುಖ ಸಿಗ್ನಲ್ಗಳಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ನಡೆಸಿದ ಜಾಗೃತಿ ಪ್ರದರ್ಶನವೂ ಸಾಕಷ್ಟು ಪರಿಣಾಮ ಬೀರಿತ್ತು. ಇನ್ನು ಟ್ವಿಟ್ಟರ್ನಲ್ಲಂತೂ ಪ್ರತಿದಿನ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಇನ್ನು ಮನೆಯಲ್ಲಿದ್ದವರಿಗೂ ಯಾವ ರೀತಿಯಾಗಿ ಕರೋನಾ ಅವಧಿಯನ್ನು ಕಳೆಯಿರಿ ಅನ್ನೋದರ ಬಗ್ಗೆ ಟ್ವಿಟ್ಟರ್ನಲ್ಲೇ ಕಾರ್ಟೂನ್ ಬಳಕೆಯ ಮೂಲಕ ತಿಳಿಸುವ ಪ್ರಯತ್ನವೂ ಬೆಂಗಳೂರು ಪೊಲೀಸರಿಂದ ನಡೆಯುತ್ತಿದೆ.
ಮಾತ್ರವಲ್ಲದೇ ಸ್ಟಾರ್ ನಟರಿಂದ ಹಾಗೂ ಕ್ರಿಕೆಟ್ ಆಟಗಾರರಿಂದಲೂ ಜಾಗೃತಿ ಸಂದೇಶ ಬಿತ್ತುವ ವೀಡಿಯೋಗಳನ್ನು ತನ್ನ ಟ್ವೀಟ್ ಖಾತೆಯಲ್ಲಿ ಲಗತ್ತಿಸುತ್ತಿದೆ. ಮಾತ್ರವಲ್ಲದೇ ಇನ್ನೂ ಹತ್ತು ಹಲವಾರು ಜಾಗೃತಿ ಸಂದೇಶಗಳನ್ನು ಜಾಲತಾಣದ ಮೂಲಕ ಬೆಂಗಳೂರು ಪೊಲೀಸರು ಯಾವ ಆದೇಶಕ್ಕೂ ಕಾಯದೇ ನಿರಂತರವಾಗಿ ನಡೆಸುತ್ತಾ ಬಂದಿದೆ. ಅಲ್ಲದೇ ತನ್ನ ಟ್ವಿಟ್ಟರ್ DP (display picture) ಯಲ್ಲೂ ಆಕರ್ಷಕವಾದ ʼARREST CORONA’ ಅನ್ನೋ ಚಿತ್ರವನ್ನೇ ಲಗತ್ತಿಸಿಕೊಂಡಿದೆ.
ಜೈಪುರ ಪೊಲೀಸರು ಈ ನಿಟ್ಟಿನಲ್ಲಿ ವಿಭಿನ್ನ ರೀತಿಯಲ್ಲಿ ಮೀಮ್ಸ್ ರಚಿಸಿದ್ದು ತಮಾಷೆ ಜೊತೆಗೆ ಲಾಕ್ಡೌನ್ ಉಲ್ಲಂಘಿಸೋರಿಗೆ ಎಚ್ಚರಿಕೆಯನ್ನೂ ನೀಡಿದೆ. ಜೈಪುರ ಪೊಲೀಸ್ ಟ್ವೀಟ್ ಖಾತೆಯಲ್ಲಿ ಹಾಕಲಾದ ಮೀಮ್ಸ್ನಲ್ಲಿ ʼಮಸಕ್ಕಲಿ 2.0ʼ ಹಿಂದಿ ಹಾಡನ್ನ ಉಲ್ಲೇಖಿಸಿರುವ ಪೊಲೀಸರು ʼ ನೀವೇನಾದರೂ ಅನಗತ್ಯ ತಿರುಗಾಡೋದಕ್ಕೆ ರಸ್ತೆಗೆ ಬಂದರೆ, ನಾವು ರೂಂ ಗೆ ಕರೆದೊಯ್ದು ಕೂಡಿ ಹಾಕಿ ಮಸಕ್ಕಲಿ 2.0 ಹಾಡನ್ನು ಹಾಕ್ತೇವೆʼ ಅಂತಾ ಮೀಮ್ಸ್ ರಚಿಸಲಾಗಿದೆ. ಎಪ್ರಿಲ್ 8 ನೇ ತಾರೀಕಿಗೆ ಬಿಡುಗಡೆಯಾದ ʼಮಸಕ್ಕಲಿ 2.0ʼ ಹಾಡು ಸಾಕಷ್ಟು ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ಜೈಪುರ ಪೊಲೀಸರು ಈ ರೀತಿ ವಿಭಿನ್ನ ಆಲೋಚನೆ ಮೂಲಕ ಕಾನೂನು ಉಲ್ಲಂಘಿಸೋರಿಗೆ ಎಚ್ಚರಿಕೆ ನೀಡುವ ಕೆಲಸವನ್ನೂ ಮಾಡಿದ್ದಾರೆ.
ಇನ್ನು ಮುಂಬೈ ಪೊಲೀಸರು ಸಿನೆಮಾ ಪೋಸ್ಟರ್ ವೊಂದರ ಮೊರೆ ಹೋಗಿ ಲಾಕ್ಡೌನ್ ಉಲ್ಲಂಘಿಸೋರಿಗೆ ಎಚ್ಚರಿಕೆ ರವಾನಿಸುತ್ತಿದ್ದಾರೆ. ಇತ್ತೀಚೆಗೆ ನೆಟ್ಫ್ಲಿಕ್ಸ್ನಲ್ಲಿ ಅತ್ಯಂತ ಸೆನ್ಸೇಷನ್ ಸೃಷ್ಟಿಸಿದ್ದ ʼಮನಿ ಹೀಸ್ಟ್ʼ ಸಿನೆಮಾದ ಪೋಸ್ಟರ್ನ್ನು ಮೀಮ್ ಆಗಿ ಬಳಸಿದ್ದು, ʼನೀವೇನಾದರು ಅನಗತ್ಯವಾಗಿ ಲಾಕ್ಡೌನ್ ಸಮಯದಲ್ಲಿ ನಿಮ್ಮ ಗ್ಯಾಂಗ್ ಜೊತೆ ಬರಲು ಯೋಚಿಸಿದರೆ, ಆವಾಗ ನಾವು ನಮ್ಮ ಕಾಮನ್ಸೆನ್ ಮರೆಯುತ್ತೇವೆʼ ಎನ್ನುವ ಮೀಮ್ ಗಮನಸೆಳೆಯುತ್ತಿದೆ.
ಇನ್ನು ಪಂಜಾಬ್ ಪೊಲೀಸರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ದೇಶಾದ್ಯಂತ ಕೋಟ್ಯಾಂತರ ಮಂದಿ ಬಳಸುವ ಟಿಕ್ಟಾಕ್ ಮೊರೆ ಹೋಗಿ, ಅದರಲ್ಲಿ ಹಾಕಲಾದ ಪಂಜಾಬಿ ಭಾಷೆಯ ವೀಡಿಯೋವನ್ನು 50 ಲಕ್ಷ ಜನ ವೀಕ್ಷಿಸಿದ್ದಾರೆ.
ಇನ್ನು ನಾಗ್ಪುರ ಪೊಲೀಸರು ಕೂಡಾ ಸಿನೆಮಾದ ಪೋಸ್ಟರ್ ನ್ನೇ ಅಳವಡಿಸಿಕೊಂಡು ಮೀಮ್ ರಚಿಸಿದ್ದಾರೆ. ʼಚೆನ್ನೈ ಎಕ್ಸ್ಪ್ರೆಸ್ʼ ಬಾಲಿವುಡ್ ಸಿನೆಮಾದ ಪೋಸ್ಟರ್ ಬಳಸಿಕೊಂಡಿರುವ ಇವರು, ಅದರಲ್ಲಿ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಂತರ ಕಾಯ್ದು ಕೂತಿರುವ ಆ ಪೋಸ್ಟರ್ ಮಧ್ಯೆ ʼಸೋಶಿಯಲ್ ಡಿಸ್ಟೆನ್ಸಿಂಗ್ʼಎಂದು ಬರೆಯುವ ಮೂಲಕ ʼಸಾಮಾಜಿಕ ಅಂತರʼ ಕಾಯ್ದುಕೊಳ್ಳುವುದು ಹೇಗೆ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.
ಇನ್ನು ಕರ್ನಾಟಕ ಡಿಜಿಪಿ ಅವರ ಟ್ವೀಟ್ ಖಾತೆಯಲ್ಲಿ ಹಾಕಲಾದ DP (Display picture) ಅಂತೂ ಸಾಕಷ್ಟು ಗಮನಸೆಳೆಯುತ್ತಿದೆ. ʼMy Papa is out on the street for your safety… Please stay Home’ ಅನ್ನೋ ಈ ಬರವಣಿಗೆ ಜೊತೆಗೆ ಕರ್ತವ್ಯದಲ್ಲಿರುವ ಪೊಲೀಸರ ಮಕ್ಕಳನ್ನು ಪ್ರತಿಬಿಂಬಿಸುವಂತೆ ಹೆಣ್ಣುಮಗುವೊಬ್ಬಳ ಫೋಟೋ ಇದ್ದು ತುಂಬಾ ಅರ್ಥಗರ್ಭಿತವೆನಿಸುತ್ತಿದೆ.
ಇದು ಮಾತ್ರವಲ್ಲದೇ ತೆಲಂಗಾಣ, ಕೇರಳ, ಆಂಧ್ರಪ್ರದೇಶ ಮುಂತಾದ ರಾಜ್ಯಗಳ ಪೊಲೀಸ್ ಇಲಾಖೆಗಳು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿವೆ.
ದೆಹಲಿ ಪೊಲೀಸ್ ಟ್ವೀಟ್ ಪೇಜ್ನಲ್ಲಂತೂ ವಿರಾಟ್ ಕೊಹ್ಲಿ ಸಹಿತ ಹತ್ತಾರು ಸೆಲೆಬ್ರಿಟಿಗಳು ʼStay Home’ ಬಗ್ಗೆ ಸಂದೇಶ ನೀಡಿದ್ದಾರೆ. ಒಟ್ಟಿನಲ್ಲಿ ದೇಶದಲ್ಲಿರುವ ಹಲವು ರಾಜ್ಯಗಳ ಪೊಲೀಸ್ ಇಲಾಖೆ ವಿಭಿನ್ನ ಶೈಲಿಯ ಮೂಲಕ ಜನರಲ್ಲಿ ಜಾಗೃತಿ ಹಾಗೂ ಎಚ್ಚರಿಕೆಯನ್ನೂ ನೀಡುತ್ತಿವೆ. ಆದ್ದರಿಂದ ಸರಕಾರ ಮಾಡಬೇಕಿದ್ದ ಬಹುದೊಡ್ಡ ಕೆಲಸವೊಂದು ಸರಕಾರದ ಭಾಗವಾಗಿ, ಅದರಲ್ಲೂ ತಾಂತ್ರಿಕತೆಯ ಸದುಪಯೋಗಪಡಿಸಿಕೊಂಡು ಸುಲಭವಾಗಿ ಜನಸಾಮಾನ್ಯರಿಗೆ ತಲುಪುತ್ತಿರುವ ಪೊಲೀಸ್ ಇಲಾಖೆಯ ಕರೋನಾ ವಿರುದ್ಧದ ಹೋರಾಟದ ಸಂದೇಶಗಳು ನಿಜಕ್ಕೂ ಅಭಿನಂದನಾರ್ಹ ವಿಚಾರವೇ ಸರಿ.