ಇಂದು ಕನ್ನಡದ ವರನಟ ಡಾ. ರಾಜಕುಮಾರ್ ಜನ್ಮದಿನ. ಅಭಿಮಾನಿಗಳಷ್ಟೇ ಅಲ್ಲದೆ, ಅವರನ್ನು ಬಲ್ಲವರ ಪಾಲಿಗೂ ದೇವತಾ ಮನುಷ್ಯರಾಗಿದ್ದ ರಾಜ್ ಕುಮಾರ್ ಅವರ ಕುರಿತ ಬರಹ ಮತ್ತು ಶುಭಾಶಯಗಳು ಎಲ್ಲೆಡೆ ಇಂದು ಹರಿದಾಡುತ್ತಿವೆ.
ಕನ್ನಡಿಗರ ಪಾಲಿನ ಆದರ್ಶದ ಮಾದರಿಯಾಗಿ, ಸಭ್ಯತೆ, ಸರಳತೆ, ನಾಡು-ನುಡಿಯ ಪ್ರೀತಿ- ಕಾಳಜಿ, ಸಹೋದರತೆ, ಸಹಬಾಳ್ವೆಯ ವಿಷಯದಲ್ಲಿ ಒಂದು ಅಳತೆಗೋಲಾಗಿ ಇದ್ದ ಅವರು ಮೇರು ನಟರಷ್ಟೇ ಅಲ್ಲದೆ, ಮಾನವೀಯತೆಯ ಮೇರು ಮಾದರಿಯೂ ಆಗಿದ್ದರು. ವ್ಯಕ್ತಿಯೊಬ್ಬ ಹೇಗೆ ಬದುಕಬೇಕು, ನಡೆ-ನುಡಿ ಹೇಗಿರಬೇಕು ಎಂಬುದಕ್ಕೆಲ್ಲಾ ಐಕಾನ್ ಆಗಿದ್ದ ಅವರು, ಕನ್ನಡ ನೆಲ ಕಂಡ ಅಪರೂಪದ ತಾರೆ; ಜನಸಾಮಾನ್ಯರ ಪಾಲಿನ ಸಭ್ಯತೆಯ ಬದುಕಿನ ಧ್ರುವನಕ್ಷತ್ರವಾಗಿದ್ದರು. ಹಾಗಾಗಿಯೇ ಅವರು ರಜತಪರದೆಯ ಮೇಲಷ್ಟೇ ಅಲ್ಲದೆ, ಬಣ್ಣದ ಲೋಕದಾಚೆಯ ನಿತ್ಯದ ಬದುಕಲ್ಲೂ ಕನ್ನಡಿಗರಿಗಷ್ಟೇ ಅಲ್ಲದೆ, ನೆರೆಹೊರೆಯ ಭಾಷಿಗರ ಪಾಲಿಗೂ ಅಣ್ಣಾವ್ರು ಆಗಿದ್ದರು, ನೆಲಕ್ಕಂಟಿದ ನಕ್ಷತ್ರವಾಗಿದ್ದರು.
ಇಂಥ ಮೇರು ವ್ಯಕ್ತಿತ್ವ ಡಾ. ರಾಜ್ ಅವರು ತಮ್ಮ ಬದುಕಿನ ಕೊನೆಗಾಲದಲ್ಲಿ ಕಾಡುಗಳ್ಳ ವೀರಪ್ಪನ್ ನಿಂದ ಅಪಹರಣಕ್ಕೊಳಾಗಿದ್ದರು ಮತ್ತು ಅದು ಕರ್ನಾಟಕದ ಇತಿಹಾಸದಲ್ಲೇ ಒಂದು ದಿಗ್ಭ್ರಮೆಯ ಘಟನೆಯಾಗಿ ದಾಖಲಾಗಿದೆ. ಆದರೆ, ದೊಡ್ಡವರ ಗುಣವನ್ನು ಸಂಕಷ್ಟದಲ್ಲಿ ಕಾಣು ಎಂಬಂತೆ ಅಪಹರಣಕ್ಕೊಳಗಾದ ಆ ಹೊತ್ತಿನಲ್ಲಿ ಡಾ. ರಾಜ್ ಅವರು ರೇಡಿಯೋ ಮೂಲಕ ತಮ್ಮ ಮನೆಮಂದಿಗೆ, ಸರ್ಕಾರಕ್ಕೆ, ಅಭಿಮಾನಿಗಳಿಗೆ(ಇಡೀ ನಾಡೇ ಅಭಿಮಾನಿಗಳು!) ನೀಡುತ್ತಿದ್ದ ಸಂದೇಶಗಳಲ್ಲಿ ಅವರ ವ್ಯಕ್ತಿತ್ವದ ಘನತೆ ಮತ್ತು ಜೀವ ಕಕ್ಕುಲತೆ ಕೇಳುಗರನ್ನು ನಿಬ್ಬೆರಗುಗೊಳಿಸುತ್ತಿತ್ತು. ಸ್ವತಃ ತಮ್ಮನ್ನೇ ಅಪಹರಿಸಿ, ಆ ಇಳಿವಯಸ್ಸಿನಲ್ಲಿ ನೋವು- ಸಂಕಷ್ಟಕ್ಕೆ ತಳ್ಳಿದ ವೀರಪನ್ ನನ್ನು ಕೂಡ ಡಾ. ರಾಜ್ ಆ ಸಂದೇಶಗಳಲ್ಲಿ ಮಾತ್ರವಲ್ಲ, ಆತನ ಸೆರೆಯಿಂದ ಬಳಿಕವೂ ‘ಅವರು’ ಎಂದೇ ಸಂಬೋಧಿಸುತ್ತಿದ್ದರು! ಅದು ರಾಜ್ ಅವರ ವ್ಯಕ್ತಿತ್ವ.
ಹಾಗೇ, ಇಂದು ಸಾಮಾಜಿಕ ಜಾಲತಾಣಗಳಲ್ಲಿ ಡಾ. ರಾಜ್ ಅವರಿಗೆ ಶುಭಾಶಯ ಹೇಳಿ ಹರಿದಾಡುತ್ತಿರುವ ಸಂದೇಶ ಮತ್ತು ಚಿತ್ರಗಳಲ್ಲಿ ಗಮನ ಸೆಳೆದದ್ದು, ಅಪಹರಣಕ್ಕೊಳಗಾಗಿ ಕಾಡಿನಲ್ಲಿ ಇದ್ದಾಗ, ಒಮ್ಮೆ ಸ್ವತಃ ನರಹಂತಕ ವೀರಪ್ಪನ್, ಡಾ. ರಾಜಕುಮಾರ್ ಅವರಿಗೆ ಶಾಲು ಹೊದಿಸಿ ಗೌರವಿಸುವ ಛಾಯಾಚಿತ್ರ. ಈ ಚಿತ್ರ ಡಾ. ರಾಜ್ ಅವರ ವ್ಯಕ್ತಿತ್ವಕ್ಕೆ ಬಹುಶಃ ಒಂದು ಅತ್ಯದ್ಭುತವಾದ ರೂಪಕ. ರಾಜ್ ಒಬ್ಬ ನಟರಾಗಿ ಮಾತ್ರವಲ್ಲ; ಒಬ್ಬ ಮನುಷ್ಯರಾಗಿ ಎಷ್ಟು ಎತ್ತರಕ್ಕೆ ಬೆಳೆದಿದ್ದರು, ಸ್ಥಾನಮಾನ, ಹುದ್ದೆ- ಗೌರವ, ಅಧಿಕಾರ- ಅಂತಸ್ತುಗಳ ಮೀರಿ, ಕೇವಲ ಮನುಷ್ಯನ ಘನತೆಯ ನಡೆ-ನುಡಿಯ ಮೂಲಕ ಡಾ. ರಾಜ್ ಎಂಥ ಔನತ್ಯಕ್ಕೆ ಏರಿದ್ದರು ಎಂಬುದಕ್ಕೆ ಈ ಚಿತ್ರಕ್ಕಿಂತ ಬೇರೊಂದು ಉದಾಹರಣೆ ಬೇಕಿಲ್ಲ!

ಅಂತಹ ಡಾ. ರಾಜ್ ಬಯಸಿದ ‘ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲಾ’, ಎಂಬ ನುಡಿ ಈಗ; ಕರೋನಾ ಮತ್ತು ಕೋಮು ವೈರಾಣುಗಳಿಗೆ ಇಡೀ ಸಮಾಜವನ್ನು ಬೆಚ್ಚಿಬೀಳಿಸಿರುವ ಹೊತ್ತಿನಲ್ಲಿ ನೆನಪಾಗುತ್ತಿದೆ. ಒಬ್ಬ ಕಲಾವಿದನಾಗಿ, ನಟನಾಗಿ ಮಾತ್ರವಲ್ಲದೆ; ರಾಜ್ ಅವರು ನಿತ್ಯದ ಬದುಕಿನಲ್ಲಿ ಕೂಡ ಎಂದೂ ಯಾರ ಬಗ್ಗೆಯೂ ಜಾತಿ- ಮತ- ಧರ್ಮದ ವಿಷಯದಲ್ಲಿ ತರತಮವೆಣಿಸಿದ ಉದಾಹರಣೆಗಳೇ ಇಲ್ಲ. ಯಾರನ್ನೂ ದ್ವೇಷಿಸದ, ಸಹಬಾಳ್ವೆಯಲ್ಲಿಯೇ, ಸಹಜೀವನದಲ್ಲಿಯೇ ಎಲ್ಲರ ಏಳಿಗೆ ಇದೆ, ನಾಡಿನ ಒಳಿತಿದೆ ಎಂದು ಸಾರಿದವರು ಅವರು. ಅವರ ಬಹುಖ್ಯಾತಿಯ ‘ಬಂಗಾರದ ಮನುಷ್ಯ’ ಸಿನಿಮಾದಿಂದ ‘ದೇವತಾ ಮನುಷ್ಯ’ ಸಿನಿಮಾದವರೆಗೆ ಸಹಬಾಳ್ವೆ ಮತ್ತು ಸಮಚಿತ್ರದ ಬದುಕನ್ನು ಪ್ರತಿಪಾದಿಸಿದವರು ಡಾ. ರಾಜ್.
ಒಂದು ನಾಡು ಎಲ್ಲ ಭಿನ್ನತೆಯನ್ನು ಮರೆತು, ಸಹೋದರತೆಯಿಂದ, ಪರಸ್ಪರ ಪ್ರೀತಿ-ವಿಶ್ವಾಸದಿಂದ ಬದುಕುವುದೇ ನಾಡನ್ನು ಕಟ್ಟುವ ಮಾದರಿ ಎಂಬುದನ್ನು ಅವರ ಹಲವು ಸಿನಿಮಾಗಳು ತೋರಿಸಿಕೊಟ್ಟಿವೆ. ವ್ಯಕ್ತಿಗತವಾಗಿ ಕೆಟ್ಟವರಲ್ಲೂ ಒಳ್ಳೆತನವಿರುತ್ತದೆ. ಅದನ್ನು ತಿದ್ದಿಕೊಳ್ಳಲು ಅವಕಾಶ ಕೊಡಬೇಕು ಮತ್ತು ವಿಶ್ವಾಸದಿಂದ ಅವರನ್ನೂ ಜೊತೆ ಕರೆದುಕೊಂಡು ಬದುಕಿನಲ್ಲಿ ಮುಂದೆ ಸಾಗಬೇಕು ಎಂಬ ಸಂದೇಶ ಸಾರಿದ ಚಿತ್ರಗಳು ಅವೆಷ್ಟೋ. ಸಮಾಜದಲ್ಲಿ ಸಹಬಾಳ್ವೆಯಷ್ಟೇ ಅಲ್ಲದೆ, ಸಂಸಾರದಲ್ಲಿಯೂ ಸಹಬಾಳ್ವೆ, ಪರಸ್ಪರ ಪ್ರೀತಿ- ವಿಶ್ವಾಸಗಳೇ ನೆಮ್ಮದಿಯ ನೆಲೆ ಎಂಬುದನ್ನು ಕೂಡ ಅಣ್ಣಾವ್ರ ತಮ್ಮ ಸ್ವಂತ ಬದುಕು ಮತ್ತು ಸಿನಿಮಾಗಳಲ್ಲಿ ತೋರಿಸಿಕೊಟ್ಟವರು.
ಸಭ್ಯತೆಯೇ ಸಂಸ್ಕೃತಿ ಎಂಬುದನ್ನು ನಾಗರಿಕ ಅಥವಾ ಅನಾಗರಿಕ ಎಂಬ ಸಾಂಸ್ಕೃತಿಕ ರಾಜಕಾರಣದ ವರಸೆಗಳನ್ನು ಮೀರಿ ಅದೊಂದು ಮನುಷ್ಯತ್ವದ ಕನಿಷ್ಠ ವರ್ತನೆ ಎಂದು ಭಾವಿಸುವುದಾದರೆ, ಡಾ. ರಾಜ್ ಅಂತಹ ಸಭ್ಯತೆಯ ಬ್ರಾಂಡ್ ಅಂಬಾಸಡರ್ ಎಂಬುದರಲ್ಲಿ ಅನುಮಾನವೇ ಇಲ್ಲ. ಅದು ಮನೆ ಮತ್ತು ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದಷ್ಟೇ ಅಲ್ಲದೆ, ಪ್ರತಿ ಜೀವಜಂತುವನ್ನೂ ಹೇಗೆ ಕಾಣಬೇಕೆಂಬ ಪಾಠಗಳನ್ನು ಅವರು ತಮ್ಮ ನಡವಳಿಕೆ ಮತ್ತು ನಟನೆಯ ಮೂಲಕವೇ ತೋರಿಸಿಕೊಟ್ಟಿದ್ದಾರೆ. ಅಂದರೆ, ರಾಜ್ ಅವರ ನಡೆನುಡಿಯ ಸಂಸ್ಕಾರ ಮನುಷ್ಯ ಜಗತ್ತನ್ನು ಮೀರಿ, ಇಡೀ ಜೀವಸಂಕುಲಕ್ಕೆ ಸಂಬಂಧಿಸಿದ್ದಾಗಿತ್ತು. ಅದು ಕೇವಲ ವೇದಪುರಾಣದ ಓದಿನಿಂದ ಬಂದ ಸಂಸ್ಕಾರವಲ್ಲ; ಬದಲಾಗಿ ಸಕಲಚರಾಚರದಲ್ಲೂ ದೇವರನ್ನು ಕಾಣುವ, ಒಳಿತನ್ನು ಕಾಣುವ ಮತ್ತು ಒಳಿತನ್ನು ಬಯಸುವ ಹೃದಯ ವೈಶಾಲ್ಯತೆ. ನೈಜ ವಿಶ್ವ ಮಾನವತೆಯ ಮನಸ್ಸಿನ ಸಂಸ್ಕಾರ.
ಅಂತಹ ಮನುಷ್ಯನೊಬ್ಬನೇ ಅಲ್ಲದೆ, ಅವನ ಸಹಿತ ಜೀವಜಗತ್ತನ್ನೂ ಒಳಗೊಂಡ ಅಂತಹ ಮಹಾ ಮಾನವೀಯತೆಯನ್ನೇ ಅವರ ಚಿತ್ರಗಳು ಸಾರಿದವು. ಮತ್ತು ಅಂತಹ ಚಿತ್ರಗಳನ್ನು ನೋಡಿ ಬೆಳೆದ ತಲೆಮಾರುಗಳು ಇಂದಿಗೂ; ಎಲ್ಲೆಡೆ ಕೋಮು, ಧರ್ಮದ ವಿಷ ತಾಂಡವವಾಡುತ್ತಿರುವ ಹೊತ್ತಲ್ಲೂ; ಅಂತಹ ವಿಷ ಎದೆಗಿಳಿಯದಂತೆ ನೋಡಿಕೊಂಡಿದ್ದಾರೆ. ಸಾಮರಸ್ಯದ ಬದುಕಿಗೆ ಬದ್ಧರಾಗಿದ್ದಾರೆ. ಆದರೆ, ಅಂಥವರ ಸಂಖ್ಯೆ ಈಗ, ತಲೆಮಾರುಗಳು ಕಳೆದಂತೆ ಕಳೆದುಹೋಗುತ್ತಿದೆ. ರಸ್ತೆಯಲ್ಲಿ ವಿಕೃತವಾಗಿ ವರ್ತಿಸುವ, ಹೆಣ್ಣುಮಕ್ಕಳೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವ, ಸಂಚಾರಿ ನಿಯಮ ಪಾಲಿಸದೆ ಅಸಭ್ಯತೆ ಮೆರೆಯುವುದನ್ನೇ ಹೆಚ್ಚುಗಾರಿಕೆ ಎಂದು ಭಾವಿಸಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದೇ ವಿಕೃತಿಗಳೇ ಮತ್ತೊಂದು ಕೋಮು, ಮತ್ತೊಂದು ಸಮುದಾಯದ ವಿರುದ್ಧದ ದ್ವೇಷವಾಗಿ, ಅಸಹನೆಯಾಗಿ ಎಲ್ಲೆಡೆ ವಿಷ ಕಕ್ಕುತ್ತಿದೆ. ಅಂತಹ ವಿಕೃತಿ ಎಂತಹ ಕುರೂಪಕ್ಕೆ ತಲುಪಿದೆ ಎಂಬುದಕ್ಕೆ ಕರೋನಾದಂತಹ ಮಹಾಮಾರಿಯ ದವಡೆಗೆ ಇಡೀ ಜಗತ್ತೇ ಸಿಕ್ಕಿ ನಲುಗುತ್ತಿರುವಾಗ ನಾವು ಅದನ್ನೂ ಕೋಮು ದ್ವೇಷದ, ಮತಾಂಧತೆಯ ಅಜೆಂಡಾ. ಆಗಿ ಬಳಸುತ್ತಿರುವುದೇ ಸಾಕ್ಷಿ.
ಮನೆಯ ಅಣ್ಣತಮ್ಮಂದಿರೊಂದಿಗೆ, ಅಕ್ಕತಂಗಿಯರೊಂದಿಗೆ ನಮ್ಮ ನಡೆನುಡಿ ಹೇಗಿರಬೇಕು ಎಂಬುದರಿಂದ ಆರಂಭವಾಗಿ ಹೊರಗೆ ಸಮಾಜದಲ್ಲಿ ನಮಗಿರಬೇಕಾದ ಸಭ್ಯತೆ ಏನು, ನಡತೆ ಏನು ಎಂಬುದಕ್ಕೆ ಡಾ. ರಾಜ್ ಒಂದು ಅಳತೆಗೋಲು ಹಾಕಿಕೊಟ್ಟಿದ್ದರು. ಆ ಕಾರಣಕ್ಕೆ ಅವರು ಕೌಟುಂಬಿಕ ಮಟ್ಟದಲ್ಲೂ, ಒಂದು ಸಮಾಜವಾಗಿ ನಾಡಿನ ಉದ್ದಗಲಕ್ಕೂ ಸಾರ್ವಕಾಲಿಕ ಮಾದರಿಯ ವ್ಯಕ್ತಿತ್ವ. ಇಡೀ ಸಮಾಜದ ಪರಸ್ಪರ ಅಪನಂಬಿಕೆ, ದ್ವೇಷ ಮತ್ತು ಸೇಡಿನಲ್ಲಿ ಬೇಯುತ್ತಿರುವ ಈ ಹೊತ್ತಿನಲ್ಲಿ ರಾಜ್ ಅವರಂಥ ವ್ಯಕ್ತಿತ್ವದ ಮಾದರಿಗಳನ್ನು ಹೊಸ ತಲೆಮಾರುಗಳಿಗೆ ತಲುಪಿಸಬೇಕಾಗಿದೆ. ಸಭ್ಯತೆ ಮತ್ತು ಘನತೆಯ ವ್ಯಕ್ತಿತ್ವ ಕೇವಲ ವ್ಯಕ್ತಿಯ ಏಳುಬೀಳನ್ನಷ್ಟೇ ಅಲ್ಲದೆ, ಇಡೀಯಾಗಿ ಒಂದು ಸಮಾಜದ ಏಳುಬೀಳನ್ನೂ ನಿರ್ಧರಿಸುತ್ತೆ, ಸಭ್ಯ ನಾಗರಿಕನಿಲ್ಲದೆ, ಸಭ್ಯ ಸಮಾಜ ರೂಪುಗೊಳ್ಳದು, ಸಭ್ಯ ಸಮಾಜವಿಲ್ಲದೆ ನೆಮ್ಮದಿಯ ಬದುಕು ಮತ್ತು ಏಳಿಗೆಯ ದೇಶಕಟ್ಟಲಾಗದು ಎಂಬ ಸರಳ ಸತ್ಯವನ್ನು ಕಲಿಸಬೇಕಿದೆ.

ಆ ಹಿನ್ನೆಲೆಯಲ್ಲಿ, ಡಾ. ರಾಜ್ ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ. ಅವರ ಸಿನಿಮಾ ಮತ್ತು ಬದುಕು ಇಡೀ ದೇಶಕ್ಕೆ ಒಂದು ಧ್ರುವತಾರೆಯಾಗಬೇಕಿದೆ. ಹಾಗಾಗಿ, ಅವರದೇ ನುಡಿಯಂತೆ, ‘ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ.. ಹೇಳೂ.. ನೀ ಮಾನವ ಕುಲಕೇ ಮುಳ್ಳಾಗುವೆಯಾ..’ ಎಂಬುದನ್ನು ಪ್ರತಿಯೊಬ್ಬರೂ ತಮಗೇ ತಾವೇ ಕೇಳಿಕೊಳ್ಳುವುದೇ ರಾಜಣ್ಣನ ಜನುಮದಿನಕ್ಕೆ ಸಲ್ಲಿಸುವ ಅರ್ಥಪೂರ್ಣ ಕೃತಜ್ಞತೆ, ಗೌರವ ಮತ್ತು ಅಭಿಮಾನ.






