ಕರೋನಾ ಕಾರಣಕ್ಕೆ ಶಾಲಾ ಪರೀಕ್ಷೆಗಳನ್ನು ನಡೆಸಬೇಡಿ ಎಂದು ಪ್ರತಿಪಕ್ಷಗಳ ನಾಯಕರು, ಶಿಕ್ಷಣ ತಜ್ಞರು, ಶಿಕ್ಷಕರು ಮತ್ತು ಪೋಷಕರು ಎಷ್ಟೇ ಆಗ್ರಹ-ವಿನಂತಿ ಮಾಡಿದರೂ ಜಗ್ಗದ ಕರ್ನಾಟಕ ಸರ್ಕಾರ ಕಡೆಗೂ ಮಕ್ಕಳ ಜೀವವನ್ನೇ ಒತ್ತೆ ಇಟ್ಟು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಆರಂಭಿಸಿಯೇ ಬಿಟ್ಟಿತು. ಮಕ್ಕಳು ಪರೀಕ್ಷೆ ಬರೆಯಲು ಸಾಧ್ಯ ಎನ್ನುವುದಾದರೆ ನಮ್ಮ ಘನ ಸಂಸದರು ಸಂಸತ್ತಿನಲ್ಲಿ ಸೇರಿ ಅಧಿವೇಶನ ನಡೆಸಿ ಜ್ವಲಂತ ಸಮಸ್ಯೆಗಳ ಬಗ್ಗೆ ಏಕೆ ಚರ್ಚೆ ಮಾಡಬಾರದು? ಆದರೆ ಕೇಂದ್ರ ಸರ್ಕಾರ ಕರೋನಾ ಪರಿಸ್ಥಿತಿಯನ್ನೇ ನೆಪವಾಗಿ ಇಟ್ಟುಕೊಂಡು ಈ ಬಾರಿಯ ಮಳೆಗಾಲದ ಅಧಿವೇಶನ ನಡೆಸದಿರಲು ಪ್ರಯತ್ನಿಸುತ್ತಿದೆ.
ಪ್ರತಿ ವರ್ಷ ಜುಲೈ ತಿಂಗಳಲ್ಲಿ ಸಂಸತ್ತಿನ ಮಳೆಗಾಲದ ಅಧಿವೇಶನ ನಡೆಯುವುದು ವಾಡಿಕೆ. ಆದರೆ ಕೇಂದ್ರ ಸರ್ಕಾರ ಕರೋನಾ ಕಾರಣ ಕೊಟ್ಟು ಅಧಿವೇಶನ ನಡೆಸುವುದಿಲ್ಲ ಎಂದು ಮನಗೊಂಡ ಕಾಂಗ್ರೆಸ್ ಈಗ ಸದ್ಯದ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸಂಸತ್ ಅಧಿವೇಶನವನ್ನು ಕರೆಯಲೇಬೇಕು ಎಂದು ಒತ್ತಾಯಿಸಿದೆ. ಪ್ರತಿ ವರ್ಷದಂತೆ ಸಂಸತ್ ಅಧಿವೇಶನ ನಡೆಸಲು ಸಾಧ್ಯವಾಗದಿರುವುದರಿಂದ ವರ್ಚ್ಯುವಲ್ ಆಗಿಯೇ ಅಧಿವೇಶನ ನಡೆಸಿ ಎಂದು ಆಗ್ರಹಿಸಿದೆ.
ಸಂಸತ್ ಅಧಿವೇಶನ ನಡೆಸುವ ಬಗ್ಗೆ ಉಪರಾಷ್ಟ್ರಪತಿಗಳೂ ಆದ ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಈಗಾಗಲೇ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಅಧಿಕಾರಿಗಳು ಸಂಸತ್ತಿನ ಉಭಯ ಸದನಗಳಲ್ಲಿ 100, ಸೆಂಟ್ರಲ್ ಹಾಲಿನಲ್ಲಿ 100 ಮತ್ತು ಕೇಂದ್ರ ಸರ್ಕಾರದ ಮತ್ತೊಂದು ಪ್ರತಿಷ್ಠಿತ ಕಟ್ಟಡ ವಿಜ್ಞಾನ ಭವನದಲ್ಲಿ 100 ಸಂಸದರಿಗೆ ಆಸನ ವ್ಯವಸ್ಥೆ ಮಾಡಬಹುದು. ಇದಲ್ಲದೆ ಸಂಸತ್ ಭವನದ ಅನೆಕ್ಸ್ ಕಟ್ಟಡ, ಲೈಬ್ರರಿ ಬಿಲ್ಡಿಂಗ್ ಗಳನ್ನೂ ಬಳಸಿಕೊಳ್ಳಬಹುದು ಎಂಬ ಸಲಹೆ ನೀಡಿದ್ದಾರೆ. ಆದರೆ ಅಧಿಕಾರಿಗಳ ಸಲಹೆಗಳನ್ನು ವೆಂಕಯ್ಯ ನಾಯ್ಡು ಮತ್ತು ಓಂ ಬಿರ್ಲಾ ಗಂಭೀರವಾಗಿ ಪರಿಗಣಿಸಿದಂತಿಲ್ಲ.
ಇದಲ್ಲದೆ ಅಧಿಕಾರಿಗಳು ‘ವರ್ಚ್ಯುವಲ್ ಆಗಿ ಅಧಿವೇಶನ ನಡೆಸುವ ಮತ್ತು ಸೆಮಿ ವರ್ಚ್ಯುವಲ್ ಆಗಿ ಅಧಿವೇಶನ ನಡೆಸುವ’ ಎರಡು ರೀತಿಯ ಪ್ರಸ್ತಾವನೆ ನೀಡಿದ್ದಾರೆ. ‘ಸಂಪೂರ್ಣವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸುವುದಕ್ಕೆ ವರ್ಚ್ಯುವಲ್ ಅಧಿವೇಶನ’ ಎಂತಲೂ ‘ಕೆಲವು ಸದಸ್ಯರು ನೇರವಾಗಿ ಮತ್ತೆ ಕೆಲವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸುವುದಕ್ಕೆ ಸೆಮಿ ವರ್ಚ್ಯುವಲ್ ಅಧಿವೇಶನ’ ಎಂದೂ ವ್ಯಾಖ್ಯಾನಿಸಿದ್ದಾರೆ. ಆದರೆ ‘ಪ್ರತಿಪಕ್ಷಗಳ ಟೀಕೆಯಿಂದ ಪಾರಾಗುವ ಏಕೈಕ ಕಾರಣಕ್ಕೆ ನಾಮಕಾವಸ್ತೆಗೆ ಸಭೆ ಮಾಡಿದ್ದಾರೆ. ಅಧಿವೇಶನ ನಡೆಸುವ ಉದ್ದೇಶ ಇಲ್ಲದ ಕಾರಣಕ್ಕಾಗಿ ಅಧಿಕಾರಿಗಳ ಈ ಪ್ರಸ್ತಾವನೆಯನ್ನು ಉದ್ದೇಶಪೂರ್ವಕವಾಗಿಯೇ ಪರಿಗಣಿಸಿಲ್ಲ’ ಎಂದು ಹೇಳಲಾಗುತ್ತಿದೆ.
ಹೀಗೆ ವೆಂಕಯ್ಯ ನಾಯ್ಡು ಮತ್ತು ಓಂ ಬಿರ್ಲಾ ಸಂಸತ್ ಅಧಿವೇಶನ ನಡೆಸುವ ಸುಳಿವು ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಹಾಗೂ ಸಂಸದ ಮನೀಷ್ ತಿವಾರಿ ಈಗ ಕೇಂದ್ರ ಸರ್ಕಾರದ ನಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತ ಮತ್ತು ಚೀನಾ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ವಾತಾವರಣವೂ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸಲೇಬೇಕಿದೆ. ಆದುದರಿಂದ ಸಂಸತ್ತಿನ ಅಧಿವೇಶನ ನಡೆಸಿ ಎಂದು ಒತ್ತಾಯಿಸಿದ್ದಾರೆ.
ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನತೆ ಉಂಟಾಗಿದೆ. ಸೈನಿಕರ ನಡುವೆ ಸಂಘರ್ಷ ಆಗಿದೆ. 20 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಚೀನಾ ದೇಶದ ಸೇನೆ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದೆ. ಈ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಬೇಕಾಗಿದೆ. ಅಲ್ಲದೆ ದೇಶದಲ್ಲಿ ಕರೋನಾ ವ್ಯಾಪಕವಾಗಿ ಹರಡುತ್ತಿದೆ. ಸರ್ಕಾರ ಕೈಚೆಲ್ಲಿ ಕುಳಿತಿದೆ. ಇದರ ಬಗ್ಗೆಯೂ ಸಮಾಲೋಚನೆ ನಡೆಸಬೇಕಾಗಿದೆ. ಲಾಕ್ಡೌನ್ ಮತ್ತು ಕರೋನಾ ಕಾರಣದಿಂದ ಆರ್ಥಿಕ ಚಟುವಟಿಕೆಗಳು ಸ್ಥಗಿತವಾಗಿವೆ. ಇಂಥ ಕಡುಕಷ್ಟದ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ನಿರಂತರವಾಗಿ 19 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿದೆ. ಅದೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಕಡಿಮೆ ಬೆಲೆಗೆ ಸಿಗುತ್ತಿದ್ದರೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದುಪ್ಪಟ್ಟು ದುಡ್ಡಿಗೆ ಪೆಟ್ರೋಲ್ ಮತ್ತು ಡೀಸೆಲ್ ಮಾರುತ್ತಾ ಬಡ ಭಾರತೀಯನ ಜೇಬಿಗೆ ಕತ್ತರಿ ಹಾಕುತ್ತಿದೆ. ಇವುಗಳ ಬಗ್ಗೆ ಕೂಡ ಚಿಂತನ ಮಂಥನ ನಡೆಯಬೇಕಿದೆ. ಆ ಕಾರಣಕ್ಕೆ ಸಂಸತ್ ಅಧಿವೇಶನ ಕರೆಯಬೇಕೆಂದು ಪವನ್ ಖೇರಾ ಒತ್ತಾಯಿಸಿದ್ದಾರೆ.
ಸುಳ್ಳು ಸುದ್ದಿ ಹರಡುವ ವಿಷಯದಲ್ಲಿ (ಕು)ಖ್ಯಾತವಾಗಿರುವ ಬಿಜೆಪಿಯ ಐಟಿ ಸೆಲ್ ‘ಹಿಂದೆ 1962ರ ಯುದ್ಧದ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಅಧಿವೇಶನ ನಡೆಸಿರಲಿಲ್ಲ’ ಎಂಬ ಸುಳ್ಳೊಂದನ್ನು ತೇಲಿಬಿಟ್ಟಿದೆ. ಬಿಜೆಪಿಯ ನಾಯಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಆಗ ಅಟಲ್ ಬಿಹಾರಿ ವಾಜಪೇಯಿ ಸಂಸತ್ ಅಧಿವೇಶನ ನಡೆಸುವಂತೆ ಪ್ರತಿಭಟನೆ ನಡೆಸಿದ್ದರು’ ಎಂದೆಲ್ಲಾ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರಾ, 1962ರ ಯುದ್ಧದ ವೇಳೆ ಅಟಲ್ ಬಿಹಾರಿ ವಾಜಪೇಯಿ ಅವರ ಮನವಿಯಂತೆ ಕಾಂಗ್ರೆಸ್ ಅಧಿವೇಶನ ನಡೆಸಿತ್ತು’ ಎಂದು ತಿರುಗೇಟು ನೀಡಿದ್ದಾರೆ. ಜೊತೆಗೆ ‘ಈಗಲೂ ಅದೇ ರೀತಿ ಪ್ರತಿಪಕ್ಷಗಳ ಮಾತಿಗೆ ಸ್ಪಂದಿಸಿ ಸಂಸತ್ ಅಧಿವೇಶನ ಕರೆಯಿರಿ’ ಎಂದು ಆಗ್ರಹಿಸಿದ್ದಾರೆ.
ಅಧಿವೇಶನ ನಡೆಸಲು ನಿರುತ್ಸಾಹ ತೋರುತ್ತಿರುವ ವೆಂಕಯ್ಯ ನಾಯ್ಡು ಮತ್ತು ಓಂ ಬಿರ್ಲಾ ಅವರಿಗೆ ಇಂಥ ‘ನಿರ್ಣಾಯಕ ಸಂದರ್ಭದಲ್ಲಿ ಸಂಸದೀಯ ಸಮಿತಿಗಳ ಸಭೆಗಳು ನಡೆಯದೇ ಇರಲು ಕಾರಣ ಏನು? ಎಂದು ಪ್ರಶ್ನಿಸಿದ್ದಾರೆ.
ಇನ್ನೊಂದೆಡೆ ಕೇಂದ್ರದ ಮಾಜಿ ಸಚಿವರೂ ಆದ ಸಂಸದ ಮನೀಷ್ ತಿವಾರಿ ‘ಸಂಸತ್ ಅಧಿವೇಶನ ನಡೆಸದೇ ಇರುವುದಕ್ಕೆ 1962ರ ಘಟನಾವಳಿಗಳನ್ನು ತಿರುಚುತ್ತಿರುವುದು ಖೇದಕರ. ವೆಂಕಯ್ಯ ನಾಯ್ಡು ಮತ್ತು ಓಂ ಬಿರ್ಲಾ ಸಂಸತ್ ಅಧಿವೇಶನದ ಹುಟ್ಟಡಗಿಸಲು ಪ್ರಯತ್ನಿಸಬಾರದು. ಸಂಸತ್ ಅಧಿವೇಶನ ನಡೆಸದಿರುವುದು ದುರದೃಷ್ಟಕರ ಎಂದಿದ್ದಾರೆ. ಜೊತೆಗೆ ರಷ್ಯಾ, ಭಾರತ, ಚೀನಾ ತ್ರಿಪಕ್ಷೀಯ ಶೃಂಗಸಭೆಯೇ ವರ್ಚ್ಯುಯಲ್ ಆಗಿ ನಡೆಯುತ್ತದೆ ಎನ್ನುವುದಾದರೆ ನಾವು ಸಂಸತ್ ಅಧಿವೇಶನ ನಡೆಸಲು ಏಕೆ ಸಾಧ್ಯವಾಗುವುದಿಲ್ಲ? ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.