ಇಂದು ವಿಶ್ವಾದ್ಯಂತ ಜನರನ್ನು ಸಂಕಷ್ಟಕ್ಕೆ ದೂಡಿರುವ ಕೋವಿಡ್ 19 ಇಡೀ ಜಗತ್ತಿಗೆ ಮಾಡಿರುವ ಆರ್ಥಿಕ ಹಾನಿ ಅಷ್ಟಿಷ್ಟಲ್ಲ. ಅದರಲ್ಲೂ ಭಾರತದಂತಹ ಅಭಿವೃದ್ದಿ ಶೀಲ ರಾಷ್ಟ್ರದಲ್ಲಿ ಈ ಸಾಂಕ್ರಮಿಕವು ಲಕ್ಷಾಂತರ ಜನರ ಬದುಕಿಗೆ ಕೊಳ್ಳಿ ಇಟ್ಟಿದೆ. ಇಡೀ ದೇಶದಲ್ಲಿ ಅತ್ಯಂತ ಹೆಚ್ಚು ಜನರು ಅವಲಂಬಿತವಾಗಿರುವುದು ಜವುಳಿ ಉದ್ಯಮದ ಮೇಲೆ. ಇಲ್ಲಿ ಸುಮಾರು 4.5 ಮಿಲಿಯನ್ ಜನರು ಪ್ರತ್ಯಕ್ಷವಾಗಿ ಮತ್ತು 6.5 ಮಿಲಿಯನ್ ಜನರು ಪರೋಕ್ಷವಾಗಿ ಉದ್ಯೋಗ ಪಡೆದಿದ್ದಾರೆ. ಇದು ದೇಶದಲ್ಲಿ 100 ಬಿಲಿಯನ್ ಡಾಲರ್ ಉದ್ಯಮವಾಗಿದ್ದು ಜಿಡಿಪಿಯಲ್ಲಿ ಶೇಕಡಾ 5 ರಷ್ಟು ಪಾಲು ಹೊಂದಿದೆ.
ಕಳೆದ ಕೆಲವು ತಿಂಗಳುಗಳಿಂದ ಭಾರತ ಮತ್ತು ಜಗತ್ತು ಆರ್ಥಿಕ ಹಿಂಜರಿತವನ್ನು ಊಹಿಸಿಕೊಳ್ಳಲಾಗುತ್ತಿಲ್ಲ. ಆದರೂ ಆರ್ಥಿಕ ದೃಷ್ಟಿಕೋನದಿಂದ, ಜವಳಿ ಉದ್ಯಮದ ಭವಿಷ್ಯವು ಒಂದು ಪ್ರಮುಖ ಕಾಳಜಿ ಆಗಿದೆ. ಕೋವಿಡ್ 19 ಏಕಾಏಕಿ ಸೃಷ್ಟಿಸಿದ ಭೀತಿಯ ಪರಿಸ್ಥಿತಿಯಿಂದಾಗಿ ವಿದೇಶದಲ್ಲಿ ಜವಳಿ ಉತ್ಪನ್ನಗಳ ಬೇಡಿಕೆ ಮತ್ತು ದೇಶೀಯ ಮಾರಾಟವು ತೀವ್ರ ಕುಸಿತಕ್ಕೀಡಾಗಿದೆ. ಬಹುತೇಕ ಎಲ್ಲ ರೀತಿಯ ಜವಳಿ-ಸಂಬಂಧಿತ ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ ಮತ್ತು ಅವುಗಳನ್ನು ತೆರೆಯುವುದು ಯಾವಾಗ ಎಂದು ಯಾರಿಗೂ ಗೊತ್ತಿಲ್ಲ. ಈ ರೀತಿಯ ಗೊಂದಲಗಳ ನಡುವೆ ಲಕ್ಷಾಂತರ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ನಗದು ಬಿಕ್ಕಟ್ಟು, ಪೂರೈಕೆ ಸರಪಳಿ ಅಡಚಣೆ ಮತ್ತು ಮಾನವಶಕ್ತಿಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ವ್ಯಾಪಾರ ಸಮುದಾಯವೂ ಹಿನ್ನಡೆ ಅನುಭವಿಸುತ್ತಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಭಾರತವು ವಿಭಿನ್ನ ಸ್ಪಿಂಡಲ್ ಸಾಮರ್ಥ್ಯದ 2,000 ಕ್ಕೂ ಹೆಚ್ಚು ಸ್ಪಿನ್ನಿಂಗ್ ಗಿರಣಿಗಳನ್ನು ಹೊಂದಿದೆ. ನಿಗಮಗಳಿಂದ ನಿಯಂತ್ರಿಸಲ್ಪಡುವ ದೊಡ್ಡ ಘಟಕಗಳಲ್ಲಿನ ಕಾರ್ಮಿಕರು ಕಾರ್ಖಾನೆ ಆವರಣದ ಪಕ್ಕದಲ್ಲಿರುವ ಕಾರ್ಮಿಕರಿಗೆ ನೀಡಲಾಗಿರುವ ವಸತಿ ಗೃಹಗಳಲ್ಲಿ ವಾಸಿಸುತ್ತಾರೆ. ಹೆಚ್ಚಿನ ಕಾರ್ಮಿಕರು ಬಿಹಾರ, ಉತ್ತರ ಪ್ರದೇಶ, ಒರಿಸ್ಸಾ ಮತ್ತು ಇತರ ರಾಜ್ಯಗಳಿಂದ ವಲಸೆ ಬಂದವರು. ಪ್ರಸ್ತುತ ಅವರನ್ನು ಉದ್ಯೋಗದಾತರು ನೋಡಿಕೊಳ್ಳುತ್ತಿದ್ದಾರೆ. ಆದರೆ ಇಲ್ಲಿಂದ ಸಹಸ್ರಾರು ಕಾರ್ಮಿಕರು ತಮ್ಮ ಹುಟ್ಟೂರುಗಳಿಗೆ ಹಿಂತಿರುಗಿದ್ದು ಗಿರಣಿಗಳು ಪುನಃ ತೆರೆಯುವುದನ್ನೆ ಕಾಯುತಿದ್ದಾರೆ.
ಮೊದಲೆಲ್ಲ ಮೂರು ಶಿಫ್ಟ್ ಗಳಲ್ಲೆ ಕೆಲಸ ಮಾಡುತಿದ್ದ ಕೆಲವು ಗಿರಣಿಗಳು ಈಗ ಒಂದು ಶಿಫ್ಟ್ ಗೆ ಇಳಿದಿವೆ. ಕಚ್ಚಾ ವಸ್ತುಗಳು , ಮತ್ತು ವಿದ್ಯುತ್ ವೆಚ್ಚಗಳು ದುಬಾರಿಯೇ ಆಗಿದ್ದು ಉಳಿದ ಎಲ್ಲಾ ವೆಚ್ಚಗಳು ಗಿರಣಿ ಮಾಲೀಕರಿಗೆ ನೇರ ನಷ್ಟವಾಗಿದೆ. ಈ ಪರಿಸ್ಥಿತಿಯಲ್ಲಿ ಸಿದ್ದ ಉಡುಪು ಉದ್ಯಮವು ಕೂಡ ಬರೀ ಭಾರತದಲ್ಲೆ ಅಲ್ಲ ಪ್ರಪಂಚದಾದ್ಯಂತ ತೀವ್ರವಾಗಿ ಹೊಡೆತ ಅನುಭವಿಸಿದೆ. ನೂರಾರು ಮಾರಾಟ ಮಳಿಗೆಗಳು ಮುಚ್ಚಲ್ಪಟ್ಟಿವೆ ಮತ್ತು ಬಹುತೇಕ ಎಲ್ಲ ಖರೀದಿದಾರರು ದೊಡ್ಡ ದಾಸ್ತಾನುಗಳನ್ನು ಹೊಂದಿರುವ ಆರ್ಡರ್ ಗಳನ್ನು ರದ್ದುಗೊಳಿಸಿದ್ದಾರೆ ಅಥವಾ ಮುಂದೂಡುತ್ತಿದ್ದಾರೆ. ಮುಂದಿನ ಕೆಲವು ತಿಂಗಳುಗಳಲ್ಲಿ ಅವರು ಆರ್ಡರ್ ಗಳನ್ನೆ ನೀಡದಿರಬಹುದು. ಗಾರ್ಮೆಂಟ್ ಕಾರ್ಖಾನೆಗಳಲ್ಲಿ ಶೇಕಡಾ 80 ರಷ್ಟು ಉದ್ಯೋಗಿಗಳನ್ನು ಹೊಂದಿರುವ ಕೆಳವರ್ಗದ ಕೂಲಿ ಕಾರ್ಮಿಕನು ಮನೆಯಲ್ಲಿಯೇ ದಿನ ದೂಡುತಿದ್ದಾನೆ. ನಮ್ಮ ದೇಶದ ಜವುಳಿ ಮತ್ತು ಸಿದ್ದ ಉಡುಪು ಉದ್ಯಮವು ಶೇಕಡಾ 80 ರಷ್ಟು ರಫ್ತನ್ನೆ ಅವಲಂಬಿಸಿದೆ. ಆದರೆ ಭಾರತದ ಪ್ರಮುಖ ರಫ್ತು ತಾಣಗಳಾದ ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ ದೇಶಗಳಲ್ಲಿ ಉಡುಪುಗಳಿಗೆ ಬೇಡಿಕೆ ಇಲ್ಲ ಎಂದು ರಫ್ತುದಾರರು ಹೇಳುತಿದ್ದಾರೆ. ಈ ದೇಶಗಳು ಯಾವಾಗ ಸಾಮಾನ್ಯ ಜೀವನಕ್ಕೆ ಮರಳುತ್ತವೆ ಎಂದು ಹೇಳುವುದು ಕಠಿಣವಾಗಿದೆ,
ಯಂತ್ರೋಪಕರಣಗಳ ಉತ್ಪಾದನೆ ಪ್ರಾರಂಭವಾದ ನಂತರವೂ ಗ್ರಾಹಕರು ವಿತರಣೆಯನ್ನು ಸ್ವೀಕರಿಸಲು ಒಂದೆರಡು ತಿಂಗಳು ತೆಗೆದುಕೊಳ್ಳುತ್ತದೆ. ಅಂತರರಾಷ್ಟ್ರೀಯ ಜವಳಿ ತಯಾರಕರ ಒಕ್ಕೂಟದ (ಐಟಿಎಂಎಫ್) ಇತ್ತೀಚಿನ ಸಮೀಕ್ಷೆಯ ಪ್ರಕಾರ, ವಿಶ್ವಾದ್ಯಂತ ಸರಾಸರಿ 50 ಪ್ರತಿಶತದಷ್ಟು ಆರ್ಡರ್ ಗಳು ಕುಸಿದಿವೆ ಮತ್ತು ಮುಂದಿನ ವರ್ಷದಲ್ಲಿ ನಿರೀಕ್ಷಿತ ವಹಿವಾಟು 2019 ರ ಅಂಕಿ ಅಂಶಗಳಿಗಿಂತ ಶೇಕಡಾ 30 ರಷ್ಟು ಕಡಿಮೆಯಾಗುತ್ತದೆ. ಈಗ ಜವುಳಿ ಉದ್ಯಮದ ಹೊಸ ಸವಾಲುಗಳೆಂದರೆ ಪೂರೈಕೆಯ ಕೊರತೆ, ಲಿಕ್ವಿಡಿಟಿಯ ಮತ್ತು ಬೇಡಿಕೆಯ ಕುಸಿತ ಆಗಿದೆ.ಈಗ ಕಲಿಯಬೇಕಾದ ಮತ್ತೊಂದು ಪಾಠವೆಂದರೆ ಕಚ್ಚಾ ವಸ್ತುಗಳ ಪೂರೈಕೆಗಾಗಿ ಒಂದೇ ಮೂಲವನ್ನು ಅವಲಂಬಿಸಬಾರದು ಮತ್ತು ಸ್ಥಳೀಕರಣ ಮತ್ತು ವೇರಿಯಬಲ್-ವೆಚ್ಚದ ಮಾದರಿಗಳತ್ತ ಸಾಗುವುದು. ಅನೇಕ ಜಾಗತಿಕ ಕಂಪನಿಗಳು ಚೀನಾದಿಂದ ಭಾರತವನ್ನು ಒಳಗೊಂಡಂತೆ ಇತರ ದೇಶಗಳಿಗೆ ಖರೀದಿಯನ್ನು ಬದಲಾಯಿಸುತ್ತವೆ. ಆಹಾರ ಮತ್ತು ಬಟ್ಟೆ ಪ್ರಮುಖ ಖರೀದಿಗಳಾಗಿ ಮುಂದುವರಿಯುವುದರಿಂದ, ಈ ಉದ್ಯಮಕ್ಕೆ ಯಾವಾಗಲೂ ಭರವಸೆ ಇರುತ್ತದೆ.
ಆದರೆ ನಮ್ಮಲ್ಲೊಂದು ಪ್ರಶ್ನೆ ಈಗ ಮೂಡುವುದು ಏನೆಂದರೆ, ವಿವಿಧ ಕ್ಷೇತ್ರಗಳ ಚೇತರಿಕೆಗೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಅವರು ಘೋಷಿಸಿದ 20 ಲಕ್ಷ ಕೋಟಿ ರೂಪಾಯಿ ಮೊತ್ತದ ಪ್ಯಾಕೇಜ್ ಕತೆ ಏನಾಯ್ತು? ಇತ್ತೀಚೆಗಿನ ವರದಿಗಳ ಪ್ರಕಾರ ಕೇಂದ್ರ ದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಘೋಷಿಸಿದ ಪ್ಯಾಕೇಜ್ ನ ಶೇಕಡಾ ಹತ್ತರಷ್ಟೂ ಇನ್ನೂ ಬಿಡುಗಡೆಗೊಂಡಿಲ್ಲ. ಅಂದರೆ ಕಳೆದ ಮೇ ತಿಂಗಳಿನಲ್ಲಿ ಘೋಷಿಸಿದ ಮೊತ್ತವು 7 ತಿಂಗಳಾದರೂ ಇನ್ನೂ ತಲುಪದಿರುವುದು ಆಡಳಿತ ವೈಫಲ್ಯದ ಲೋಪವನ್ನು ಎತ್ತಿ ತೋರಿಸುತ್ತಿದೆ.
ಈ ವೈಫಲ್ಯದಿಂದಾಗಿ ನಮ್ಮ ರಾಜ್ಯದ ರಾಮನಗರದಲ್ಲಿರುವ ಅರವಿಂದ್ ಫ್ಯಾಷನ್ಸ್ ಸಿದ್ದ ಉಡುಪು ಘಟಕವು ಇನ್ನೂ ಬಾಗಿಲು ತೆರೆಯಲು ಸಾದ್ಯವಾಗಿಲ್ಲ ಅಷ್ಟೇ ಅಲ್ಲ ದೀರ್ಘಾವಧಿಗೆ ಬಾಗಿಲು ಮುಚ್ಚಲು ಯೋಜಿಸಿದೆ. ಕಳೆದ 4 ತಿಂಗಳ ಹಿಂದೆ ಲಾಕ್ ಡೌನ್ ಸಮಯದಲ್ಲೆ ಬಾಗಿಲು ಮುಚ್ಚಿದ ಈ ಕಂಪೆನಿ ಎದುರು ಮೂರು ತಿಂಗಳಿನಿಂದಲೂ ಕಾರ್ಮಿಕರು ಧರಣಿ ಮುಷ್ಕರ ನಡೆಸುತಿದ್ದಾರೆ. ಅರವಿಂದ್ ಫ್ಯಾಷನ್ಸ್ ಜತೆಗೇ ಅರವಿಂದ್ ಮಿಲ್ಸ್ ಎಂಬ ಇದೇ ಕಂಪೆನಿಯ ಘಟಕವೂ ರಾಮನಗರದಲ್ಲೆ ಇದೆ. ಎರಡೂ ಕಾರ್ಖಾನೆಗಳಿಂದ ಸುಮಾರು ಮೂರು ಸಾವಿರಕ್ಕೂ ಮಿಕ್ಕಿ ಕಾರ್ಮಿಕರು ಇದ್ದಾರೆ. ಅದರೆ ಇವರ್ಯಾರಿಗೂ ಕಳೆದ 6 ತಿಂಗಳಿನಿಂದ ಕೆಲಸ ಇಲ್ಲ. ಇದೀಗ ಕಂಪೆನಿಯ ಅಡಳಿತ ಮಂಡಳಿ ಉಡುಪುಗಳಿಗೆ ವಿದೇಶದಲ್ಲಿ ಬೇಡಿಕೆ ಕುಸಿದಿದೆ ಎಂಬ ಕಾರಣದಿಂದ ದೀರ್ಘಾವಧಿಗೆ ಕಾರ್ಖಾನೆ ಮುಚ್ಚಲು ಮುಂದಾಗಿದೆ. ಅದರೆ ಕಾರ್ಮಿಕರ ಹಿತವನ್ನು ರಕ್ಷಿಸಬೇಕಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಣ್ಮುಚ್ಚಿ ಕುಳಿತಿವೆ.