ಚೀನಾ ಭಾರತ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದಿರುವ ಬೆನ್ನಲ್ಲಿ ಉಭಯ ದೇಶಗಳ ಸಂಬಂಧ ಸಂಪೂರ್ಣ ಹದೆಗೆಟ್ಟಿದೆ. ಉಭಯ ದೇಶಗಳು ಪರಸ್ಪರ ವಿರೋಧಾಭಾಸದಿಂದ ಕೂಡಿದ ಹೇಳಿಕೆಗಳನ್ನು ನೀಡುತ್ತಾ ಬಂದಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಭಾರತದ ಭಾಗಗಳನ್ನು ಯಾರೂ ವಶಪಡಿಸಿಕೊಂಡಿಲ್ಲ ಎಂದಿದ್ದಾರೆ. ಇದರೊಂದಿಗೆ ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ ಝಾವೋ ಲಿಜಿಯನ್, ಯೋಧರ ನಡುವೆ ಸಂಘರ್ಷ ನಡೆದ ಗಲ್ವಾನ್ ಕಣಿವೆ ಚೀನಾದ ಗಡಿಯೊಳಗೆ ಬರುತ್ತದೆಂದು ಹೇಳಿದ್ದಾರೆ.
ಜೂನ್ 19 ರಂದು ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ಕುರಿತಂತೆ ಚೀನಾದ ವಾದವನ್ನು ಹಂತಹಂತವಾಗಿ ವಿವರಿಸಿರುವ ಚೀನಾದ ವಿದೇಶಾಂಗ ವಕ್ತಾರ, ಸಂಘರ್ಷಕ್ಕೆ ಭಾರತವೇ ಕಾರಣ ಎಂದು ಆರೋಪಿಸಿದ್ದಾರೆ. ಗಲ್ವಾನ್ ಕಣಿವೆಯಲ್ಲಿ ಹಲವು ವರ್ಷಗಳಿಂದ ಚೀನಾ ಸೇನೆ ಗಸ್ತು ತಿರುಗುತ್ತಿದೆ. ಕಳೆದ ಎಪ್ರಿಲ್ ತಿಂಗಳಿಂದ ಭಾರತೀಯ ಸೇನೆ ಆ ಭಾಗಗಳಲ್ಲಿ ಬ್ಯಾರಿಕೇಡ್, ರಸ್ತೆ ನಿರ್ಮಿಸುವ ಕಾರ್ಯದಲ್ಲಿ ತೊಡಗಿ ಚೀನಾವನ್ನು ಪ್ರಚೋದಿಸಲು ಶುರುವಿಟ್ಟಿದೆ. ಮೇ 6 ರ ಮುಂಜಾನೆ ಭಾರತ ಸೇನೆ ಚೀನಾ ಭಾಗಕ್ಕೆ ಅತಿಕ್ರಮಿಸಿ ಪ್ರವೇಶಿಸಿದೆ ಎಂದು ಚೀನಾ ಆರೋಪಿಸಿದೆ.
ಗಡಿಯಲ್ಲಿ ಏರ್ಪಟ್ಟಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸಲು ಭಾರತೀಯ ಸೇನೆಯೊಂದಿಗೆ ಮಾತುಕತೆಯಲ್ಲಿ ಚೀನಾದ ಕೋರಿಕೆಯಂತೆ ಭಾರತೀಯ ಸೇನೆ ಗಡಿ ನಿಯಂತ್ರಣ ರೇಖೆ ದಾಟಿ ಬರುವುದಿಲ್ಲವೆಂದೂ ಒಪ್ಪಿಕೊಂಡಿತ್ತು. ಅದಾಗ್ಯೂ ಜೂನ್ 15ರ ಸಂಜೆ ವೇಳೆಗೆ ಭಾರತದ ಸೇನೆ ಒಪ್ಪಂದ ಮೀರಿ ಗಲ್ವಾನ್ ಕಣಿವೆ ಕಡೆ ಬಂದದ್ದಲ್ಲದೆ, ಮಾತನಾಡಲು ತೆರಳಿದ ಚೀನಾ ಸೇನೆಯ ಮೇಲೆ ಆಕ್ರಮಣ ಮಾಡಿದೆ ಎಂದು, ಅದನ್ನು ಎದುರಿಸುವಾಗ ಸಾವುನೋವುಗಳು ಸಂಭವಿಸಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಆರೋಪಿಸಿದ್ದಾರೆ.