ಸರ್ಕಾರ ಹಾಗೂ ರೈತರ ನಡುವಿನ ಜನವರಿ 4 ರ ಸಭೆಯಲ್ಲಿಯೂ ಯಾವುದೇ ತಾರ್ಕಿಕ ಅಂತ್ಯಕ್ಕೆ ಬರಲು ಸಾಧ್ಯವಾಗದ ಕಾರಣ ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾ ನಿರತ ರೈತ ಮುಖಂಡರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ (ಇಂದು) ದೆಹಲಿಯ ನಾಲ್ಕು ಭಾಗಗಳಲ್ಲಿ ಟ್ರಾಕ್ಟರ್ ಮೆರವಣಿಗೆ ನಡೆಸುವುದಾಗಿ ರೈತರು ತಿಳಿಸಿದ್ದರು.
ಜನವರಿ 7 ರಂದು ದೆಹಲಿಯ ಮುಖ್ಯ ನಾಲ್ಕು ಗಡಿ ಭಾಗದಲ್ಲಿ ಟ್ರಾಕ್ಟರ್ ಮೆರವಣಿಗೆ ಆಯೋಜಿಸಲಾಗುವುದು ಎಂದು ರೈತ ಹೋರಾಟಗಾರ, ಸ್ವರಾಜ್ ಇಂಡಿಯಾ ಮುಖಂಡ ಯೋಗೇಂದ್ರ ಯಾದವ್ ತಿಳಿಸಿದ್ದರು, ಇದು ಜನವರಿ 26 ರಂದು ನಡೆಯುವ ಟ್ರಾಕ್ಟರ್ ರ್ಯಾಲಿಯ ಟ್ರೇಲರ್ ಆಗಿರಲಿದೆ ಎಂದೂ ಅವರು ಹೇಳಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರತಿಭಟನೆಯ ಕೇಂದ್ರಬಿಂದುವಾದ ಸಿಂಘು ಗಡಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ್ದ ಯೋಗೇಂದ್ರ ಯಾದವ್ “ಜನವರಿ 7 ರಂದು ನಾವು ಪೂರ್ವ ಮತ್ತು ಪಶ್ಚಿಮ ಪೆರಿಫೆರಲ್ ಸೇರಿದಂತೆ ದೆಹಲಿಯ ನಾಲ್ಕು ಗಡಿಗಳಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸಲು ನಿರ್ಧರಿಸಿದ್ದೇವೆ. ಇದು ಜನವರಿ 26 ರ ಮೆರವಣಿಗೆಯ ಟ್ರೈಲರ್ ಆಗಿರುತ್ತದೆ” ಎಂದು ಹೇಳಿದ್ದರು.
ನೂತನ ಕೃಷಿ ಕಾನೂನುಗಳನ್ನು ರದ್ದುಪಡಿಸುವುದು ಮತ್ತು ಕನಿಷ್ಠ ಬೆಂಬಲ ಬೆಲೆಗೆ (MSP) ಕಾನೂನಿನಡಿಯಲ್ಲಿ ಖಾತರಿ ಒದಗಿಸುವುದು ಮುಂತಾದ ಬೇಡಿಕೆಗಳನ್ನು ಇಟ್ಟಿರುವ ರೈತರು ತಮ್ಮ ಬೇಡಿಕೆಯ ಭಾಗವಾಗಿ ಜನವರಿ 26 ರಂದು ಬೃಹತ್ ಟ್ರಾಕ್ಟರ್ ಮೆರವಣಿಗೆ ನಡೆಸುವುದಾಗಿ ಹಾಗೂ ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಈ ಹಿಂದೆ ತಿಳಿಸಿದ್ದರು.