ಇಂದು ಸಾಮಾಜಿಕ ತಾಣಗಳು ಮಾನವನ ಜೀವನದ ಅವಿಭಾಜ್ಯ ಅಂಗವೇ ಅಗಿದೆ. ಪ್ರತೀ ಗಂಟೆಗೋ ಇಲ್ಲ10 ನಿಮಿಷಕ್ಕೋ ತಾಣಗಳಲ್ಲಿ ಇಣುಕದಿದ್ದರೆ ಕೆಲವರಿಗೆ ಹೊತ್ತು ಹೋಗುವುದೇ ಇಲ್ಲ. ಅಷ್ಟೊಂದು ಬಿಡಲಾಗದ ಬಾಂಧವ್ಯವನ್ನು ಹೊಂದಿರುತ್ತಾರೆ. ಅದರೆ ನಾವು ನಿತ್ಯ ವೀಕ್ಷಿಸುವ , ಫಾರ್ವರ್ಡ್ ಮಾಡುವ ವೀಡಿಯೋಗಳು ಎಷ್ಟು ನೈಜತೆಯಿಂದ ಕೂಡಿವೆ ಎಷ್ಟು ಸುಳ್ಳುಗಳಿಂದ ಕೂಡಿವೆ ಎಂಬ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲದಿರುವುದು ನಿಜಕ್ಕೂ ದುರಂತ.
ಅದರಲ್ಲೂ ದೇಶದಲ್ಲಿ ಕೋವಿಡ್ 19 ಸೋಂಕಿನ ಭೀತಿ ಇಡೀ ದೇಶವನ್ನೇ ಅವರಿಸಿಕೊಂಡಿರುವ ಈ ಸಂದರ್ಭದಲ್ಲಿ ನಕಲಿ ಸುದ್ದಿಗಳ ಸೃಷ್ಟಿಕರ್ತರಿಗೆ ಹಬ್ಬವೇ ಅಗಿದೆ. ಸುಮ್ಮನೇ ನಕಲಿ ವೀಡಿಯೋವೊಂದನ್ನೋ ಇಲ್ಲವೋ ಸುದ್ದಿಯೊಂದನ್ನು ಜನಪ್ರಿಯ ಟಿವಿ ಮಾಧ್ಯಮವೊಂದರಲ್ಲಿ ಪ್ರಕಟಗೊಂಡ ಬ್ರೇಕಿಂಗ್ ನ್ಯೂಸ್ ಎಂದು ಸೃಷ್ಟಿಸುತ್ತಾರೆ. ಎಲ್ಲೋ ನಡೆದ ಘಟನೆಯ ವೀಡಿಯೋವನ್ನು ಇನ್ನೆಲ್ಲೋ ನಡೆದ ಘಟನೆ ಎಂದೂ ಶೀರ್ಷಿಕೆ ಹಾಕಿ ಪ್ರಸರಿಸುತ್ತಾರೆ. ಬಹುಶಃ ತಾವು ಜನರನ್ನೆಲ್ಲ ನಂಬಿಸಿದ್ದೇವೆ ಎಂದುಕೊಂಡು ವಿಕೃತ ಆನಂದವನ್ನೂ ಪಡೆದುಕೊಳ್ಳುತ್ತಾರೆ. ಇದು ಕ್ಷಣಿಕ ಸಮಯ ಮಾತ್ರ.
ಇತ್ತೀಚೆಗೆ ಕೋವಿಡ್ 19 ಸೋಂಕಿ ನ ಕುರಿತಂತೆ ನೂರಾರು ನಕಲಿ ಸುದ್ದಿಗಳು ವೀಡಿಯೋಗಳು ಇಂದು ಹರಿದಾಡುತ್ತಿವೆ. ಕೆಲವೊಮ್ಮೆ ಸುದಿ ಮಾದ್ಯಮಗಳೇ ಈ ನಕಲಿ ಸುದ್ದಿ ನಂಬಿ ಬೇಸ್ತು ಬೀಳುತ್ತಿವೆ. ಆದರೆ ಈ ನಕಲಿ ಸುದ್ದಿಗಳಿಂದಾಗಿ ಇಂದು ಕೋಮು ಮತ್ತು ಪ್ರಾದೇಶಿಕ ಉದ್ವಿಗ್ನತೆ ಉಂಟಾಗುತ್ತಿರುವುದು ವಿಷಾದನೀಯ.
ನಕಲಿ ಸುದ್ದಿ ಎಂಬ ಪದಕ್ಕೆ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ವ್ಯಾಖ್ಯಾನವಿಲ್ಲದಿದ್ದರೂ, ಪತ್ರಿಕೋದ್ಯಮದ ನೆಟ್ ವರ್ಕ್ ಒದಗಿಸಿದ ವ್ಯಾಖ್ಯಾನವು ಸೂಕ್ತವಾಗಿದೆ . ಇದು ನಕಲಿ ಸುದ್ದಿಗಳನ್ನು ಸುದ್ದಿ ಎಂದು ಗ್ರಹಿಸುವ ಮಾಹಿತಿ, ಇದನ್ನು ಉದ್ದೇಶಪೂರ್ವಕವಾಗಿ ರಚಿಸಲಾಗಿದೆ ಮತ್ತು ಇತರರನ್ನು ಸುಳ್ಳನ್ನು ನಂಬುವಂತೆ ಅಥವಾ ಪರಿಶೀಲಿಸಬಹುದಾದ ಸಂಗತಿಗಳನ್ನು ಅನುಮಾನಿಸುವಂತೆ ಮೋಸಗೊಳಿಸುವ ಉದ್ದೇಶದಿಂದ ಪ್ರಸಾರ ಮಾಡಲಾಗಿದೆ ಎಂದು ವ್ಯಾಖ್ಯಾನಿಸುತ್ತದೆ.

ಪ್ರತಿದಿನ, ರೋಗಗಳಿಗೆ ಸುಳ್ಳು ಪರಿಹಾರಗಳನ್ನು ಉತ್ತೇಜಿಸುವ ನೂರಾರು ನಕಲಿ ಸುದ್ದಿ ಸಂದೇಶಗಳು, ಚಿತ್ರಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಪ್ರಪಂಚದಾದ್ಯಂತ ಸಾವಿರಾರು ಜನರನ್ನು ಕೊಂದ ಕರೋನವೈರಸ್ ಭೀತಿಯೊಂದಿಗೆ, ನಕಲಿ ಸುದ್ದಿ ಕಾರ್ಖಾನೆಗಳು ಈಗ ಕಾರ್ಯ ನಿರ್ವಹಿಸುತ್ತಿವೆ. ಈ ವೈದ್ಯಕೀಯ ನಕಲಿ ಸುದ್ದಿಗಳು ವಿಶೇಷವಾಗಿ ನಿಪಾ ವೈರಸ್ ಮತ್ತು ಪ್ರಸ್ತುತ ಕೋವಿಡ್ 19 ಸಾಂಕ್ರಾಮಿಕದಂತಹ ಭೀತಿಯ ಸಮಯದಲ್ಲಿ ಮಿತಿ ಮೀರಿ ಹೆಚ್ಚಾಗುತ್ತಿವೆ. ಕೆಲವೊಂದು ನಕಲಿ ಸುದ್ದಿ ಗಳ ವಿವರವನ್ನು ಈ ಕೆಳಗೆ ನೀಡಲಾಗಿದೆ.
ವೈದ್ಯಕೀಯ ಸಲಹೆ ರೂಪದಲ್ಲಿರುವ ಈ ನಕಲಿ ಸುದ್ದಿಗಳು ಮನೆಮದ್ದುಗಳಿಂದ ವಿಟಮಿನ್ ಸಿ ಸೇವನೆಯನ್ನು ಹೆಚ್ಚಿಸುವುದು ಮತ್ತು ಬಿಸಿ ನಿಂಬೆ ನೀರನ್ನು ಸೇವಿಸುವುದು, ಇದಕ್ಕೆ ಖ್ಯಾತ ವೈದ್ಯಕೀಯ ತಜ್ಞ ಡಾ. ದೇವಿ ಶೆಟ್ಟಿಯವರ ನಕಲಿ ಧ್ವನಿಯನ್ನು ಸೃಷ್ಟಿಸಿ ಪ್ರಸಾರ ಮಾಡಲಾಗಿದೆ. ಇದು ಕರೋನವೈರಸ್ ನ ಪರೀಕ್ಷೆಗೆ ವಿರುದ್ಧವಾಗಿ ಸಲಹೆ ನೀಡುತ್ತದೆ, ಇದನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ 5,000 ಕ್ಕೂ ಹೆಚ್ಚು ಬಾರಿ ಹಂಚಿಕೊಳ್ಳಲಾಗಿದೆ.
ಮತ್ತೊಂದು ನಕಲಿ ಸುದ್ದಿಯು ದೇಶದ ಸಾವಿರಾರು ಕೋಟಿ ರೂಪಾಯಿಗಳ ಕೋಳಿ ಉದ್ಯಮವನ್ನೇ ನಾಶಪಡಿಸಿದೆ. ಇದರಿಂದಾಗಿ ಕೋಳಿ ಮಾರುಕಟ್ಟೆಯೇ ಅಲ್ಲೋಲ ಕಲ್ಲೋಲವಾಗಿದೆ. ಕೊಳಿ ಮಾಂಸದ ದರ ಪ್ರತಿ ಕೆಜಿ ಕೋಳಿಗೆ 180 ರೂಪಾಯಿಗಳಿಂದ 60-70 ರೂಪಾಯಿಗೆ ಇಳಿದಿದೆ. ದೇಶವು ಈಗಾಗಲೇ ಆರ್ಥಿಕ ಹಿಂಜರಿತದ ಕಹಿಯನ್ನು ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ, ಇದರ ಜತೆಗೇ ಈ ಸುಳ್ಳು ಸುದ್ದಿಯಿಂದಾಗಿ ದೇಶದ ಆರ್ಥಿಕತೆಯ ಮೇಲೆ ಹೊಡೆತ ಅಗಿದೆ. ಇಷ್ಟೆ ಅಲ್ಲ ಇದರಿಂದಾಗಿ ಲಕ್ಷಾಂತರ ಕೋಳಿಗಳ ಭೀಕರ ಅಮಾನವೀಯ ಹತ್ಯೆಗೆ ಕಾರಣವಾಯಿತು. ರೈತರು ಸಾವಿರಾರು ಕೋಳಿಗಳನ್ನು ಜೆಸಿಬಿಗಳ ಮೂಲಕ ದೊಡ್ಡ ಹೊಂಡಗಳಲ್ಲಿ ಹೂತುಹಾಕುತಿದ್ದಾರೆ .ಏಕೆಂದರೆ ಕೋಳಿಗಳನ್ನು ಇಟ್ಟುಕೊಂಡರೆ ಅವಕ್ಕೆ ನಿತ್ಯ ಅಹಾರವನ್ನು ಹಾಕಬೇಕಾಗುವ ನಷ್ಟದಿಂದ ತಪ್ಪಿಸಿಕೊಳ್ಳಬಹುದು ಎಂಬ ಕಾರಣಕ್ಕಾಗಿ. ಅದರೆ ಇದು ಇಷ್ಟಕ್ಕೆ ಮುಗಿಯುವುದಿಲ್ಲ, ದೇಶದ ಕುಕ್ಕುಟ ಉದ್ಯಮಕ್ಕೆ ಮೇವು ಸರಬರಾಜು ಮಾಡುವ ಮೆಕ್ಕೆ ಜೋಳ ಮತ್ತು ಸೋಯಾ ಕೃಷಿಕರೂ ದರ ಕುಸಿತದಿಂದಾಗಿ ಕಂಗಾಲಾಗಿದ್ದಾರೆ. ಏಕೆಂದರೆ ಈ ಬೆಳೆಗಳು ಅತಿಯಾಗಿ ಉದ್ಯಮಕ್ಕೆ ಬಳಕೆ ಅಗುತ್ತಿವೆ.

ಇದಲ್ಲದೆ ಕೋವಿಡ್ 19 ಸೋಂಕಿಗೆ ಗೋ ಮೂತ್ರ ಅಥವಾ ಹಸುವಿನ ಮೂತ್ರವು
ಪರಿಹಾರವಾಗಿದೆ ಎಂಬ ನಕಲಿ ಸುದ್ದಿ ವೈರಲ್ ಆಗಿದೆ. ‘ಅಖಿಲ್ ಭಾರತ್ ಹಿಂದೂ ಮಹಾಸಭಾ’ ರಾಷ್ಟ್ರ ರಾಜಧಾನಿಯಲ್ಲಿ ‘ಗೋ ಮೂತ್ರ ಕುಡಿಯುವ ಪಾರ್ಟಿಯನ್ನು ಆಯೋಜಿಸಿದರೂ ಕೂಡ ಇದನ್ನು ನಂಬಲು ವೈಜ್ಞಾನಿಕ ಕಾರಣಗಳೇನೂ ಇಲ್ಲ. ಸುಮಾರು 200 ಮಂದಿ ಭಾಗವಹಿಸಿದ್ದು ಹಸುವಿನ ಮೂತ್ರವನ್ನು ಸೇವಿಸಿದರು ಮತ್ತು ಕರೋನವೈರಸ್ ಅನ್ನು ನಿವಾರಿಸಲು ಗೋವು, ಮೂತ್ರ, ಹಾಲು, ಮೊಸರು ಮತ್ತು ತುಪ್ಪದಿಂದ ಮಾಡಿದ ಪಂಚ ಗವ್ಯ ಮಿಶ್ರಣವನ್ನು ಸೇವಿಸಿದರು. ಗೋ ಮೂತ್ರದ ಪಾರ್ಟಿಗಳು ಕೋಲ್ಕತಾ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ನಡೆದವು, ಕೋಲ್ಕತ್ತಾದಲ್ಲಿ ಹಸುವಿನ ಮೂತ್ರವನ್ನು ಸೇವಿಸಿದ ವ್ಯಕ್ತಿಯು ವಾಕರಿಕೆ ಮತ್ತು ವಾಂತಿಯಿಂದ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದನು. ನಂತರ ಪೋಲೀಸರು ಸಂಘಟಕರಾದ ಪಶ್ಚಿಮ ಬಂಗಾಳ ಬಿಜೆಪಿ ನಾಯಕ ನಾರಾಯಣ್ ಚಟರ್ಜಿಯ ವಿರುದ್ದ ಮೊಕದ್ದಮೆಯನ್ನೂ ದಾಖಲಿಸಿಕೊಂಡಿದ್ದಾರೆ.
ಕೋವಿಡ್ 19 ಅನ್ನು ಗುಣಪಡಿಸಲು ಗೋ ಮೂತ್ರ ವನ್ನು ಬಳಸಬಹುದು ಎಂದು ಅಸ್ಸಾಂನ ಸಚಿವ ಸುಮನ್ ಜರ್ಪ್ರಿಯಾ ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಘೋಷಿಸಿದರು. ಸಚಿವರ ಹೇಳಿಕೆಯನ್ನು ನಿರ್ಲಕ್ಷಿಸಬಹುದಾದರೂ, ರಾಜಕಾರಣಿಗಳು ತಮ್ಮ ಅನುಯಾಯಿಗಳ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಾರೆ ಮತ್ತು ಅವರ ನಂಬಿಕೆಗಳು ಮತ್ತು ಕಾರ್ಯಗಳ ಮೇಲೆ ಆಳವಾಗಿ ಪ್ರಭಾವ ಬೀರುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಈ ರೀತಿಯ ವ್ಯಕ್ತಿಗಳು ತಮ್ಮ ಹಸುವಿನ ಸಗಣಿ ಮತ್ತು ಗೋ ಮೂತ್ರ ಸಂಬಂಧಿತ ವಿಷಯಗಳಿಗಾಗಿ ಅತಿಯಾದ ಮಾಧ್ಯಮ ಪ್ರಚಾರವನ್ನು ಪಡೆಯುತಿದ್ದು, ಸೋಂಕನ್ನು ತಡೆಯುವ ಪ್ರಯತ್ನದಲ್ಲಿ ಲಕ್ಷಾಂತರ ಜನರು ಹಸುವಿನ ಮೂತ್ರವನ್ನು ಸೇವಿಸುವಲ್ಲಿ ಪ್ರಭಾವ ಬೀರುತ್ತದೆ . ಅಧಿಕಾರದಲ್ಲಿರುವ ಜನರು ಇಂತಹ ನಕಲಿ ಸುದ್ದಿಗಳನ್ನು ಜನರು ನಂಬದಂತೆ ಮಾಡಲು ತಮ್ಮ ಪ್ರಭಾವ ಉಪಯೋಗಿಸಿ ಆರೋಗ್ಯ ರಕ್ಷಣೆ ಮಾಡಬೇಕಿದೆ.
ವೈದ್ಯಕೀಯ ನಕಲಿ ಸುದ್ದಿಗಳು ಕೈಗಾರಿಕೆಗಳಿಂದ ಹಿಡಿದು ಮಾನವನ ಜೀವದ ತನಕ
ಹಾನಿಯನ್ನುಂಟುಮಾಡುವ ಗುಣಗಳನ್ನು ಹೊಂದಿವೆ. ಇಂತಹ ಪರಿಸ್ಥಿತಿಯಲ್ಲಿ, ಕೇಂದ್ರ ಸರ್ಕಾರವು ಪ್ರತಿ ವಾರ್ಡ್ ಮತ್ತು ಪಂಚಾಯತ್‌ಗಳಲ್ಲಿ ಸೂಕ್ತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಾಗರಿಕರು ನಕಲಿ ಸುದ್ದಿಗಳಿಗೆ ಮಾರುಹೋಗದಂತೆ ತಿಳುವಳಿಕೆ ನೀಡಬೇಕಿದೆ.
ಅಧಿಕಾರದಲ್ಲಿರುವ ವ್ಯಕ್ತಿಯು ಏನು ಮಾಡಬಹುದು ಎಂಬುದಕ್ಕೆ ಒಂದು ಗಮನಾರ್ಹ ಉದಾಹರಣೆಯೆಂದರೆ, ಐಪಿಎಸ್ ಅಧಿಕಾರಿ ರೇಮಾ ರಾಜೇಶ್ವರಿ. ನಕಲಿ ಸುದ್ದಿಗಳನ್ನು ಪ್ರಚೋದಿಸುವ ಮಾಬ್ ಲಿಂಚಿಂಗ್ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ನಡೆಯದಂತೆ ನೋಡಿಕೊಳ್ಳಲು, ತನ್ನ ಕೈಕೆಳಗಿರುವ ಅಧಿಕಾರಿಗಳಿಗೆ ಮತ್ತು ಅನಕ್ಷರಸ್ಥ ಜನರಿಗೆ ಶಿಕ್ಷಣ ನೀಡುವ ಕಾರ್ಯಕ್ರಮಗಳನ್ನು ಅವರು ಹಮ್ಮಿಕೊಂಡಿದ್ದರು. ಯಾವುದೇ ಸುದ್ದಿ ಪ್ರಸಾರವಾದಾಗ ಅದರ ಸಾಚಾತನವನ್ನು ಕಂಡು ಹಿಡಿಯಲು ಮತ್ತು ಮಾಹಿತಿಯನ್ನು ಸುಲಭವಾಗಿ ಜನತೆಗೆ ಅರ್ಥವಾಗುವಂತೆ ಮಾಡಲು ಅವರು ಜಾನಪದ ಗೀತೆಗಳ ಬಳಕೆ ಮತ್ತು ಸಾಂಪ್ರದಾಯಿಕ ಕಥೆ ಹೇಳುವ ವಿಧಾನಗಳನ್ನು ಬಳಸಿದರು.
ಇಂತಹ ಕನಿಷ್ಟ ವೆಚ್ಚದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕೇಂದ್ರ ಸರ್ಕಾರವು ಜನರನ್ನು ಸುಶಿಕ್ಷಿತಗೊಳಿಸಬಹುದಾಗಿದೆ. ಇದಕ್ಕೆ ರಾಜಕೀಯ ಇಚ್ಚಾ ಶಕ್ತಿ ಅತ್ಯವಶ್ಯಕ.