ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮೇ 7ರ ಸಂಜೆ 5 ಗಂಟೆಗೆ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 12 ಹೊಸ ಕರೋನಾ ಪ್ರಕರಣಗಳು ಕಂಡು ಬಂದಿದೆ.
ರಾಜ್ಯದಲ್ಲಿ ಒಟ್ಟು ಕರೋನಾ ಪೀಡಿತರ ಸಂಖ್ಯೆ 705 ಕ್ಕೆ ತಲುಪಿದ್ದು 355 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಸಕ್ರಿಯವಾಗಿರುವ 308 ಪ್ರಕರಣಗಳಲ್ಲಿ 302 ಮಂದಿ ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 06 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ರಾಜ್ಯದಲ್ಲಿ ಕರೋನಾ ಸೋಂಕಿನಿಂದ ಇದುವರೆಗೂ 30 ಮಂದಿ ಅಸುನೀಗಿದ್ದಾರೆ.
ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ದಾವಣಗೆರೆ, ಕಲಬುರಗಿ ಮತ್ತು ಬಾಗಲಕೋಟೆಯಲ್ಲಿ ತಲಾ ಮೂರು ಪ್ರಕರಣಗಳು ಕಂಡುಬಂದಿದ್ದು, ಬೆಳಗಾವಿ, ಬೆಂಗಳೂರು ನಗರ ಹಾಗೂ ಧಾರವಾಡದಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿದೆಯೆಂದು ಆರೋಗ್ಯ ಇಲಾಖೆ ಪ್ರಕಟಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.