ಹೊಸ ಕರೋನಾ ಪ್ರಕರಣಗಳ ಸಂಖ್ಯೆ ದಿನಗಳೆದಂತೆ ಏರುಗತಿಯಲ್ಲಿ ಸಾಗುತ್ತಿದೆ. ಕೇಂದ್ರ ಆರೋಗ್ಯ ಇಲಾಖೆ ಜುಲೈ 24 ರಂದು ಬಿಡುಗಡೆಗೊಳಿಸಿರುವ ಅಂಕಿಅಂಶದ ಪ್ರಕಾರ, ಬೆಳಗ್ಗೆ 8 ರವರೆಗೆ 49,310 ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿದೆ. ದೇಶದಲ್ಲಿ ಕಂಡು ಬಂದಿರುವ ಕರೋನಾ ಪ್ರಕರಣಗಳ ಒಟ್ಟು ಸಂಖ್ಯೆ 12 ಲಕ್ಷದ 87 ಸಾವಿರದ 945 ತಲುಪಿದೆ. ದೇಶದಲ್ಲಿ ಇದುವರೆಗೂ 30,601 ಮಂದಿ ಕರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಇದು 2.3 ಶೇಕಡಾ ಮರಣ ಪ್ರಮಾಣ ಇದೆ. ಕೋವಿಡ್ ನಿಂದ ಚೇತರಿಸಿಕೊಳ್ಳುವವರ ಪ್ರಮಾಣ ಸಮಾಧಾನಕರವಾಗಿದೆ. ಇದುವರೆಗೂ ದೇಶದಲ್ಲಿ 8,17,209 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಹೊಸ ಕರೋನಾ ಪ್ರಕರಣಗಳ ಸಂಖ್ಯೆ ಇಂದು ಕೂಡಾ 5 ಸಾವಿರದ ಗಡಿ ದಾಟಿದೆ. ಪತ್ತೆ ಹಚ್ಚಿರುವ ಒಟ್ಟು ಪ್ರಕರಣಗಳ ಸಂಖ್ಯೆ 85,870 ತಲುಪಿದೆ. ಒಟ್ಟು ದೇಶದ ಚೇತರಿಕೆಯ ಪ್ರಮಾಣಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಚೇತರಿಕೆಯ ಪ್ರಮಾಣ ತೀರಾ ಕಡಿಮೆಯಿದೆ. ಇದುವರೆಗೂ 31,347 ಮಂದಿಯಷ್ಟೇ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಅದಾಗ್ಯೂ ಕೋವಿಡ್ ಮರಣ ಪ್ರಮಾಣ ದೇಶದ ಒಟ್ಟು ಮರಣ ಪ್ರಮಾಣಕ್ಕಿಂತಲೂ ಕರ್ನಾಟಕದಲ್ಲಿ ಕಡಿಮೆಯಿದೆ. ಕರ್ನಾಟಕದ ಮರಣ ಪ್ರಮಾಣ 2 ಶೇಕಡಾ, ಅದೇ ವೇಳೆ ದೇಶದ ಮರಣ ಪ್ರಮಾಣ 2.3 ಶೇಕಡಾ ಇದೆ. ಇದುವರೆಗೂ ರಾಜ್ಯದಲ್ಲಿ 1724 ಮಂದಿ ಕರೋನಾ ಸೋಂಕಿಗೆ ಮೃತಪಟ್ಟಿದ್ದಾರೆ.