ಹಬ್ಬಗಳು ನಮ್ಮ ಸಂಸ್ಕೃತಿ ಪರಂಪರೆಯ ಪ್ರತೀಕ, ರಾಜ್ಯದಲ್ಲೇ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಕೊಡಗಿನಲ್ಲಿ ಪ್ರತೀ ವರ್ಷವೂ ಕೈಲ್ ಮುಹೂರ್ತ (ಕೊಡವ ಭಾಷೆಯಲ್ಲಿ ಕೈಲ್ ಪೊಳ್ದ್) ಹಬ್ಬವನ್ನು ಸೆಪ್ಟೆಂಬರ್ 3 ರಂದು ಸಂಬ್ರಮ ಸಡಗರಗಳಿಂದ ಆಚರಿಸಲಾಗುತ್ತಿದೆ. ಈ ಹಬ್ಬದಲ್ಲಿ ಮುಖ್ಯವಾಗಿ ಕೊಡವರ ಆಯುಧವಾದ ಕತ್ತಿ, ಕೋವಿ, ನೇಗಿಲು ಇತ್ಯಾದಿಗಳನ್ನು ಪೂಜಿಸಲಾಗುತ್ತದೆ. ಕೊಡವರ ಮೂರು ಪ್ರಮುಖ ಹಬ್ಬಗಳು ಕೈಲ್ ಪೊಳ್ದ್ , ಕಾವೇರಿ ಸಂಕ್ರಮಣ ಮತ್ತು ಹುತ್ತರಿ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಹಬ್ಬಗಳ ಸಾಲಿನಲ್ಲಿ ಮೊದಲು ಬರುವುದು ಕೈಲ್ ಪೊಳ್ದ್ ಅಂದರೆ ಇದು ಗದ್ದೆಗಳಲ್ಲಿ ನಾಟಿ ಕಾರ್ಯ ಮುಗಿಸಿ, ಬಿರುಸಿನ ಮಳೆಗಾಲವೆಲ್ಲ ಮುಗಿದ ನಂತರ ಬರುವ ಹಬ್ಬ. ಇದಾದ ನಂತರ ಅಕ್ಟೋಬರ್ ತಿಂಗಳಿನಲ್ಲಿ ಬರುವ ತುಲಾ ಸಂಕ್ರಮಣವು ಕೊಡಗಿನ ಕುಲ ದೈವ ಕಾವೇರಿ ಮಾತೆಯು ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ಕೊಡುವ ಹಬ್ಬ. ಇದರಂದು ಸಾವಿರಾರು ಜನ ಭಕ್ತರು ತಲಕಾವೇರಿಗೆ ತೆರಳಿ ಪುಣ್ಯ ಸ್ನಾನ ಮಾಡಿ ಪುನೀತರಾಗುತ್ತಾರೆ. ಮುಡಿ ತೆಗೆಸುತ್ತಾರೆ.
ನಂತರ ಭತ್ತದ ಬೆಳೆಯ ಕೊಯಿಲಿಗೂ ಮುನ್ನವೇ ಬರುವ ಹಬ್ಬವೇ ಹುತ್ತರಿ(ಕೊಡವ ಭಾಷೆಯಲ್ಲಿ ಪುತ್ತರಿ) ಹಬ್ಬ, ಕೈಲ್ ಮಹೂರ್ತ ಹಬ್ಬವು ಕೊಡಗಿನ ಜನಾಂಗದವರ ಆಯುಧ ಪೂಜೆಯೆಂದೇ ಹೇಳಲಾಗುತ್ತದೆ. ಕೊಡವ ಜನಪದ ಸಾಹಿತ್ಯ ಒಂದರ ಪ್ರಕಾರ ಕೊಡವರು ಪಾಂಡವ ವಂಶಸ್ಥರೆಂದೂ, ಅಜ್ಞಾತವಾಸದಲ್ಲಿದ್ದಾಗ ಅಡಗಿಸಿಟ್ಟಂತಹ ತಮ್ಮ ಆಯುಧಗಳನ್ನು ಸಾಂಕೇತಿಕವಾಗಿ ಪೂಜಿಸುವ ಕೊಡಗಿನ ಮೂಲನಿವಾಸಿಗಳು ಕೈಲ್ಪೊಳ್ದ್ (ಮುಹೂರ್ತ)ವನ್ನು ಆಚರಿಸುತ್ತಿರುವ ಬಗ್ಗೆ ಮೂಲಗಳು ಹೇಳುತ್ತವೆ. ಕೆಲವು ನಾಡುಗಳಲ್ಲಿ ಸಿಂಹ ಮಾಸದ 18ಕ್ಕೆ ಆಚರಿಸಿದರೆ ಹಿಂದಿನ ಕಾಲದಲ್ಲಿ ಆಯಾಯ ನಾಡಿನವರು ನಾಡು ದೇವಾಲಯದಲ್ಲಿ ಸೇರಿ ಕಣಿಯರನ್ನು ಕರೆಸಿ ಹಬ್ಬದ ದಿನವನ್ನು, ಆಯಧಪೂಜೆಯ ಮುಹೂರ್ತದ ಸಮಯವನ್ನು ಹಾಗೂ ಬೇಟೆಯ ದಿಕ್ಕನ್ನು ಕೇಳಿಸುತ್ತಿದ್ದರಂತೆ. ನಿಶ್ಚಯಿಸಿದ ದಿನದಂದು ಊರಿನ ಬೇಟೆಗಾರರೆಲ್ಲ ತಮ್ಮ ಬೇಟೆ ನಾಯಿಯೊಂದಿಗೆ ಬೇಟೆಗೆ ಹೊರಡುತ್ತಿದ್ದರು. ಬೇಟೆಯಾಡಿ ಸಿಕ್ಕ ಕಾಡುಪ್ರಾಣಿಯ ಮಾಂಸವನ್ನೆಲ್ಲ ನಿಯಮದಂತೆ ಪಾಲುಮಾಡಿ ಕೈಲ್ಪೊಳ್ದನ್ನು ಸಂಭ್ರಮಿಸುತ್ತಿದ್ದರು. ಆ ಕಾಲದಲ್ಲಿ ಹಿರಿಯರು ಹುಲಿ ಬೇಟೆಯಾಡಿ ಹುಲಿಯನ್ನು ಕೊಂದು ‘ನರಿಮಂಗಲʼ (ಕೊಂದ ಹುಲಿಯೊಂದಿಗೆ ಮದುವೆ) ಮಾಡುವ ವಿಶೇಷ ಸಂಪ್ರದಾಯವಿದ್ದ ಬಗ್ಗೆ ಹಿರಿಯರು ಹೇಳುತ್ತಾರೆ.
ವರ್ಷದ ಸೆಪ್ಟೆಂಬರ್ ತಿಂಗಳ ಮೂರನೇ ತಾರೀಕಿನಂದೇ ಕೊಡಗಿನ ಹೆಚ್ಚಿನ ಕಡೆಗಳಲ್ಲಿ ಹಬ್ಬ ಆಚರಿಸಲ್ಪಡುತ್ತಿದ್ದರೂ ನಾಲ್ಕುನಾಡ್ ಹಾಗೂ ಮುತ್ತ್ ನಾಡ್ಗಳಲ್ಲಿ ಶಾಸ್ತ್ರನೋಡಿಯೇ ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ದಿನ ನಿಶ್ಚಯಿಸುತ್ತಾರೆ. ಕೊಡಗಿನಲ್ಲಿ ಮುಂಗಾರು ಮಳೆ ಪ್ರಾರಂಭವಾದೊಡನೆ ಬೇಸಾಯ ಆರಂಭಿಸಿ ಆಗಸ್ಟ್ ಅಂತ್ಯದೊಳಗೆ ಬೇಸಾಯ ಕಾರ್ಯವೆಲ್ಲ ಸಂಪೂರ್ಣ ಮುಗಿದಿರುವದು. ಆ ಸಮಯದವರೆಗೆ ಕೊಡಗಿನವರು ತಮ್ಮ ತಮ್ಮ ಆಯುಧಗಳನ್ನು ಮನೆಯ ಕನ್ನಿಕೋಂಬರೆಯಲ್ಲಿಟ್ಟಿರುವರು. ಇದನ್ನೇ ಹಿರಿಯರು “ಕೈಲ್ಪೊಳ್ದ್ ಕೆಟ್ಟ್” ಎಂದು ಹೇಳುತ್ತಿದ್ದರು.
ಕೃಷಿ ಕಾರ್ಯ ಮುಗಿದು ಆಷಾಡ ತಿಂಗಳು ಕಳೆದ ನಂತರ ಕುಟುಂಬದವರೆಲ್ಲ ಸೇರಿ ಕೈಲ್ಪೊಳ್ದ್ ಹಬ್ಬವನ್ನು ಆಚರಿಸುವ ಸಂಪ್ರದಾಯ ಈಗಲೂ ಕೊಡಗಿನಲ್ಲಿ ನಡೆದು ಬಂದಿದೆ. ಹಬ್ಬದ ಆಚರಣೆಗೆ ಕೊಡಗಿನವರು ಎಲ್ಲೇ ಇದ್ದರೂ ತಮ್ಮ ತಾಯಿನಾಡಿಗೆ ಬಂದು ಆಚರಿಸುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ. ಹಿಂದೆ ಕಣಿಯರು ಹೇಳುವ ವ್ಯಕ್ತಿ ಕೈಲ್ಪೊಳ್ದ್ ದಿನದಂದು ಸೂರ್ಯ ಉದಯಕ್ಕೆ ಮುಂಚಿತವಾಗಿ ನಿಶ್ಚಿತ ಗಿಡವೊಂದರ ಬೆರಳು ಗಾತ್ರದ ಗೇಣುದ್ದದ ಮೂರು ತುಂಡುಗಳನ್ನು ಒಂದು ಬದಿಗೆ ಚೂಪಾಗಿ ಬಾಣ ಮಾಡಿ ಇನ್ನೊಂದು ಬದಿಗೆ ನೇರಳೆ ಎಲೆಗಳನ್ನು ಗರಿಯಂತೆ ಕಟ್ಟಿ ಊರು ‘ಮಂದ್’ಗೆ ಹೋಗಿ ಹಾಲು ಬರುವ ಮರಕ್ಕೆ ಎಸೆದು ಬರುವ ಸಂಪ್ರದಾಯವಿತ್ತು ಎಂದು ಹಿರಿಯರು ನೆನೆಸಿಕೊಳ್ಳುತ್ತಾರೆ.
ಕೈಲ್ಪೊಳ್ದ್ ದಿನದಂದು ಕುಟುಂಬದವರೆಲ್ಲ ತಮ್ಮ ಕುಟುಂಬದ ಐನ್ಮನೆಗಳಲ್ಲಿ (ಮೂಲ ಮನೆ) ಸೇರಿ ಐನ್ಮನೆಯ ಪವಿತ್ರ ಸ್ಥಾನವಾದ ನೆಲ್ಲಕ್ಕಿ ನಡುಬಾಡೆಯ ದೇವನೆಲೆಗೆ ನಮಸ್ಕರಿಸಿದ ನಂತರ ಹಿರಿಯರ ಕಾಲುಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುವರು. ನಿಶ್ಚಿತ ಸಮಯಕ್ಕೆ ನೆಲ್ಲಕ್ಕಿ ನಡುಬಾಡೆಯಲ್ಲಿ ಶುಭ್ರಗೊಳಿಸಿ ಅಲಂಕರಿಸಿಟ್ಟಂತಹ ಕೋವಿ, ಒಡಿಕತ್ತಿ, ಪೀಚೆಕತ್ತಿ, ಈಟಿ, ಬರ್ಚಿ ಆಯುಧಗಳಿಗೆಲ್ಲ ಗಂಧದ ಬೊಟ್ಟನ್ನು ಹಾಗೂ ವಿಶೇಷವಾದ ತೋಕ್ಪೂ(ನೇಂಗಿಪೂ)ವನ್ನು ಎಲ್ಲಾ ಆಯುಧಗಳಿಗಿಟ್ಟು ಶೃಂಗರಿಸಿ ದೂಪ ದೀಪಾದಿಗಳಿಂದ ಪೂಜಿಸುವರು. ಕೊಡಿಬಾಳೆ (ಬಾಳೆಲೆಯ ತುದಿ ಭಾಗ) ಎಲೆಯನ್ನು ದೇವರ ನೆಲೆಯಲ್ಲಿ ಇಟ್ಟು ಹಬ್ಬಕ್ಕೆ ಮಾಡಿದ ವಿಶೇಷ ಭೋಜನ ಮದ್ಯವನ್ನಿಟ್ಟು ದೇವರಿಗೆ ಸಮರ್ಪಿಸುವರು. ಕುಪ್ಯಚ್ಯಾಲೆ ತೊಟ್ಟಂತ ಕುಟುಂಬದ ಪಟ್ಟೆದಾರ (ಹಿರಿಯ) ಪೂಜಾ ಕೈಂಕರ್ಯವನ್ನೆಲ್ಲ ಮುಗಿಸಿ ದೇವರ ನೆಲೆಯಲ್ಲಿ ನಿಂತು “ಪ್ರತಿವರ್ಷದಂತೆ ಕೈಲ್ಪೊಳ್ದ್ ಹಬ್ಬವನ್ನು ನಡೆಸಿಕೊಂಡು ಬರುತ್ತಿರುವ ಹಾಗೆ ಈ ವರ್ಷ ಕೈಲ್ಪೊಳ್ದನ್ನು ಆಚರಿಸಲು ಕುಟುಂಬದವರೆಲ್ಲ ಇಲ್ಲಿ ಸೇರಿದ್ದೇವೆ. ಊರು, ನಾಡು ಹಾಗೂ ನಮ್ಮ ಕುಟುಂಬದವರಿಗೆಲ್ಲ ಒಳಿತನ್ನು ಮಾಡೆಂದು ಕುಲದೇವರನ್ನು ಹಾಗೂ ಗ್ರಾಮ ದೇವರನ್ನೆಲ್ಲ ನೆನೆದು ಬೇಡಿಕೊಳ್ಳುವರು.
ಆಯಧಪೂಜೆಯ ಸಂಪ್ರದಾಯ ಮುಗಿದ ನಂತರ ಕುಟುಂಬದವರೆಲ್ಲ ಹಬ್ಬ ದಿನದ ವಿಶೇಷ ಭೋಜನವನ್ನು ಸವಿಯುವರು. ನಂತರದಲ್ಲಿ ಪಟ್ಟೆದಾರರು ನೆಲ್ಲಕ್ಕಿ ನಡುಬಾಡೆಯಲ್ಲಿಟ್ಟ ಆಯುಧವನ್ನು ನೀಡುವಾಗ ಎಲ್ಲ ಕಿರಿಯರು ಪಟ್ಟೆದಾರನ ಕಾಲುಮುಟ್ಟಿ ನಮಸ್ಕರಿಸಿ ಆಶೀರ್ವಾದದೊಂದಿಗೆ ಆಯುಧವನ್ನು ಪಡೆಯುವ ಸಂಪ್ರದಾಯ. ಪಟ್ಟೆದಾರ ತೆಂಗಿನಕಾಯಿಗೆ ಮೊದಲ ಗುಂಡು ಹೊಡೆದ ನಂತರವೇ ಹಿರಿಯರು, ಕಿರಿಯರು, ಮಹಿಳೆಯರು ತೆಂಗಿನಕಾಯಿಗೆ ಗುಂಡು ಹೊಡೆದು ಶೌರ್ಯ ಪ್ರದರ್ಶಿಸುವರು. ತೆಂಗಿನಕಾಯಿಗೆ ಕಲ್ಲು ಎಸೆಯುವದು ಹಾಗೂ ‘ತೆಂಗೆಪೋರ್’ ಎಂಬ ತೆಂಗಿನಕಾಯಿ ಎಳೆಯುವ ಸ್ಪರ್ಧೆ ಕೂಡ ಇರುವದು. ನಂತರದಲ್ಲಿ ಊರು ‘ಮಂದ್’ಗೆ ತೆರಳಿ ನೆರೆಯ ಊರಿನವರೆಲ್ಲ ಸೇರಿ ಮರದ ಕೊಂಬೆಗೆ ನೇತು ಹಾಕಿದ ತೆಂಗಿನಕಾಯಿಗೆ ಗುಂಡು ಹೊಡೆಯುವರು. ಕೊಡಗಿನಲ್ಲಿ ಅಲ್ಲದೆ ದೇಶ-ವಿದೇಶಗಳಲ್ಲಿ ನೆಲೆಸಿರುವ ಕೊಡಗಿನವರು ತಮ್ಮ ತಾಯಿನಾಡಿನ ಸಂಪ್ರದಾಯವನ್ನು ಮರೆಯದೆ ಕೈಲ್ಪೊಳ್ದ್ ಹಬ್ಬದಂದು ತಾಯಿನಾಡಿಗೆ ಬಂದು ತಮ್ಮ ಕುಟುಂಬದವರೊಂದಿಗೆ ಸೇರಿ ಹಬ್ಬವನ್ನು ಆಚರಿಸಿದರೆ ಮತ್ತೆ ಕೆಲವರು ಅವರವರ ನೆಲೆಯಲ್ಲಿಯೇ ಕುಟುಂಬದವರೊಂದಿಗೆ ಆಚರಿಸುತ್ತಾ ಹಿಂದಿನ ಹಬ್ಬದ ಸಂಭ್ರಮವನ್ನು ನೆನೆಸಿಕೊಳ್ಳುವರು.
ಈ ಹಬ್ಬದಲ್ಲಿ ಕೋವಿಯನ್ನು ಅಲಂಕರಿಸಲು ( ಥೋಕ್ ಪೂ ಎಂದು ಕೊಡವ ಭಾಷೆಯಲ್ಲಿ,) ಸ್ಥಳೀಯವಾಗಿ ಕೋವಿ ಹೂವು,ಇಲ್ಲವೇ ಗೌರಿ ಹೂವು ಎಂದು ಗುರುತಿಸಿಕೊಂಡಿರುವ ಹೂವನ್ನು ಕಡ್ಡಾಯವಾಗಿ ಬಳಸಲಾಗುತ್ತದೆ . ಈ ಹೂ ಮಲೆನಾಡಿನ ಕಾಫಿ ತೋಟಗಳಲ್ಲಿ ಸಾಮಾನ್ಯವಾಗಿ ಅದರಲ್ಲೂ ಮಳೆಗಾಲದಲ್ಲಿ ಜಾಸ್ತಿ ಕಂಡು ಬರುತ್ತದೆ. ಹಬ್ಬದ ದಿನ ಹೂವನ್ನು ಹೆಣ್ಣುಮಕ್ಕಳು ಕೊಯ್ದು ತರುತ್ತಾರೆ. ನಂತರ ಪೂಜೆಗೆ ಅಣಿ ಮಾಡಿ ಪರಿಕರಗಳನ್ನು ದೇವರ ಬಾಡೆ(ನಡು ಕೋಣೆಯಲ್ಲಿ) ಎಲ್ಲಾ ವ್ಯವಸ್ಥೆ ಮಾಡಿ ಇರಿಸಿ ಮುಖ್ಯವಾಗಿ ಕೋವಿಯ ನಳಿಕೆಯಲ್ಲಿ ಹೂವನ್ನು ಸಿಕ್ಕಿಸಿ ಪೂಜೆ ಮಾಡುತ್ತಾರೆ.
ಕೊಡಗಿನ ಹಬ್ಬ ಎಂದರೆ ಸದಾ ಮುಗಿಯುವುದು ಬಾಡೂಟದಿಂದಲೇ ಎಂಬುದು ಚಿರಪರಿಚಿತ. ಅದರಂತೆ ಕೈಲ್ ಮುಹೂರ್ತ ಹಬ್ಬದಲ್ಲಿ ಅತಿ ಮುಖ್ಯವಾಗಿ ಹಂದಿ ಮಾಂಸದ ಊಟ ಎಲ್ಲಾ ಮನೆಯಲ್ಲಿಯೂ ಇರುತ್ತದೆ. ಹಿಂದಿನ ಕಾಲಗಳಲ್ಲಿ ಪ್ರತಿ ಮನೆಯಲ್ಲಿಯೂ ಹಂದಿ ಸಾಕಾಣಿಕೆ ನಾಟಿ ಕೋಳಿ ಸಾಕಾಣಿಕೆ ಇರುತ್ತಿತ್ತು. ಹಬ್ಬ ಹತ್ತಿರಾಗುತ್ತಿರುವಂತೆ ಹಂದಿ ಹುಡುಕುವುದು, ಅದರ ಅಂದಾಜು ಮಾಡುವುದು ಹಾಗೂ ಅದಕ್ಕೆ ಅಡ್ವಾನ್ಸ್ ಬುಕ್ ಮಾಡುವುದು ಎಲ್ಲವೂ ನಡೆಯುತ್ತದೆ. ಹಿಂದಿನ ಕಾಲದಲ್ಲಿ ಹಂದಿಗಳನ್ನು 7-8 ಮನೆಯವರು ಖರೀದಿಸಿ ನಂತರ ಸಮನಾಗಿ ಮಾಂಸವನ್ನು ಹಂಚಿಕೊಳ್ಳುತಿದ್ದರು.ಆದರೆ ಇಂದಿನ ದಿನಗಳಲ್ಲಿ ಹಂದಿಮಾಂಸ ಸದಾ ಕೋಲ್ಡ್ ಸ್ಟೋರೇಜ್ ಗಳಲ್ಲಿ ಲಭ್ಯವಿದ್ದು ಪ್ರತಿ ಕಾರ್ಯಕ್ರಮಗಳಿಗೂ ಹಂದಿ ಕೋಳಿ ಬಳಕೆಯಾಗುತ್ತದೆ.
ಅಂದ ಹಾಗೆ ಕೊಡವರ ಕೈಲ್ ಮುಹೂರ್ತ ಹಬ್ಬಕ್ಕೆ ರಾಜ್ಯ ಸರ್ಕಾರ ಪ್ರತೀ ವರ್ಷವೂ ಕೊಡಗಿಗೆ ಅನ್ವಯಿಸುವಂತೆ ಸರ್ಕಾರಿ ರಜೆ ಘೋಷಣೆ ಮಾಡುತ್ತಿದೆ. ಇದು ಹಬ್ಬ ಆಚರಿಸಲು ಅನುಕೂಲಕಾರಿಯಾಗಿದ್ದು ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಸಂಭವಿಸಿದ ಭೂ ಕುಸಿತ , ಅತಿ ವೃಷ್ಟಿ, ಬೆಳೆ ಹಾನಿಯಿಂದಾಗಿ ಹಳೆಯ ಸಂಭ್ರಮ ಕ್ಷೀಣಿಸುತ್ತಿರುವುದು ವಿಷಾದನೀಯ.