ಪ್ರಕೃತಿ ಸೌಂದರ್ಯದ ಬೀಡು ಇತ್ತೀಚಿನ ವರ್ಷಗಳಲ್ಲಿ ತನ್ನ ಸೊಬಗಿನೊಳಗೆ ಕಲುಷಿತವನ್ನೂ ತುಂಬಿಕೊಳ್ಳುತ್ತಿದೆ. ಇದಕ್ಕೆ ಕಾರಣ ಎರ್ರಾ ಬಿರ್ರಿ ಬೆಳೆಯುತ್ತಿರುವ ಪ್ರವಾಸೋದ್ಯಮ. ಒಂದೆಡೆ ಕೃಷಿ ಉತ್ಪನ್ನಗಳಿಗೆ ಬೆಲೆ ಕುಸಿತ ಇದ್ದಾಗ ಕೊಡಗಿಗೆ ಕಾಲಿಟ್ಟಿದ್ದೇ ಪ್ರವಾಸೋದ್ಯಮ. ಇಲ್ಲಿನ ಗದ್ದೆ ತೋಟಗಳೂ ಇದಕ್ಕೆ ಪೂರಕವೇ ಅಗಿರುವ ಹಿನ್ನೆಲೆಯಲ್ಲಿ ಕೃಷಿಕರು ಪ್ರವಾಸೋದ್ಯಮವನ್ನು ಎರಡೂ ಕೈಗಳಿಂದ ಅಪ್ಪಿಕೊಂಡರು. ಜಿಲ್ಲೆಗೆ ಬರತೊಡಗಿದ ಸಾವಿರಾರು ಪ್ರವಾಸಿಗರು ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಪರಿಸರವನ್ನು ಮಲಿನಗೊಳಿಸುತ್ತಲೇ ಹೋದರು.
ಇದನ್ನು ಸ್ಥಳೀಯರು , ಮುಖ್ಯವಾಗಿ ಹೋಂ ಸ್ಟೇ, ರೆಸಾರ್ಟ್ ಮಾಲೀಕರು ತಡೆಯಬೇಕಿತ್ತು. ಆದರೆ ಅವರು ನಾಳೆ ಬರುವ ಪ್ರವಾಸಿಗರನ್ನು ಮತ್ತೆ ಸ್ವಾಗತಿಸಲು ಆ ಮೂಲಕ ಹಣ ಬಾಚಲು ಸಜ್ಜಾದರೇ ಹೊರತು ತಡೆಯುವ ಪ್ರಯತ್ನ ಮಾಡಲಿಲ್ಲ. ಬದಲಿಗೆ ಪ್ರವಾಸಿಗರ ದಟ್ಟಣೆ ಹೆಚ್ಚಾದಾಗ ಸಾಮರ್ಥ್ಯ ಮೀರಿ ಪ್ರವಾಸಿಗರನ್ನು ಉಳಿಸಿಕೊಂಡರು. ಈ ಪ್ರವಾಸಿಗರಿಂದಾಗಿ ಕೆಲವೆಡೆ ತ್ಯಾಜ್ಯವು ಚರಂಡಿ ನೀರಿನಲ್ಲಿ ಹರಿದು ಕೊನೆಗೆ ಕುಡಿಯುವ ನೀರಿನ ಮೂಲಗಳನ್ನೂ ಸೇರುವಂತಾಯಿತು. ಪ್ರವಾಸಿಗರು ಕೊಡಗಿನ ಕುಲದೈವ ತಲಕಾವೇರಿಯ ಅತ್ಯಂತ ಶುಭ್ರ ಪರಿಸರದಲ್ಲೂ ಮೋಜು, ಮಸ್ತಿ ನಡೆಸಿ, ತ್ರಿವೇಣಿ ಸಂಗಮದಂತ ಪ್ರದೇಶದಲ್ಲಿ ಅಡುಗೆ ಮಾಡಿಕೊಂಡು ಮದ್ಯದ ಬಾಟಲಿ, ಪ್ಲಾಸ್ಟಿಕ್ ತ್ಯಾಜ್ಯ ಎಸೆದು ಹೋದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರವಾಸೋದ್ಯಮದ ಲಾಭ ಬಾಚಿಕೊಳ್ಳಲು ನಾ ಮುಂದು ತಾ ಮುಂದು ಎನ್ನುತ್ತಾ ಸ್ಥಳೀಯರು ಯಂತ್ರ ಬಳಸಿ ಗುಡ್ಡ ಕೊರೆದು ನೆಲ ಸಮತಟ್ಟು ಮಾಡಿ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸಿದರು. ಇದಲ್ಲದೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಯಂತ್ರ ಬಳಸಿಕೊಂಡು ಇಂಗುಗುಂಡಿ ತೋಡಲಾಯಿತು. ಅಲ್ಲದೆ ಮಡಿಕೇರಿಯ ಕಂದಾಯ ಇಲಾಖೆಯ ನೌಕರರೊಬ್ಬರು ಬ್ರಹ್ಮಗಿರಿ ಮೀಸಲು ಅರಣ್ಯದ ಪಕ್ಕದಲ್ಲೇ ನಾಲ್ಕು ಎಕರೆ ಪೈಸಾರಿ ಭೂಮಿಯನ್ನು ಮಂಜೂರು ಮಾಡಿಸಿಕೊಂಡು ಮರಗಿಡಗಳನ್ನು ಕಡಿದು ಸಮತಟ್ಟು ಮಾಡಿದರು. ಆದರೆ ಇವರಿಗೆ ಮಂಜೂರಾಗಿರುವ ಭೂಮಿಯೇ ಬೇರೆ ಆಗಿದ್ದು ಇವರು ಸಮತಟ್ಟು ಮಾಡಿರುವುದು ಬ್ರಹ್ಮಗಿರಿ ರಕ್ಷಿತಾರಣ್ಯದಲ್ಲಿ ಎಂದು ತಿಳಿದು ಬಂದ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳು ಸದರಿ ನೌಕರನನ್ನು ಕೆಲಸದಿಂದ ಅಮಾನತ್ತು ಮಾಡಿದ್ದಾರೆ.
ಇದೆಲ್ಲದರ ನಡುವೆ ಹವಾಮಾನ ಕೂಡ ಮೊದಲಿನಂತಿಲ್ಲ. 50-60 ವರ್ಷಗಳ ಮೊದಲೆಲ್ಲ ಮಳೆಗಾಲ ಎಂದರೆ ಅದು ಭರ್ತಿ ಮೂರು ತಿಂಗಳ ಮಳೆಗಾಲ. ಜೂನ್ ತಿಂಗಳಿನಲ್ಲಿ ಆರಂಭಗೊಂಡರೆ ಧೋ ಎಂದು ಸೆಪ್ಟೆಂಬರ್ ತನಕವೂ ಸುರಿಯುತಿತ್ತು. ನಡುವೆ ಸೂರ್ಯನ ದರ್ಶನ ಇರುತ್ತಿರಲಿಲ್ಲ. ಜೋರು ಗಾಳಿ ಬೀಸಿ ಹಾನಿ ಸಂಭವಿಸುತಿದ್ದರೂ ಎಂದೂ ಮಣ್ಣು ಮತ್ತು ಗುಡ್ಡ ಕುಸಿದ ನಿದರ್ಶನ ಇಲ್ಲ. ಅದರೆ ಈಗಿನ ಮಳೆಗಾಲ ಸಂಪೂರ್ಣ ಬದಲಾಗಿದೆ. ಜುಲೈ ತಿಂಗಳು ಕೊನೆ ಆಗುತಿದ್ದರೂ ಬಿಸಿಲು ಇರುತ್ತದೆ. ನಂತರ ಒಮ್ಮಿಂದೊಮ್ಮೆಲೆ ಭೀಕರ ಮಳೆ ಸುರಿಯಲು ಆರಂಭವಾಗುತ್ತದೆ, ಪುನಃ ಬಿಸಿಲು ಬರುತ್ತದೆ, ಮಳೆಗಾಲ ಅನ್ನಿಸೋದೆ ಇಲ್ಲ ಎಂದು ಹಿರಿಯರು ಹಳೆಯದನ್ನು ನೆನಪಿಸಿಕೊಂಡು ಹೇಳುತ್ತಿರುತ್ತಾರೆ. ಹಿಂದಿನ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಿಂದ ಸಾಯುವವರ ಸಂಖ್ಯೆ ತೀರಾ ಕಡಿಮೆ. ಆದರೆ ಈಗ ಕಳೆದ ಮೂರು ವರ್ಷಗಳಿಂದ ಮಳೆಗಾಲದಲ್ಲಿ ಭೂ ಕುಸಿತ ಸಾಮಾನ್ಯವೇ ಅಗಿ ಬಿಟ್ಟಿದೆ. ಮೊದಲೇ ಗುಡ್ಡಗಾಡು ಪ್ರದೇಶದಲ್ಲಿ ಮನೆ ಕಟ್ಟಿಕೊಂಡಿರುವವರು ಮಳೆಗೆ ಅಥವಾ ಗಾಳಿಗೆ ಹೆದರಬೇಕಿಲ್ಲ ಬದಲಿಗೆ ಭೂ ಕುಸಿತಕ್ಕೆ ಹೆದರಿ ಬದುಕಬೇಕಾಗಿದೆ. ಈ ಭೂ ಕುಸಿತದಲ್ಲಿ ಸಿಲುಕಿ ಬದುಕಿ ಬಂದವರ ಸಂಖ್ಯೆ ತೀರಾ ವಿರಳ. ಏಕೆಂದರೆ ಕಾಲಿಟ್ಟರೆ 2-3 ಅಡಿ ಹೂತುಕೊಳ್ಳುವ ಈ ಭೂ ಕುಸಿತ ಸಂಪೂರ್ಣ ಪ್ರದೇಶವನ್ನೇ ಕೆಸರು ಮಾಡಿ ಬಿಡುತ್ತದೆ. ಇದರೊಳಗೆ ಸಿಕ್ಕಿದವರ ದೇಹ ಸಿಗೋದೂ ಕೂಡ ಅನುಮಾನ.
ಈಗ ಕಳೆದ ವಾರದ ತಲಕಾವೇರಿಯ ಭೂ ಕುಸಿತ ದುರಂತದಲ್ಲಿ ಭೂ ಸಮಾಧಿ ಅಗಿರುವ ಪ್ರಧಾನ ಅರ್ಚಕ ನಾರಾಯಣ ರಾವ್ ಮತ್ತು ಇತರರ ಕಥೆಯೂ ಇದೆ ಆಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಸತತ ಮೂರು ದಿನಗಳ ಪ್ರಯತ್ನ ಮಾಡಿದ್ದರೂ ಈತನಕ ಕೇವಲ ಒಬ್ಬರ ಮೃತದೇಹ ಪತ್ತೆ ಆಗಿದೆ. ಸುರಿಯುತ್ತಿರುವ ಮಳೆ ಮತ್ತು ಕೆಸರಿನೊಳಗೆ ಹೂತುಕೊಳ್ಳುತ್ತಿರುವ ಜೆಸಿಬಿ ಯಂತ್ರದಿಂದಾಗಿ ಕಾರ್ಯಾಚರಣೆಗೆ ಹಿನ್ನಡೆ ಆಗಿದೆ.
ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಭಾನುವಾರ ನದಿ ನೀರಿನ ಹರಿವು ಕಡಿಮೆ ಅಗಿರುವುದು ಎನ್ಡಿಅರ್ಎಫ್ ಕಾರ್ಯಾಚರಣೆಗೆ ಕೊಂಚ ಅನುಕೂಲವಾಗಿದೆ. 2015 ರಲ್ಲಿ ಮಾಜಿ ಮಂತ್ರಿ ಕೆ ಜೆ ಜಾರ್ಜ್ ಅವರು ಕೊಡಗು ಉಸ್ತುವಾರಿ ಮಂತ್ರಿಗಳಾಗಿದ್ದಾಗ ಭಾಗಮಂಡಲದಲ್ಲಿ ಮಡಿಕೇರಿ ರಸ್ತೆ ಪ್ರತೀ ವರ್ಷ ಮುಳುಗಡೆ ಆಗುವುದನ್ನು ತಪ್ಪಿಸಲು ಒಂದು ಸೇತುವೆ ನಿರ್ಮಾಣದ ಯೋಜನೆ ಮಂಜೂರು ಮಾಡಿಸಿದ್ದರು. ಆದರೆ ಸೇತುವೆಯ ಕಂಬಗಳು ಮಾತ್ರ ತಲೆ ಎತ್ತಿದ್ದು ಈತನಕವೂ ಸೇತುವೆ ನಿರ್ಮಾಣ ಆಗದೆ ಅಲ್ಲಿನ ಜನತೆ ಪ್ರತೀ ಮಳೆಗಾಲದಲ್ಲೂ ದ್ವೀಪದಲ್ಲಿ ಇರಬೇಕಾಗಿದೆ. ಅದರೆ ಜನ ಪ್ರತಿನಿಧಿಗಳು ಈತನಕ ತಲೆ ಕೆಡಿಸಿಕೊಂಡಿಲ್ಲ.
ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜಿಲ್ಲಾಡಳಿತದಿಂದ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು 561 ಮಂದಿಯನ್ನು ರಕ್ಷಿಸಲಾಗಿದೆ. ಮಡಿಕೇರಿ ತಾಲ್ಲೂಕಿನ ಒಟ್ಟು 3 ಪರಿಹಾರ ಕೇಂದ್ರಗಳಲ್ಲಿ 131 ಕುಟುಂಬದ 314 ಮಂದಿ ಆಶ್ರಯ ಪಡೆದಿದ್ದಾರೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಒಟ್ಟು 6 ಕೇಂದ್ರಗಳಲ್ಲಿ 83 ಕುಟುಂಬದ 252 ಮಂದಿ ಆಶ್ರಯ ಪಡೆದಿದ್ದಾರೆ. ಜಿಲ್ಲೆಯ ಒಟ್ಟು 9 ಪರಿಹಾರ ಕೇಂದ್ರಗಳಲ್ಲಿ 214 ಕುಟುಂಬದ 566 ಮಂದಿ ಆಶ್ರಯ ಪಡೆದಿದ್ದಾರೆ. ಎರಡು ದಿನ ಜಿಲ್ಲೆಯಲ್ಲಿ ಇದ್ದ ಉಸ್ತುವಾರಿ ಸಚಿವ ವಿ ಸೋಮಣ್ಣ ಪರಿಹಾರ ಕಾರ್ಯ ಚುರುಕುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಭಾನುವಾರ ರಾಜ್ಯ ಕಂದಾಯ ಸಚಿವ ಆರ್ ಅಶೋಕ್ ಮತ್ತು ಕೆಪಿಸಿಸಿ ಅದ್ಯಕ್ಷ ಡಿ ಕೆ ಶಿವಕುಮಾರ್ ಜಿಲ್ಲೆಯಲ್ಲಿ ಮಳೆ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ಥರಿಗೆ ಸಾಂತ್ವನ ಹೇಳಿದರು. ಈಗ ಜಿಲ್ಲೆಯ ಜನತೆಗೆ ಬೇಕಿರುವುದು ಭೂ ಕುಸಿತದಿಂದ ಶಾಶ್ವತ ಪರಿಹಾರ. ಇದಕ್ಕಾಗಿ ಕೊಡಗು ಅಭಿವೃದ್ದಿ ಪ್ರಾಧಿಕಾರವನ್ನು ರಚಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಆ ಮೂಲಕ ಜಿಲ್ಲೆಯಲ್ಲಿ ಅವೈಜ್ಞಾನಿಕ ಮಣ್ಣು ಅಗೆತದ ಮೂಲಕ ಕಟ್ಟಡ ನಿರ್ಮಾಣಕ್ಕೆ ಬ್ರೇಕ್ ಹಾಕುವುದರೊಂದಿಗೆ ಗುಡ್ಡಗಳ ಮೇಲೆ ಮಣ್ಣನ್ನು ಬಿಗಿಗೊಳಿಸುವಂತಹ ವೆಟ್ರಿವೇರ್ ಎಂಬ ತಳಿಯ ಹುಲ್ಲನ್ನು ಬೆಳೆಸಬೇಕಿದೆ ಎಂದು ಜನತೆಯ ಆಶಯವಾಗಿದೆ. ಅಲ್ಲದೆ ಜಿಲ್ಲೆಗೆ ಅಗಮಿಸುವ ಪ್ರವಾಸಿಗರ ಸಂಖ್ಯೆಗೂ ಕಡಿವಾಣ ಹಾಕಿ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಬೇಕಿದೆ.