ಕೃಷಿ ಕಾಯ್ದೆಗಳಿಗೆ ಕೇಂದ್ರ ಸರ್ಕಾರ ತಂದಂತಹ ತಿದ್ದುಪಡಿಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ 13ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರದೊಂದಿಗೆ 5 ಸಭೆ ನಡೆಸಿದರೂ, ಬಗ್ಗದ ಸರ್ಕಾರಕ್ಕೆ ರೈತರ ಬಲ ತೋರಿಸಲು ಇಂದು ರಾಷ್ಟ್ರವ್ಯಾಪಿ ಬಂದ್ಗೆ ಕರೆ ನೀಡಲಾಗಿದೆ.
ಈಗಾಗಲೇ ಬಂದ್ಗೆ ದೇಶದಾದ್ಯಂತ ಹಲವು ಸಂಘಟನೆಗಳು ಬೆಂಬಲ ಘೋಷಿಸಿದ್ದು, ಬಂದ್ಅನ್ನು ಯಶಸ್ವಿಗೊಳಿಸಿಯೇ ಸಿದ್ದ ಎಂದು ರೈತರು ಪಣತೊಟ್ಟಿದ್ದಾರೆ. ಈ ನಡುವೆ ಬಲವಂತದ ಬಂದ್ ಮಾಡಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ನೀಡಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಂದ್ ಕುರಿತಾಗಿ ಮಾತನಾಡಿರುವ ರೈತ ಮುಖಂಡರು, ಸಂಜೆ ಮೂರು ಗಂಟೆಯವರೆಗೂ ಹೆದ್ದಾರಿಗಳನ್ನು ತಡೆಯಲಾಗುವುದು. ಆದರೆ, ಸಾಮಾನ್ಯ ಜನರ ಜೀವನವನ್ನು ಹಾಳು ಮಾಡಲು ನಮಗೆ ಇಷ್ಟವಿಲ್ಲ. ಯಾರೂ ಕೂಡಾ ಬಲವಂತದ ಬಂದ್ ಮಾಡಲು ಮುಂದಾಗಬೇಡಿ ಎಂದು ಹೇಳಿದ್ದಾರೆ.
Also Read: ಭಾರತ್ ಬಂದ್; ರೈತ ಸಂಘಟನೆಗಳ ಕರೆಗೆ ದೇಶಾದ್ಯಂತ ವ್ಯಾಪಕ ಬೆಂಬಲ
ರೈತ ಮುಖಂಡ ಬಲ್ಬೀರ್ ಸಿಂಗ್ ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರ ನಮ್ಮ ಬೇಡಿಕೆಗಳನ್ನು ಒಪ್ಪುವವರೆಗೂ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.
ಇನ್ನೋರ್ವ ಮುಖಂಡ ಡಾ. ದರ್ಶನ್ ಪಾಲ್ ಮಾತನಾಡಿ, ರೈತರು ನಡೆಸುವ ಪ್ರತಿಭಟನೆಯ/ಹೋರಾಟದ ವೇದಿಕೆಗಳಲ್ಲಿ ಯಾವುದೇ ಪಕ್ಷದ ನಾಯಕರಿಗೆ ಅವಕಾಶವಿರುವುದಿಲ್ಲ, ಎಂದು ಸ್ಪಷ್ಟಪಡಿಸಿದ್ದಾರೆ.
“ನಮ್ಮ ಹೋರಾಟ ಕೇವಲ ಪಂಜಾಬ್ಗೆ ಮಾತ್ರ ಸೀಮಿತವಲ್ಲ. ವಿಶ್ವದಾದ್ಯಂತ ರೈತರು ನಮಗೆ ಬೆಂಬಲ ನೀಡುತ್ತಿದ್ದಾರೆ. ನಮ್ಮದು ಶಾಂತಿಯುತ ಪ್ರತಿಭಟನೆ,” ಎಂದು ರೈತ ನಾಯಕರಾದ ನಿರ್ಭಯ್ ಸಿಂಗ್ ದುಡಿಕೆ ಹೇಳಿದ್ದಾರೆ.
ಈಗಾಗಲೇ, ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶನಗಳನ್ನು ನೀಡಿದ್ದು ಬಂದ್ ಇರುವ ಕಾರಣಕ್ಕೆ ಭದ್ರತೆಯನ್ನು ಹೆಚ್ಚಿಸಲು ಸೂಚಿಸಲಾಗಿದೆ. ಇದರೊಂದಿಗೆ ಯಾರೂ ಕೂಡಾ ಬಲವಂತದ ಬಂದ್ಗೆ ಮುಂದಾಗಬಾರದೆಂದು ಎಚ್ಚರಿಕೆಯನ್ನೂ ನೀಡಿದೆ. ಸರ್ಕಾರ ನೀಡಿರುವ ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಿನಿಂದ ಪಾಲನೆ ಮಾಡಬೇಕೆಂದು ಆದೇಶ ನೀಡಿದೆ.
Also Read: ಭಾರತ್ ಬಂದ್: ರಾಜ್ಯಗಳಲ್ಲಿ ಭದ್ರತೆ ಹೆಚ್ಚಿಸಲು ನಿರ್ದೇಶನ ನೀಡಿದ ಗೃಹ ಇಲಾಖೆ