ದೇಶದಲ್ಲಿ ದಿನವೊಂದಕ್ಕೆ ಸರಾಸರಿ 40 ಸಾವಿರ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಒಟ್ಟಾರೆ ಪ್ರಕರಣಗಳ ಸಂಖ್ಯೆ 11.20 ಲಕ್ಷ ದಾಟಿದೆ. ಪ್ರಕರಣಗಳ ದುಪ್ಪಟ್ಟು ವೇಗ ಆಘಾತಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ತೀರಾ ಕುಗ್ರಾಮಗಳಲ್ಲೂ ಸೋಂಕು ಪ್ರಕರಣಗಳು ವರದಿಯಾಗತೊಡಗಿವೆ.. ಇಷ್ಟಾಗಿಯೂ ಕೇಂದ್ರ ಸರ್ಕಾರ, ದೇಶದಲ್ಲಿ ಕರೋನಾ ಸೋಂಕು ಸಮುದಾಯದ ಮಟ್ಟದಲ್ಲಿ ವ್ಯಾಪಿಸಿಲ್ಲ ಎಂಬ ಮಾತನ್ನೇ ಈಗಲೂ ಜಪಿಸುತ್ತಲೇ ಇದೆ!
ಸ್ವತಃ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಕೂಡ ದೇಶದಲ್ಲಿ ಕರೋನಾ ಸಮುದಾಯದ ಮಟ್ಟಕ್ಕೆ ಹರಡಿದೆ. ಸಮುದಾಯ ಸೋಂಕಾಗಿ ಪರಿವರ್ತನೆಯಾಗಿದೆ ಎಂದು ಹೇಳಿದೆ. ಜೊತೆಗೆ ದೇಶದ ಹಲವು ವಿಜ್ಞಾನಿಗಳು, ಸೋಂಕು ರೋಗ ತಜ್ಞರು, ವೈದ್ಯರು ಮತ್ತು ಕೆಲವು ರಾಜ್ಯ ಸರ್ಕಾರಗಳು ಕೂಡ ದೇಶದಲ್ಲಿ ಈಗಾಗಲೇ ಕೋವಿಡ್-19 ಎಂಬ ಜಾಗತಿಕ ಮಹಾಮಾರಿ ಸಮುದಾಯದ ಮಟ್ಟದಲ್ಲ ಹರಡಿದೆ. ಹಾಗಾಗಿ ದೇಶದ ಈಗ ಸೋಂಕಿನ ಅಪಾಯಕಾರಿ ಘಟ್ಟದಲ್ಲಿದೆ ಎಂದು ಹೇಳಿದ್ದಾರೆ.
ಸಮುದಾಯದ ಮಟ್ಟದಲ್ಲಿ ಸೋಂಕು ವಿಸ್ತರಿಸುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿರುವ ಐಎಂಎ ಆಸ್ಪತ್ರೆ ಮಂಡಳಿಯ ಮುಖ್ಯಸ್ಥ ಡಾ ವಿ ಕೆ ಮೊಂಗಾ ಅವರು, “ದೇಶ ಈಗ ಸ್ಫೋಟಕ ಪ್ರಮಾಣದಲ್ಲಿ ಪ್ರಕರಣಗಳ ಏರಿಕೆಗೆ ಸಾಕ್ಷಿಯಾಗಿದೆ. ನಿಜವಾಗಿಯೂ ಬಹಳ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ” ಎಂದಿದ್ದಾರೆ. ವಾರದ ಹಿಂದೆ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್ ಕೂಡ, ತಮ್ಮ ರಾಜ್ಯದಲ್ಲಿ ಈಗಾಗಲೇ ಸೋಂಕು ಸಮುದಾಯದ ಮಟ್ಟದಲ್ಲಿ ಹರಡುತ್ತಿದೆ. ರಾಜ್ಯದ ತಿರುವನಂತಪುರದ ಕರಾವಳಿ ಅಂಚಿನ ಕೆಲವು ಪ್ರದೇಶಗಳಲ್ಲಿ ರೋಗ ಆತಂಕಕಾರಿ ಪ್ರಮಾಣದಲ್ಲಿ ಹರಡುತ್ತಿದೆ ಎಂದಿದ್ದರು.
ಸಮುದಾಯದ ಮಟ್ಟದಲ್ಲಿ ಸೋಂಕು ವ್ಯಾಪಿಸುವುದು ಅಥವಾ ಕಮ್ಯುನಿಟಿ ಟ್ರಾನ್ಸ್ ಮಿಷನ್ ಎಂದರೆ; ಸಮಾಜದಲ್ಲಿ ಅಥವಾ ಜನಸಮುದಾಯದಲ್ಲಿ ಯಾರು ಯಾರಿಗೆ ಸೋಂಕು ಹರಡುತ್ತಿದ್ದಾರೆ? ಅಥವಾ ಯಾರಿಂದ ಹೇಗೆ ಸೋಂಕು ಹರಡುತ್ತಿದೆ ಎಂಬುದನ್ನು ಗುರುತಿಸುವುದೇ ದುಸ್ತರ ಎಂಬಷ್ಟರ ಮಟ್ಟಿಗೆ ಸೋಂಕು ವ್ಯಾಪಕವಾಗಿ ಹರುಡುವುದು ಎಂದರ್ಥ. ಅಂದರೆ, ಸೋಂಕಿನ ಮೂಲವನ್ನು ಪತ್ತೆ ಮಾಡುವುದಾಗಲೀ, ಸೋಂಕಿತರ ಸಂಪರ್ಕವನ್ನು ಪತ್ತೆ ಮಾಡುವುದಾಗಲೀ, ಅವರನ್ನು ಪ್ರತ್ಯೇಕಿಸುವುದಾಗಲೀ, ಅಗತ್ಯವಿರುವವರಿಗೆ ಸೂಕ್ತ ಮತ್ತು ಸಕಾಲಿಕ ಚಿಕಿತ್ಸೆ ನೀಡುವುದಾಗಲೀ ಕಷ್ಟಸಾಧ್ಯವಾದ ಸ್ಥಿತಿ. ಈ ಸೋಂಕು ನಿಯಂತ್ರಣದ ವಿಷಯದಲ್ಲಿ ಬಹಳ ನಿರ್ಣಾಯಕವಾದ ಸೋಂಕಿತರ ಸಂಪರ್ಕ ಪತ್ತೆ, ಪರೀಕ್ಷೆ, ಇತರರಿಂದ ಪ್ರತ್ಯೇಕಿಸುವುದು(ಕ್ವಾರಂಟೈನ್) ಮತ್ತಿತರ ರೋಗ ತಡೆ ವಿಧಾನಗಳನ್ನು ಅನುಸರಿಸಲು ಸೋಂಕಿತರ ಸಂಪರ್ಕ ಪತ್ತೆ ಬಹಳ ಮುಖ್ಯ. ಅದು ಸಾಧ್ಯವಾಗದೇ ಹೋದರೆ, ಸೋಂಕು ನಿಯಂತ್ರಣ ಕೂಡ ಕಷ್ಟಸಾಧ್ಯ. ಆ ಹಿನ್ನೆಲೆಯಲ್ಲಿ ಸೋಂಕು ಸಮುದಾಯದ ಸೋಂಕಾಗಿ ಪರಿವರ್ತನೆಯಾಗಿದೆಯೇ ಇಲ್ಲವೇ ಎಂಬುದು ಮಹತ್ವದ ಸಂಗತಿ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಫೆಬ್ರವರಿ ಅಂತ್ಯ ಮತ್ತು ಮಾರ್ಚ್ ಮೊದಲ ವಾರದ ಹೊತ್ತಿಗೆ ದೇಶದೊಳಗೆ ವಿದೇಶಗಳಿಂದ ವಾಪಸು ಬಂದವರಿಂದ ಹರಡಿದ ಕರೋನಾ ಪ್ರಕರಣಗಳನ್ನು ಪತ್ತೆ ಮಾಡುವುದು ಸರಳವಿತ್ತು, ಸುಲಭವೂ ಇತ್ತು. ದೇಶದೊಳಗೆ ಬರುವವರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸುವುದು ಮತ್ತು ಪರೀಕ್ಷೆ ಫಲಿತಾಂಶ ಬರುವವರೆಗೆ ಅವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಮಾಡುವುದು ಕೆಲವೇ ಲಕ್ಷ ಸಂಖ್ಯೆಯ ಜನರ ದೃಷ್ಟಿಯಿಂದ ಪ್ರಾಯೋಗಿಕವಾಗಿಯೂ ಸಾಧ್ಯವಿತ್ತು. ಆದರೆ, ನಮ್ಮ ಪ್ರಧಾನಿ ಮೋದಿ ಮತ್ತು ಅವರ ಸರ್ಕಾರ, ಆಗ ಅಂತಹ ಎಚ್ಚರಿಕೆ ವಹಿಸುವ ಬದಲು, ಆರಂಭದಲ್ಲಿ ಬಂದವರನ್ನೆಲ್ಲಾ ಯಾವ ತಪಾಸಣೆಯೂ ಇಲ್ಲದೆ ಒಳಬಿಟ್ಟುಕೊಂಡರು. ವಿದೇಶಗಳಿಂದ ಬರುವವರಿಗೆ ನಿರ್ಬಂಧ ಹೇರುವ ಕೆಲವು ದಿನಗಳ ಮುನ್ನ ವಿಮಾನ ನಿಲ್ದಾಣದಲ್ಲಿ ಕೆಲವರನ್ನು ತಪಾಸಣೆಗೊಳಪಡಿಸಿದರೂ, ಅದು ವೈರಾಣು ಪರೀಕ್ಷೆಯಲ್ಲ. ಬದಲಾಗಿ ಕೇವಲ ದೇಹದ ಉಷ್ಟಾಂಶ ನೋಡುವ ಥರ್ಮಲ್ ಸ್ಕ್ಯಾನಿಂಗ್ ಮಾತ್ರ ಮಾಡಲಾಯಿತು!
ಆಗ ದೇಶದಲ್ಲಿ ಕರೋನಾ ಸೋಂಕು ಸಮುದಾಯದ ಮಟ್ಟದಲ್ಲಿ ಹರಡಿಲ್ಲ ಎಂಬ ಸರ್ಕಾರದ ವಾದನ್ನು ಯಾರೂ ಪ್ರಶ್ನಿಸಲಿಲ್ಲ. ಅದು ವಾಸ್ತವವಾಗಿತ್ತು. ಆದರೆ, ಕೆಲವೇ ಮಂದಿಗೆ(ವಿದೇಶದಿಂದ ಮರಳಿದವರು ಮತ್ತು ಅವರ ನೇರ ಸಂಪರ್ಕಕ್ಕೆ ಬಂದ ಕೆಲವೇ ಮಂದಿ) ಅಂಟಿದ್ದ ಸೋಂಕು, ಇಂದು ದೇಶದ ಉದ್ದಗಲಕ್ಕೆ ವ್ಯಾಪಿಸಿದೆ. ಕುಗ್ರಾಮಗಳಲ್ಲಿ ಕೂಡ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ 138 ದಿನಗಳಲ್ಲಿ ದೇಶದಲ್ಲಿ 11 ಲಕ್ಷದ 20 ಸಾವಿರ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಜಾಗತಿಕವಾಗಿ ಅತಿ ಹೆಚ್ಚು ಪ್ರಕರಣಗಳಿರುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನಕ್ಕೇರಿದೆ ಮತ್ತು ಅತಿ ಹೆಚ್ಚು ಪ್ರಕರಣಗಳಿರುವ ದೇಶಗಳ ಪೈಕಿ ಅತಿ ಕಡಿಮೆ ಪ್ರಮಾಣದ ಪರೀಕ್ಷೆ(ಪ್ರತಿ ಹತ್ತು ಲಕ್ಷ ಜನರಿಗೆ) ದರಲ್ಲೇ ಈ ಪ್ರಮಾಣದ ಪ್ರಕರಣಗಳು ಪತ್ತೆಯಾಗಿವೆ ಎಂಬುದು ಆಘಾತಕಾರಿ!
ಆದರೂ ಸರ್ಕಾರ ಈಗಲೂ ಸೋಂಕು ಸಮುದಾಯದ ಮಟ್ಟಕ್ಕೆ ವ್ಯಾಪಿಸಿಲ್ಲ ಎಂಬ ನಗೆಪಾಟಲಿನ ಹೇಳಿಕೆಗಳನ್ನು ನೀಡುತ್ತಿರುವುದು ಏಕೆ? ಈ ಪ್ರಶ್ನೆ ಜನಸಾಮಾನ್ಯರನ್ನಷ್ಟೇ ಅಲ್ಲ; ಐಎಂಎ ಸೇರಿದಂತೆ ದೇಶದ ವಿವಿಧ ಆರೋಗ್ಯ ಮತ್ತು ವೈದ್ಯಕೀಯ ಸಂಬಂಧಿತ ಸಂಸ್ಥೆಗಳನ್ನೂ, ವಿಜ್ಞಾನಿ, ಆರೋಗ್ಯ ತಜ್ಞರನ್ನೂ ಕಾಡುತ್ತಿದೆ.
ದೇಶದ ಕರೋನಾ ಸೋಂಕಿನ ಕುರಿತ ಸರ್ಕಾರದ ಅಧಿಕೃತ ಅಂಕಿ ಅಂಶ ಮತ್ತು ಮಾಹಿತಿಗಳೇ ಸ್ಪಷ್ಟವಾಗಿ ಸೋಂಕು ಈಗಾಗಲೇ ಸಮುದಾಯ ಮಟ್ಟದಲ್ಲಿ ಹರಡಿದೆ ಎಂಬುದನ್ನು ಸಾರಿ ಹೇಳುತ್ತಿವೆ. ಯಾವುದೇ ಸಂದರ್ಭದಲ್ಲೂ 11 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆಯನ್ನು ಇಟ್ಟುಕೊಂಡು ಈಗಲೂ ಸೋಂಕು ಸಮುದಾಯದ ಮಟ್ಟದಲ್ಲಿ ಹರಡಿಲ್ಲ ಎಂಬುದು ಕೇವಲ ಸುಳ್ಳಲ್ಲ, ಅದು ತೀರಾ ಹಾಸ್ಯಾಸ್ಪದ ಸಂಗತಿಯಾಗುತ್ತದೆ ಎಂಬುದು ಹಲವು ಆರೋಗ್ಯ ತಜ್ಞರ ಅನಿಸಿಕೆ. ಜೊತೆಗೆ ಐಸಿಎಂಆರ್ ಗಂಭೀರ ಸ್ವರೂಪದ ಸೋಂಕಿತರ ಕುರಿತು ನಡೆಸಿದ ಸಮೀಕ್ಷೆಯಲ್ಲಿ, ಸಮೀಕ್ಷೆಗೊಳಗಾದವರ ಪೈಕಿ ಶೇ.40ರಷ್ಟು ಮಂದಿಗೆ ತಮಗೆ ಸೋಂಕು ಹೇಗೆ ತಗುಲಿತು ಎಂಬುದೇ ತಿಳಿದಿಲ್ಲ. ವಿಪರ್ಯಾಸವೆಂದರೆ, ಈ ಸಮೀಕ್ಷೆ ನಡೆಸಿದ, ಸಮೀಕ್ಷೆ ಮಾಹಿತಿ ಸಾರ್ವಜನಿಕವಾಗಿ ಬಹಿರಂಗಪಡಿಸಿರುವ ಅದೇ ಐಸಿಎಂಆರ್ ಸಂಸ್ಥೆಯೇ ಸೋಂಕು ಸಮುದಾಯದ ಮಟ್ಟದಲ್ಲಿ ಹರಡುತ್ತಿದೆ ಎಂಬುದನ್ನು ನಿರಾಕರಿಸುತ್ತಿದೆ!
ಹಾಗಾದರೆ, ದೇಶದ ಮುಂಚೂಣಿ ವೈದ್ಯಕೀಯ ಸಂಸ್ಥೆ(ಐಎಂಎ), ವಿವಿಧ ವಿಜ್ಞಾನಿಗಳು, ಆರೋಗ್ಯ ಇಲಾಖೆ ತಜ್ಞರು ಮತ್ತು ರಾಜಕೀಯ ಮುಖಂಡರು ಸರ್ಕಾರದ ಅಧಿಕೃತ ಮಾಹಿತಿಯ ಆಧಾರದ ಮೇಲೆ, ತಮ್ಮದೇ ಸಂಶೋಧನೆ, ಅನುಭವದ ಮೇಲೆ ಸೋಂಕು ದೇಶದಲ್ಲಿ ಸಮುದಾಯದ ಮಟ್ಟದಲ್ಲಿ ಹರಡುತ್ತಿದೆ ಎಂದು ಹೇಳಿದರೂ ಸರ್ಕಾರ ಆ ವಾಸ್ತವವನ್ನು ಒಪ್ಪಿಕೊಳ್ಳಲು ಇಷ್ಟು ಮೊಂಡುತನ ಮಾಡುತ್ತಿರುವುದು ಏಕೆ? ಇದನ್ನು ಒಪ್ಪಿಕೊಳ್ಳುವುದರಿಂದ ಸರ್ಕಾರಕ್ಕಾಗಲೀ, ದೇಶದ ಜನರಿಗಾಗಲೀ ಏನಾದರೂ ನಷ್ಟವಾಗುತ್ತದೆಯೇ? ಅಥವಾ ಬೇರೇನು ಕಾರಣಗಳಿವೆ ಎಂಬುದು ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.
ಈ ಪ್ರಶ್ನೆಗೆ ದೇಶದ ಖ್ಯಾತ ಸಾಂಕ್ರಾಮಿಕ ರೋಗ ತಜ್ಞ ಜಯಪ್ರಕಾಶ್ ಮುಲಿಯಿಲ್ ಕಂಡುಕೊಂಡ ಉತ್ತರ, “ನಿಜವಾದ ಕಾರಣ ಏನೆಂದು ಗೊತ್ತಿಲ್ಲ. ಆದರೆ, ಬಹುಶಃ ಆರಂಭದಲ್ಲಿ ಸೋಂಕಿತರ ಪತ್ತೆ ಮತ್ತು ಪ್ರತ್ಯೇಕಿಸುವಿಕೆಯ ವಿಷಯದಲ್ಲಿ ತಾನು ಎಡವಿದ್ದನ್ನು ಈ ಸಮುದಾಯ ಹರಡುವಿಕೆ ಖಚಿತಪಡಿಸುತ್ತದೆ ಎಂಬ ಭೀತಿ ಸರ್ಕಾರಕ್ಕೆ ಇದ್ದಂತಿದೆ. ತನ್ನ ವೈಫಲ್ಯ ಸಾರ್ವಜನಿಕ ಟೀಕೆಗೆ, ಆಕ್ರೋಶಕ್ಕೆ ಕಾರಣವಾಗಲಿದೆ ಎಂಬ ಹಿನ್ನೆಲೆಯಲ್ಲಿ ಬಹುಶಃ ಸರ್ಕಾರ ವಾಸ್ತವಾಂಶವನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲ. ಇದನ್ನು ಹೊರತುಪಡಿಸಿ, ಈ ವಿಷಯದಲ್ಲಿ ಸರ್ಕಾರ ನಿರಂತರವಾಗಿ ಸತ್ಯವನ್ನು ನಿರಾಕರಿಸುತ್ತಿರುವುದಕ್ಕೆ ಬೇರೆ ಕಾರಣ ಇದ್ದಂತಿಲ್ಲ” ಎಂದಿದ್ದಾರೆ(ದ ಇಂಡಿಯನ್ ಎಕ್ಸ್ ಪ್ರೆಸ್).
“ಜೊತೆಗೆ ಒಮ್ಮೆ ನೀವು ಸೋಂಕು ಸಮುದಾಯದ ಮಟ್ಟದಲ್ಲಿ ಹರಡುತ್ತಿದೆ ಎಂಬುದನ್ನು ಒಪ್ಪಿಕೊಂಡರೆ, ಕಂಟೈನ್ ಮೆಂಟ್ ಝೋನ್, ರೆಡ್ ಝೋನ್ ಅಥವಾ ಗ್ರೀನ್ ಝೋನ್ ನಂತಹ ಯಾವ ವಿಂಗಡಣೆಗಳಿಗೆ ಅರ್ಥವಿರುವುದಿಲ್ಲ. ಸೋಂಕು ಯಾರಿಗೆ ಹರಡಿದೆ, ಯಾರಿಂದ ಹರಡಿದೆ, ಹೇಗೆ ಹರಡಿದೆ ಎಂಬುದನ್ನೇ ಪತ್ತೆಮಾಡಲಾಗುತ್ತಿಲ್ಲ ಎಂದ ಮೇಲೆ ಈ ಝೋನುಗಳು, ಲಾಕ್ ಡೌನ್ ಗಳು ಅಗತ್ಯವೇನಿದೆ ಎಂದು ಜನ ಪ್ರಶ್ನಿಸತೊಡಗುತ್ತಾರೆ. ಹಾಗಾಗಿ ಇಂತಹ ಪರಿಸ್ಥಿತಿ ಬಾರದಿರಲಿ ಎಂಬ ಕಾರಣಕ್ಕೆ ಸರ್ಕಾರ ಈಗಲೂ ಸೋಂಕು ಸಮುದಾಯಕ್ಕೆ ಹರಡಿದೆ ಎಂಬುದನ್ನು ಒಪ್ಪಿಕೊಳ್ಳುತ್ತಿಲ್ಲ” ಎಂದೂ ಅವರು ವಿಶ್ಲೇಷಿಸಿದ್ದಾರೆ.
ಹಾಗೆ ನೋಡಿದರೆ, ಸೋಂಕು ಸಮುದಾಯದ ಮಟ್ಟದಲ್ಲಿ ಹರಡಿದೆ ಎಂಬುದನ್ನು ಸರ್ಕಾರ ಒಪ್ಪಿಕೊಂಡರೂ, ರೋಗ ನಿಯಂತ್ರಣದ ವಿಷಯದಲ್ಲಿ ವ್ಯಾಪಕ ಪರೀಕ್ಷೆ, ಕ್ವಾರಂಟೈನ ಮತ್ತು ಚಿಕಿತ್ಸೆಯಂತಹ ಮೂಲಭೂತ ಅಂಶಗಳಲ್ಲಿ ಯಾವುದೇ ಬದಲಾವಣೆಯಾಗದು. ಜನರು ಕೂಡ ಮಾಸ್ಕ್ ಧರಿಸುವಿಕೆ, ಭೌತಿಕ ಅಂತಹ ಕಾಯ್ದುಕೊಳ್ಳುವುದು ಮತ್ತು ಪದೇ ಪದೆ ಸಾಬೂನು ಬಳಸಿ ಕೈತೊಳೆದುಕೊಳ್ಳುವುದು ಮುಂತಾದ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳಲ್ಲಿ ಯಾವುದೇ ಬದಲಾವಣೆಯಾಗದು. ಹಾಗಿದ್ದರೂ ಸರ್ಕಾರ ಯಾಕೆ ಈ ವಿಷಯದಲ್ಲಿ ಇಷ್ಟೊಂದು ಮೊಂಡುತನಕ್ಕೆ ಶರಣಾಗಿದೆ ಎಂಬುದು ಆರೋಗ್ಯ ಮತ್ತು ವೈದ್ಯಕೀಯ ವಲಯದ ಪಾಲಿಗೆ ಒಗಟು.
ಆದರೆ, ರಾಜಕೀಯವಾಗಿ ನೋಡುವುದಾದರೆ, ಸರ್ಕಾರದ ಈ ಧೋರಣೆ ಒಂದು ರೀತಿಯಲ್ಲಿ ಕುಂಬಳ ಕಾಯಿ ಕಳ್ಳನ ಪಜೀತಿ. ಈಗಾಗಲೇ ಕರೋನಾ ಸೋಂಕು ದೇಶಕ್ಕೆ ಕಾಲಿಟ್ಟ ದಿನದಿಂದಲೂ ಎಲ್ಲ ಎಚ್ಚರಿಕೆಗಳ ಹೊರತಾಗಿಯೂ ಸರ್ಕಾರ ನಮಸ್ತೆ ಟ್ರಂಪ್ ನಂತಹ ಪ್ರದರ್ಶನದಲ್ಲಿ ಮುಳುಗಿ ಕರೋನಾ ಸೋಂಕಿತ ದೇಶಗಳಿಂದ ಲಕ್ಷಾಂತರ ಮಂದಿ ದೇಶದೊಳಗೆ ಬರಲು ಅವಕಾಶ ನೀಡಿತು. ಆ ಬಳಿಕವೂ ಕೂಡ ಅಂತಹವರ ಮೇಲೆ ನಿಗಾ ಇರಿಸಿ ಅವರಿಗೆ ಕರೋನಾ ವೈರಾಣು ಪರೀಕ್ಷೆ ಮಾಡುವಲ್ಲಿ ಮೈಮರೆಯಿತು. ನಂತರ ಲಾಕ್ ಡೌನ್ ಹೇರಿದಾಗಲೂ ಕೇವಲ ಶಂಖ, ಜಾಗಟೆ ಬಾರಿಸುವುದು, ದೀಪ ಹಚ್ಚುವ ಪ್ರದರ್ಶನದ ವರಸೆಗಳಿಗೆ, ಪ್ರಚಾರದ ವರಸೆಗಳಿಗೆ ಗಮನ ನೀಡಿತೇ ವಿನಃ ಆ ಅವಧಿಯಲ್ಲಿ ದೇಶದ ಆರೋಗ್ಯ ವ್ಯವಸ್ಥೆಯನ್ನು ಸೋಂಕು ಎದುರಿಸಲು ಸಜ್ಜುಗೊಳಿಸುವತ್ತ ನಿಗಾ ವಹಿಸಲಿಲ್ಲ.
ಕರೋನಾ ಸಂಕಷ್ಟದ ಹೊತ್ತಲ್ಲಿ ಜನರ ಜೀವ ಉಳಿಸಲು ಸೋಂಕು ತಡೆಯ ವಿಷಯದಲ್ಲಿ ಜಗತ್ತಿನ ದೇಶಗಳು ಆದ್ಯತೆಯ ಕೆಲಸಗಳನ್ನು ಸಮರೋಪಾದಿಯಲ್ಲಿ ಮಾಡುತ್ತಿದ್ದರೆ, ಭಾರತ ಮಾತ್ರ ಪ್ರಧಾನಮಂತ್ರಿಗಳ ಪುರಾಣ, ಪುಣ್ಯಕಥೆಗಳ ಪ್ರೇರಣೆಯ ಭಾಷಣಕ್ಕೆ ಮಾತ್ರ ಸೀಮಿತವಾಗಿತ್ತು. ಹುಸಿ ವೀರಾವೇಶದ ಮಾತುಗಳು, ತಳಮಟ್ಟಕ್ಕೆ ತಲುಪದ ಪೊಳ್ಳು ಪ್ಯಾಕೇಜುಗಳ ಭರಾಟೆಯಲ್ಲೇ ಮುಳುಗಿದ ಸರ್ಕಾರದ ವೈಫಲ್ಯಗಳ ಪರಿಣಾಮವೇ ದೇಶ ಇಂದು ಜಗತ್ತಿನ ಅತ್ಯಂತ ಅಪಾಯಕಾರಿ ಪ್ರಮಾಣದ ಸೋಂಕಿನ ಪಟ್ಟಿಯಲ್ಲಿ ರಾಕೆಟ್ ವೇಗದಲ್ಲಿ ಮೇಲೇರುತ್ತಿದೆ. ಆದರೆ, ಈ ಹಂತದಲ್ಲಿ ಕೂಡ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಇರುವ ಮತ್ತೊಂದು ಅವಕಾಶವಾಗಿ ಸರ್ಕಾರ, ಸೋಂಕು ಸಮುದಾಯಕ್ಕೆ ಹರಡದಂತೆ ತಡೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಅಪ್ಪಟ ಅವಾಸ್ತವಿಕ ಸಂಗತಿಯ ಮೊರೆ ಹೋಗಿದೆ. ಹಾಗಾಗಿಯೇ ಒಂದು ಕಡೆ ಪರೀಕ್ಷೆ ಪ್ರಮಾಣವನ್ನು ವ್ಯಾಪಕವಾಗಿ ಹೆಚ್ಚಿಸಬೇಕಿದೆ ಎನ್ನುತ್ತಲೇ ಐಸಿಎಂಆರ್, ಸೋಂಕು ಸಮುದಾಯಕ್ಕೆ ಹರಡಿಲ್ಲ ಎಂಬ ದ್ವಿಮುಖ ನೀತಿ ಅನುಸರಿಸುತ್ತಿದೆ. ಆರೋಗ್ಯ ಸಚಿವ ಡಾ ಹರ್ಷವರ್ಧನ ಕಳೆದ 150 ದಿನಗಳಿಂದಲೂ ಹೇಳಿದ ಸುಳ್ಳನ್ನೇ ಮತ್ತೆ ಮತ್ತೆ ಗಿಳಿಪಾಠ ಒಪ್ಪಿಸುತ್ತಿದ್ದಾರೆ.
ಅಂದರೆ, ಪ್ರಧಾನಿ ಮೋದಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳನ್ನು ಒಳಗೊಂಡಂತೆ ಈ ಸರ್ಕಾರಕ್ಕೆ ಸತ್ಯವನ್ನು ಜನರ ಮುಂದಿಟ್ಟು ಅವರ ಜೀವ ಉಳಿಸುವುದಕ್ಕಿಂತಲೂ ತಮ್ಮ ವೈಯಕ್ತಿಕ ವರ್ಚಸ್ಸು, ಪಕ್ಷದ ವರ್ಚಸ್ಸು ಮತ್ತು ರಾಜಕೀಯ ಅವಕಾಶಗಳನ್ನು ಕಾಯ್ದುಕೊಳ್ಳುವುದೇ ಮುಖ್ಯ. ತಮ್ಮ ವರ್ಚಸ್ಸು ಉಳಿಸಿಕೊಳ್ಳಲು, ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕರೋನಾದಂತಹ ಅಪಾಯಕಾರಿ ಸಾಂಕ್ರಾಮಿಕದ ವಿಷಯದಲ್ಲಿಯೂ ರಾಜಕೀಯ ಲಾಭ-ನಷ್ಟದ ಮೇಲೆಯೇ ತಂತ್ರ ಹೆಣೆಯಲಾಗುತ್ತಿದೆ! ಹಾಗಾಗಿ ಕರೋನಾ ಹಳ್ಳಿಹಳ್ಳಿಗೆ ಹರಡಿದ್ದರೂ ದೇಶದಲ್ಲಿ ಅದು ಇನ್ನೂ ಸಮುದಾಯದ ಮಟ್ಟದಲ್ಲಿ ಹರಡಿಲ್ಲ ಎಂದೇ ನಂಬಿಸಲಾಗುತ್ತಿದೆ!