ಸಂಕ್ರಾಂತಿ (ಉತ್ತರಾಯಣ ಆರಂಭ) ಸಮೀಪಿಸುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟ ವಿಸ್ತರಣೆ ಪೂರ್ವಭಾವಿ ಸಿದ್ಧತೆಗಳು ಜೋರಾಗುತ್ತಿದೆ. ಮೈತ್ರಿ ಸರ್ಕಾರ ಉರುಳಿಸಿ ಅನರ್ಹಗೊಂಡು ಬಳಿಕ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾದವರ ಸಚಿವರಾಗುವ ಧಾವಂತ ಮುಖ್ಯಮಂತ್ರಿಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಹೀಗಾಗಿ ಸಂಕ್ರಾಂತಿ ಮುಗಿಯುತ್ತಿದ್ದಂತೆ ಸಂಪುಟ ವಿಸ್ತರಣೆ ಮಾಡಲು ಅವರು ಮುಂದಾಗಿದ್ದು, ಇನ್ನೆರಡು ದಿನಗಳಲ್ಲಿ ವರಿಷ್ಠರನ್ನು ಭೇಟಿಯಾಗಿ ಚರ್ಚಿಸಲು ಅವರು ದೆಹಲಿಗೆ ತೆರಳಲಿದ್ದಾರೆ. ಜನವರಿ 20ರೊಳಗೆ ಸಂಪುಟ ಭರ್ತಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.
ಇದರ ಬೆನ್ನಲ್ಲೇ ಸಚಿವಾಕಾಂಕ್ಷಿಗಳು ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆನ್ನು ಬಿದ್ದಿದ್ದಾರೆ. ಒಬ್ಬೊಬ್ಬರಾಗಿ ಬಂದು ಭೇಟಿಯಾಗುತ್ತಿದ್ದು, ಇವರನ್ನು ನಿಭಾಯಿಸುವುದು ಕೂಡ ಕಷ್ಟವಾಗತೊಡಗಿದೆ. ಈ ಕಾರಣಕ್ಕೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಂಪುಟ ವಿಸ್ತರಣೆ ಮಾಡಿ ಕೈತೊಳೆದುಕೊಳ್ಳೋಣ. ನಂತರ ಏನಾಗುತ್ತದೋ ಅದನ್ನು ಆಮೇಲೆ ಎದುರಿಸೋಣ ಎಂಬ ನಿರ್ಧಾರಕ್ಕೆ ಯಡಿಯೂರಪ್ಪ ಅವರು ಬಂದಂತಿದೆ. ಈ ಕಾರಣಕ್ಕೆ ಎಲ್ಲವನ್ನೂ ವರಿಷ್ಠರ ತಲೆ ಮೇಲೆ ಹಾಕಿ ಸಂಪುಟ ವಿಸ್ತರಣೆಗೆ ಅವರು ಸಜ್ಜಾಗುತ್ತಿದ್ದಾರೆ.
ಈ ಮಧ್ಯೆ ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಎಂಬ ಚರ್ಚೆಯೂ ಬಿಜೆಪಿ ವಲಯದಲ್ಲಿ ಶುರುವಾಗಿದೆ. ಕಾಂಗ್ರೆಸ್, ಜೆಡಿಎಸ್ ತೊರೆದು ಬಂದು ಗೆದ್ದಿರುವ 11 ಮಂದಿ ಪೈಕಿ 9 ಮಂದಿಗೆ ಸಚಿವ ಸ್ಥಾನ ನೀಡುವುದರ ಜತೆಗೆ ಬಿಜೆಪಿಯ ಇಬ್ಬರು ಅಥವಾ ಮೂವರು ಹಿರಿಯ ಶಾಸಕರಿಗೆ ಮಂತ್ರಿ ಸ್ಥಾನ ನೀಡುವುದು ಹಾಗೂ ಹಾಲಿ ಸಚಿವರಾಗಿರುವ ಒಬ್ಬಿಬ್ಬರನ್ನು ಕೈಬಿಟ್ಟು ಅವರ ಜಾಗಕ್ಕೆ ಬೇರೆಯವರನ್ನು ನೇಮಿಸುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಏನೇ ಆದರೂ ವರಿಷ್ಠರೊಂದಿಗೆ ಮಾತುಕತೆ ಸಂದರ್ಭದಲ್ಲಿ ಅಮಿತ್ ಶಾ ಅವರೇ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಅದುವರೆಗೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತಂತೆ ಏನನ್ನೂ ಹೇಳಲು ಸಾಧ್ಯವಿಲ್ಲ. ಅದೇ ರೀತಿ ಉಪಮುಖ್ಯಮಂತ್ರಿ ಹುದ್ದೆ ಬಗ್ಗೆಯೂ ಯಡಿಯೂರಪ್ಪ ಮತ್ತು ಅಮಿತ್ ಶಾ ಅವರ ನಡುವಿನ ಮಾತುಕತೆ ವೇಳೆ ನಿರ್ಧಾರವಾಗಲಿದೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.
ಬೆಂಗಳೂರಿಗೆ ಸಿಗಲಿದೆಯೇ ಮತ್ತೊಂದು ಸಚಿವ ಸ್ಥಾನ
ಬೆಂಗಳೂರು ನಗರದಿಂದ ನೂತನವಾಗಿ ಆಯ್ಕೆಯಾಗಿರುವ ಭೈರತಿ ಬಸವರಾಜು, ಎಸ್. ಗೋಪಾಲಯ್ಯ ಅವರಿಗೆ ಸಚಿವ ಸ್ಥಾನ ಖಾತರಿಯಾಗಿದೆ. ಎಸ್.ಟಿ.ಸೋಮಶೇಖರ್ ಅವರಿಗೆ ಬಿಡಿಎ ಅಧ್ಯಕ್ಷ ಸ್ಥಾನ ಸಿಗಬಹುದು. ಇದರ ಜತೆಗೆ ಬೆಂಗಳೂರಿಗೆ ಈ ಬಾರಿ ಮತ್ತೊಂದು ಸಚಿವ ಸ್ಥಾನ ಸಿಗುವುದು, ಅದೂ ಬಿಜೆಪಿಯ ಹಿರಿಯ ಶಾಸಕರಿಗೆ ಸಿಗುವುದು ಬಹುತೇಕ ಖಾತರಿಯಾಗಿದೆ. ಈ ಮೂಲಕ ಬೆಂಗಳೂರಿಗೆ ಏಳು ಸಚಿವರು ಆದಂತಾಗುತ್ತದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅರವಿಂದ ಲಿಂಬಾವಳಿ ಅವರಿಗೆ ಸಚಿವರಾಗುವ ಅದೃಷ್ಟ ಒಲಿಯಲಿದೆ.
ಯಡಿಯೂರಪ್ಪ ಅವರು ಸರ್ಕಾರ ರಚಿಸಿ ಮಂತ್ರಿ ಮಂಡಲ ರಚಿಸುವಾಗಲೇ ಅರವಿಂದ ಲಿಂಬಾವಳಿ ಅವರು ಸಚಿವರಾಗಬೇಕಿತ್ತು. ಆದರೆ, ಇದೇ ವೇಳೆ ಅವರಿಗೆ ಸಂಬಂಧಿಸಿದಂತೆ ಅಶ್ಲೀಲ ವೀಡಿಯೋ ಒಂದು ಸಾಮಾಜಿಕ ಜಾಲ ತಾಣಗಳಲ್ಲಿ ಬಿಡುಗಡೆಯಾಗಿ ವಿವಾದ ಸೃಷ್ಟಿಸಿತ್ತು. ಹೀಗಾಗಿ ಕೊನೇ ಕ್ಷಣದಲ್ಲಿ ಅವರಿಗೆ ಸಚಿವಗಿರಿ ತಪ್ಪಿಹೋಗಿತ್ತು. ಆದರೆ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವೀಡಿಯೋ ನಕಲಿ ಎಂಬುದು ತನಿಖೆಯಿಂದ ಬಯಲಿಗೆ ಬಂದಿದೆ. ಲಿಂಬಾವಳಿ ಅವರ ರಾಜಕೀಯ ಜೀವನಕ್ಕೆ ಹುಳಿ ಹಿಂಡಲು ಯಾರದ್ದೋ ವೀಡಿಯೋವನ್ನು ಮಾರ್ಫಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಆ ವೀಡಿಯೋದಲ್ಲಿ ಅರವಿಂದ ಲಿಂಬಾವಳಿ ಅವರ ಜತೆಗೆ ಇದ್ದ ಮತ್ತೊಬ್ಬ ವ್ಯಕ್ತಿ ಕೂಡ ಈ ಕುರಿತು ತನಿಖಾಧಿಕಾರಿಗಳ ಮುಂದೆ ಆ ವ್ಯಕ್ತಿ ತಾನಲ್ಲ ಎಂದು ಹೇಳಿಕೊಂಡಿದ್ದಾನೆ. ಹೀಗಾಗಿ ಈ ಪ್ರಕರಣದಲ್ಲಿ ಲಿಂಬಾವಳಿ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದಂತಾಗಿದ್ದು, ಈ ಬಾರಿ ಅವರಿಗೆ ಸಚಿವ ಸ್ಥಾನ ಬಹುತೇಕ ಖಾತರಿ ಎಂದು ಹೇಳಲಾಗುತ್ತಿದೆ.
ಉಳಿದಂತೆ ಬಿಜೆಪಿ ಹಿರಿಯ ಶಾಸಕರಾಗಿರುವ ಉಮೇಶ್ ಕತ್ತಿ, ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಮಾತಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (ಉಡುಪಿ ಸೇರಿ) ಬಿಜೆಪಿ ಬಹುತೇಕ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ, ವಿಧಾನಸಭೆಯ ಯಾವೊಬ್ಬ ಸದಸ್ಯರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಎಸ್.ಅಂಗಾರ ಮತ್ತು ಸುನೀಲ್ ಕುಮಾರ್ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿ ಆ ಭಾಗದಲ್ಲಿ ತೀವ್ರ ಅಸಮಾಧಾನ ಉಂಟಾಗಿತ್ತು. ಹೀಗಾಗಿ ಈ ಬಾರಿ ಅಂಗಾರ ಅವರಿಗೆ ಸಚಿವ ಸ್ಥಾನ ನೀಡಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ನ್ಯಾಯ ಒದಗಿಸುವ ಸಾಧ್ಯತೆ ಇದೆ. ಇನ್ನು ಉಮೇಶ್ ಕತ್ತಿ ಅವರಿಗೆ ದೊಡ್ಡ ಹುದ್ದೆ ನೀಡುವುದಾಗಿ ಈ ಹಿಂದೆಯೇ ಯಡಿಯೂರಪ್ಪ ಘೋಷಿಸಿರುವುದರಿಂದ ಅವರಿಗೂ ಸಚಿವರಾಗುವ ಅವಕಾಶ ಸಿಗಬಹುದು.
ಈ ಮಧ್ಯೆ ಸಂಪುಟ ಪುನಾರಚನೆ ಮಾಡಬೇಕು, ಕೆಲವು ಸಚಿವರ ಖಾತೆಗಳನ್ನು ಬದಲಾವಣೆ ಮಾಡಬೇಕು ಎಂಬ ಕೂಗು ಕೂಡ ಬಿಜೆಪಿಯಲ್ಲಿ ಕೇಳಿಬರುತ್ತಿದೆ. ಇದರ ಜತೆಗೆ ಉಪಮುಖ್ಯಮಂತ್ರಿ ಹುದ್ದೆ ಬೇಕೇ, ಬೇಡವೇ ಎಂಬ ಚರ್ಚೆಯೂ ಜೋರಾಗುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಯಡಿಯೂರಪ್ಪ ಅವರು ಅಮಿತ್ ಶಾ ಅವರೊಂದಿಗೆ ಚರ್ಚಿಸಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಸಂಪುಟ ಪುನಾರಚನೆ ಕಷ್ಟಸಾಧ್ಯ. ಅದರ ಬದಲು ಒಂದಿಬ್ಬರು ಸಚಿವರ ಖಾತೆಗಳಲ್ಲಿ ಬದಲಾವಣೆಗಳಾಗಬಹುದು. ಪಕ್ಷೇತರ ಶಾಸಕ ಎಚ್.ನಾಗೇಶ್ ಅವರಿಗೆ ನೀಡಿದ್ದ ಅಬಕಾರಿ ಖಾತೆಯನ್ನು ಬೇರೆಯವರಿಗೆ ನೀಡಬಹುದು. ಏಕೆಂದರೆ, ಸಚಿವರಾದ ದಿನದಿಂದ ಅವರು ಮಾತನಾಡಿದಾಗೆಲ್ಲಾ ಇಲಾಖೆಗೆ ಸಂಬಂಧಿಸಿದಂತೆ ಒಂದಲ್ಲಾ ಒಂದು ವಿವಾದ ಸೃಷ್ಟಿ ಮಾಡುತ್ತಲೇ ಇದ್ದಾರೆ. ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುವ ಅಬಕಾರಿಯಂತಹ ಖಾತೆಗಳಲ್ಲಿ ಈ ರೀತಿಯ ಗೊಂದಲ ಸೃಷ್ಟಿಯಾದರೆ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಅವರ ಕಾತೆ ಬದಲಾಗುವ ಸಾಧ್ಯತೆ ಇದೆ. ಇದರ ಜತೆಗೆ ಒಂದಿಬ್ಬರು ಸಚಿವರ ಖಾತೆಗಳು ಅದಲು-ಬದಲಾಗಬಹುದು ಎಂವ ಮಾತುಗಳು ಕೇಳಿಬರುತ್ತಿವೆ.
ಆದರೆ, ಉಪಮುಖ್ಯಮಂತ್ರಿ ಸ್ಥಾನ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಸದ್ಯ ಇರುವ ಮೂರು ಉಪಮುಖ್ಯಮಂತ್ರಿಗಳನ್ನು ಹಾಗೆಯೇ ಮುಂದುವರಿಸಿ ಈ ಹುದ್ದೆಯ ಪ್ರಬಲ ಆಕಾಂಕ್ಷಿಗಳಾಗಿರುವವರಿಗೆ ಪ್ರಮುಖ ಖಾತೆಗಳನ್ನು ನೀಡಿ ಸಮಾಧಾನಪಡಿಸುವ ಬಗ್ಗೆ ಯಡಿಯೂರಪ್ಪ ಒಲವು ತೋರಿದ್ದಾರೆ. ಏಕೆಂದರೆ, ಎಲ್ಲಾ ಉಪಮುಖ್ಯಮಂತ್ರಿ ಹುದ್ದೆಗಳನ್ನು ರದ್ದುಗೊಳಿಸಿದರೆ ಈ ವಿಚಾರದಲ್ಲಿ ಉದ್ಭವವಾದ ಗೊಂದಲವನ್ನು ಬಗೆಹರಿಸಲು ಯಡಿಯೂರಪ್ಪ ವಿಫಲರಾಗಿದ್ದಾರೆ ಎಂಬ ಟೀಕೆ ಬರಬಹುದು. ಹೀಗಾಗಿ ಮೂರು ಉಪಮುಖ್ಯಮಂತ್ರಿ ಹುದ್ದೆ ಹಾಗೆಯೇ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.
ಆದರೆ, ರಾಜ್ಯ ಮಟ್ಟದಲ್ಲಿ ಏನೇ ಚರ್ಚೆಯಾದರೂ, ಯಡಿಯೂರಪ್ಪ ಅವರ ಯೋಚನೆ ಏನೇ ಇದ್ದರು ಅಂತಿಮ ತೀರ್ಮಾನ ಆಗುವುದು ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕವಷ್ಟೆ. ಹೀಗಾಗಿ ಸಂಪುಟ ವಿಸ್ತರಣೆ, ಪುನಾರಚನೆ, ಉಪಮುಖ್ಯಮಂತ್ರಿ ಹುದ್ದೆಗಳ ಬಗ್ಗೆ ಈಗಲೇ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳಿಗೂ ಈ ಕುರಿತು ಸ್ಪಷ್ಟತೆ ಇಲ್ಲ ಮತ್ತು ಸ್ಪಷ್ಟ ನಿರ್ಧಾರ ಕೈಗೊಳ್ಳುವ ಪರಿಸ್ಥಿತಿಯಲ್ಲೂ ಅವರಿಲ್ಲ. ಹೀಗಾಗಿ ಅಮಿತ್ ಶಾ ಅವರ ನಿರ್ಧಾರಕ್ಕೆ ಎಲ್ಲವನ್ನೂ ಬಿಟ್ಟು ಅವರು ಕೈತೊಳೆದುಕೊಳ್ಳುವ ಸಾಧ್ಯತೆ ಇದೆ.