ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಸಂಶೋಧಕರೊಬ್ಬರು ತಮ್ಮ ವಿರುದ್ದ ಕೊಲೆ ಯತ್ನ ನಡೆದಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಸುಮಾರು 3 ವರ್ಷಗಳ ಹಿಂದೆ ನಡೆದಂತಹ ಈ ಘಟನೆಯ ಕುರಿತು ಕೂಲಂಕುಷವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಮೇ 23, 2017ರಂದು ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಯಲ್ಲಿ ಸಂದರ್ಶನವನ್ನು ಮುಗಿಸಿದ ನಂತರ ವಿಜ್ಞಾನಿ ತಪನ್ ಮಿಶ್ರಾ ಅವರು, ದೋಸೆ ಮತ್ತು ಚಟ್ನಿ ಸೇವಿಸಿದ್ದರು. ಈ ವೇಳೆ ಅವರನ್ನು ಕೊಲೆಗೈಯಲು ಯತ್ನಿಸಿದವರು, ಚಟ್ನಿಯೊಂದಿಗೆ ಅಪಾಯಕಾರಿಯಾದ ʼಆರ್ಸೆನಿಕ್ʼ ವಿಷವನ್ನು ಬೆರೆಸಿದ್ದರು ಎಂದು ತಪನ್ ಮಿಶ್ರಾ ಆರೋಪಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅದೇ ವರ್ಷ ಜುಲೈ ತಿಂಗಳಲ್ಲಿ ಗೃಹ ಇಲಾಖೆಯ ಭದ್ರತಾ ಸಿಬ್ಬಂದಿಯೊಬ್ಬರು, ತಪನ್ ಅವರಿಗೆ ವಿಷಪ್ರಾಶನ ಮಾಡಿಸಿರುವ ಕುರಿತು ಮಾಹಿತಿ ನೀಡಿದ್ದರಿಂದ, ತಪನ್ ಮಿಶ್ರಾ ಅವರು ಕೂಡಲೇ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು. ಸತತ ಚಿಕಿತ್ಸೆಯ ನಂತರ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಸಂಬಂಧ ಅವರು ವೈದ್ಯಕೀಯ ಪರೀಕ್ಷೆಗಳ ವರದಿ ಹಾಗೂ ಅವರ ದೇಹದಲ್ಲಾದ ಬದಲಾವಣೆಗಳ ಚಿತ್ರಗಳನ್ನು ಕೂಡಾ ಬಿಡುಗಡೆ ಮಾಡಿದ್ದಾರೆ.
ಸಿಂಥೆಟಿಕ್ ಅಪರ್ಚರ್ ರಾಡಾರ್ ಅನ್ನು ನಿರ್ಮಿಸುವಲ್ಲಿ ಪರಿಣತಿ ಹೊಂದಿದ್ದರಿಂದ, ಮಿಲಿಟರಿ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡುವ ವಿಜ್ಞಾನಿಯನ್ನು ಕೊಲ್ಲುವ ಉದ್ದೇಶ ಈ ಕೊಲೆ ಯತ್ನದ ಹಿಂದಿರಬಹುದು, ಎಂದು ತಪನ್ ಮಿಶ್ರಾ ಹೇಳಿದ್ದಾರೆ.
ಈ ಕೊಲೆ ಯತ್ನದ ಕುರಿತು ಕೇಂದ್ರ ಸರ್ಕಾರ ತನಿಖೆಯನ್ನು ಕೈಗೊಳ್ಳಬೇಕೆಂದು ಕೂಡಾ ಅವರು ಆಗ್ರಹಿಸಿದ್ದಾರೆ. ಈ ತಿಂಗಳಾಂತ್ಯದಲ್ಲಿ ನಿವೃತ್ತಿ ಹೊಂದಲಿರುವ ತಪನ್ ಮಿಶ್ರಾ ಅವರು ʼLong Kept Secretʼ ಎಂಬ ಫೇಸ್ಬುಕ್ ಪೋಸ್ಟ್ನಲ್ಲಿ ಈ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.