ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ದೇಶ ಕರೋನಾ ವೈರಾಣು ಮತ್ತು ಚೀನಾದ ವಿರುದ್ಧದ ಸಮರವನ್ನು ಗೆಲ್ಲಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಗಡಿಯಲ್ಲಿನ ಚೀನಾ ಆಕ್ರಮಣ ಮತ್ತು ದೇಶದ ಒಳಗಿನ ಕೋವಿಡ್-19ರ ಆಕ್ರಮಣವನ್ನು ಮೋದಿಯವರ ಸರ್ಕಾರ ಯಶಸ್ವಿಯಾಗಿ ಹಿಮ್ಮೆಟ್ಟಿಸಲಿದೆ ಎಂದು ದೇಶದ ಜನತೆಗೆ ಭರವಸೆ ನೀಡುತ್ತಿದ್ದೇನೆ ಎಂದೂ ಅವರು ಬಹಳ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.
ಆದರೆ, ವಾಸ್ತವವಾಗಿ ಗೃಹ ಸಚಿವರ ಆ ವಿಶ್ವಾಸದ ಮಾತು ನಿಜವಾಗುವುದೆ? ಎಂದು ದೇಶದ ಜನಸಾಮಾನ್ಯರನ್ನು ಕೇಳಿದರೆ; ಬಹುಶಃ ಉತ್ತರ ಒಂದು ಗಹಗಹಿಸುವ ನಗುವಾಗಿರಬಹುದು. ಏಕೆಂದರೆ, ಚೀನಾ ಗಡಿಯ ಲಡಾಕ್ ಪ್ರದೇಶದಲ್ಲಿ ಈಗಾಗಲೇ ಚೀನಾ ಕಳೆದ ಎರಡು ತಿಂಗಳಲ್ಲಿ ಸುಮಾರು 60 ಚ.ಕಿಮೀ ನಷ್ಟು ಭಾರತದ ಭೂಭಾಗವನ್ನು ಆಕ್ರಮಿಸಿದೆ ಎಂಬ ಸಂಗತಿಯನ್ನು ಸ್ವತಃ ಶಾ ಅವರ ಸರ್ಕಾರದ ಸಚಿವರೇ ಅಧಿಕೃತವಾಗಿ ಹೇಳಿದ್ದಾರೆ. ಅಲ್ಲದೆ, ನಮ್ಮ 20 ಮಂದಿ ಯೋಧರು ಚೀನಾದೊಂದಿಗಿನ ಸಂಘರ್ಷದಲ್ಲಿ ಜೀವ ಬಿಟ್ಟಿದ್ದಾರೆ. ಅವರ ಸಾವಿಗೆ ಪ್ರತೀಕಾರದ ಮಾತನಾಡಿದ್ದ ಮೋದಿಯವರು ಮಾರನೇ ದಿನವೇ ಯಾರೂ ನಮ್ಮ ನೆಲವನ್ನು ಆಕ್ರಮಿಸಿಲ್ಲ, ಆಕ್ರಮಿಸುವುದು ಸಾಧ್ಯವೂ ಇಲ್ಲ ಎಂದುಬಿಟ್ಟಿರು! ಈಗ ಯೋಧರ ಸಾವಿನ ವಿಷಯದಲ್ಲಾಗಲೀ, ಗಡಿ ಆಕ್ರಮಣದ ವಿಷಯದಲ್ಲಾಗಲೀ ಚೀನಾವನ್ನು ಮಂಡಿಯೂರಿಸಿದರೆ ಆಗ ಮೋದಿಯವರು ಗೆಲವು ಪಡೆದಂತೆ. ಆದರೆ, ದಿನದಿಂದ ದಿನಕ್ಕೆ ಗಡಿಯಲ್ಲಿ ಚೀನಾ ಒಂದು ಕಡೆ ಹಿಂದೆ ಸರಿದರೆ, ಮತ್ತೊಂದು ಕಡೆ ಗಡಿ ಉಲ್ಲಂಘನೆ ಮಾಡುತ್ತಿರುವ ವರದಿಗಳು ಬರುತ್ತಿವೆ.
ಇದು ಗಡಿಯಲ್ಲಿನ ಸಮರದ ವಿಪರ್ಯಾಸಕರ ವಸ್ತುಸ್ಥಿತಿಯಾದರೆ, ಇನ್ನು ಗಡಿಯೊಳಗಿನ ಶತ್ರುವಿನ ಅಟ್ಟಹಾಸದ ಎದುರು ಪ್ರಧಾನಿ ಮೋದಿಯವರ ಸಮರ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ದಾರಿಹೋಕ ಕೂಡ ವಿಶ್ಲೇಷಿಸಬಲ್ಲ. ಇಡೀ ಜಗತ್ತಿನಲ್ಲೇ ಅತ್ಯಂತ ದೀರ್ಘ ಮತ್ತು ಅತ್ಯಂತ ಯಾತನಾಮಯ ಲಾಕ್ ಡೌನ್ ಬಳಿಕವೂ ದೇಶದ ಕರೋನಾ ಸೋಂಕು ನಿಯಂತ್ರಣಕ್ಕೆ ತರುವುದರಲ್ಲಾಗಲೀ, ರೋಗಕ್ಕೆ ಸೂಕ್ತ ಮತ್ತು ಸಕಾಲಿಕ ಚಿಕಿತ್ಸೆ ನೀಡುವ ಮೂಲಕ ಜೀವ ರಕ್ಷಿಸುವ ವಿಷಯದಲ್ಲಾಗಲೀ ಈವರೆಗೆ ಮೋದಿಯವರಿಗೆ ಯಾವ ಯಶಸ್ಸೂ ಸಿಕ್ಕಿಲ್ಲ ಎಂಬುದನ್ನು ಸ್ವತಃ ಮೋದಿಯವರೇ ನೇಮಕ ಮಾಡಿದ ಕೋವಿಡ್-19 ಕಾರ್ಯಪಡೆಯ ತಜ್ಞರು ಸೇರಿದಂತೆ ಹಲವು ಸರ್ಕಾರಿ ಮತ್ತು ಸರ್ಕಾರೇತರ ವೈದ್ಯಕೀಯ ಮತ್ತು ಸಾಮಾಜಿಕ ವಲಯದ ಪ್ರಮುಖರು ಘಂಟಾಘೋಷವಾಗಿ ಹೇಳಿದ್ದಾರೆ.
ಈಗಲೂ ದೇಶವ್ಯಾಪಿ ದಿನವೊಂದಕ್ಕೆ ಬರೋಬ್ಬರಿ 20 ಸಾವಿರ ಮಂದಿಗೆ ಸೋಂಕಿತರಾಗುತ್ತಿದ್ದು, ಸುಮಾರು 400 ಮಂದಿ ಸಾವು ಕಾಣುತ್ತಿದ್ದಾರೆ. ಈವರೆಗೆ ಒಟ್ಟು ಐದೂವರೆ ಲಕ್ಷ ಮಂದಿ ಸೋಂಕಿತರ ಪಟ್ಟಿಯೊಂದಿಗೆ ಜಾಗತಿಕ ಮಟ್ಟದಲ್ಲಿ ಭಾರತ ಅಮೆರಿಕ, ಬ್ರಿಜಿಲ್ ಮತ್ತು ರಷ್ಯಾ ಬಳಿಕದ ನಾಲ್ಕನೇ ಸ್ಥಾನದಲ್ಲಿದೆ. ದಿನವಹಿ ಹೊಸ ಪ್ರಕರಣ ಮತ್ತು ಸಾವಿನ ವಿಷಯದಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ! ಅಂದರೆ, ಸೋಂಕು ಅತ್ಯಂತ ವೇಗವಾಗಿ ಮತ್ತು ವ್ಯಾಪಕವಾಗಿ ಹರಡುತ್ತಿದೆ ಮತ್ತು ಅಷ್ಟೇ ಆತಂಕಕಾರಿ ಪ್ರಮಾಣದಲ್ಲಿ ಜನರ ಜೀವ ಬಲಿ ತೆಗೆದುಕೊಳ್ಳುತ್ತಿದೆ. ಹಾಗಾಗಿದ್ದರೂ ಮೋದಿಯವರು ಮೊದಲ ಪ್ರಕರಣದ ಕಾಣಿಸಿಕೊಂಡ(ಜನವರಿ 30) ಬರೋಬ್ಬರಿ ಆರು ತಿಂಗಳ ಬಳಿಕವೂ ಸಮರ ಗೆಲ್ಲುವುದರಲ್ಲೇ ಇದ್ದಾರೆ ಎಂಬುದು ತೀರಾ ಹಾಸ್ಯಾಸ್ಪದ ಎನಿಸದೇ ಇರದು. ಆ ಹಿನ್ನೆಲೆಯಲ್ಲೇ ಸದ್ಯ ದೇಶದಲ್ಲಿ ಕರೋನಾ ಸೋಂಕಿನ ವಿಷಯದಲ್ಲಿ ಮೋದಿ ಮತ್ತು ಅವರ ಸರ್ಕಾರದ ವೀರಾವೇಶದ ಮಾತುಗಳನ್ನು ಕೇಳುವ ದಾರಿಹೋಕ ಕೂಡ ಗೊಳ್ಳೆಂದು ನಗದೇ ಇರಲಾರ!
ಗೃಹ ಸಚಿವರ ಅಸೀಮ ಆತ್ಮವಿಶ್ವಾಸದ ಮತ್ತು ಮೋದಿ ವರ್ಚಸ್ಸು ವೃದ್ಧಿಯ ಹೇಳಿಕೆಯ ಹಿನ್ನೆಲೆಯಲ್ಲಿ ದೇಶದ ಕರೋನಾ ಪೀಡಿತ ಮಹಾನಗರಗಳು ಮತ್ತು ಲಾಕ್ ಡೌನ್ ಸಂಕಷ್ಟಕ್ಕೆ ತುತ್ತಾಗಿರುವ ಜನವರ್ಗಗಳ ವಾಸ್ತವ ಚಿತ್ರಣ ನೀಡುವ ಪ್ರಯತ್ನವನ್ನು ದೇಶದ ಕೆಲವರಾದರೂ ಪತ್ರಕರ್ತರು(ಸರ್ಕಾರದ ನಿಷ್ಠೆ ಬದಲಿಗೆ ದೇಶನಿಷ್ಠೆ ತೋರಿದವರು!) ಮಾಡುತ್ತಿದ್ದಾರೆ. ಅಂತಹ ಪ್ರಯತ್ನಗಳಲ್ಲಿ ಒಂದು ‘ದ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಗಾಗಿ ಪತ್ರಕರ್ತೆ ರಾಣಾ ಆಯೂಬ್ ಮಾಡಿರುವ ಒಂದು ವಿಶೇಷ ವರದಿ ಗಮನಾರ್ಹ. ವಾಸ್ತವವಾಗಿ ಅವರು ಈ ವರದಿಯನ್ನು ವಾರದ ಹಿಂದೆಯೇ ಮಾಡಿದ್ದರೂ, ಶಾ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಈಗ ಇನ್ನಷ್ಟು ಪ್ರಸ್ತುತ.
ಭಾರೀ ಪ್ರಮಾಣದ ದೈನಂದಿನ ಸೋಂಕು ಏರಿಕೆಯ ಮೂಲಕ ಭಾರತ ಜಾಗತಿಕ ಕರೋನಾ ಹಾಟ್ ಸ್ಪಾಟ್ ಆಗಿ ಬದಲಾಗಿದೆ. ಅದೇ ಹೊತ್ತಿಗೆ ಏರುತ್ತಿರುವ ಸೋಂಕಿತರ ಪ್ರಮಾಣಕ್ಕೆ ಅನುಗುಣವಾಗಿ ವೈದ್ಯಕೀಯ ಸೌಲಭ್ಯವಿಲ್ಲದೆ ದೇಶದ ಆರೋಗ್ಯ ವ್ಯವಸ್ಥೆ ಕುಸಿದಿದೆ. ದೇಶದ ವ್ಯಾಪಕ ಸೋಂಕುಪೀಡಿತ ಮುಂಬೈ, ದೆಹಲಿಯಂತಹ ಮಹಾನಗರಗಳಲ್ಲಂತೂ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಜಾಗವಿಲ್ಲದೆ ಬೀದಿಗೆ ತಳ್ಳಲಾಗುತ್ತಿದೆ. ಮುಂಬೈನ ಕಿಂಗ್ ಎಡ್ವರ್ಡ್ ಮೆಮೋರಿಯನ್ ಆಸ್ಪತ್ರೆಗೆ ತಾವು ಭೇಟಿ ನೀಡಿದಾಗ ಹಲವು ಕುಟುಂಬಗಳು ಆಸ್ಪತ್ರೆಯ ಆವರಣದಲ್ಲಿ ಕಾಯುತ್ತಿದ್ದರು. ತಮಗೆಲ್ಲಾ ಕೋವಿಡ್ -19 ಸೋಂಕು ದೃಢಪಟ್ಟಿದ್ದರೂ ಆಸ್ಪತ್ರೆಯಲ್ಲಿ ಹಾಸಿಗೆ ಮತ್ತು ಅಗತ್ಯ ಪ್ರಮಾಣದ ವೆಂಟಿಲೇಟರ್ ಇಲ್ಲದ ಕಾರಣ ತಮ್ಮನ್ನು ಒಳರೋಗಿಗಳಾಗಿ ದಾಖಲಿಸಿಕೊಂಡಿಲ್ಲ ಮತ್ತು ಆಮ್ಲಜನಕದ ಕೊರತೆಯೂ ಹೆಚ್ಚಿದೆ ಎಂದು ತಮ್ಮ ಮುಂದೆ ಗೋಳು ತೋಡಿಕೊಂಡರು ಎಂದು ರಾಣಾ ಆಯೂಬ್ ವಿವರಿಸಿದ್ದಾರೆ.
ಜೊತೆಗೆ ಆ ಆಸ್ಪತ್ರೆಯ ವೈದ್ಯರೊಬ್ಬರು (ಸರ್ಕಾರದ ದಮನನೀತಿ ಭಯದಿಂದ ಹೆಸರು ಹೇಳಲಿಚ್ಛಿಸಿಲ್ಲ), ‘ಆಸ್ಪತ್ರೆಯ ವರಾಂಡದ ತುಂಬೆಲ್ಲಾ ಕರೋನಾ ಸೋಂಕಿತರು ತುಂಬಿದ್ದು, ಅವರಿಗೆ ಚಿಕಿತ್ಸೆ ನೀಡಲು ಅಗತ್ಯ ವೈದ್ಯಕೀಯ ಸೌಲಭ್ಯಗಳೇ ಇಲ್ಲ. ಹಲವು ಮಂದಿಗೆ ಉಸಿರಾಟದ ತೊಂದರೆ ಇದೆ. ಆದರೆ, ತಮ್ಮ ಆಸ್ಪತ್ರೆ ವಾರ್ಡುಗಳಲ್ಲಿ ಆಮ್ಲಜನಕದ ವ್ಯವಸ್ಥೆಯೇ ಇಲ್ಲ’ ಎಂದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ. ‘ಆಮ್ಲಜನಕದ ವ್ಯವಸ್ಥೆ ಇಲ್ಲದೆ, ಹಲವು ರೋಗಿಗಳ ಜೀವ ಉಳಿಸುವ ಅವಕಾಶವನ್ನೇ ಕಳೆದುಕೊಂಡಿದ್ದೇವೆ. ಕೊನೇ ಕ್ಷಣದಲ್ಲಿ ಆಮ್ಲಜನಕ ಲಭ್ಯವಿಲ್ಲದೆ ಮತ್ತು ಬೇರೆಡೆಗೆ ಅವರನ್ನು ಸ್ಥಳಾಂತರಿಸುವುದು ಕೂಡ ಸಾಧ್ಯವಿಲ್ಲದೆ ಜೀವ ಬಿಟ್ಟಿದ್ದಾರೆ’ ಎಂದೂ ಆ ವೈದ್ಯರೂ ವಿವರಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನಿರೀಕ್ಷಿತ ಪ್ರಮಾಣದಲ್ಲಿ ವೈರಾಣು ಪರೀಕ್ಷೆ ನಡೆಸಲು ಅಗತ್ಯ ಪರೀಕ್ಷಾ ಕಿಟ್ ಗಳ ಸರಬರಾಜಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೋತಿವೆ. ಹಲವು ರಾಜ್ಯಗಳಲ್ಲಿ ನೂರು ದಿನಗಳ ಲಾಕ್ ಡೌನ್ ಬಳಿಕವೂ ಅಗತ್ಯ ಪ್ರಮಾಣದ ಕಿಟ್ ಇಲ್ಲದೆ, ಸೋಂಕು ತಾಂಡವವಾಡುತ್ತಿರುವ ಹೊತ್ತಲ್ಲೂ ದೈನಂದಿನ ಪರೀಕ್ಷೆಗಳನ್ನು ಹೆಚ್ಚಿಸುವ ಬದಲಾಗಿ ಕಡಿಮೆ ಮಾಡಲಾಗುತ್ತಿದೆ. ಉತ್ತರಪ್ರದೇಶದ ಹಳ್ಳಿಯೊಂದರ ವೈದ್ಯರ ಪ್ರಕಾರ, ಪರೀಕ್ಷಾ ಕಿಟ್ ಕೊರತೆಯಿಂದಾಗಿ ರೋಗ ಲಕ್ಷಣಗಳಿರುವ ಮಂದಿಗೆ ಪರೀಕ್ಷೆ ನಡೆಸಲಾಗುತ್ತಿಲ್ಲ. ಹಾಗಾಗಿ ಅವರಿಗೆ ವೈದ್ಯರು ಪ್ರಮಾಣೀಕೃತವಲ್ಲದ ಕ್ಷಯರೋಗದ ಮಾತ್ರೆಗಳನ್ನು ನೀಡುತ್ತಿದ್ದಾರೆ. ಆ ಮೂಲಕ ರೋಗಿಗಳು ನಿಧಾನ ಸಾವಿಗೆ ಗುರಿಯಾಗುತ್ತಿದ್ದಾರೆ ಎಂದು ರಾಣಾ ಹೇಳುತ್ತಾರೆ.
ಇನ್ನು ಸೋಂಕು ನಿಯಂತ್ರಣ ಮತ್ತು ಆರೋಗ್ಯ ಸೇವೆ ವೃದ್ಧಿಯ ಉದ್ದೇಶದಿಂದ ಹೇರಲಾದ ಲಾಕ್ ಡೌನ್ ಭೀಕರ ಪರಿಣಾಮಗಳನ್ನು ಇಡೀ ದೇಶವೇ ಅವಕ್ಕಾಗಿ ನೋಡಿದೆ. ಕೋಟ್ಯಂತರ ಮಂದಿ ವಲಸೆ ಕಾರ್ಮಿಕರು ಬದುಕು ಕಳೆದುಕೊಂಡರು. ಉದ್ಯೊಗವಿಲ್ಲದೆ, ಆಹಾರವಿಲ್ಲದೆ ಬರಿಗಾಲಿನಲ್ಲಿ ತಮ್ಮತಮ್ಮ ಊರು ಸೇರುವ ಧಾವಂತದಲ್ಲಿ ಸುಮಾರು 400ಕ್ಕೂ ಅಧಿಕ ಮಂದಿ ಹಾದಿಯ ಹೆಣವಾಗಿ ಹೋದರು. ಎಂಜಿನಿಯರು, ಬಿಪಿಒ ಉದ್ಯೋಗಿಗಳು ಕೂಡ ಹಳ್ಳಿಗಳಿಗೆ ಬರಿಗೈಯಲ್ಲಿ ವಾಪಸ್ಸಾಗಿ ನರೇಗಾ ಯೋಜನೆಯ ಕೂಲಿಯಾಳುಗಳಾಗಿರುವ ಸುದ್ದಿಗಳು ದಿನವೂ ಬರುತ್ತಲೇ ಇವೆ. ಆದರೂ ಗೃಹ ಸಚಿವರು ತಾವು ಕರೋನಾ ವಿರುದ್ಧದ ಯುದ್ಧ ಗೆಲ್ಲುವ ಮಾತನಾಡುತ್ತಲೇ ಇದ್ದಾರೆ!
ಅದೇ ಮಹಾರಾಷ್ಟ್ರದ ಧುಲೆಯಲ್ಲಿ ಏಳು ತಿಂಗಳ ಗರ್ಭಿಣಿ ಸುಲಕ್ಷಣ ಎಂಬುವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿ ವಾಪಸು ಕಳಿಸಲಾಗಿತ್ತು. ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುವ ಆಕೆ, ಲಾಕ್ ಡೌನ್ ಅವಧಿಯಲ್ಲಿ ಸಾರಿಗೆ ಸೌಕರ್ಯವಿಲ್ಲದೇ ಇದ್ದುದರಿಂದ ಸುಮಾರು 37 ಕಿ.ಮೀ ದೂರ ನಡೆದೇ ಆಸ್ಪತ್ರೆಗೆ ಬಂದಿದ್ದಳು, ಎರಡು ದಿನಗಳ ಕಾಲ ಪ್ರಯಾಣದಲ್ಲಿ ಆಕೆ ಕೇವಲ ಒಂದು ಹೊತ್ತಿನ ಊಟ ಮಾಡಿ, ದಾರಿ ಸವೆಸಿದ್ದಳು. ಕೋವಿಡ್ ಲಕ್ಷಣಗಳಿದ್ದ ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿ ಹೊರದಬ್ಬಲಾಗಿತ್ತು ಎಂಬ ಮತ್ತೊಂದು ಹೃದಯವಿದ್ರಾವಕ ಘಟನೆಯನ್ನು ರಾಣಾ ಪ್ರಸ್ತಾಪಿಸಿದ್ದಾರೆ.
ರಾಣಾ ಅವರು ಲಾಕ್ ಡೌನ್ ಅವಧಿಯ ತಮ್ಮ ವರದಿಗಾರಿಕೆ ಪ್ರವಾಸದ ಈ ನೋವಿನ ಘಟನೆಯನ್ನು ಪ್ರಸ್ತಾಪಿಸಿದ್ದು, ಬಹುಶಃ ಆ ಘಟನೆ ನಡೆದು ತಿಂಗಳ ಮೇಲಾಗಿರಬಹುದು. ಆದರೆ, ಪರಿಸ್ಥಿತಿ ಈಗಲೂ ದೇಶದಾದ್ಯಂತ ಸುಧಾರಿಸಿಲ್ಲ; ಬದಲಾಗಿ ವಾಸ್ತವವಾಗಿ ಇನ್ನಷ್ಟು ಭೀಕರ ಸ್ಥಿತಿಗೆ ತಲುಪಿದೆ ಎಂಬುದಕ್ಕೆ ಅದೇ ಬಿಜೆಪಿಯ ಮತ್ತೊಬ್ಬ ಸ್ಟಾರ್ ನಾಯಕ ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗಿರುವ ಉತ್ತರಪ್ರದೇಶದ ಕನೂಜ್ ನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿರುವ ದಾರುಣ ಘಟನೆಯೇ ಸಾಕ್ಷಿ. ಮಿಶ್ರಪುರ ಎಂಬ ಹಳ್ಳಿಯ ಪ್ರೇಮ್ ಚಂದ್ ಮತ್ತು ಆತನ ಪತ್ನಿ ಜ್ವರದಿಂದ ಬಳಲುತ್ತಿದ್ದ ತಮ್ಮ ಒಂದು ವರ್ಷದ ಮಗುವನ್ನು ಹೊತ್ತುಕೊಂಡು ಆಸ್ಪತ್ಎಗೆ ಬಂದರೆ, ವೈದ್ಯರೂ ಚಿಕಿತ್ಸೆ ನೀಡಲು ನಿರಾಕರಿಸಿದ್ದರಿಂದ ಮಗು ಸಾವು ಕಂಡಿತ್ತು. ಸತ್ತ ಮಗುವಿನ ಶವ ಹಿಡಿದುಕೊಂಡು ತಂದೆತಾಯಿ ಕಣ್ಣೀರುಗರೆದು ವ್ಯವಸ್ಥೆಗೆ ಹಾಕಿದ ಶಾಪ ನಿಜವಾಗಿಯೂ ಸಮರಸೇನಾನಿಗಳಿಗೆ ತಲುಪದೇ ಇರಬಹುದು. ಆದರೆ, ಜಗತ್ತಿನೆದರು ದೇಶದ ಅಮಾನುಷ ವೈದ್ಯಕೀಯ ವ್ಯವಸ್ಥೆ ಮತ್ತು ಕುಸಿದುಬಿದ್ದಿರುವ ಆರೋಗ್ಯ ವ್ಯವಸ್ಥೆಯನ್ನು ಬೆತ್ತಲು ಮಾಡದೇ ಇರದು!
ಅಷ್ಟಕ್ಕೂ ಯುದ್ಧ ಗೆಲ್ಲುವುದು ಎಂದರೆ ಏನು? ಎದುರಾಳಿಗೆ ಹೆಚ್ಚು ನಷ್ಟ, ಸಾವು, ನೋವು ನೀಡುವುದು ಯುದ್ದದ ಗೆಲುವು ಅಥವಾ ಒಬ್ಬರ ವಿರುದ್ಧ ಮತ್ತೊಬ್ಬರ ಮೇಲುಗೈ ಎಂಬುದು ಸಾಂಪ್ರದಾಯಿಕವಾಗಿ ಯುದ್ಧದ ಸೋಲುಗೆಲುವಿನ ಲೆಕ್ಕಾಚಾರ. ಆದರೆ, ಚೀನಾದ ವಿಷಯದಲ್ಲಾಗಲೀ, ಕೋವಿಡ್-19ರ ವಿಷಯದಲ್ಲಾಗಲೀ ಭಾರತ ಗೆದ್ದದ್ದಕ್ಕಿಂತ ಈಗಾಗಲೇ ಕಳೆದುಕೊಂಡಿದ್ದೇ ಹೆಚ್ಚು. ಚೀನಾದ ದುರಾಕ್ರಮಣಕ್ಕೆ 20 ಮಂದಿ ನಮ್ಮ ಯೋಧರು ಜೀವತೆತ್ತಿದ್ದಾರೆ, 60 ಚ.ಕಿಮೀ ನಮ್ಮ ಭೂಮಿ ಕೈತಪ್ಪಿದೆ. ಕೋವಿಡ್ ದಾಳಿಗೆ ಲಾಕ್ ಡೌನ್ ಸಾವು ನೋವು ಸೇರಿ ಸುಮಾರು 17,500 ಮಂದಿ ಜೀವ ಬಿಟ್ಟಿದ್ದಾರೆ. ಲಾಕ್ ಡೌನ್ ನಿಂದಾಗಿ ದೇಶಕ್ಕೆ ಹತ್ತು ಲಕ್ಷ ಕೋಟಿಗೂ ಅಧಿಕ ಮೊತ್ತದ ನಷ್ಟವಾಗಿದೆ. ಕೋಟ್ಯಂತರ ಮಂದಿ ಉದ್ಯೊಗ, ದುಡಿಮೆ ಕಳೆದುಕೊಂಡಿದ್ದಾರೆ. ನೂರಾರು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೇಶದ ಜಿಡಿಪಿ ನೆಲಕಚ್ಚಿ ಪಾತಾಳಮುಖಿಯಾಗಿದೆ. ಇಡೀ ಅರ್ಥವ್ಯವಸ್ಥೆಯೇ ದಿವಾಳಿ ಎದ್ದುಹೋಗಿದೆ.
ಇಷ್ಟಾಗಿಯೂ ನಾವೇ ಯುದ್ಧ ಗೆಲ್ಲೋದು ಅಂದ್ರೆ ಅದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಅಥವಾ ಎಲ್ಲರದ ಅರ್ಥಬದಲಿಸುವ, ಮಾನದಂಡ ಬದಲಿಸುವ, ಹೆಸರು ಬದಲಿಸುವ ಖಯಾಲಿಯ ಬಿಜೆಪಿ ಯುದ್ಧದ ಮಾನದಂಡವನ್ನೂ ಬದಲಿಸಿಬಿಟ್ಟಿದೆಯೇ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ!