ಜೀ ಟಿವಿ ಸುದ್ದಿ ವಾಹಿನಿ ನಿರೂಪಕ ರೋಹಿತ್ ರಂಜನ್ ಅವರನ್ನು ದಿಲ್ಲಿ ಸಮೀಪ ಮಂಗಳವಾರ ಬೆಳಿಗ್ಗೆ ಅವರ ನಿವಾಸದಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.
ಹೌದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಕುರಿತಾಗಿ ತಪ್ಪು ವಿಡಿಯೋವನ್ನು ಪ್ರಸಾರ ಮಾಡಿದ್ದ ಚಾನೆಲ್, ಅದಕ್ಕೆ ಕ್ಷಮೆ ಯಾಚಿಸಿತ್ತು. ಅದರ ಮರುದಿನವೇ ನಿರೂಪಕ ರೋಹಿತ್ ರಂಜನ್ ಅವರನ್ನು ಬಂಧಿಸಲಾಗಿದೆ.
ರೋಹಿತ್ ಅವರ ಉತ್ತರ ಪ್ರದೇಶದ ಇಂದಿರಾಪುರಂ ಮನೆಯ ಹೊರಗೆ ಬೆಳಿಗ್ಗೆ 5.30 ಕ್ಕೆ ತಲುಪಿದ ಛತ್ತೀಸ್‌ಗಢ ಪೊಲೀಸನ್ನು ಕಂಡ ರೋಹಿತ್ ಈ ಬಗ್ಗೆ ಟ್ವೀಟ್ ಮೂಲಕ, “ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ನನ್ನನ್ನು ಬಂಧಿಸಲು ಛತ್ತೀಸ್‌ಗಢ ಪೊಲೀಸರು ಬಂದಿದ್ದಾರೆ. ಅವರು ನನ್ನ ಮನೆಯ ಹೊರಗಡೆ ನಿಂತಿದ್ದಾರೆ. ಇದು ಕಾನೂನಾತ್ಮಕವಾಗಿ ಸರಿಯೇ? ” ಎಂದು ಪ್ರಶ್ನಿಸಿದ್ದಾರೆ.
ಈ ಟ್ವೀಟ್‌ಗೆ ಉತ್ತರ ನೀಡಿದ ರಾಯ್‌ಪುರ ಪೊಲೀಸರು, ಪೊಲೀಸರ ತನಿಖೆಗೆ ಸಹಕರಿಸುವಂತೆ ಹೇಳಿದ್ದು, ತಮ್ಮ ಬಳಿ ವಾರಂಟ್ ಇರುವುದರಿಂದ ಯಾರಿಗೂ ಮಾಹಿತಿ ನೀಡುವ ಅಗತ್ಯವಿಲ್ಲ ಎಂದು ಛತ್ತೀಸಗಡ ಪೊಲೀಸರು ಪ್ರತಿಕ್ರಿಯೆ ನೀಡಿದ್ದರು. “ಮಾಹಿತಿ ನೀಡಬೇಕು ಎಂಬಂತಹ ಯಾವುದೇ ನಿಯಮವಿಲ್ಲ. ಆದರೂ ಅವರಿಗೆ ಮಾಹಿತಿ ಕೊಡಲಾಗಿದೆ. ಪೊಲೀಸ್ ತಂಡವು ನಿಮಗೆ ಕೋರ್ಟ್‌ನ ಬಂಧನ ವಾರಂಟ್ ತೋರಿಸಿದೆ. ವಾಸ್ತವವಾಗಿ ನೀವು ಸಹಕರಿಸಿ, ತನಿಖೆಯಲ್ಲಿ ಸೇರಿಕೊಳ್ಳಬೇಕು ಮತ್ತು ಕೋರ್ಟ್‌ನಲ್ಲಿ ನಮ್ಮ ವಾದಗಳನ್ನು ಮಂಡಿಸಬೇಕು” ಎಂದು ರಾಯಪುರ ಪೊಲೀಸ್ ವಿಭಾಗ ಟ್ವೀಟ್ ಮಾಡಿತ್ತು.

ಯುಪಿ ಪೊಲೀಸರ ಅನುಮತಿಯಿಲ್ಲದೆ ಬಂಧಿಸಿದ ಬಗ್ಗೆ ರಾಯ್‌ಪುರ ಮತ್ತು ಗಾಜಿಯಾಬಾದ್ ಪೊಲೀಸರ ನಡುವೆ ಚರ್ಚೆ ಪ್ರಾರಂಭವಾಯಿತು. ನಂತರ ಇದ್ದಕ್ಕಿದ್ದಂತೆ 7:15 ಕ್ಕೆ ನೋಯ್ಡಾ ಪೊಲೀಸರು ಪ್ರವೇಶಿಸಿ ರೋಹಿತ್‌ನನ್ನು ಬಂಧಿಸಿದರು. ಆ್ಯಂಕರ್ ರೋಹಿತ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ ಎಂದು ನೋಯ್ಡಾ ಪೊಲೀಸರು ವಾದಿಸಿದ್ದಾರೆ. ಆದರೆ, ಯಾವಾಗ ಪ್ರಕರಣ ದಾಖಲಿಸಲಾಗಿದೆ ಎಂದಾಗ ಅಧಿಕಾರಿಗಳು ಉತ್ತರ ನೀಡಿಲ್ಲ. ಇಂದಿರಾಪುರಂ ಸಿಒ ಅಭಯ್ ಮಿಶ್ರಾ ಅವರು ರೋಹಿತ್ ಬಂಧನವನ್ನು ಖಚಿತಪಡಿಸಿದ್ದಾರೆ.
ಈ ಬಗ್ಗೆ ಸುದ್ದಿವಾಹಿನಿ ಕ್ಷಮೆ ಕೋರಿತ್ತು. “ನಿನ್ನೆ ನಮ್ಮ ಡಿಎನ್‌ಎ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಉದಯಪುರ ಘಟನೆಗೆ ಬೆಸೆಯುವ ಮೂಲಕ ತಪ್ಪಾದ ಸನ್ನಿವೇಶಕ್ಕೆ ಬಳಸಲಾಗಿತ್ತು. ಇದು ಮಾನವ ದೋಷದಿಂದ ಉಂಟಾಗಿದೆ. ಇದಕ್ಕಾಗಿ ಕ್ಷಮೆ ಕೋರುತ್ತೇವೆ” ಎಂದು ರಂಜನ್ ಅವರು ಹೇಳಿದ್ದರು.










