ಕಾಂಗ್ರೆಸ್ ಶಾಸಕ ಝಮೀರ್ ಮನೆಗೆ ಬೆಳ್ಳಂಬೆಳಗ್ಗೆ ʼಐಟಿʼ ದಾಳಿ ನಡೆಸಿದೆಯೆಂದು ಕನ್ನಡದ ಮುಖ್ಯವಾಹಿನಿಯ ಹೆಚ್ಚಿನ ನ್ಯೂಸ್ ಚಾನೆಲ್ಗಳು, ವೆಬ್ಪೋರ್ಟಲ್ಗಳು ವರದಿ ಮಾಡುತ್ತಿವೆ. ಆದರೆ, ಸ್ವತಃ ಐಟಿ ಇಲಾಖೆಯ ಅಧಿಕಾರಿ ಒಬ್ಬರು ಝಮೀರ್ ಮನೆಗೆ ದಾಳಿ ಮಾಡಿರುವುದು ನಮ್ಮ ಇಲಾಖೆಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಷನ್ ಬೇಗ್ ಮತ್ತು ಝಮೀರ್ ಅಹ್ಮದ್ ಮನೆ ಮೇಲೆ ʼಇಡಿʼ ದಾಳಿ ನಡೆಸಿದ್ದು, ಇಡಿ ದಾಳಿಯನ್ನೇ ಐಟಿ ದಾಳಿ ಎಂದು ಬಹುತೇಕ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ. ಇದೀಗ ಐಟಿ ಇಲಾಖೆಯೇ ನಾವು ದಾಳಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ ಬಳಿಕ ಈಗ ಈ ಸುದ್ದಿ ಮಾಧ್ಯಮಗಳ ವರದಿಗಾರಿಕೆಯ ವಿಶ್ವಾಸಾರ್ಹತೆಯ ಮೇಲೆಯೇ ಅನುಮಾನಗಳು ಎದ್ದಿವೆ.
ಕೆಲವು ಮಾಧ್ಯಮಗಳಂತೂ ತೆರಿಗೆ ವಂಚನೆ ಪ್ರಕರಣದಲ್ಲಿ ಝಮೀರ್ ಮೇಲೆ ದಾಳಿ ಮಾಡಲಾಗಿದೆ ಎಂದೇ ಸುದ್ದಿ ಬಿತ್ತರಿಸಿತ್ತು. ಆದರೆ, ಈ ತಪ್ಪು ಮಾಹಿತಿ ಮಾಧ್ಯಮಗಳಿಗೆ ಎಲ್ಲಿಂದ ಲಭಿಸಿತು ಎನ್ನುವುದು ಈಗ ಪ್ರಶ್ನಾರ್ಹವಾಗಿದೆ.
ಐಟಿ ಇಲಾಖೆಯ ಮಾಧ್ಯಮ ಗ್ರೂಪಿನಲ್ಲಿ ಸ್ಪಷ್ಟನೆ ನೀಡಿರುವ ಅಧಿಕಾರಿ, “ಅನೇಕ ಟಿವಿ ಚಾನೆಲ್ಗಳು ಇಂದಿನ ಕಾರ್ಯಾಚರಣೆಯನ್ನು ತೆರಿಗೆ ಇಲಾಖೆಯ ಕಾರ್ಯಾಚರಣೆಯೆಂದು ವರದಿ ಮಾಡಿದೆ, ಆದರೆ ಇದು ನಮ್ಮ ಇಲಾಖೆಯ ಕಾರ್ಯಚರಣೆಯಲ್ಲ” ಎಂದು ಅವರು ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ಬೆಂಗಳೂರಿನ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮನೆ ಮತ್ತು ಕಚೇರಿಗಳ ಮೇಲೆ ಬೆಳ್ಳಗ್ಗೆ 6:00 ಘಂಟೆಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಇಡಿ ಅಧಿಕಾರಿಗಳು ಶಿವಾಜಿನಗರದ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಬಳಿ ಹೊಸದಾಗಿ ನಿರ್ಮಿಸಿರುವ ಬಂಗಲೆ , ಯುಬಿ ಸಿಟಿಯ ಫ್ಲ್ಯಾಟ್ , ಕಲಾಸಿಪಾಳ್ಯ ಮತ್ತು ಚಾಮರಾಜಪೇಟೆಯಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಛೇರಿ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ.
ದಾಳಿ ನಡೆಯುವ ಸ್ಥಳಗಳಲ್ಲಿ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು ಮತ್ತು ಸೂಕ್ತ ರೀತಿಯಲ್ಲಿ ಭದ್ರತೆ ಒದಗಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಶಿವಾಜಿನಗರದ ಮಾಜಿ ಶಾಸಕ ರೋಷನ್ ಬೇಗ್ ಮತ್ತು ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮನೆ ಮತ್ತು ಕಛೇರಿಗಳ ಮೇಲೆ ಇಡಿ ಅಧಿಕಾರಿಗಳು ಇಂದು ಬೆಳ್ಳಂಬೆಳ್ಳಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮನೆ ಮೇಲು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.

