
ಚೆನ್ನೈ: ವೈಎಸ್ಆರ್ ಕಾಂಗ್ರೆಸ್ನ ರಾಜ್ಯಸಭಾ ಸಂಸದ ಬೀಡಾ ಮಸ್ತಾನ್ ರಾವ್ ಅವರ ಪುತ್ರಿ ಬೀಡಾ ಮಾಧುರಿ ಮಂಗಳವಾರ ಮುಂಜಾನೆ ಬೆಸೆಂಟ್ನಗರದ ಪಾದಚಾರಿ ಮಾರ್ಗದಲ್ಲಿ ಮಲಗಿದ್ದ 21 ವರ್ಷದ ಯುವಕನ ಮೇಲೆ ಕಾರು ಹರಿಸಿದ ಪರಿಣಾಮವಾಗಿ ಆತ ಸಾವನ್ನಪ್ಪಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಮಾಧುರಿಯನ್ನು ಬಂಧಿಸಲಾಯಿತು ಆದರೆ ಅವರು ಕುಡಿದಿರಲಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದರಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ಬೆಸೆಂಟ್ ನಗರದ ಊರೂರು ಕುಪ್ಪಂ ನಿವಾಸಿ ಸೂರ್ಯ ಸೋಮವಾರ ರಾತ್ರಿ ತನ್ನ ಹೆಂಡತಿಯೊಂದಿಗೆ ಜಗಳವಾಡಿಕೊಂಡಿದ್ದು ರಾತ್ರಿ ಮನೆಯೊಂದ ಹೊರ ಹೋಗಿ ಎರಡು ಕಿಲೋಮೀಟರ್ ದೂರದಲ್ಲಿದ್ದ ಟೈಗರ್ ವರದಾಚಾರಿ ಸಾಲೈ ನ ಕಟ್ಟಡವೊಂದರ ಮುಂಭಾಗದಲ್ಲಿ ಮಲಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆತನನ್ನು ಹುಡುಕಿಕೊಂಡು ಹೆಂಡತಿ ವನಿತಾ ಹೋಗಿದ್ದು ಆತನು ಕುಡಿದು ಜಗಳವಾಡಿದಾಗಲೆಲ್ಲ ಅದೇ ಸ್ಥಳದಲ್ಲಿ ಮಲಗಿರುತಿದ್ದುದರ ಹಿನ್ನೆಲೆ ಅಲ್ಲಿಯೇ ರಸ್ತೆಯಲ್ಲಿ ಮಲಗಿದ್ದನ್ನು ಕಂಡಳು. ಆತನನ್ನು ಏಳಿಸಿ ಮನೆಗೆ ಕರೆದುಕೊಂಡು ಹೋಗಲು ಸಂಬಂಧಿಕರನ್ನು ಕರೆಯಲು ಹೋಗುತಿದ್ದಾಗ ಟೈಗರ್ ವರದಾಚಾರಿ ರಸ್ತೆಯಲ್ಲಿ ಅತ್ಯಾಧುನಿಕ ಕಾರೊಂದು ಅತೀ ವೇಗದಿಂದ ಬಂದು ಆಕೆಯ ಗಂಡನ ಮೇಲೆ ಹರಿದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಅಪಘಾತದ ನಂತರ ಬೀಡಾ ಮಾಧುರಿ ಚಲಾಯಿಸುತ್ತಿದ್ದ ಕಾರು ಸ್ವಲ್ಪ ಸಮಯ ನಿಲ್ಲಿಸಿತು, ಮತ್ತು ಅವಳು ಮತ್ತು ಅವಳ ಸ್ನೇಹಿತ ಘಟನಾ ಸ್ಥಳಕ್ಕೆ ಬಂದರು. ಅವರು ಆಂಬ್ಯುಲೆನ್ಸ್ಗೆ ಕರೆ ಮಾಡಿದರು. ಆದರೆ ಸ್ಥಳೀಯ ನಿವಾಸಿಗಳು ಜಮಾಯಿಸಲು ಪ್ರಾರಂಭಿಸಿದರು. ಗಾಯಗೊಂಡಿದ್ದ ಸೂರ್ಯ ಅವರನ್ನು ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಬರುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.
ಕಾರು ಚಾಲಕನನ್ನು ಬಂಧಿಸುವಂತೆ ಒತ್ತಾಯಿಸಿ ಊರೂರು ಕುಪ್ಪಂ ನಿವಾಸಿಗಳು ಪೊಲೀಸ್ ಠಾಣೆ ಎದುರು ಜಮಾಯಿಸಿದರು. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಬಳಸಿಕೊಂಡು ಪೊಲೀಸರು ಬೆಸೆಂಟ್ ನಗರದಲ್ಲಿರುವ ಮಾಧುರಿ ಅವರ ಸ್ನೇಹಿತೆಯ ಮನೆಯಲ್ಲಿದ್ದ ಕಾರನ್ನು ಪತ್ತೆಹಚ್ಚಿದ್ದಾರೆ. ಮಾಧುರಿಯ ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪವನ್ನು ಹೊರಿಸಿ ಪೋಲೀಸರು ಎಫ್ಐಆರ್ ದಾಖಲಿಸಿದ್ದಾರೆ. ತನಿಖೆ ಮುಂದುವರೆದಿದೆ.