ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗಬೇಕಿದ್ದ ನೆಹರು ಮೈದಾನ ಈವರೆಗೆ ಅಭಿವೃದ್ಧಿ ಕಾಣದೇ ಯುವಕರು ಕ್ರೀಡಾಚಟುವಟಿಗಳಿಂದ ದೂರ ಉಳಿಯುವ ಪರಿಸ್ಥಿತಿ ಉಂಟಾಗಿದ್ದು, ಕೂಡಲೇ ನೆಹರು ಮೈದಾನದ ಕೆಲಸ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ಯುವಕರು ಹುಬ್ಬಳ್ಳಿಯ ಪಾಲಿಕೆ ಆವರಣದಲ್ಲಿ ಬ್ಯಾಟ್, ಬಾಲ್ ಹಿಡಿದು ಕ್ರಿಕೆಟ್ ಆಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಪ್ರಾಕ್ಟೀಸ್ ಮಾಡುವುದಕ್ಕೆ ನೆಹರು ಮೈದಾನ ಕೇಂದ್ರ ಸ್ಥಳವಾಗಿದೆ. ಕಳೆದ ಎರಡು ವರ್ಷಗಳಿಂದ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಮೈದಾನವನ್ನು ಮೇಲ್ದರ್ಜೆಗೆ ಏರಿಸಲು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಆದರೆ ಈವರೆಗೆ ಮಾತ್ರ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಯುವಕರು ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ಸ್ಥಳಕ್ಕೆ ಬಂದ ಪಾಲಿಕೆ ಹಾಗು ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಆದಷ್ಟು ಬೇಗ ಕಾಮಗಾರಿ ಮುಗಿಸಿ ಕ್ರೀಡಾಂಗಣವನ್ನ ಬಳಕೆಗೆ ನೀಡಲಾಗುವುದು ಎಂದು ಭರವಸೆ ನೀಡಿದ ನಂತರ ಯುವಕರು ಪ್ರತಿಭಟನೆ ಕೈ ಬಿಟ್ಟು ತೆರಳಿದ್ದಾರೆ.