ಜಲಮಂಡಳಿ ಅಗೆದ ಗುಂಡಿಗೆ ಬಿದ್ದು ಬೈಕ್ ಸವಾರ ಮೃತಪಟ್ಟಿರುವ ಘಟನೆ ಬೆಂಗಳೂರಿನ ಎಂಎಸ್ ಪಾಳ್ಯದ ಮುನೇಶ್ವರ ಲೇಔಟ್ ರಸ್ತೆ ಬಳಿ ನಡೆದಿದೆ. 27 ವರ್ಷದ ಮೃತ ಅಶ್ವಿನ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಹಾವೇರಿ ಮೂಲದವರು ಎಂದು ತಿಳಿದು ಬಂದಿದೆ. ಪೋಷಕರಿಗೆ ಅಶ್ವಿನ್ ಒಬ್ಬನೇ ಮಗನಾಗಿದ್ದರು.
ಭಾನುವಾರ ರಾತ್ರಿ 9.20ರ ಸುಮಾರಿಗೆ ಅಶ್ವಿನ್ ತಮ್ಮ ತಾಯಿಗೆ ಆಹಾರ ಖರೀದಿಸಲು ಹೋಗಿದರು. ರೆಸ್ಟೊರೆಂಟ್ನಿಂದ ಮನೆಗೆ ವಾಪಸಾಗುತ್ತಿದ್ದಾಗ ರಸ್ತೆ ಗುಂಡಿಯನ್ನು ಗಮನಿಸಿದ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಅಪಘಾತವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಸ್ತೆಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅಶ್ವಿನ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಶ್ವಿನ್ ಅವರ ದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಲು 20-25 ನಿಮಿಷಗಳ ಕಾಲ ವಿಳಂಬವಾಯಿತು ಮತ್ತು ಆಸ್ಪತ್ರೆಗೆ ತಲುಪುವ ವೇಳೆಗೆ ಸಾಕಷ್ಟು ರಕ್ತ ಹೋಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಎರಡು ದಿನಗಳ ಹಿಂದೆ ನಾನು ಅವನಿಗೆ ಎಚ್ಚರಿಕೆಯಿಂದ ಸವಾರಿ ಮಾಡಲು ಹೇಳಿದ್ದೆ ಮತ್ತು ಅಪಾಯವನ್ನುಂಟುಮಾಡುವ ಗುಂಡಿಗಳ ಬಗ್ಗೆ ಕೂಡ ಹೇಳಿದ್ದೆ. ಅವನಿಂದಾಗಿ ನಾನು ಬದುಕಿದ್ದೇನೆ ಮತ್ತು ಅವನನ್ನು ಬೆಳೆಸಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ಆದರೆ ಈಗ ನನಗೆ ಬದುಕುವ ಉದ್ದೇಶವಿಲ್ಲ. ಯಾವ ತಾಯಿಯೂ ಈ ನೋವು ಅನುಭವಿಸಬಾರದು’ ಎಂದು ಅಶ್ವಿನ್ ತಾಯಿ ವಸುಧಾ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಪೋಷಕರಿಗೆ ಅಶ್ವಿನ್ ಒಬ್ಬನೇ ಮಗನಾಗಿದ್ದರು.
ಯಲಹಂಕ ಸಂಚಾರ ಪೊಲೀಸರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಬಿಡಬ್ಲ್ಯೂಎಸ್ಎಸ್ಬಿ) ಅಧಿಕಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯರು ರಸ್ತೆ ಗುಂಡಿಗಳನ್ನು ಮುಚ್ಚವ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ ಪೌರ ಸಂಸ್ಥೆ ಮತ್ತು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಘಟನೆ ನಡೆದ ಕೂಡಲೇ ಪಾಲಿಕೆ ಅಧಿಕಾರಿಗಳು ರಸ್ತೆ ಡಾಂಬರೀಕರಣಕ್ಕೆ ಧಾವಿಸಿದರು.
ಈ ಅಹಿತಕರ ಘಟನೆಯ ಬಗ್ಗೆ ವರದಿ ಕೇಳಿರುವುದಾಗಿ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಮ್ಯಾನ್ಹೋಲ್ ಬಳಿ ಪೈಪ್ಲೈನ್ ದುರಸ್ತಿಗಾಗಿ ರಸ್ತೆಯನ್ನು ಅಗೆದ ನಂತರ ಗುಂಡಿಯನ್ನು ಮುಚ್ಚಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಇನ್ನೊಬ್ಬ ನಿಗಮದ ಅಧಿಕಾರಿ ಒಳಚರಂಡಿ ಮಂಡಳಿಯನ್ನು ದೂರಿದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಗುಂಡಿಗಳನ್ನು ಮುಚ್ಚಲು ವಿಫಲವಾದ ಬಗ್ಗೆ ನಿಗಮದ ಇಂಜಿನಿಯರ್-ಇನ್-ಚೀಫ್ ತರಾಟೆಗೆ ತೆಗೆದುಕೊಂಡು ಬಂಧಿಸುವುದಾಗಿ ಹೇಳಿತ್ತು.
ಈ ಹಿಂದಿನ ಘಟನೆಗಳು
ಸೆಪ್ಟೆಂಬರ್ 17, 2021
ಟಿ ದಾಸರಹಳ್ಳಿಯ ಮಲ್ಲಸಂದ್ರದ ನಿವಾಸಿ ಎಸ್.ಆನಂದಪ್ಪ (47) ಎಂಬುವರು ಹೆಸರಘಟ್ಟ ಮುಖ್ಯರಸ್ತೆ ಬಳಿ ಒಳಚರಂಡಿ ಮಂಡಳಿ ಅಗೆದಿದ್ದ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದರು.
ಸೆಪ್ಟೆಂಬರ್ 6, 2021
ಮಸೀದಿಯಲ್ಲಿ ಕೆಲಸ ಮಾಡುತ್ತಿದ್ದ ಮೈಕೋ ಲೇಔಟ್ ನಿವಾಸಿ ಕುರ್ಷಿದ್ ಅಹ್ಮದ್ (75) ಎಂಬುವರು ನೀರು ತುಂಬಿದ ಗುಂಡಿಗೆ ಮೊಬಿಲಿಟಿ ಸ್ಕೂಟರ್ ಬಿದ್ದು ಸಾವನ್ನಪ್ಪಿದ್ದಾರೆ. ಸ್ಯಾನಿಟರಿ ಪೈಪ್ಲೈನ್ ಅಳವಡಿಸಲು ಒಂದು ವರ್ಷದ ಹಿಂದೆಯೇ ರಸ್ತೆಯನ್ನು ಅಗೆಯಲಾಗಿದ್ದು, ಅದನ್ನು ಗಮನಿಸದೆ ಹಾಗೆಯೇ ಬಿಡಲಾಗಿದೆ. ಘಟನೆಯ ಬಳಿಕ ಗುಂಡಿ ಮುಚ್ಚಲಾಯ್ತು.
ಜನವರಿ 30, 2022
ಮಾಗಡಿ ಮುಖ್ಯರಸ್ತೆಯಲ್ಲಿ ಟ್ರಕ್ ಹರಿದು ಪಿಲಿಯನ್ ರೈಡರ್ ಶರ್ಮಿಳಾ ಪ್ರಕಾಶ್ (40) ಮೃತಪಟ್ಟಿದ್ದರು. ಹದಗೆಟ್ಟ ರಸ್ತೆಯ ಹಾಗೂ ಹಳ್ಳಕೊಳ್ಳಗಳೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.