ಕಳೆದ ಹಲವು ದಿನಗಳಿಂದ ಹಿಜಾಬ್ ವಿಚಾರವಾಗಿ ವಾದ ವಿವಾದಗಳನ್ನು ಆಲಿಸಿದ ರಾಜ್ಯ ಹೈಕೋರ್ಟ್ ಇಂದು ತನ್ನ ತೀರ್ಪನ್ನು ಪ್ರಕಟಿಸಿದ್ದು, ಹೆಣ್ಮಕ್ಕಳ ಶಿಕ್ಷಣ ಪಡೆಯುವ ಹಕ್ಕನ್ನು ಕೋರ್ಟ್ ಎತ್ತಿ ಹಿಡಿದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯ ಪಟ್ಟಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಐತಿಹಾಸಿಕ ತೀರ್ಪನ್ನು ರಾಜ್ಯ ಹೈಕೋರ್ಟ್ ನೀಡಿದೆ. ಸರ್ಕಾರ ರೂಪಿಸಿದ ನಿಯಮದ ಪರವಾಗಿ ತೀರ್ಪು ಬಂದಿದೆ. ಹೆಣ್ಮಕ್ಕಳ ಶಿಕ್ಷಣ ಪಡೆಯುವ ಹಕ್ಕನ್ನು ಕೋರ್ಟ್ ಎತ್ತಿ ಹಿಡಿದಿದೆ ಎಂದು ಹೇಳಿದ್ದಾರೆ.
ನ್ಯಾಯಲಯದ ತೀರ್ಪು ನಮಗೆ ಸಂತೋಷ ಕೊಟ್ಟಿದೆ. ನ್ಯಾಯಾಲಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.ಈ ತೀರ್ಪನ್ನು ದೇಶ ವಿದೇಶಗಳು ಗಮನಿಸುತ್ತಿದ್ದವು. ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಯಾವುದೇ ಧರ್ಮ ಮತಾಂಧತೆ ಬೆಳೆಸಿಕೊಳ್ಳದೆ ಶಾಲೆಗಳಲ್ಲಿ ನಾವು ಅಣ್ಣ, ತಮ್ಮಂದಿರು, ಅಕ್ಕ- ತಂಗಿಯರು ಹಾಗೂ ವಿಶೇಷವಾಗಿ ಭಾರತ ಮಾತೆಯ ಮಕ್ಕಳು ಎಂದು ಸಂಸ್ಕಾರದಿಂದರಬೇಕು. ಸಂಸ್ಕಾರ ನೀಡುವಲ್ಲಿ ಶಾಲೆಯ ಸಮವಸ್ತ್ರಗಳು ವಿಧ್ಯಾರ್ಥಿಗಳ ಮನಸ್ಸಿನಲ್ಲಿ ದೊಡ್ಡ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಕೆಲವೊಂದು ಜಿಲ್ಲೆಗಳಲ್ಲಿ ಬಿಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಗೆ ನಿಯೋಜನೆ ಮಾಡಲಾಗಿದೆ.ಎಸ್ ಪಿಗಳು ಹಿರಿಯ ಪೊಲೀಸ್ ಅಧಿಕಾರಿಗಳು ಫೀಲ್ಡ್ ನಲ್ಲಿರಲು ಸೂಚಿಸಿದ್ದೇನೆ ಎಂದು ತಿಳಿಸಿದರು.
ಕಳೆದ ದಿನಗಳಿಂದ ರಾಜ್ಯದಲ್ಲಿ ಗಲಭೆಗೆ ಕಾರಣವಾಗಿದ್ದ್ ಹಿಜಾಬ್ ವಿವಾದ ಸಂಬಂಧ ಇಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ್ದು, ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ, ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ, ಸರ್ಕಾರದ ವಸ್ತ್ರ ಸಂಹಿತೆ ಪಾಲಿಸಬೇಕು ಎಂದು ಹೇಳಿದೆ.