ಕೇಂದ್ರ ಸರ್ಕಾರದ ವಿವಾದಾತ್ಮಕ ರೈತ ಮಸೂದೆ ವಿರೀಧಿಸಿ ರೈತ ಸಂಘಟನೆಗಳು ಇದೇ ತಿಂಗಳು 27ತಂದು ಭಾರತ್ ಬಂದ್ಗೆ ಕರೆಕೊಟ್ಟಿದ್ದಾರೆ, ಬಂದ್ ಬೆಂಬಲಿಸಿ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರು ನಗರದಲ್ಲಿ ಸೈಕಲ್ ಜಾಥ ಮಾಡುವ ಮೂಲಕ ಪ್ರತಿಭಟಿಸಿದ್ದಾರೆ.
ಪೆಟ್ರೋಲ್-ಡೀಸೆಲ್ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಏರುತ್ತಲೇ ಇದೆ. ಎಣ್ಣೆ ಬೇಳೆಕಾಳುಗಳು ಮತ್ತು ತರಕಾರಿ ಬೆಲೆ ಏರಿಕೆಯಿಂದಾಗಿ ಈಗಾಗಲೇ ಜನ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಕರೋನಾ ಲಾಕ್ಡೌನ್ ನಿಂದ ಆರ್ಥಿಕವಾಗಿ ಕುಗ್ಗಿರುವ ಜನರಿಗೆ ಬೆಲೆ ಏರಿಕೆ ಬಿಸಿ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ತೆರಿಗೆ ಏರಿಸುತ್ತಿರುವುದೇ ಬೆಲೆ ಏರಿಕೆಗೆ ಕಾರಣವಾಗಿದ್ದು, ಬೆಲೆ ಏರಿಕೆ ಖಂಡಿಸಿ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂದು ಸೈಕಲ್ ಜಾಥಾ ನಡೆಸಿದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ನೇತೃತ್ವದಲ್ಲಿ ಟ್ರಿನಿಟಿ ಸರ್ಕಲ್ ನಿಂದ ಬ್ರಿಗೇಡ್ ರೋಡ್ ವರೆಗೆ ಪೆಟ್ರೋಲ್, ಡಿಸೆಲ್, ಅಡುಗೆ ಅನಿಲ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸೈಕಲ್ ಜಾಥಾ ನಡೆಸಿದರು. ಈ ವೇಳೆ ಮಾತನಾಡಿದ ಬಿ.ವಿ. ಶ್ರೀನಿವಾಸ್, ಸೂಜಿಯಿಂದ ಹಿಡಿದು ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ದರ ಗಗನಮುಖಿಯಾಗಿದೆ. ಬೆಲೆ ಏರಿಕೆಗೆ ತಾಲಿಬಾನಿಗಳು ಕಾರಣ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಈ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ. ಬೆಲೆ ಏರಿಕೆ ನಿಯಂತ್ರಿಸದಿದ್ದರೆ ಯುವ ಕಾಂಗ್ರೆಸ್ ನಿಂದ ಇನ್ನೂ ದೊಡ್ಡಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಪ್ರತಿಧ್ವನಿಯೋಂದಿಗೆ ಮಾತನಾಡಿದ್ದ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಹ್ಯಾರಿಸ್ ನಾಲ್ ಪಾಡ್ ರವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ವದ್ಗಾಳಿ ನಡೆಸಿದರು.