ಬೆಂಗಳೂರು : ದೇಶದಲ್ಲಿನ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ನಿರಂತರ ಹೋರಾಟಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಬೆಂಬಲ ನೀಡಿದ್ದಾರೆ. ಶಾಂತಿಯು ಹೋರಾಟ ವಿಕೋಪಕ್ಕೆ ತಿರುಗಿದ್ದು ನಿಜಕ್ಕೂ ಬೇಸರದ ವಿಚಾರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದು ಅತ್ಯಂತ ಶಾಂತಿಯುತವಾದ ಚಳುವಳಿಯಾಗಿತ್ತು. ಗಾಯಗೊಂಡ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಬಗ್ಗೆ ನನಗೆ ಅಪಾರ ಕಾಳಜಿಯಿದೆ. ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಎಂಬುದು ಅತ್ಯಂತ ಗಂಭೀರವಾದ ವಿಷಯ. ಉತ್ತಮ ಶಿಕ್ಷಣ ವ್ಯವಸ್ಥೆಗಾಗಿ ನಮ್ಮ ದೇಶದ ಮಕ್ಕಳು ಒಗ್ಗೂಡಿರುವುದನ್ನು, ಅಲ್ಲದೆ ಅವರ ಪೋಷಕರು ಇದಕ್ಕೆ ಬೆಂಬಲ ನೀಡಿರುವುದನ್ನು ನೋಡಿ ನನಗೆ ಸಂತೋಷವಾಗುತ್ತಿದೆ ಎಂದು ತಿಳಿಸಿದ್ದಾರೆ.
ಕಠಿಣ ಪರಿಶ್ರಮದ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹಾಗೂ ಸುಶಿಕ್ಷಿತ ಮತ್ತು ಶ್ರೇಷ್ಠ ಭಾರತವನ್ನು ನಿರ್ಮಿಸಲು ಅವರು ತೋರಿದ ಬದ್ಧತೆ, ಪ್ರಾಮಾಣಿಕತೆ ಮತ್ತು ಆಸಕ್ತಿಯನ್ನು ನಾನು ನಿಜವಾಗಿಯೂ ಶ್ಲಾಘಿಸುತ್ತೇನೆ. ಈ ರೀತಿಯ ಪ್ರತಿಭಟನೆಯೇ ಸರಿಯಾದ ಮಾರ್ಗವಾಗಿದೆ ಮತ್ತು ವಿದ್ಯಾರ್ಥಿಗಳು ಇದನ್ನು ಶಾಂತಿಯುತವಾಗಿ ನಡೆಸಿದ್ದಾರೆ. ಅವರು ನಿಜಕ್ಕೂ ಧೈರ್ಯಶಾಲಿಗಳು. ಶಿಕ್ಷಣದ ಕಡೆಗೆ ದೃಢ ಸಂಕಲ್ಪ ಮತ್ತು ಪ್ರೇರಣೆಯನ್ನು ಹೊಂದಿರುವ ಈ ಪೀಳಿಗೆಯು ಭಾರತಕ್ಕೆ ಹೆಮ್ಮೆ ತರುತ್ತದೆ ಎಂದು ಸಲ್ಮಾನ್ ಖಾನ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ : ಬಿಜೆಪಿ ಶಾಸಕರ ಮೇಲೆ ಮೊಟ್ಟೆ ಎಸೆತ: ಆರೋಪಿ ಬಂಧನ
ಈ ವಿಚಾರ ವಿದ್ಯಾರ್ಥಿಗಳು ಮತ್ತು ಶಿಕ್ಷಣ ವ್ಯವಸ್ಥೆಯ ನಡುವಿನದ್ದಾಗಿದೆ; ಇದನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಬಾರದು. ಇದರ ಸಂಪೂರ್ಣ ಶ್ರೇಯಸ್ಸು ನಮ್ಮ ದೇಶದ ವಿದ್ಯಾರ್ಥಿಗಳಿಗೇ ಸಲ್ಲಬೇಕು. ಸರ್ಕಾರವು ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತದೆ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.
ಹೀಗಾದರೆ ಇದರಿಂದ ಎಲ್ಲರಿಗೂ ಲಾಭವಾಗಲಿದೆ. ಉತ್ತಮ ಸಕಾರಾತ್ಮಕ ನಿರ್ಧಾರಕ್ಕಾಗಿ ನಾನು ಆಶಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ಶಿಕ್ಷಣ ಪಡೆಯಲು ಬಯಸುವ ನಿಮ್ಮೆಲ್ಲರಿಗೂ ದೇವರು ಒಳಿತನ್ನು ಮಾಡಲಿ ಎಂದು ಹೋರಾಟ ನಿರತ ವಿದ್ಯಾರ್ಥಿಗಳಿಗೆ ಬಾಲಿವುಡ್ ಶುಭಾಶಯದ ಜೊತೆಗೆ ಹೋರಾಟದ ಸಂದೇಶ ರವಾನಿಸಿದ್ದಾರೆ.
ಶಿಕ್ಷಣವು ಮುಂದಿನ ದಿನಗಳಲ್ಲಿ ಒಂದು ಪ್ರಮುಖ ವೃತಿ ಮತ್ತು ಆಕರ್ಷಣೆಯಾಗಬೇಕು; ಅದು ವರ್ಷದಿಂದ ವರ್ಷಕ್ಕೆ ಹೆಚ್ಚು ಜನಪ್ರಿಯವಾಗಬೇಕು. ಅದೆಷ್ಟರ ಮಟ್ಟಿಗೆಂದರೆ, ವಿದೇಶಗಳಿಂದ ಜನರು ಶಿಕ್ಷಣಕ್ಕಾಗಿ ಭಾರತಕ್ಕೆ ಬರುವಂತಾಗಬೇಕು ಮತ್ತು ಭಾರತವು ಶಿಕ್ಷಣದ ಪ್ರಮುಖ ಕೇಂದ್ರವಾಗಿ (educational hub) ರೂಪುಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಹಂಚಿಕೊಂಡು ಬಾಲಿವುಡ್ ನಟ ಸಲ್ಮಾನ್ ಖಾನ್ ವಿದ್ಯಾರ್ಥಿಗಳ ಬೆನ್ನಿಗೆ ನಿಂತಿದ್ದಾರೆ.






