“ಪ್ರೀತಿಯ ಭಾರತೀಯರೇ, ನಮ್ಮ ಜೀವನದ ಬೆಳಕು ಇಂದು ನಂದಿ ಹೋಗಿದೆ. ಎಲ್ಲೆಡೆ ಕತ್ತಲೆ ಆವರಿಸಿದೆ. ನಾವು ಪ್ರೀತಿಯಿಂದ ಬಾಪೂ ಎಂದು ಕರೆಯುತ್ತಿದ್ದ ರಾಷ್ಟ್ರಪಿತ ಇನ್ನಿಲ್ಲ. ಬೆಳಕು ಆರಿ ಹೋಗಿದೆ ನಿಜ, ಆದರೆ ಅವರು ನೀಡಿದ ಬೆಳಕು ಸಾಮಾನ್ಯವಾದುದಲ್ಲ. ಸಾವಿರ ವರ್ಷ ಕಳೆದರೂ, ಆ ಬೆಳಕು ನಮಗೆ ದಾರಿ ತೋರುತ್ತದೆ,” ಭಾರತದ ಅಂದಿನ ಪ್ರಧಾನ ಮಂತ್ರಿಗಳಾದ ಜವಹರ್ಲಾಲ್ ನೆಹರೂ ಅವರು ಈ ಮಾತುಗಳನ್ನಾಡಿ ಇಂದಿಗೆ ಸರಿಯಾಗಿ 73 ವರ್ಷಗಳು ಕಳೆದವು. ಅಂದು ಅವರು ಹೇಳಿದ ಬೆಳಕು, ಇಂದಿಗೂ ಭಾರತದಲ್ಲಿ ಜೀವಂತವಾಗಿದೆ. ಚಳವಳಿ, ಸತ್ಯ ಮತ್ತು ಅಹಿಂಸೆಯ ಬೆಳಕು ಇಂದಿಗೂ ಭಾರತೀಯರಿಗೆ ದಾರಿ ತೋರುತ್ತಿದೆ.
ಮಹಾರಾಷ್ಟ್ರದ ಚಂಪಾವತ್ ಬ್ರಾಹ್ಮಣನಾದ ನಾಥೂರಾಮ್ ಗೋಡ್ಸೆಯ ಬಂದೂಕಿನಿಂದ ಹೊರಟಂತಹ ಮೂರು ಗುಂಡುಗಳು ಮಹಾತ್ಮ ಗಾಂಧಿಯನ್ನು ಬಲಿ ಪಡೆದವೇ ಹೊರತು, ಗಾಂಧಿ ತತ್ವಗಳನ್ನಲ್ಲ. ಸದಾ ತಮ್ಮ ಅನುಯಾಯಿಗಳಿಗೆ ಸತ್ಯ ಮತ್ತು ಅಹಿಂಸೆಯ ತತ್ವಗಳಿಂದ ದಾರಿ ತೋರುತ್ತಿದ್ದ ಗಾಂಧಿ, ಇಂದಿಗೂ ಆ ತತ್ವಗಳಿಂದಲೇ ಜೀವಂತವಾಗಿದ್ದಾರೆ. ಗಾಂಧಿ ಭಾರತದಲ್ಲಿ ಪ್ರತಿ ದಿನ ಹುಟ್ಟುತ್ತಾರೆ, ಆದರೆ ಅದೇ ಭಾರತದಲ್ಲಿ ಅವರನ್ನು ಪ್ರತಿ ದಿನ ಕೊಲ್ಲುತ್ತಾರೆ. ಅವರ ಹೆಸರಿನಲ್ಲಿ ಇಲ್ಲಿ ಓಟುಗಳನ್ನು ಪಡೆಯುತ್ತಾರೆ, ಅಧಿಕಾರ ಹಿಡಿದ ಮೇಲೆ ಅವರ ತತ್ವ ಸಿದ್ದಾಂತಗಳನ್ನು ಗಾಳಿಗೆ ತೂರುತ್ತಾರೆ. ಗಾಂಧಿ ಹೆಸರಿನಲ್ಲಿ ದೇಶದ ಕಾನೂನುಗಳು ರೂಪುಗೊಳ್ಳುತ್ತವೆ. ಯಾವ ಗಾಂಧಿ ಧರ್ಮದ ಹೆಸರಿನಲ್ಲಿ ದೇಶ ಕಟ್ಟುವುದು ಬೇಡ ಎಂದಿದ್ದರೋ, ಅದೇ ಗಾಂಧಿಯ ಹೆಸರಿನಲ್ಲಿ ಧರ್ಮದ ಆಧಾರದ ಮೇಲೆ ದೇಶದಲ್ಲಿ ಪೌರತ್ವ ನೀಡುವ ಮಾತುಗಳನ್ನಾಡುತ್ತಾರೆ. ಗಾಂಧಿ ಇಲ್ಲಿ ಪ್ರತಿದಿನ ಹುಟ್ಟುತ್ತಾರೆ, ಪ್ರತಿದಿನ ಸಾಯುತ್ತಾರೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಗಾಂಧಿಯವರನ್ನು ಕೊಲ್ಲಲು ಪ್ರಯತ್ನಿಸಿದವರಲ್ಲಿ ಗೋಡ್ಸೆ ಮೊದಲಿಗರಲ್ಲ. ಗೋಡ್ಸೆ ಗುಂಡಿನ ದಾಳಿ ನಡೆಸುವ ಹತ್ತು ದಿನಗಳ ಹಿಂದೆ ಮದನ್ಲಾಲ್ ಪಹ್ವಾ ಎನ್ನುವ ವ್ಯಕ್ತಿ ಗಾಂಧಿ ಅವರ ಮೇಲೆ ಬಾಂಬ್ ಎಸೆಯಲು ಪ್ರಯತ್ನಿಸಿದ್ದ. ಅಂದು ಎಸೆದ ಬಾಂಬ್ ಗುರಿ ತಪ್ಪಿದ್ದರಿಂದ ಗಾಂಧಿ ಬದುಕುಳಿದರು. ತಮ್ಮ ಜೀವಕ್ಕೆ ಅಪಾಯವಿದೆ ಎಂದು ಅರಿತಿದ್ದರೂ, ತಮ್ಮ ದೈನಂದಿನ ಚಟುವಟಿಕೆಯನ್ನು ಎಂದಿಗೂ ನಿಲ್ಲಿಸಲಿಲ್ಲ ಗಾಂಧಿ. ಮದನ್ಲಾಲ್ ಪಹ್ವಾ ಬಂಧನಕ್ಕೊಳಗಾದಾಗ, ಗಾಂಧಿ ಹತ್ಯೆಯ ಹಿಂದಿನ ಸಂಚನ್ನು ವಿವರವಾಗಿ ಬಯಲಿಗೆಳೆದಿದ್ದರು. ಈ ಷಡ್ಯಂತ್ರದ ಹಿಂದಿರುವ ವ್ಯಕ್ತಿಗಳನ್ನು ಕೂಡಲೇ ಬಂಧಿಸಿದ್ದರೆ, ಗೋಡ್ಸೆಯಂತಹ ಕಟುಕನ ಕೈಯಲ್ಲಿ ಗಾಂಧಿಜಿಯವರ ಹತ್ಯೆಯಾಗುವುದನ್ನು ತಡೆಯಬಹುದಿತ್ತೇನೋ. ಆದರೆ, ಅಂತಹ ಒಂದು ಕ್ಷಿಪ್ರ ಕಾರ್ಯಾಚರಣೆ ನಡೆಯಲೇ ಇಲ್ಲ.
ಇತ್ತೀಚಿಗೆ ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು, ಚಳವಳಿಗಳನ್ನು ಭಾರತದ ಎರಡನೇ ಸ್ವಾತಂತ್ರ್ಯ ಸಂಗ್ರಾಮವೆಂದೇ ಬಿಂಬಿಸಲಾಗಿದೆ. ಸಂವಿಧಾನದ ಮೂಲ ಆಶಯವನ್ನು ತಿರುಚುವಂತಹ ಕಾನೂನುಗಳನ್ನು ಸರ್ಕಾರ ಜಾರಿಗೆ ತರಲು ಪ್ರಯತ್ನಿಸುತ್ತಿರುವ ಸಂಧರ್ಭದಲ್ಲಿ ನಡೆದ ಚಳವಳಿಗಳು, ಭಾರತದಲ್ಲಿ ಗಾಂಧಿ ಇನ್ನೂ ಜೀವಂತವಾಗಿದ್ದಾರೆ ಎಂಬುದನ್ನು ನಿರೂಪಿಸಿದೆ. ಅಂದು ಗಾಂಧಿ ಹೇಗೆ ಬ್ರಿಟಿಷರ ಲಾಠಿಗಳಿಗೆ ದೇಹವೊಡ್ಡಿ ನಿಂತಿದ್ದರೋ, ಇಂದಿಗೂ ಭಾರತೀಯರು ಮತೀಯವಾದಿಗಳ ವಿರುದ್ದ ಸೆಟೆದು ನಿಂತಿದ್ದಾರೆ. ದೇಶವನ್ನು ವಿಭಜಿಸುವ ನಿರ್ಧಾರವನ್ನು ಗಾಂಧಿ ಹೇಗೆ ಧಿಕ್ಕರಿಸಿದ್ದರೋ, ಇಂದಿಗೂ ದೇಶ ವಿಭಜನೆಯನ್ನು ಭಾರತೀಯರು ಧಿಕ್ಕರಿಸುತ್ತಿದ್ದಾರೆ. ಗಾಂಧಿಯನ್ನು ಕೊಲ್ಲಬಹುದು ಆದರೆ, ಅವರು ಬೀಜವಾಗಿ ನೆಟ್ಟಿದ್ದ ಅವರ ಆಶಯಗಳು ಇಂದು ಮರವಾಗಿ ಬೆಳೆದಿವೆ, ಅವುಗಳನ್ನು ಹೇಗೆ ಕೊಲ್ಲುತ್ತೀರಿ?
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಾಗಿನಿಂದ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿವೆ. ಶಾಂತಿ ಕಾಪಾಡುವ ನೆಪದಲ್ಲಿ ಹೋರಾಟಗಾರರ ಮೇಲೆ ಗುಂಡಿನ ದಾಳಿ ನಡೆಸಿ ಅಶಾಂತಿ ಸೃಷ್ಟಿಸಲಾಗುತ್ತಿದೆ. ಆದರೂ, ಯಾವುದೇ ಬೆದರಿಕೆಗಳಿಗೆ ಬಗ್ಗದೇ, ಬೀದಿಗಿಳಿದು ಪ್ರತಿಭಟನೆ ಮಾಡುವ ಜನರ ಸಂಖ್ಯೆ ಇನ್ನೂ ಕುಗ್ಗಿಲ್ಲ. ಯಾವ ಹಿಂದೂ-ಮುಸ್ಲಿಂ ಭ್ರಾತೃತ್ವಕ್ಕಾಗಿ ಹೋರಾಡಿ ಗಾಂಧಿಜಿ ಪ್ರಾಣ ತ್ಯಾಗ ಮಾಡಿದರೋ, ಅದೇ ಧರ್ಮದ ಹೆಸರಿನಲ್ಲಿ ಇಂದು ಮತ್ತೊಮ್ಮೆ ದೇಶ ಒಡೆಯುವ ಸಂಧರ್ಭ ಎದುರಾದಾಗ, ಒಗ್ಗಟ್ಟಿನಿಂದ ಅದನ್ನು ವಿರೋಧಿಸಿದಾಗ ಮತ್ತೊಮ್ಮೆ ಭಾರತದಲ್ಲಿ ಗಾಂಧಿ ಜೀವಂತವಾಗಿದ್ದಾರೆ. ಸತ್ಯದ ಮುಖವಾಡದಲ್ಲಿ ಸುಳ್ಳನ್ನು ಮರೆಮಾಚಿ ಜನರನ್ನು ವಂಚಿಸುವ ಕಾಲದಲ್ಲಿ, ಸತ್ಯವನ್ನು ಬಯಲಿಗೆಳೆಯಲು ಭಾರತೀಯರು ಬೀದಿಗೆ ಇಳಿದು ಪ್ರತಿಭಟಿಸಿದ್ದು ಮಹಾತ್ಮಾ ಗಾಂಧಿ ಇನ್ನೂ ಈ ದೇಶದಲ್ಲಿ ಜೀವಂತವಾಗಿದ್ದಾರೆ ಎಂಬುದನ್ನು ನಿರೂಪಿಸಿ ಕೊಟ್ಟಿದೆ.
ಕಳೆದ ಜನವರಿ 12 ರಂದು ಕಲ್ಕತ್ತಾದ ರಾಮಕೃಷ್ಣ ಮಿಷನ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡುತ್ತಾ, ಮಹಾತ್ಮ ಗಾಂಧಿಯವರು ದಶಕಗಳ ಹಿಂದೆ ಬಯಸಿದಂತಹ ಪೌರತ್ವ ಕಾಯಿದೆಯನ್ನು ಇಂದು ನಾವು ಜಾರಿಗೆ ತರುತ್ತಿದ್ದೇವೆ, ಎಂದು ಹೇಳಿದರು. ಪಾಕಿಸ್ತಾನದಲ್ಲಿ ಧರ್ಮದ ಆಧಾರದ ಮೇಲೆ ಕಿರುಕುಳ ಅನುಭವಿಸುತ್ತಿರುವ ಮುಸ್ಲೀಮೇತರರಿಗೆ ಭಾರತದಲ್ಲಿ ಪೌರತ್ವವನ್ನು ನೀಡಬೇಕು ಎಂದು ಗಾಂಧಿಜಿಯವರ ಆಶಯವಾಗಿತ್ತು ಎಂಬ ಹಸಿ ಸುಳ್ಳನ್ನು ಸಾರ್ವಜನಿಕ ವೇದಿಕೆಯಲ್ಲಿ ಹೇಳಿದ್ದರು. ತಮ್ಮ ಅಜೆಂಡಾಗಳನ್ನು ಜಾರಿಗೆ ತರಲು, ಧರ್ಮ ಆಧಾರಿತ ದೇಶವನ್ನು ಕಟ್ಟಲು ಗಾಂಧಿಯಂತಹ ಮಹಾನ್ ಚೇತನದ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ದುರ್ದೈವ.
ಪಾಕಿಸ್ತಾನವನ್ನು ತೊರೆಯುವ ಮುಸ್ಲೀಮೇತರ ವ್ಯಕ್ತಿಗಳೊಂದಿಗೆ, ರಾಷ್ಟ್ರವಾದಿ ಮುಸ್ಲಿಮರು ಈ ದೇಶವನ್ನು ಸೇರಲು ಬಯಸುವುದಾದರೆ ಅವರಿಗೂ, ಎಲ್ಲರಂತೆಯೇ ಸ್ಥಾನಮಾನ ನೀಡಬೇಕು ಎಂದು ಮಹಾತ್ಮಾ ಗಾಂಧಿ ಸ್ಪಷ್ಟವಾಗಿ ಹೇಳಿದ್ದರು. ಈ ಮಾತುಗಳನ್ನು ತಮಗೆ ಬೇಕಾದ ರೀತಿಯಲ್ಲಿ ತಿರುಚಿ, ಒಂದು ಸಂಘಟನೆಯ ಅಜೆಂಡಾವನ್ನು ದೇಶದ ಮೇಲೆ ಹೇರಲು ಹೊರಟಾಗ ಎದುರಾದ ಪ್ರತಿಭಟನೆಯಲ್ಲಿ ಗಾಂಧಿಜಿಯವರು ಮತ್ತೊಮ್ಮೆ ಹುಟ್ಟಿ ಬಂದಿದ್ದಾರೆ ಎಂದರೆ ತಪ್ಪಾಗಲಾರದು.
ಮತೀಯವಾದವನ್ನು ವಿರೋಧಿಸುತ್ತಲೇ ಬದುಕಿ, ದೇಶಕ್ಕಾಗಿ ಸತ್ಯ ಮತ್ತು ಅಹಿಂಸೆಯ ಆಶಯಗಳನ್ನು ಧಾರೆಯಾಗಿ ನೀಡಿದ ವ್ಯಕ್ತಿ ಇವತ್ತು ನಮ್ಮ ಮಧ್ಯೆ ಇಲ್ಲದೇ ಇರಬಹುದು. ಆದರೆ, ಅವರು ದೇಶಕ್ಕೆ ನೀಡಿದ ಆದರ್ಶಗಳು ಇಂದಿಗೂ ಜೀವಂತವಾಗಿವೆ. ಅವರು ದೇಶಕ್ಕೆ ನೀಡಿರುವ ಬೆಳಕು ಇಂದಿಗೂ ನಮ್ಮೆಲ್ಲರಿಗೆ ದಾರಿ ತೋರಿಸುತ್ತಿದೆ. ಅವರ ಹೋರಾಟದ ಕಿಚ್ಚು ಇಂದಿಗೂ ಜೀವಂತವಾಗಿ ಉಳಿದಿದೆ. ದೇಶದಲ್ಲಿ ನಡೆಯುತ್ತಿರುವ ಚಳವಳಿಗಳು ಇಂದಿಗೂ ಜಗತ್ತಿಗೆ ಸಾರಿ ಹೇಳುತ್ತಿವೆ ʼನೀವು ಗಾಂಧಿಯನ್ನು ಕೊಲ್ಲಬಹುದು ಆದರೆ, ಅವರ ತತ್ವ ಸಿದ್ದಾಂತಗಳನ್ನಲ್ಲʼ.