ಶಿವಮೊಗ್ಗ: ಮಾಜಿ ಮುಖ್ಯಮತ್ರಿ ಬಿ.ಎಸ್. ಯಡಿಯೂರಪ್ಪ ಅವರ ಛಲದಂತೆ ನಿರ್ಮಾಣವಾದ ವಿಮಾನ ನಿಲ್ದಾಣ ಇದಾಗಿದ್ದು, ಇದಕ್ಕೆ ಯಡಿಯೂರಪ್ಪ ಹೆಸರನ್ನೇ ಇಡಬೇಕೆಂದು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬುಧವಾರ ಕೆ.ಎಸ್ ಈಶ್ವರಪ್ಪ ಕ್ಷೇತ್ರದಲ್ಲಿ ಸಾವಿರಾರು ಕೋಟಿ ಅನುದಾನಲ್ಲಿ ನಾನಾ ಕಾರ್ಯಕ್ರಮಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಹೆಸರನ್ನು ನಾವು ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡುತ್ತೇವೆ ಎಂದರು.
ಶಿವಮೊಗ್ಗ ವಿಮಾನ ನಿಲ್ದಾಣ ಪ್ರಧಾನಿ ನರೇಂದ್ರ ಮೋದಿಯವರ ಅಮೃತಹಸ್ತದಿಂದ ಫೆ.27ರಂದು ಉದ್ಘಾಟನೆ ಆಗಲಿದೆ ಎಂದ ಅವರು, 18 ತಿಂಗಳಲ್ಲಿ ನಿಲ್ದಾಣ ಆಗಿರೋದು ದಾಖಲೆ. ಇದು ಆರಂಭವಾದರೆ ಈ ಭಾಗದಲ್ಲಿ ಶೈಕ್ಷಣಿಕ ಪ್ರವಾಸೋದ್ಯಮ, ಔದ್ಯೋಗಿಕ ಹೀಗೆ ಎಲ್ಲ ದೃಷ್ಟಿಯಿಂದ ಲಾಭವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈಶ್ವರಪ್ಪ ಎಲ್ಲಾ ಇಲಾಖೆಗಳಲ್ಲೂ ಅನುದಾನವನ್ನ ತಂದಿದ್ದಾರೆ. ನಮ್ಮ ಸಂಘದಲ್ಲಿ ನಾವು ಪದೇ ಪದೇ ಉಪಯೋಗ ಮಾಡುವಂತಹ ಸಾಲು ‘ಸರ್ವ ವ್ಯಾಪಿ ಸರ್ವ ಸ್ಪರ್ಶಿ’ ಎಂದು. ಈಶ್ವರಪ್ಪನವರ ದೃಷ್ಟಿ ಹಾಗೂ ಅಭಿವೃದ್ಧಿ ಈ ಮಾತಿಗೆ ಹೋಲಿಕೆಯಾಗುತ್ತದೆ. ಸಣ್ಣ ಸಣ್ಣ ಸಮುದಾಯಗಳನ್ನು ಕೂಡ ಮುಟ್ಟಿದ್ದಾರೆ ಎಂದು ಹೇಳಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗೆಲ್ಲಾ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ. ಶಿವಮೊಗ್ಗ ಕರ್ನಾಟಕದಲ್ಲಿ ವೇಗವಾಗಿ ಬೆಳೆಯುತ್ತಿರುವ ಟೈರ್ 2 ಸಿಟಿ. ಇಲ್ಲಿ ವ್ಯಾಪಾರ ವಹಿವಾಟಿಗೆ, ವ್ಯವಹಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದನ್ನು ನೋಡಿದರೆ ಭವಿಷ್ಯದ ನಗರ ಎಂಬುದು ತಿಳಿಯುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ರಾಣೇಬೆನ್ನೂರು ರೈಲ್ವೆಗೆ, 500 ಕೋಟಿ ಮಂಜೂರಾಗಿದೆ. ಇದರ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡಬೇಕಾಗುತ್ತದೆ. ಅಭಿವೃದ್ಧಿ ನಿರಂತರ ಪಕ್ರಿಯೆ. ಅದಕ್ಕೆ ಪ್ರತೀಕ ಯಡಿಯೂರಪ್ಪ ಹಾಗೂ ಈಶ್ವರಪ್ಪ ಎಂದರು.












