ಶಿವಮೊಗ್ಗ: . ರಾಜ್ಯ ಬಿಜೆಪಿ ಸರ್ಕಾರ ಅವಧಿ ಇನ್ನು 60 ದಿನ ಮಾತ್ರ. ನಂತರ ಜನ ಬಿಜೆಪಿಯವರಿಗೆ ಗಂಟೂಮೂಟೆ ಕಟ್ಟಿ ಮನೆಗೆ ಕಳಿಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ತೀರ್ಥಹಳ್ಳಿ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಯವರು ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ? ಜನ ಇವರನ್ನು ಮನೆಗೆ ಕಳಿಸುವ ಸಂಕಲ್ಪ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಅರಗ ಜ್ಞಾನೇದ್ರ ಅವರು ಕಾರ್ಯಕರ್ತರ ಮೇಲೆ ಕೇಸು ಹಾಕಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಪಿಎಸ್’ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಅಧಿಕಾರಿಗಳನ್ನು ಜೈಲಿಗೆ ಹಾಕುವುದರ ಜತೆಗೆ ಇದಕ್ಕೆ ಕಾರಣರಾದ ಮಂತ್ರಿಗಳನ್ನು ಒಳಗೆ ಹಾಕಬೇಕು ಎಂದು ಹರಿಹಾಯ್ದರು.
ನಾವು ಉತ್ತಮ ಆಡಳಿತ ನೀಡಿದ್ದರೂ ಜನ ನಮ್ಮನ್ನು ಬೆಂಬಲಿಸಲಿಲ್ಲ. ರಾಜ್ಯದಲ್ಲಿ ಕೋಮುವಾದಿ ಪಕ್ಷವನ್ನು ದೂರವಿಡಲು ಕುಮಾರಸ್ವಾಮಿ ಅವರಿಗೆ ಬೇಷರತ್ ಬೆಂಬಲ ನೀಡಿದೆವು. ಕುಮಾರಸ್ವಾಮಿ ಅವರು ಸರ್ಕಾರ ಉಳಿಸಿಕೊಳ್ಳಲಿಲ್ಲ. ಬಿಜೆಪಿ ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿತು. ಅಧಿಕಾರಕ್ಕೆ ಬಂದ ನಂತರ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂದು ತಿಳಿಸಿದರು.

ಶಿವಮೊಗ್ಗ ಅಭಿವೃದ್ಧಿ ಆಗಿದೆ ಎಂದು ಹೇಳುತ್ತಾರೆ. ಅಭಿವೃದ್ಧಿ ಆಗಿದ್ದರೆ, ಇತ್ತೀಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆಯಲ್ಲಿ 10 ಲಕ್ಷ ಕೋಟಿ ಬಂದಿದೆ ಎಂದರು. ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಬಂಡವಾಳವೇ ಬಂದಿಲ್ಲ. ಈ ಬಂಡವಾಳ ಬಂದರೆ ಉದ್ಯೋಗ ಸೃಷ್ಟಿಯಾಗುತ್ತದೆ. ಆದರೆ ಈ ಸರ್ಕಾರ ಮಲೆನಾಡು ಕರಾವಳಿ ಭಾಗದಲ್ಲಿ ಜಾತಿ, ಧರ್ಮಗಳ ನಡುವೆ ಜಗಳ ಸೃಷ್ಟಿಸಿ ರಾಜಕಾರಣ ಮಾಡುತ್ತಾರೆ ಎಂದು ಕಿಡಿಕಾರಿದರು.
ಅರಣ್ಯ ಹಕ್ಕು ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ತಿದ್ದುಪಡಿ ತಂದು ಎಲ್ಲ ಸಮುದಾಯದವರಿಗೂ 25 ವರ್ಷಗಳ ಮಿತಿಯನ್ನು ಕಡಿಮೆ ಮಾಡುತ್ತೇವೆ. ನಮ್ಮ ಪಕ್ಷ ಕರಾವಳಿ, ಮಲೆನಾಡು ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ ನೀಡಲು ನಿರ್ಧರಿಸಿದ್ದೇವೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಈಗಾಗಲೇ ವಿಶೇಷ ಯೋಜನೆ ಘೋಷಣೆ ಮಾಡಿದ್ದೇವೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಕಾರ್ಯಕ್ರಮ ಘೋಷಿಸಿದ್ದೇವೆ ಎಂದು ತಿಳಿಸಿದರು.
200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಿದ್ದೇವೆ. ಪ್ರತಿ ಮನೆ ಯಜಮಾನಿಗೆ 2000 ರೂ. ಪ್ರತಿ ತಿಂಗಳು ಕೊಡ್ತೇವೆ. ವರ್ಷಕ್ಕೆ ಒಟ್ಟು 42 ಸಾವಿರದಂತೆ 5 ವರ್ಷಕ್ಕೆ 2 ಲಕ್ಷ ಕೊಡ್ತೆವೆ. ಜತೆಗೆ 10 ಕೆಜಿ ಅಕ್ಕಿ. ನಾನು ಸಿದ್ದರಾಮಯ್ಯ ಸಹಿ ಹಾಕಿರೋ ಗ್ಯಾರಂಟಿ ಕಾರ್ಡ್ ನಿಮ್ಮ ಮನೆಗೆ ಬರ್ತದೆ. ಇನ್ನು ಪ್ರತಿ ಮನೆಗೆ ನೀಡಲಾಗುವ 5 ಕೆ.ಜಿ ಅಕ್ಕಿಯನ್ನು 10 ಕೆ.ಜಿಗೆ ಏರಿಕೆ ಮಾಡುತ್ತೇವೆ ಎಂದು ಹೇಳಿದರು.
ಈ ಕ್ಷೇತ್ರದಲ್ಲಿ ಇಬ್ಬರು ಟಿಕೆಟ್’ಗೆ ಅರ್ಜಿ ಹಾಕಿದ್ದಾರೆ. ಈ ಇಬ್ಬರನ್ನು ನಾವು ವಿಧಾನಸೌಧದಲ್ಲಿ ಕೂರುವಂತೆ ಮಾಡುತ್ತೇವೆ. ನೀವು ಒಗ್ಗಟ್ಟಾಗಿ ಕೆಲಸ ಮಾಡಿ. ನಾವು ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರೆ ನೀವು ಅವರ ಪರವಾಗಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.