
ಬೆಳಗಾವಿ: ಯತ್ನಾಳ್ ಮುತ್ಸದ್ಧಿಗಳು, ನಮ್ಮ ಸಮಾಜದ ಹಿರಿಯ ನಾಯಕರು. ಆದರೆ ಅವರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಬೆಂಕಿ ಹಚ್ಚಲು ಯತ್ನಿಸುತ್ತಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದ್ದಾರೆ.
ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 136 ಸ್ಥಾನ ಪಡೆದು ಜನಾಶೀರ್ವಾದ ಗಳಿಸಿರುವ ನಮ್ಮ ಪಕ್ಷದ ಸರ್ಕಾರವನ್ನು ಬಸನಗೌಡ ಪಾಟೀಲ್ ಯತ್ನಾಳ್ ಅಲುಗಾಡಿಸಲೂ ಸಾಧ್ಯವಿಲ್ಲ ಎಂದರು.ಬಿವೈ ವಿಜಯೇಂದ್ರ ಹಾಗೂ ಡಿಕೆ ಶಿವಿಕುಮಾರ್ ಮಧ್ಯೆ ಹೊಂದಾಣಿಕೆ ರಾಜಕಾರಣ ಇದೆ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅವರ ರಾಜಕೀಯ ಹೇಳಿಕೆಗಳನ್ನು ನೋಡಿ. ಅವರು ಯಾವತ್ತಿದ್ರೂ ಯಡಿಯೂರಪ್ಪನವರ ವಿರುದ್ಧ ಹೇಳಿಕೆ ಕೊಡುತ್ತಾರೆ. ಅವರ ಹೇಳಿಕೆ ಕೇಳಿ ನನಗೂ ಆಶ್ಚರ್ಯವಾಯಿತು.
ಇವರು ತಮ್ಮ ಪಕ್ಷದ ಬಗ್ಗೆ ಮಾತನಾಡಲಿ, ಇನ್ನೊಬ್ಬರ ಬಗ್ಗೆ ಏಕೆ ಮಾತನಾಡ್ತಾರೆ ಎಂದು ಗುಡುಗಿದ್ದಾರೆ.ಈ ರೀತಿ ಬೇಜವಾಬ್ದಾರಿ ಹೇಳಿಕೆ ಶೋಭೆ ತರಲ್ಲ. ಯತ್ನಾಳ್ ಅಣ್ಣನವರು ಕೇವಲ ಗೊಂದಲ ಸೃಷ್ಟಿ ಮಾಡೋಕೆ ಹೋಗುತ್ತಾರೆ. ವಿಜಯೇಂದ್ರಗೂ, ಡಿ.ಕೆ.ಶಿವಕುಮಾರ್ ಅವರಿಗೂ ಏನ್ ಸಂಬಂಧ?. ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರು. ಹೈಕಮಾಂಡ್ ಆಶೀರ್ವಾದದಿಂದ ಡಿಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಸಾಹೇಬ್ರು ಸಿಎಂ ಆಗಿ ಒಳ್ಳೆಯ ರೀತಿ ಆಡಳಿತ ಮಾಡ್ತಿದ್ದಾರೆ.
ಈ ಸಂದರ್ಭದಲ್ಲಿ ಗೊಂದಲ ಸೃಷ್ಟಿ ಮಾಡಿ ಬೆಂಕಿ ಹಚ್ಚಲು ಯತ್ನಾಳ್ ಅಣ್ಣ ಯತ್ನಿಸುತ್ತಿದ್ದರೆ ಅದು ಸಾಧ್ಯವಿಲ್ಲ. ಇಬ್ಬರ ಸಂಬಂಧ ಹಳಸಬೇಕು ಅಂತಾ ಹೊರಟಿದ್ರೆ ಇದು ಸಾಧ್ಯವಿಲ್ಲ ಎಂದು ಹೆಬ್ಬಾಳ್ಕರ್ ಹೇಳಿದರು.