ಪಂಚಮಸಾಲಿ ಸಮುದಾಯವನ್ನು 2A ಮೀಸಲಾತಿ ಕೊಡಬೇಕು ಅನ್ನೋ ಹೋರಾಟ ಅಂತಿಮ ಘಟ್ಟಕ್ಕೆ ಬಂದಿದೆ. ಕಳೆದ ಬಾರಿ ಪಂಚಮಸಾಲಿ ಹೋರಾಟದ ವೇಳೆ ಡಿಸೆಂಬರ್ 19ರ ಒಳಗೆ ಮೀಸಲಾತಿ ಕೊಡ್ತೇವೆ ಎಂದಿದ್ದರು. ಆದರೆ ಇಲ್ಲೀವರೆಗೂ ಮೀಸಲಾತಿ ಘೋಷಣೆ ಮಾಡಿಲ್ಲ. ಹೀಗಾಗಿ ಹೋರಾಟದ ನೇತೃತ್ವ ವಹಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ. ಡಿಸೆಂಬರ್ 19ಕ್ಕೆ ಘೋಷಣೆ ಮಾಡಿದ್ರೆ ಬೆಳಗಾವಿಯಲ್ಲಿ ಡಿಸೆಂಬರ್ 22ಕ್ಕೆ ಸನ್ಮಾನ ಮಾಡಲಾಗುತ್ತದೆ. ಇಲ್ಲದಿದ್ದರೆ ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದ 25 ಲಕ್ಷ ಜನರನ್ನು ಸೇರಿಸುತ್ತೇವೆ, ಸರ್ಕಾರಕ್ಕೆ ಘೇರಾವ್ ಮಾಡ್ತೇವೆ ಎಂದು ಕಟ್ಟು ನಿಟ್ಟಾಗಿ ಹೇಳಿದ್ದಾರೆ.
ಪಂಚಮಸಾಲಿ ಮೀಸಲಾತಿಗೆ ಸಮುದಾಯದ ವಿರೋಧ ಇದ್ಯಾ..?
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ರೀತಿಯ ಅನುಮಾನ ವ್ಯಕ್ತಪಡಿಸಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ಸಿಗುತ್ತದೆ ಎನ್ನುವ ಭರಸವೆ ಬಂದಿದೆ. ಈ ಭರವಸೆ ಬಂದ ಮೇಲೆ ಹೊಸ ನಾಟಕ ಕಂಪನಿ ಶುರುವಾಗಿವೆ. ಸಮುದಾಯದ ಮೀಸಲಾತಿಗಾಗಿ ನಾನು ಪ್ರಾಣ ಕೋಡ್ತೀನಿ ಎಂದಿದ್ದಾರೆ. ಆದರೆ ನೀನ್ಯಾಕೆ ಪ್ರಾಣ ಕೋಡ್ತಿಯೋ ಹುಚ್ಚ ಸ್ವಾಮಿ ಎಂದು ಬಸವನಗೌಡ ಪಾಟೀಲ್ ಯತ್ನಾಳ್ ಪರೋಕ್ಷವಾಗಿ ಹರಿಹರ ಪೀಠದ ವಚನಾನಂದ ಸ್ವಾಮೀಜಿಯನ್ನು ಹಿಯ್ಯಾಳೀಸಿದ್ದಾರೆ. ಗದಗದಲ್ಲಿ ನಡೆದ ಪಂಚಮಸಾಲಿ 2A ಮೀಸಲಾತಿ ಹಕ್ಕೊತ್ತಾಯ ಸಮಾವೇಶದಲ್ಲಿ ಕಿಡಿಕಾರಿದ್ದಾರೆ. ಏರ್ ಕಂಡೀಶನ್ ಮಠದಿಂದ ಹೊರಗಡೆ ಬಂದು ಕೂಡಲ ಸಂಗಮ ಸ್ವಾಮೀಜಿ ಹಾಗೇ ಓಡಾಡಿದ್ರೆ ಕಾಲಲ್ಲಿ ಗುಳ್ಳೆ ಬರ್ತಾವೆ ಅಂತಾ ಅರ್ಧಕ್ಕೆ ಓಡಿ ಹೋದವನು ಎಂದು ಕಿಚಾಯಿಸಿದ್ದಾರೆ.
ಪಂಚಮಸಾಲಿ ಸಮುದಾಯದ ಹೋರಾಟ ತಡೆಯಲು 10 ಕೋಟಿ..!
ಕಳೆದ ಕೆಲವು ತಿಂಗಳ ಹಿಂದೆ ಪಂಚಮಸಾಲಿ ಸಮುದಾಯ ಕೂಡಲ ಸಂಗಮದಿಂದ ಆರಂಭ ಮಾಡಿ ಬೆಂಗಳೂರಿನ ತನಕ ಪಾದಯಾತ್ರೆ ಮಾಡಿತ್ತು. ಈ ವೇಳೆ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿಗಳಿಗೆ 10 ಕೋಟಿ ರೂಪಾಯಿ ಕೊಡುವ ಆಫರ್ ಬಂದಿತ್ತು. ‘ಗುರುಗಳೇ ನೀವು ಸುಮ್ಮನೆ ಇರ್ರಿ ಅಂತ ಒಬ್ಬ ರಾಜಕೀಯ ಪ್ರತಿನಿಧಿ ಬಂದಿದ್ದ, ಹಿಂದಿನ ಮುಖ್ಯಮಂತ್ರಿಗಳ ರಾಜಕೀಯ ಪ್ರತಿನಿಧಿ, ಯಾಕೆ ಪಾದಯಾತ್ರೆ ಮಾಡುತ್ತೀರಿ ಆರಾಮಾಗಿರಿ, ಅಲ್ಲಿ ಹೇಗೆ ಹರಿಹರ ಪೀಠಕ್ಕೆ 10 ಕೋಟಿ ರೂಪಾಯಿ ಕೊಟ್ಟಿದ್ದೇವೆ, ಹಾಗೆ ನಿಮಗೆ 10 ಕೋಟಿ ರೂಪಾಯಿ ಕೊಡುತ್ತೇವೆ, ಒಳ್ಳೆಯ ಮಠ ಮಾಡಿಕೊಂಡು ಇರಿ ಎಂದಿದ್ದ. ಆದರೆ ನಾನು ಮೊದಲೇ ಕೂಡಲಸಂಗಮ ಶ್ರೀಗಳಿಗೆ ಷರತ್ತು ಹಾಕಿದ್ದೆ. ಕೂಡಸಂಗಮದಿಂದ ಹೊರಟ ಪಾದಯಾತ್ರೆ ಬೆಂಗಳೂರು ಹೋಗಬೇಕು. ಹಾದಿಯಲ್ಲಿ ಎಲ್ಲಾದ್ರೂ ದಿಕ್ಕು ತಪ್ಪಿದ್ರೆ ನಾನು ಜಗಳ ತೆಗಿತೀನಿ ಅಂತ ಹೇಳಿದ್ದೆ. ಸ್ವಾಮೀಜಿಗೆ ಬೇಕಾದಷ್ಟು ಆಸೆ ಆಮೀಷಗಳು ಬಂದ್ವು. ಹೆದರಿಸುವ ಕೆಲಸವೂ ಆಯ್ತು, ಬ್ಲ್ಯಾಕ್ ಮೇಲ್ ಕೂಡ ಮಾಡಿದರು ಎಂದು ಬಿಜೆಪಿ ಸರ್ಕಾರದಲ್ಲಿ ನಡೆದ ಘಟನೆಗಳನ್ನೇ ಬಿಚ್ಚಿಟ್ಟಿದ್ದಾರೆ.
ವಿಜಯೇಂದ್ರ ಪಂಚಮಸಾಲಿ ವಿರೋಧವಾಗಿ ಇದ್ದಾರಾ..?
ವಿಜಯೇಂದ್ರ ಹೆಸರು ಹೇಳದೆ ಚಾಟಿ ಬೀಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇನ್ನು ಕೂಡ ಬ್ಲಾಕ್ ಮೇಲ್ ಮಾಡಲಾಗ್ತಿದೆ. ಅವರಿಗೆ ಹೇಳೋಕೆ ಬಯಸುತ್ತಿದ್ದೇನೆ, ನೀವೇನಾದ್ರು ಆಟ ಆಡಿದ್ರೆ ನಿಮ್ಮಪ್ಪನಷ್ಟು ನಮ್ಮಲ್ಲಿ ಇದ್ದಾವೆ. ನೀವೇನು ಮಾಜಿ ಮುಖ್ಯಮಂತ್ರಿಗಳ ಮಗ ಇರಬಹುದು, ನಿಮ್ಮಲ್ಲಿ ನಾಲ್ಕು ಐದು ಸಾವಿರ ಕೋಟಿ ರೊಕ್ಕ ಇರಬಹುದು. ನಮ್ಮ ಸಮಾಜದ ಬಗ್ಗೆ ಏನಾದರೂ ಮಾಡಿದ್ರೆ..! ನಿನಗೆ ಮಣ್ಣ ಕೊಡುವುದಕ್ಕೆ ನಮ್ಮ ಸಮಾಜ ಇದೆ, ನಾವು ಮಣ್ಣು ಕೋಡ್ತಿವಿ. ಸುಮ್ಮನೆ ಕುಂತಿದ್ದೀವಿ ಅಂದ್ರೆ ಅದರ ಅರ್ಥ ಗುರುಗಳನ್ನು ಅಂಚಿಸೋದಾ..? ಎಂದು ಮಾಜಿ ಸಿಎಂ ಮಗನಿಗೆ ಟಾಂಗ್ ಕೊಟ್ಟಿದ್ದಾರೆ. ಬಿ.ವೈ ವಿಜಯೇಂದ್ರ ಅವರ ಹೆಸರು ಉಲ್ಲೇಖ ಮಾಡಿಲ್ಲ. ಆದರೆ ಯಡಿಯೂರಪ್ಪ ಸಿಎಂ ಆಗಿದ್ದಾಗಿನಿಂದಲೂ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿಜಯೇಂದ್ರ ವಿರುದ್ಧ ಗುಡುಗುತ್ತಿದ್ದಾರೆ ಅನ್ನೋದು ಊಹೆ ಮಾಡುವ ಸಂಗತಿ.
ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ತಡ ಯಾಕೆ..?
ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಹಕ್ಕೊತ್ತಾಯ ಸಮಾವೇಶದಲ್ಲಿ ಯತ್ನಾಳ್ ಇದಕ್ಕೂ ಉತ್ತರ ಕೊಟ್ಟಿದ್ದಾರೆ. ಪಂಚಮಸಾಲಿ ಸಮುದಾಯದ ಹೋರಾಟ ಕೊನೇ ಹಂತಕ್ಕೆ ಬಂದಿದೆ. ನಮ್ಮದು ಈವಾಗ ಕೊನೆಯ ಹೋರಾಟ, ಇನ್ನು ಮುಂದೆ ಏನ್ನು ಆಗೋದಿಲ್ಲ, ಈಗಲೇ ಬಸವರಾಜ್ ಬೊಮ್ಮಾಯಿ ಅವರು ಮಾಡಬೇಕು, ಮಾಡದಿದ್ದರೆ ಅನುಭವಿಸಬೇಕು, ಮತ್ತೇನೋ ಉಳಿದಿಲ್ಲ. ಡಾ: ಬಿ ಆರ್ ಅಂಬೇಡ್ಕರ್ ಅವರು ನಮಗೆ ದೊಡ್ಡ ಶಕ್ತಿ ಕೋಟ್ಟಿದ್ದಾರೆ. ಈ ದೇಶದ ಟಾಟಾಗೂ ಒಂದೆ ವೋಟ್, ಗುಡಿಸಿಲಿನಲ್ಲಿ ಇರೋವವನಿಗೂ ಒಂದೇ ವೋಟ್. ವೋಟ್ ನಲ್ಲೆ ಏನ್ ಮಾಡ್ತೀವಿ ಅನ್ನೋದು ನಮಗೆ ಗೊತ್ತು ಎಂದು ಎಂದು ಸಿಎಂಗೆ ಮತ ಬೆದರಿಕೆ ಹಾಕಿದ್ದಾರೆ. ಇನ್ನು ಈಗ ಮೀಸಲಾತಿ ಕೊಟ್ಟರೆ ನಮಗೆ ಹಾಗು ಜಯ ಮೃತ್ಯುಂಜಯ ಸ್ವಾಮೀಜಿಗೆ ಹೆಸರು ಬಂದು ಬಿಡುತ್ತೆ ಅಂತಾ ತಡೆಯುತ್ತಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ದೊಡ್ಡ ಜಾತ್ರೆ ಮಾಡ್ತೇನೆ, ಆಗ ಜಾತ್ರೆಯಲ್ಲಿ ಘೋಷಣೆ ಮಾಡಿ ಅಂತಿದ್ದಾರೆ. ಆದರೆ ಅದೆಲ್ಲಾ ಆಗಲ್ಲ, ಈಗಲೇ ಘೋಷಣೆ ಮಾಡ್ಬೇಕು ಅಂತಾ ಹರಿಹರ ಪೀಠದ ವಚನಾನಂದ ಶ್ರೀಗಳು ಕುತಂತ್ರ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕೃಷ್ಣಮಣಿ