
ಬೆಂಗಳೂರು: ಸೈದ್ಧಾಂತಿಕ ನಾಯಕತ್ವ ಮತ್ತು ಸತೀಶ್ ಜಾರಕಿಹೊಳಿ ಬಗ್ಗೆ ಮಾತಾನಾಡಿದ್ದ ಯತೀಂದ್ರ ಸಿದ್ದರಾಮಯ್ಯಗೆ ನೋಟಿಸ್ ನೀಡಬೇಕೆಂದು ಡಿಕೆಶಿ ಬೆಂಬಲಿಗ ಶಾಸಕರು ಕಿಡಿಕಾರಿದ್ರು. ಈ ವಿಚಾರಕ್ಕೆ ಖುದ್ದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಡಿಕೆಶಿ, ಯತೀಂದ್ರ ಸಿದ್ದರಾಮಯ್ಯಗೆ ನೋಟಿಸ್ ನೀಡ್ತಿರಾ ಎಂಬ ಪ್ರಶ್ನೆಗೆ ಖಡಕ್ ಉತ್ತರ ನೀಡಿದ್ದಾರೆ.. ಯತೀಂದ್ರ ಮಾತಾಡಿರುವ ಬಗ್ಗೆ ಈಗ ನಾನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬೆಳವಣಿಗೆ ಬಗ್ಗೆ ಯಾರ ಹತ್ತಿರ ಮಾತಾಡಬೇಕು ಅವರ ಬಳಿಯೇ ಮಾತಾಡ್ತಿನಿ ಎಂದಿದ್ದಾರೆ. ಈ ಮೂಲಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರವನ್ನ ಹೈಕಮಾಂಡ್ ಗೆ ವಿಚಾರ ಮುಟ್ಟಿಸುವ ಸುಳಿವು ನೀಡಿದ್ದಾರೆ.
ಮೊನ್ನೆ ಬೆಳಗಾವಿಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಪುತ್ರ ಯತೀಂದ್ರ, ತಮ್ಮ ತಂದೆ ಸಿದ್ದರಾಮಯ್ಯ ರಾಜಕೀಯ ಸಂಧ್ಯಾ ಕಾಲದಲ್ಲಿದ್ದಾರೆ. ಇಂತಹ ಸಮಯದಲ್ಲಿ ಪ್ರಗತಿಪರ ಚಿಂತನೆ ಹೊಂದಿರುವವರಿಗೆ, ಸೈದ್ಯಾಂತಿಕವಾಗಿ ಮಾರ್ಗದರ್ಶನ ನೀಡಲು ಒಬ್ಬ ನಾಯಕನ ಅಗತ್ಯವಿದೆ. ಸತೀಶ್ ಜಾರಕಿಹೊಳಿ ಈ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಮರ್ಥರಾಗಿದ್ದು, ಕಾಂಗ್ರೆಸ್ ಸಿದ್ಧಾಂತದಲ್ಲಿ ನಂಬಿಕೆ ಉಳ್ಳ ನಾಯಕರಿಗೆ ಮತ್ತು ಯುವಕರಿಗೆ ಸತೀಶ್ ಜಾರಕಿಹೊಳಿ ಮಾದರಿ ಎಂದು ಹೇಳಿದ್ದರು.

ಯತೀಂದ್ರ ಸಿದ್ದರಾಮಯ್ಯನವರ ಈ ಮಾತು ನವೆಂಬರ್ ಕ್ರಾಂತಿ ಎಂಬ ರಾಜಕೀಯ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದ್ದಲ್ಲದೆ, ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳೆನಾ..? ಎಂಬ ಚರ್ಚೆಗೂ ಕಾರಣವಾಗಿತ್ತು.

ಈ ಹೇಳಿಕೆಗೆ ಕೆಪಿಸಿಸಿ ವತಿಯಿಂದ ನೋಟಿಸ್ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ರಾಮನಗರ ಶಾಸಕ ಇಕ್ಬಾಲ್ ಹುಸೇನ್, ನಾವು ಮಾಡಿದ್ರೆ ಬಲತ್ಕಾರ, ಬೇರೆಯವರು ಮಾಡಿದ್ರೆ ಚಮತ್ಕಾರ ಅನ್ನೋ ಪರಿಸ್ಥಿತಿಯಿದೆ. ಅವೆಲ್ಲವನ್ನೂ ಹೇಳಬಾರದು, ಅವರು ತಿದ್ದಿಕೊಳ್ತಾರೆ ಎಂದಿದ್ದರು.














