ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಯಮುನಾ ನದಿ ವಿಚಾರ ಭಾರೀ ಸದ್ದು ಮಾಡ್ತಿದೆ. ಕಳೆದ 3 ದಿನದ ಹಿಂದೆ ಅರವಿಂದ ಕೇಜ್ರಿವಾಲ್ ಯಮುನಾ ನದಿಗೆ ಹರಿಯಾಣ ಬಿಜೆಪಿಯವರು ವಿಷ ಬೆರೆಸ್ತಿದ್ದಾರೆ ಅನ್ನೋ ಹೇಳಿಕೆ ಆಧಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ಮಾಡಿದ್ದರು. ಸಾರ್ವಜನಿಕ ಸಮಾವೇಶದಲ್ಲಿ ನಾನು ಕೂಡ ಯಮುನಾ ನದಿ ನೀರನ್ನೇ ಕುಡೀತಿನಿ ಅಂತಾ ವಾಗ್ದಾಳಿ ಮಾಡಿದ್ದರು. ಇಲ್ಲಿರೋ ಜನರು, ನ್ಯಾಯಮೂರ್ತಿಗಳು, ಸಂಸದರು ಸೇರಿದಂತೆ ಪ್ರತಿಯೊಬ್ಬರು ಯಮುನಾ ನದಿ ನೀರನ್ನೇ ಕುಡಿಯೋದು ಅಂತ ತಿರುಗೇಟು ನೀಡಿದ್ರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ ಆಯೋಗ.
ಯಮುನಾ ನದಿ ನೀರು ಕಲುಷಿತ ಆಗಿದೆ ಅದಕ್ಕೆ ಹರಿಯಾಣ ಕಾರಣ ಅನ್ನೋದು ಅರವಿಂದ್ ಕೇಜ್ರಿವಾಲ್ ಅವರ ಆರೋಪದ ಹಿಂದಿನ ಉದ್ದೇಶ. ಆದರೆ ಹರಿಯಾಣದಲ್ಲಿ ವಿಷ ಹಾಕಲಾಗುತ್ತಿದೆ ಅನ್ನೋ ಆರೋಪಕ್ಕೆ ಸಾಕ್ಷಿ ಒದಗಿಸುವಂತೆ ಕೇಂದ್ರ ಚುನಾವಣಾ ಆಯೋಗ ನೋಟಿಸ್ ನೀಡಿತ್ತು. ಇದೇ ಪ್ರಕರಣದ ವಿಚಾರವಾಗಿ ಅರವಿಂದ್ ಕೇಜ್ರಿವಾಲ್‌ಗೆ 2ನೇ ನೋಟಿಸ್ ಜಾರಿ ಮಾಡಿತ್ತು. ಆ ಕಾರಣಕ್ಕೆ ಕೇಂದ್ರ ಚುನಾವಣಾ ಆಯುಕ್ತರಿಗೆ ಅರವಿಂದ್ ಕೇಜ್ರಿವಾಲ್ ಚಾಟಿ ಬೀಸಿದ್ದಾರೆ. ಎಲೆಕ್ಷನ್ ಕಮೀಷನರ್ ರಾಜಕೀಯ ಮಾಡ್ತಿದ್ದಾರೆ. ರಾಜೀನಾಮೆ ಕೊಟ್ಟು ಈಗಲೂ ದೆಹಲಿ ಚುನಾವಣೆಗೆ ಸ್ಪರ್ಧಿಸಲಿ ಅಂತ ಚುನಾವಣಾ ಮುಖ್ಯ ಆಯುಕ್ತರ ವಿರುದ್ಧ ಗುಡುಗಿದ್ದಾರೆ.
ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಎಲ್ಲಾ ರಾಜಕಾರಣಿಗಳಿಗೂ ಯಮುನಾ ನದಿ ವಿಷಯುಕ್ತವಾಗಿದೆ. ಅದೇ ನೀರನ್ನ ನಿಮಗೆ ಕಳುಹಿಸಿಕೊಡ್ತೀವಿ. ಜನರ ಮುಂದೆ ನೀವು ಆ ನೀರನ್ನು ಕುಡಿದು ತೋರಿಸಿ ಅಂತ ಸವಾಲ್ ಹಾಕಿದ್ದಾರೆ. ಬಿಜೆಪಿಯವರಿಗಷ್ಟೇ ಅಲ್ಲ ರಾಹುಲ್ ಗಾಂಧಿಗೂ ಬಾಟೆಲ್ ಕಳುಹಿಸುವುದಾಗಿ ತಿಳಿಸಿದ್ದಾರೆ. ನಮ್ಮ ಸಂಸದರು ಈ ಬಾಟೆಲ್ ತೆಗೆದುಕೊಂಡು ಹೋಗ್ತಾರೆ. ಮೊದಲನೆಯದು ಅಮಿತ್ ಶಾಗೆ, ಎರಡನೆಯದ್ದು ವೀರೇಂದ್ರ ಸಚ್‌ದೇವರಿಗೆ, ಮೂರನೇಯದು ನಯಾಬ್ ಸೈನಿಯವರಿಗೆ, 4ನೇ ಬಾಟೆಲ್ ರಾಹುಲ್ ಗಾಂಧಿ ಕಳಿಸಿಕೊಡ್ತಿದ್ದೀವಿ. ಈ ನೀರು ವಿಷಕಾರಿಯಲ್ಲ ಅಂತ ಸಾಬೀತುಪಡಿಸಲಿ. ಈ ನೀರನ್ನ ಅವರು ಜನರೆದುರು ಕುಡಿದು ತೋರಿಸಿಲಿ ಎಂದಿದ್ದಾರೆ.
ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಬಗ್ಗೆ ವ್ಯಂಗ್ಯವಾಡಿದ್ದು, ರಾಜೀವ್ ಕುಮಾರ್ ಅವರಿಗೆ ನಿವೃತ್ತಿ ಕಾಲ ಹತ್ತಿರವಾಗ್ತಿದೆ. ನಿವೃತ್ತಿ ಆದ್ಮೇಲೆ ಹೊಸ ಕೆಲಸ ಹುಡುಕುತ್ತಿದ್ದಾರೆ. ಪ್ರಜಾಪ್ರಭುತ್ವವನ್ನ ಅವರಷ್ಟು ಯಾರೂ ಹಾಳು ಮಾಡಿಲ್ಲ. ರಾಜಕೀಯ ಮಾಡೋದು ಆಯೋಗದ ಕೆಲಸವಲ್ಲ ಎಂದಿದ್ದಾರೆ. ಇನ್ನು ರಾಜೀವ್ ಕುಮಾರ್ ಅವರಿಗೂ 3 ಬಾಟಲ್ ಕಳಿಸ್ತೀವಿ. ಮುಂದಿನ ಮೂರು ದಿನಗಳಲ್ಲಿ ನನ್ನನ್ನ ಬಂಧಿಸ್ತಾರೆ ಅಂತ ಗೊತ್ತಿದೆ. ಆದ್ರೆ ಅದಕ್ಕೂ ಮೊದಲು ಈ ನೀರನ್ನ ಕುಡಿದು ವಿಷ ಅಲ್ಲ ಸಾಬೀತುಪಡಿಸಲಿ. ಹಾಗಾದರೆ ನಾವು ಮಾತಾಡಿದ್ದು ತಪ್ಪು ಅಂತ ಒಪ್ಪಿಕೊಳ್ತೀವಿ ಎಂದಿದ್ದಾರೆ. ಇಷ್ಟೆಲ್ಲಾ ಆದ್ಮೇಲೆ ಎಎಪಿ ನಾಯಕರು ಬಿಜೆಪಿ ಮುಖ್ಯ ಕಚೇರಿಗೆ ಯಮುನಾ ನದಿ ನೀರಿನ ಬಾಟೆಲ್ ತೆಗೆದುಕೊಂಡು ಹೋದಾಗ ಪೊಲೀಸರು ಅನುಮತಿ ನೀಡಿಲ್ಲ.