ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಮಾಸುವ ಮುನ್ನವೇ ರಾಜ್ಯ ಮತ್ತೊಂದು ಪೈಶಾಚಿಕ ಕೃತ್ಯಕ್ಕೆ ಸಾಕ್ಷಿಯಾಗಿದೆ. ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದ್ದು, ಬಿಹಾರದ ಮಾದರಿಯಲ್ಲೇ ಯಾದಗಿರಿಯಲ್ಲಿ ಮಹಿಳೆ ಮೇಲೆ ನಡೆದ ಹೇಯ ಕೃತ್ಯವೊಂದು ತಡವಾಗಿ ಬೆಳಕಿಗೆ ಬಂದಿದೆ. ವಿಡಿಯೋ ಲೀಕ್ ಆಗ್ತಿದ್ದಂತೆ ಪೊಲೀಸರ ತನಿಖೆ ಚುರುಕುಗೊಂಡಿದ್ದು, ವಿಕೃತಿ ಮೆರೆದ ಕಾಮುಕರನ್ನ ಹೆಡೆಮುರಿಕಟ್ಟಿದ್ದಾರೆ.
ಕೈ ಮುಗಿದು ಬೇಡಿಕೊಂಡ್ರು, ಬಿಟ್ಟು ಬಿಡಿ ಅಣ್ಣಾ ಅಂತ ಅಂಗಲಾಚಿದ್ರು, ಅರಚಿದ್ರೂ, ಕಿರುಚಿದ್ರೂ ಬಿಡದ ಕಾಮುಕರು ರಾಕ್ಷಸರಂತೆ ಆಕೆಯ ಮೇಲೆ ಎಗರಿ ಅತ್ಯಚಾರ ಮಾಡಿದ್ದಾರೆ. ಅಷ್ಟೇ ಅಲ್ಲ ವಿಕೃತಿ ಮೆರೆದ ದೃಶ್ಯವನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ರು. ಇಂಥಾ ಪೈಶಾಚಿಕ ಕೃತ್ಯ ನಡೆದಿದ್ದು, ಬೇರೆ ಯಾವುದೋ ರಾಜ್ಯದಲ್ಲಿ ಅಲ್ಲ. ನಮ್ಮದೇ ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿ.
ಇಡೀ ರಾಜ್ಯವೇ ತಲೆತಗ್ಗಿಸುವಂತಹ ಘಟನೆಗೆ ಯಾದಗಿರಿ ಜಿಲ್ಲೆ ಸಾಕ್ಷಿಯಾಗಿದೆ. ಶಹಾಪುರ ತಾಲೂಕಿನ ರಸ್ತಾಪುರ ಕ್ರಾಸ್ ಬಳಿಯ ಕಮಾನ್ ಎದುರುಗಡೆಯ ನಿರ್ಜನ ಪ್ರದೇಶದಲ್ಲಿ ನಾಲ್ಕು ಜನ ಕಾಮುಕರ ತಂಡ ಮಹಿಳೆ ಮೇಲೆ ಅತ್ಯಾಚಾರ ವೆಸಗಿ, ಕಬ್ಬಿನ ಜಲ್ಲೆಯಿಂದ ಮನಬಂದತಂತೆ ಹಲ್ಲೆ ನಡೆಸಿದ್ದಾರೆ. ನಂತರ ಮಹಿಳೆಯ ಬಳಿಯಿದ್ದ ಮೊಬೈಲ್ ಹಾಗೂ 5 ಸಾವಿರ ರೂಪಾಯಿ ನಗದನ್ನ ದೋಚಿಕೊಂಡು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ರು.
ಅಂದ್ಹಾಗೆ ಈ ಘಟನೆ ನಡೆದಿದ್ದು, ಒಂದು ವರ್ಷದ ಹಿಂದೆ. ವರ್ಷದ ಬಳಿಕ ಕಾಮುಕರು ಮಹಿಳೆಯನ್ನ ಥಳಿಸಿದ ವಿಡಿಯೋ ವೈರಲ್ ಆಗಿದೆ.. ವಿಡಿಯೋ ಯಾವಾಗ ಹರಿದಾಡೋಕೆ ಶುರುವಾಯ್ತೋ ತಕ್ಷಣವೇ ಯಾದಗಿರಿ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ಘಟನಾ ಸ್ಥಳಕ್ಕೆ ಯಾದಗಿರಿ ಎಸ್ಪಿ ವೇದಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಶಹಾಪುರ ನಗರ ಠಾಣೆ ಪೊಲೀಸರು ದೌರ್ಜನ್ಯಕೊಳ್ಳಗಾದ ಮಹಿಳೆಯನ್ನ ಪತ್ತೆ ಹಚ್ಚಿದ್ದು, ಶಹಾಪುರ ಠಾಣೆಯಲ್ಲಿ ಮಹಿಳೆ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾಳೆ. ತಕ್ಷಣ ತನಿಖೆ ಕೈಗೆತ್ತಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. A1 ನಿಂಗರಾಜ ಹಳೆಪೇಟ್, A2 ಅಯ್ಯಪ್ಪ ಮಮದಾಪುರ್, A3 ಭಿಮಾಶಂಕರ್ ಮಮದಾಪುರ್, A4 ಶರಣು ಗಂಗಾನಗರನನ್ನ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. A1 ನಿಂಗರಾಜ ಹಳೆಪೇಟ್ ಪಿಎಸ್ಐ ಡ್ರೈವರ್ ಆಗಿ ಕಾರ್ಯ ನಿರ್ವಹಿಸಿದ್ದ.
ಇನ್ನೂ ಈ ಪೈಶಾಚಿಕ ಕೃತ್ಯದ ಬಗ್ಗೆ ಪ್ರತಿಕ್ರಿಯಿಸಿದ ಗೃಹಸಚಿವ ಆರಗ ಜ್ಞಾನೇಂದ್ರ, ಆರೋಪಿಗಳು ಈಗಾಗಲೇ ಪೊಲೀಸರ ವಶದಲ್ಲಿದ್ದಾರೆ, ಅವರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ನಾನೂ ಸೂಚನೆ ನೀಡಿದ್ದೇನೆ ಅಂತಾ ತಿಳಿಸಿದ್ರು.
ಮತ್ತೊಂದೆಡೆ ದೌರ್ಜನ್ಯಗೊಳಗಾದ ಮಹಿಳೆಯು ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದಳು ಎಂಬ ಆರೋಪವಿದೆ. ಹನಿಟ್ರ್ಯಾಪ್ ಮಾಡುತ್ತಿದ್ದ ಮಹಿಳೆಯ ಬಳಿ ಹಣ ಇರ್ತಾವೆ ಅಂತಾ ಈ ರೀತಿ ಕೃತ್ಯ ಎಸಗಿರೋದಾಗಿ ಬಂಧನದ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಅನ್ನೋದು ಪೊಲೀಸ್ ಮೂಲಗಳ ಮಾಹಿತಿ.
ಆರೋಪಿಗಳಿಗೆ ತಕ್ಕ ಶಿಕ್ಷೆಯಾಗ್ಬೇಕೆಂದು ಯಾದಗಿರಿ ಮಂದಿ ಆಗ್ರಹಿಸ್ತಿದ್ದಾರೆ. ಒಟ್ನಲ್ಲಿ, ರಾಜ್ಯದಲ್ಲಿ ನಡಿತ್ತಿರೋ ಇಂಥಾ ಹೇಯಕೃತ್ಯದಿಂದ ಮತ್ತೆ ಮತ್ತೆ ತಲೆತಗ್ಗಿಸುವಂತಾಗ್ತಿದೆ. ಇಂಥಾ ಪೈಶಾಚಿಕ ಕೃತ್ಯಗಳು ಹೆಚ್ಚಾಗ್ತಿದ್ದು, ಗೃಹ ಇಲಾಖೆ, ಇನ್ನಷ್ಟು ಕಠಿಣ ಕ್ರಮಕೈಗೊಳ್ಳಬೇಕಿದೆ.