ಮಂಡ್ಯ ಜಿಲ್ಲೆ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಸಂಬಂಧ ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಿದ್ದೇವೆ. ಈ ಸಭೆಯಲ್ಲಿ ಮಂಡ್ಯ ಭಾಗದ ಜನಪ್ರತಿನಿಧಿಗಳು ಹಾಗೂ ರೈತರು ಭಾಗಿಯಾಗಲಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದು ಒಂದು ಸೂಕ್ತವಾದ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ವಿಧಾನಪರಿಷತ್ ನಲ್ಲಿ ಹೇಳಿದರು.
ಮಂಗಳವಾರ ನಿಯಮ 330 ರ ಅಡಿ ಸದಸ್ಯರು ಪಾಂಡವಪುರ ಸಕ್ಕರೆ ಕಾರ್ಖಾನೆ ಕುರಿತಾಗಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಪರವಾಗಿ ಸುಧೀರ್ಘ ಉತ್ತರ ನೀಡಿದ ಸಚಿವ ನಿರಾಣಿ ಅವರು, ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಸೂಕ್ತವಾದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಸದನಕ್ಕೆ ಆಶ್ವಾಸನೆ ನೀಡಿದ್ದಾರೆ.
ಒಂದು ಹಂತದಲ್ಲಿ ತಮ್ಮ ಮೇಲೆ ಕೇಳಿ ಬಂದ ಆರೋಪಗಳಿಗೆ ಸದನದಲ್ಲಿ ಭಾವುಕರಾದ ನಿರಾಣಿ ಅವರು, ನಾನು ರೈತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಭೋಗ್ಯಕ್ಕೆ ಪಡೆದು ಪುನಾರಂಭ ಮಾಡಿದೆವು. ಇದರಲ್ಲೂ ನನಗೆ ‘ಕಹಿಅನುಭವ’ ಆಗಿದೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
ನಾನು ನೂರಕ್ಕೆ ನೂರರಷ್ಟು ಈ ಸದನದಿಂದಲೇ ಸ್ಪಷ್ಟಪಡಿಸುವುದು ಏನೆಂದರೆ, ಯಾವುದೇ ಕಾರಣಕ್ಕೂ ಮೈ ಶುಗರ್ ಫ್ಯಾಕ್ಟರಿ ಬಿಡ್ ಮಾಡುವುದಿಲ್ಲ. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.
ಮೈ ಶುಗರ್ ಕಾರ್ಖಾನೆಯನ್ನು ನಾನು ಪಡೆಯುವ ಸಲುವಾಗಿ ಇಲ್ಲಿ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ಯಾರೂ ಹೊರಗೆ ಹೋಗದ ಕಾಲದಲ್ಲಿ ನಾವು ಪಾಂಡವಪುರ ಕಾರ್ಖಾನೆಯನ್ನು ಪ್ರಾರಂಭ ಮಾಡಿದೆವು. ಆದರೂ ನಮಗೆ ಆಪಾದನೆಗಳು ನಿಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದುವರೆಗೆ ನನಗೆ ಬೋಗ್ಯದ ದಾಖಲಾತಿಗಳೇ ಲಭ್ಯವಾಗಿಲ್ಲ. ನಂಬಿಕೆಯಿಂದ ನಾನು ಪಾಂಡವಪುರ ಶುಗರ್ ಫ್ಯಾಕ್ಟರಿ ಮೇಲೆ ₹೫೦ ಕೋಟಿ ವೆಚ್ಚ ಮಾಡಿದ್ದೇನೆ.ಲೀಸ್ ಡೀಡ್ ಇಲ್ಲದೆಯೂ ರೈತರಿಗೆ ಅನ್ಯಾಯ ಆಗಬಾರದು ಎಂದು ಕಾರ್ಖಾನೆಯನ್ನು 90 ದಿನಗಳಲ್ಲಿ ಪ್ರಾರಂಭ ಮಾಡಿದೆವು. ಆದರೆ ಪಾಂಡವಪುರಕ್ಕೆ ನಾನು ಬಂದಾಗ ಹಲವರು ನನ್ನ ಮೇಲೆ ಆಪಾದನೆ ಮಾಡಿದರು ಎಂದು ಭಾವುಕರಾದರು.
ನಾನು ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭ ಮಾಡಿದಾಗ ಇದರಿಂದ ಬಂದ ಲಾಭವನ್ನು ಇಲ್ಲಿಯ ಲಾಭಕ್ಕಾಗಿ ಬಳಸಿಕೊಳ್ಳಲು ನಿರ್ಧಾರ ಮಾಡಲಾಗಿತ್ತು. ನಾಡದೇವತೆ ಚಾಮುಂಡೇಶ್ವರಿ ಮೇಲೆ ಆಣೆ. ಇಲ್ಲಿಂದ ಬಂದ ಲಾಭವನ್ನು ಉತ್ತರ ಕರ್ನಾಟಕಕ್ಕೆ ತೆಗೆದುಕೊಂಡು ಹೋಗುವುದಿಲ್ಲ. ಕೆಲವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದ ಅನೇಕ ಸಕ್ಕರೆ ಕಾರ್ಖಾನೆಗಳು ಇಂದು ನಷ್ಟದಲ್ಲಿದ್ದು ಬೀಗ ಹಾಕುವ ಹಂತಕ್ಕೆ ಬಂದಿವೆ. ಎಂ.ಕೆ.ಹುಬ್ಬಳ್ಳಿ, ಸಂಕೇಶ್ವರ, ರನ್ನ, ಸೇರಿದಂತೆ ಮತ್ತಿತರ ಕಾರ್ಖಾನೆಗಳು ‘ಕೋಮ’ ಸ್ಥಿತಿಗೆ ಬಂದಿವೆ. ಇದಕ್ಕೆಲ್ಲ ಯಾರು ಕಾರಣ ಎಂದು ಪ್ರಶ್ನೆ ಮಾಡಿದ್ದಾರೆ.
ಹೊರಗಡೆ ಮಾತನಾಡುವುದಕ್ಕೂ ಒಂದು ಕಾರ್ಖಾನೆ ನಡೆಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಪಾಂಡವಪುರ ಹಾಗೂ ಮೈಶುಗರ್ ಕಾರ್ಖಾನೆಯ ಉದ್ದೇಶವೇ ರೈತರ ಹಿತ ಕಾಪಾಡುವುದು ಎಂದು ತಿಳಿಸಿದ್ದಾರೆ.
ಸಕಾಲಕ್ಕೆ ಸರಿಯಾಗಿ ರೈತರ ಕಬ್ಬನ್ನು ಅರೆದು ಅವರಿಗೆ ಹಣ ಪಾವತಿಸಬೇಕು. ಜೊತೆಗೆ ಕಾರ್ಮಿಕರಿಗೆ ತಿಂಗಳಿಗೆ ವೇತನವನ್ನು ನೀಡಬೇಕು. ಇಷ್ಟೆಲ್ಲಾ ಮಾಡಿಯೂ ನಾವು ಸುಳ್ಳು ಆರೋಪಗಳನ್ನು ಎದುರಿಸಬೇಕು ಎಂದರು.
ನಿವೃತ್ತ ಅಧಿಕಾರಿ ರಂಗರಾಜನ್ ವರದಿಯ ಪ್ರಕಾರ ಕಾರ್ಖಾನೆ ಒಟ್ಟು ಲಾಭಂಶದಲ್ಲಿ ಶೇ 75 ರಷ್ಟನ್ನು ರೈತರು , ಕಾರ್ಮಿಕರು, ಕಾರ್ಖಾನೆಯ ಪುನಶ್ಚೇತನ, ಮೂಲಭೂತ ಸೌಕರ್ಯಗಳ ಬಳಕೆಗೆ ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕೇವಲ ಸರ್ಕಾರದ ಮೇಲೆ ಅವಲಂಬಿತರಾಗದೆ ಕಾರ್ಖಾನೆಯನ್ನು ಆಡಳಿತ ಮಂಡಳಿಯವರು ಮುನ್ನಡೆಸಬೇಕು. ಇಲ್ಲಿರುವ ಲೋಪದೋಷಗಳನ್ನು ಪತ್ತೆ ಮಾಡಿದರೆ, ಎಲ್ಲವೂ ಸರಿ ಹೋಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.