ರಾಜ್ಯ ಉಪಚುನಾವಣೆ ಗೆಲ್ಲಲು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿಯೂ ಭಾರೀ ಸರ್ಕಸ್ ನಡೆಸುತ್ತಿದೆ. ಸದ್ಯ ಬಿಜೆಪಿ ನಾಯಕರು ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ಪಕ್ಷಕ್ಕೆ ಸಿಂಧಗಿ ಮತ್ತು ಹಾನಗಲ್ ಎರಡು ಕ್ಷೇತ್ರಗಳಲ್ಲಿ ಭಾರೀ ಹಿನ್ನಡೆ ಆಗುವ ಸಾಧ್ಯತೆಗಳಿವೆ. ಹೀಗಿರುವಾಗಲೇ ರಾಜ್ಯ ಬಿಜೆಪಿ ನಾಯಕರು ಮತ್ತೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕುಟುಂಬದ ಮೊರೆ ಹೋಗಿದ್ದಾರೆ. ಹೇಗಾದರೂ ಮಾಡಿ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲೇಬೇಕಿದೆ, ನೀವು ಮತ್ತು ಮಗ ಬಿ.ವೈ ವಿಜಯೇಂದ್ರ ಪ್ರಚಾರಕ್ಕೆ ಬರಲೇಬೇಕು ಎಂದು ಒತ್ತಡ ಹಾಕಿದ್ದಾರೆ. ಹೀಗಿದ್ದರೂ ಯಾಕೋ ಇತ್ತೀಚೆಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮೌನ ತಾಳಿದ್ದು, ಬಿಜೆಪಿ ಪಾಳಯದಲ್ಲಿ ಆತಂಕ ಹುಟ್ಟಿಹಾಕಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿ.ಎಸ್ ಯಡಿಯೂರಪ್ಪ ಸುಮ್ಮಾನಾಗಿದ್ದಾರೆ. ಅಧಿಕಾರ ತ್ಯಾಗದ ಬಳಿಕ ನಡೆದ ಅಧಿವೇಶನದಲ್ಲೂ ಏನು ಮಾತಾಡದೆ ಯಡಿಯೂರಪ್ಪ ಮೌನ ವಹಿಸಿದ್ದರು. ಈಗ ಸಿಂಧಗಿ ಮತ್ತು ಹಾನಗಲ್ ಚುನಾವಣೆಯಲ್ಲಿ ಇಂಥವರಿಗೆ ಟಿಕೆಟ್ ನೀಡಿ ಎಂದು ಡಿಮ್ಯಾಂಡ್ ಮಾಡಿರಲಿಲ್ಲ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಯಡಿಯೂರಪ್ಪ ಯಾವ ವಿಚಾರವೂ ಪ್ರಸ್ತಾಪ ಮಾಡಿರಲಿಲ್ಲ. ಈ ಮೌನವೂ ಬಿಜೆಪಿ ನಾಯಕರಿಗೆ ನಿದ್ದೆಗೆಡಿಸಿದೆ ಎನ್ನಲಾಗಿದೆ.
ಬಿ.ಎಸ್ ಯಡಿಯೂರಪ್ಪ ಅಧಿಕಾರ ಕಳೆದುಕೊಂಡ ಕೂಡಲೇ ಅವರ ಆಪ್ತ ಸಹಾಯಕನ ಮನೆ ಮೇಲೆ ಐಟಿ ದಾಳಿ ನಡೆಸಲಾಗಿತ್ತು. ಇದು ಯಡಿಯೂರಪ್ಪಗೆ ಸಾಕಷ್ಟು ಇರುಸು ಮುರುಸನ್ನುಂಟು ಮಾಡಿತ್ತು. ತನ್ನ ಪುತ್ರನಿಗೆ ಮಂತ್ರಿ ಮಂಡದಲ್ಲಿ ಸಚಿವ ಸ್ಥಾನ ಕೊಡಿಸಬೇಕು ಎಂದು ಪ್ರಯತ್ನಿಸಿದರೂ ಆಗುತ್ತಿಲ್ಲ. ತಾನು ರಾಜ್ಯ ನಾಯಕ, ನನ್ನಿಂದಲೇ ಬಿಜೆಪಿ ಎಂಬುದು ಹೈಕಮಾಂಡ್ ಮರೆತಂತಿದೆ ಎಂದು ಬಿಎಸ್ವೈ ಮುನಿಸಿಗೆ ಕಾರಣ ಎಂಬ ಮಾತುಗಳು ಕೇಳಿ ಬಂದಿವೆ.
ತನ್ನ ಬೆಂಬಲವಿಲ್ಲದೇ ರಾಜ್ಯ ಬಿಜೆಪಿಯನ್ನು ಸಂಪೂರ್ಣವಾಗಿ ಬೆಳೆಸಬೇಕು ಎಂಬುದು ಹೈಕಮಾಂಡ್ ಪ್ಲಾನ್. ಎಷ್ಟೇ ಪ್ರಯತ್ನಿಸಿದರೂ ನನ್ನ ಹಿಡಿತದಿಂದ ಬಿಜೆಪಿಯನ್ನು ಹೊರಗೆ ತರಲು ಸಾಧ್ಯವಿಲ್ಲ. ಹೀಗಿರುವಾಗಲೇ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಮುಂದಿನ ಚುನಾವಣೆಯೂ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ ಎಂದು ಹೇಳಿದ್ದಾರೆಂದು ಯಡಿಯೂರಪ್ಪ ಮೌನಕ್ಕೆ ಜಾರಿದ್ದಾರಂತೆ.
ಒಂದೆಡೆ ಹೈಕಮಾಂಡ್ ತನ್ನನ್ನು ಕಡೆಗಣಿಸುತ್ತಿದ್ದರೆ, ಇನ್ನೊಂದೆಡೆ ಪುತ್ರ ವಿಜಯೇಂದ್ರ ರಾಜಕೀಯ ಭವಿಷ್ಯ ಭದ್ರಗೊಳಿಸಬೇಕು ಎಂಬ ಯೋಚನೆ ಯಡಿಯೂರಪ್ಪರದ್ದು. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ರಾಜಕೀಯ ಭವಿಷ್ಯ ಏನಾಗಲಿದೆ? ಎಂಬ ಚಿಂತೆ ಬಎಸ್ವೈಗೆ ಶುರುವಾಗಿದೆ.
ದಕ್ಷಿಣ ಭಾರತದಲ್ಲೇ ಬಿಜೆಪಿ ಅಧಿಕಾರಕ್ಕೆ ಬರಲು ನಾನೇ ಕಾರಣ ಎನ್ನುತ್ತದೆ ಹೈಕಮಾಂಡ್. ಆದರೂ, ನನ್ನ ಮಾತಿಗೆ ಕಿಮ್ಮತ್ತು ನೀಡುತ್ತಿಲ್ಲ. ಮುಂದೆ ನನ್ನ ಮಗ ವಿಜಯೇಂದ್ರ ಅವರನ್ನು ಬಿಜೆಪಿ ಹೇಗೆ ನಡೆಸಿಕೊಳ್ಳುತ್ತದೆ? ಎಂಬುದರ ಮೇಲೆ ಪಕ್ಷದ ಭವಿಷ್ಯ ನಿಂತಿದೆ ಎಂದು ಆಪ್ತರ ಬಳಿ ಬಿಎಸ್ವೈ ಹೇಳಿಕೊಂಡಿದ್ದಾರಂತೆ.
ಯಡಿಯೂರಪ್ಪ ತನ್ನ ಪುತ್ರ ಬಿ.ವೈ. ವಿಜಯೇಂದ್ರಗೆ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ಮಾಡಿದರೆ ವಿಜಯೇಂದ್ರಗೆ ಸಚಿವ ಸ್ಥಾನ ಕೊಡಲೇಬೇಕು. ಆದರೆ, ಯಾಕೋ ಬಿಜೆಪಿ ಹೈಕಮಾಂಡ್ಗೆ ಮಾತ್ರ ವಿಜಯೇಂದ್ರಗೆ ಸಚಿವ ಸ್ಥಾನ ನೀಡಲು ಇಷ್ಟವಿಲ್ಲ.
ಖಾಲಿ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಲು ಬೊಮ್ಮಾಯಿ ದೆಹಲಿಗೆ ಹೋಗಿ ಬರುತ್ತಲೇ ಇದ್ದಾರೆ. ಈ ಪೈಕಿ ಮೂರು ಸ್ಥಾನಗಳ ಭರ್ತಿಗೆ ಅವಕಾಶ ಕೊಡಿ ಎಂದು ಕೇಳಬಹುದು. ನವೆಂಬರ್ ಅಥವಾ ಡಿಸೆಂಬರ್ಗೆ ಸಂಪುಟ ವಿಸ್ತರಣೆಗೆ ಸಿಎಂ ಬೊಮ್ಮಾಯಿ ಯೋಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು, ವಿಜಯೇಂದ್ರಗೆ ಬಿಜೆಪಿಯಲ್ಲಿ ಒಳ್ಳೆಯ ಸ್ಥಾನಮಾನ ನೀಡಬೇಕು. ಮುಂದೆ ಮಂತ್ರಿ ಮಂಡಲ ವಿಸ್ತರಣೆ ವೇಳೆ ಸಚಿವ ಸ್ಥಾನ ಕೊಡಬೇಕು. ಇಲ್ಲದೇ ಹೋದಲ್ಲಿ ಬೊಮ್ಮಾಯಿ ಸರ್ಕಾರ ಉಳಿಯೋದು ಕಷ್ಟ ಎಂದು ಯಡಿಯೂರಪ್ಪ ಆಪ್ತರು ಚರ್ಚೆ ನಡೆಸುತ್ತಿದ್ದಾರೆ.