ಕಲ್ಲಡ್ಕ ಟೀ ಅಂದ ತಕ್ಷಣ ನಮ್ಮೆಲ್ಲರ ಕಿವಿ ಒಂದು ಕ್ಷಣ ನೆಟ್ಟಗಾಗುತ್ತದೆ. ಅದೇನೋ ಗೊತ್ತಿಲ್ಲ, ಅಷ್ಟರ ಮಟ್ಟಿಗೆ ಕಲ್ಲಡ್ಕ ಕೆಟಿ ಫೇಮಸ್ಸು.ಮಂಗಳೂರಿನ ಕಡೆಗೆ ಪ್ರವಾಸ ಹೋಗಿದ್ದರೆ, ದಾರಿ ಮಧ್ಯೆ ಗಾಡಿ ನಿಲ್ಲಿಸಿ ಶ್ರೀನಿವಾಸ ಹೋಟೆಲ್ ನಲ್ಲಿ ಕೆಟಿ ಕುಡಿಯುತ್ತಿದ್ದೆವು. ಆದರೆ, ಇದೀಗ ಹೆದ್ದಾರಿ ಅಗಲೀಕರಣದಿಂದ ಕೆಟಿ ನೆನಪಿನ ಪುಟವನ್ನು ಸೇರಿದೆ.ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಇಂದಿರಾಗಾಂಧಿ ಮಂಗಳೂರಿಗೆ ಆಗಮಿಸಿದ್ದಾಗ, ಕಲ್ಲಡ್ಕಕ್ಕೂ ಭೇಟಿ ನೀಡಿ, ಲಕ್ಷ್ಮಿ ನಿವಾಸ ಹೋಟೆಲ್‌ಗೆ ಹೋಗಿ ಟೀ ಸವಿದಿದ್ದರಂತೆ. ಮಿನಿಸ್ಟರ್ಸ್ ಮಾತ್ರವಲ್ಲದೆ, ಸಿನಿಮಾತಾರೆಯರೂ ಕಲ್ಲಡ್ಕ ಕಡೆ ಟೀ ಸವಿಯಲು ಬರುತ್ತಿದ್ದರು. ಇಂತಹ ಜನಪ್ರೀಯ ಹಿನ್ನಲೆ ಹೊಂದಿದ ಕೆಟಿ ಮಂಗಳೂರು, ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಸ್ತೆ ಅಗಲೀಕರಣದಿಂದ ನೆಲಕಚ್ಚಿ ಹೋಗಿರುವುದು ಬೇಸರದ ಸಂಗತಿ.
ಕೆಟಿ ಅಲಿಯಾಸ್ ಕಲ್ಲಡ್ಕ ಟೀ..
ಪುತ್ತೂರಿನ ಶಿವರಾಮ ಹೊಳ್ಳರು ತಮ್ಮ ಕಲ್ಲಡ್ಕ ಲಕ್ಷ್ಮಿ ನಿವಾಸ ಹೋಟೆಲಿನಲ್ಲಿ ಕೊಡುವ ಈ ಕೆಟಿ ಎಷ್ಟು ರುಚಿಕರ ಎನ್ನುವುದು ಹೇಳಿ ಪ್ರಯೋಜನವಿಲ್ಲ. ಸುಮಾರು 70 ವರ್ಷಗಳಷ್ಟು ಹಳೆಯದಾದ ಈ ಹೋಟೆಲನ್ನು ಮೂರು ತಲೆಮಾರಿನಿಂದ ನಡೆಸಿಕೊಂಡು ಬಂದಿರುವುದು ವಿಶೇಷ. ಮಂಗಳೂರಿನ ಕಡೆಗೆ ನೀವು ಪ್ರಯಾಣ ಬೆಳೆಸಿದ್ದರೆ, ನೀವು ಹೋಗಲೇಬೇಕಾದ ಹೊಟೆಲ್ ಇವರದ್ದಾಗಿತ್ತು. ನೋಡಲು ಸಿಂಪಲ್ ಆಗಿ ಕಾಣಿಸಿದರೂ, ಹಳೆ ಮಾದರಿಯ ಶೈಲಿಯಲ್ಲಿ ನೋಡುಗರಿಗೆ ಕಣ್ಣು ಕೋರೈಸುವಂತೆ ಇಲ್ಲವಾದರೂ, ಒಮ್ಮೆ ಅದರ ಒಳಗೆ ಹೋಗಿ ಕುಳಿತು ಟೀ ಕೇಳಿ ಕುಡಿದರೆ, ಕಲ್ಲಡ್ಕ ಟೀ ಯ ಅನುಭವ ನಿಮಗೆಯೇ ತಿಳಿಯುತ್ತದೆ. ಅಂತಹ ವಿಶೇಷ ರುಚಿಕರವಾಗ ಟೀ ಇದಾಗಿದೆ.ಕಲ್ಲಡ್ಕ ಟೀ ಎಂಬ ಹೆಸರಿಗೆ ಶಾರ್ಟ್ ಕಟ್ ಆಗಿ ಕೆಟಿ ಎಂದು ಕರೆಸಿಕೊಳ್ಳುವಷ್ಟು ಜನಪ್ರೀಯತೆ ಪಡೆದುಕೊಂಡಿತ್ತು. ಶಿವರಾಮ ಹೊಳ್ಳರ ತಾತ ಲಕ್ಷ್ನೀನಾರಾಯಣ ಹೊಳ್ಳರು ಈ ಕೆಟಿಯನ್ನು ಕಲ್ಲಡ್ಕ ಕೆಟಿ ಎಂದು ಪರಿಚಯಿಸಿದ ಖ್ಯಾತಿ ಹೊಂದಿದ್ದಾರೆ.ಹೆಸರಿಗಷ್ಟೇ ಕೆಟಿ ಆಗಿ ಉಳಿಯುತ್ತಾ ಕಲ್ಲಡ್ಕ ಟೀ? ಇದೀಗ ರಾಷ್ಟ್ರೀಯ ಹೆದ್ದಾರಿ ನಿಗಮ ಕಲ್ಲಡ್ಕದ ಟೀ ಅಂಗಡಿಯನ್ನು ತೆರವುಗೊಳಿಸಿದೆ. ಹೆದ್ದಾರಿಯನ್ನು ಅಗಲೀಕರಣಗೊಳಿಸುವ ಉದ್ದೇಶದಿಂದ ಕಲ್ಲಡ್ಕ ರಸ್ತೆಯ ಬದಿಯಿರುವ ಲಕ್ಷ್ಮೀ ನಿವಾಸ ಹೋಟೆಲ್ ಅನ್ನು ತೆರವುಗೊಳಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಗಳ ಅಗಲೀಕರಣದಿಂದ ಈಗಾಗಲೇ ಹಲವಾರು ರಸ್ತೆಬದಿಯಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಿರುವುದು ವ್ಯಾಪಾರಿಗಳಿಗೆ ಹೊಡೆತ ತಂದಿದೆ.ಕಲ್ಲಡ್ಕ ಕೆಟಿ ಇತಿಹಾಸ 1952ರಲ್ಲಿ ಲಕ್ಷ್ಮೀ ನಾರಾಯಣ ಹೊಳ್ಳ ಈ ಹೋಟೆಲನ್ನು ಪ್ರಾರಂಭಿಸಿದರು. ಜನರಿಗೆ ಏನಾದರೂ ಹೊಸತನ ನೀಡಬೇಕೆಂಬುದು ಇವರ ಉದ್ದೇಶವಾಗಿತ್ತು. ಆಗ ಕೆಳಗೂರು ಚಹಾದಿಂದ ಅವರು ಮಾಡಿದ ಕರಾಮತ್ತೇ “ಕಲ್ಲಡ್ಕ ಟೀ”. ತದನಂತರ ದೇವಗಿರಿ ಚಾ ಪುಡಿ ಬಳಸಿಕೊಂಡು ಕಲ್ಲಡ್ಕ ಟೀ ಮಾಡಲು ಆರಂಭಿಸಿದರು. ಅದುವೇ ನಂತರ ವಿಶ್ವ ವಿಖ್ಯಾತಿ ಪಡೆದು ಜನಮನಸ್ಸಲ್ಲಿ ಅಚ್ಚಳಿಯಾಗಿ ಉಳಿಯಿತು.
ಕೆಟಿ ವಿಶೇಷತೆಗಳೇನು..?
ದಪ್ಪನೆಯ ಬಿಸಿ ಹಾಲಿಗೆ ಬಿಸಿಯಾದ ಚಹಾ ಡಿಕಾಕ್ಷನ್ ಹಾಕಿದಾಗ ಅದು ನೊರೆ ಸಮೇತ ಪದರದಂತೆ ಹಾಲಿನ ಮೇಲೆ ನಿಲ್ಲುತ್ತದೆ. ಹಲವಾರುವರ್ಷಗಳಾದರೂ ಇಲ್ಲಿನ ಟೀ ರುಚಿ ಬದಲಾಗಲಿಲ್ಲ. ಚಹಾಕ್ಕೆ ಬಳಸುವ ವಸ್ತುಗಳ ಸರಿಯಾದ ಪ್ರಮಾಣವೇ ಇದಕ್ಕೆ ಕಾರಣ ಎನ್ನುತ್ತಾರೆ ಹೋಟೆಲ್ ಮಾಲೀಕ ಶಿವರಾಮ ಹೊಳ್ಳ.ತಯಾರಿಕೆ ಹೇಗೆ?ದೇವಗಿರಿ ಚಹಾದಿಂದ ತಯಾರಿಸಿದ ಬಿಸಿ ಡಿಕಾಕ್ಷನ್ ಬಟ್ಟೆಯಿಂದ ಸೋಸಲಾಗುತ್ತದೆ. ಒಂದು ಚೊಂಬು ಹಾಲಿಗೆ ನಾಲ್ಕು ಚಮಚ ಸಕ್ಕರೆ ಹಾಕಿ ಬಿಸಿ ಮಾಡಲಾಗುತ್ತದೆ. ಚಹಾ ಬಿಸಿಯಾಗಿರಲು, ಗಾಜಿನ ಗ್ಲಾಸಿಗೆ ಬಿಸಿ ನೀರು ಹಾಕಿಡಲಾಗುತ್ತದೆ. ನಂತರ ಅದನ್ನು ಚೆಲ್ಲಿ, ಗ್ಲಾಸಿಗೆ ಬಿಸಿಯಾದ ಹಾಲು ಹಾಕಿ, ಅದರೊಳಗೆ ಚಮಚವನ್ನು ಇರಿಸಿ ಡಿಕಾಕ್ಷನ್ ಹಾಕಲಾಗುತ್ತದೆ. ಲಾಂಗ್ ಡ್ರೈವ್ ಗಾಗಿ ಈ ದಾರಿಯಲ್ಲಿ ತೆರಳುವವರು ಇಲ್ಲಿನ ಚಹಾ ಕುಡಿಯದೇ ಹೋಗುವ ಮಾತೇ ಇರಲಿಲ್ಲ. ಆದರೆ, ಇನ್ನು ಮುಂದೆ ಕಲ್ಲಡ್ಕ ಟೀ ನೆನಪಾಗಿ ಉಳಿದುಬಿಡುತ್ತದೆ ಎನ್ನುವುದು ಬೇಸರದ ಸಂಗತಿ.